ಏರ್‌ಪೋರ್ಟ್ ಮಾದರಿಯಲ್ಲಿ ಮಂಡ್ಯ ರೈಲು ನಿಲ್ದಾಣ ಅಭಿವೃದ್ಧಿಗೆ ಕ್ರಮ: ಎಚ್.ಡಿ.ಕುಮಾರಸ್ವಾಮಿ
HD Kumaraswamy: ನಾನು ಮೊದಲು ಹೆಚ್ಚಾಗಿ ರೈಲಿನಲ್ಲಿಯೇ ರಾಜ್ಯಾದ್ಯಂತ ಪ್ರವಾಸ ಮಾಡುತ್ತಿದ್ದೆ. ಕೆಲ ವರ್ಷಗಳಿಂದ ರೈಲಿನಲ್ಲಿ ಪ್ರಯಾಣಿಸುವ ಅವಕಾಶ ಸಿಕ್ಕಿರಲಿಲ್ಲ. ಈಗ ಮತ್ತೊಮ್ಮೆ ರೈಲಿನಲ್ಲಿ ಪ್ರಯಾಣಿಸಿ ಜನರ ಸಮಸ್ಯೆ ಆಲಿಸುವ ಅವಕಾಶ ಸಿಕ್ಕಿರುವುದು ಸಂತೋಷ ತಂದಿದೆ ಎಂದು ಕೇಂದ್ರದ ಬೃಹತ್ ಕೈಗಾರಿಕೆ ಮತ್ತು ಉಕ್ಕು ಖಾತೆ ಸಚಿವ ಎಚ್.ಡಿ. ಕುಮಾರಸ್ವಾಮಿ ತಿಳಿಸಿದ್ದಾರೆ.
ಕೇಂದ್ರದ ಬೃಹತ್ ಕೈಗಾರಿಕೆ ಮತ್ತು ಉಕ್ಕು ಖಾತೆ ಸಚಿವ ಎಚ್.ಡಿ. ಕುಮಾರಸ್ವಾಮಿ ಮಾತನಾಡಿದರು. -
ಬೆಂಗಳೂರು, ಏ.9: ಐದು ಗಂಟೆಗಳ ಕಾಲ ಬೆಂಗಳೂರಿನಿಂದ ಮೈಸೂರಿಗೆ ವಿಶೇಷ ರೈಲಿನಲ್ಲಿ ಪ್ರಯಾಣ ಮಾಡಿ ಆ ಮಾರ್ಗದಲ್ಲಿ ನಡೆಯುತ್ತಿರುವ ರೈಲ್ವೆ ಇಲಾಖೆಗೆ ಸಂಬಂಧಿಸಿದ ಅಭಿವೃದ್ಧಿ ಕಾರ್ಯಗಳನ್ನು ಪರಿವೀಕ್ಷಣೆ ನಡೆಸಿದ್ದು ನನಗೆ ವಿಶೇಷ ಅನುಭವವಾಗಿದೆ ಎಂದು ಕೇಂದ್ರದ ಬೃಹತ್ ಕೈಗಾರಿಕೆ ಮತ್ತು ಉಕ್ಕು ಖಾತೆ ಸಚಿವ ಎಚ್.ಡಿ. ಕುಮಾರಸ್ವಾಮಿ (HD Kumaraswamy) ಹೇಳಿದರು. ರೈಲು ಪ್ರಯಾಣದ ನಡುವೆ ತಮ್ಮನ್ನು ಭೇಟಿಯಾದ ಮಾಧ್ಯಮಗಳ ಜತೆ ಮಾತನಾಡಿದ ಅವರು ಮಾತನಾಡಿದರು.
ಕೇಂದ್ರ ರೈಲ್ವೆ ಖಾತೆ ರಾಜ್ಯ ಸಚಿವ ವಿ. ಸೋಮಣ್ಣ ಅವರೊಂದಿಗೆ ಇಂದು ಬೆಳಗ್ಗೆ ಬೆಂಗಳೂರಿನ ಸಂಗೊಳ್ಳಿ ರಾಯಣ್ಣ ರೈಲು ನಿಲ್ದಾಣದಿಂದ ಬೆಳಗ್ಗೆ 10 ಗಂಟೆಗೆ ಹೊರಟು ಮಧ್ಯಾಹ್ನ 3 ಗಂಟೆಗೆ ಮೈಸೂರು ತಲುಪಿದ್ದೇವೆ. ವಿಂಡೋ ಟ್ರೈಲಿಂಗ್ ಮೂಲಕ ಪರಿವೀಕ್ಷಣೆ ನಡೆಸಲಾಯಿತು ಎಂದರು.
ನಾನು ಮೊದಲು ಹೆಚ್ಚಾಗಿ ರೈಲಿನಲ್ಲಿಯೇ ರಾಜ್ಯಾದ್ಯಂತ ಪ್ರವಾಸ ಮಾಡುತ್ತಿದ್ದೆ. ಕೆಲ ವರ್ಷಗಳಿಂದ ರೈಲಿನಲ್ಲಿ ಪ್ರಯಾಣಿಸುವ ಅವಕಾಶ ಸಿಕ್ಕಿರಲಿಲ್ಲ. ಈಗ ಮತ್ತೊಮ್ಮೆ ರೈಲಿನಲ್ಲಿ ಪ್ರಯಾಣಿಸಿ ಜನರ ಸಮಸ್ಯೆ ಆಲಿಸುವ ಅವಕಾಶ ಸಿಕ್ಕಿರುವುದು ಸಂತೋಷ ತಂದಿದೆ. ಕೇಂದ್ರ ಸಚಿವನಾಗಿ ರೈಲಿನಲ್ಲಿ ಸಂಚರಿಸಿದ್ದು, ಆ ಸಂದರ್ಭದಲ್ಲಿ ಜನತೆಯನ್ನು ಮಾರ್ಗದ ಉದ್ದಕ್ಕೂ ಭೇಟಿಯಾಗಿದ್ದು ರೋಮಾಂಚನ ಉಂಟುಮಾಡಿದೆ ಎಂದು ಹೇಳಿದರು.
ಸಾಮೂಹಿಕ ಸಾರಿಗೆ ವ್ಯವಸ್ಥೆಗಳಲ್ಲಿ ರೈಲು ಸಾರಿಗೆಗೆ ಅತ್ಯಂತ ಮಹತ್ವವಿದೆ. ಪ್ರಯಾಣಿಕರ ಸಂಚಾರ ಮಾತ್ರವಲ್ಲದೆ ವಾಣಿಜ್ಯ ದೃಷ್ಟಿಯಿಂದಲೂ ರೈಲು ವ್ಯವಸ್ಥೆ ದೇಶದ ಬೆನ್ನೆಲುಬಾಗಿದೆ. ಮುಖ್ಯವಾಗಿ ಬೆಂಗಳೂರು ಮತ್ತು ಮೈಸೂರು ನಗರಗಳ ನಡುವೆ ರೈಲು ಸಂಚಾರ ಈಗಾಗಲೇ ಉತ್ತಮವಾಗಿದ್ದು ಅದನ್ನು ಮತ್ತಷ್ಟು ಉತ್ತಮಗೊಳಿಸುವ ನಿಟ್ಟಿನಲ್ಲಿ ನಾನು ಮತ್ತು ಸೋಮಣ್ಣನವರು ಚರ್ಚೆ ನಡೆಸಿದ್ದೇವೆ. ಪ್ರಧಾನಿ ನರೇಂದ್ರ ಮೋದಿಯವರ ಮಾರ್ಗದರ್ಶನದಲ್ಲಿ ಈ ಭಾಗದಲ್ಲಿ ಮತ್ತಷ್ಟು ಪರಿವರ್ತನಾತ್ಮಕ ಬೆಳವಣಿಗೆಯನ್ನು ಕಾಣುವ ದಿನಗಳು ದೂರವಿಲ್ಲ ಎಂದು ಅವರು ಹೇಳಿದರು.
ಪ್ರಮುಖವಾಗಿ ನಾನು ರಾಮನಗರ, ಮಂಡ್ಯ ಮತ್ತು ಮೈಸೂರು ಜಿಲ್ಲೆಗಳಲ್ಲಿ ಹಾದುಹೋಗುವ ರೈಲು ಮಾರ್ಗದ ವ್ಯಾಪ್ತಿಯಲ್ಲಿ ಬರುವ ನಿಲ್ದಾಣಗಳ ಅಭಿವೃದ್ಧಿ, ಹೆಚ್ಚುವರಿ ರೈಲುಗಳ ಸಂಚಾರ, ಪ್ರಮುಖ ರೈಲುಗಳ ನಿಲುಗಡೆ, ವಾಣಿಜ್ಯ ಚಟುವಟಿಕೆಗಳ ವೃದ್ಧಿ ಹಾಗೂ ಉದ್ಯೋಗ ಸೃಷ್ಟಿಸುವ ನಿಟ್ಟಿನಲ್ಲಿ ಸಚಿವ ಸೋಮಣ್ಣ ಅವರೊಂದಿಗೆ ವಿಸ್ತೃತ ಮಾತುಕತೆ ನಡೆಸಿದ್ದೇನೆ ಎಂದು ಮಾಹಿತಿ ನೀಡಿದರು.
ಮುಖ್ಯವಾಗಿ ಎಲ್ಲಾ ಲೆವೆಲ್ ಕ್ರಾಸಿಂಗ್‌ಗಳನ್ನು ಪರಿಶೀಲಿಸಿ ಅಗತ್ಯವಿರುವ ಕಡೆ ಅಂಡರ್ ಪಾಸ್‌ಗಳನ್ನು ನಿರ್ಮಿಸುವ ನಿಟ್ಟಿನಲ್ಲಿ ಸಚಿವ ಸೋಮಣ್ಣ ಅವರೊಂದಿಗೆ ಚರ್ಚೆ ನಡೆಸಲಾಯಿತು. ಜತೆಗೆ, ಈ ಮಾರ್ಗದ ಮದ್ದೂರು, ಶ್ರೀರಂಗಪಟ್ಟಣ, ಪಾಂಡವಪುರ ಸೇರಿದಂತೆ ಹಲವಾರು ರೈಲು ನಿಲ್ದಾಣಗಳನ್ನು ಅಭಿವೃದ್ಧಿಪಡಿಸಿ ಮೇಲ್ದರ್ಜೆಗೆ ಏರಿಸುವ ಬಗ್ಗೆ ರೈಲ್ವೆ ಸಚಿವರು ಮತ್ತು ಅಧಿಕಾರಿಗಳ ಜತೆ ಸಮಾಲೋಚನೆ ನಡೆಸಲಾಯಿತು ಎಂದು ಅವರು ಹೇಳಿದರು.
ಒಡೆಯರ್ ಎಕ್ಸ್‌ಪ್ರೆಸ್ ನಿಲುಗಡೆಗೆ ಒಪ್ಪಿಗೆ
ಮೊದಲಿಗೆ ರಾಮನಗರದಲ್ಲಿ ಬೆಂಗಳೂರು ಮತ್ತು ಮೈಸೂರು ನಡುವೆ ಸಂಚರಿಸುವ ಒಡೆಯರ್ ಎಕ್ಸ್‌ಪ್ರೆಸ್ ರೈಲು ನಿಲುಗಡೆಗೆ ರೇಲ್ವೆ ಮಂಡಳಿಯಿಂದ ಅನುಮತಿ ಸಿಕ್ಕಿದೆ. ಅದಷ್ಟು ಬೇಗ ಸದರಿ ರೈಲಿನ ನಿಲುಗಡೆಗೆ ಚಾಲನೆ ನೀಡಲಾಗುವುದು ಎಂದು ಸಚಿವ ಸೋಮಣ್ಣ ಅವರು ಭರವಸೆ ನೀಡಿದ್ದಾರೆ ಎಂದು ಸಚಿವ ಎಚ್.ಡಿ. ಕುಮಾರಸ್ವಾಮಿ ತಿಳಿಸಿದರು.
ಈ ರೈಲಿನ ನಿಲುಗಡೆಯ ಬಗ್ಗೆ ಕೇಂದ್ರದ ರೈಲ್ವೆ ಸಚಿವ ಅಶ್ವಿನಿ ವೈಷ್ಣವ್ ಮತ್ತು ರಾಜ್ಯ ಸಚಿವ ಸೋಮಣ್ಣ ಅವರನ್ನು ಭೇಟಿಯಾಗಿ ಚರ್ಚೆ ನಡೆಸಿದ್ದೆ ಎಂದು ತಿಳಿಸಿದ ಸಚಿವ ಎಚ್.ಡಿ. ಕುಮಾರಸ್ವಾಮಿ ಅವರು, ಈ ರೈಲಿನ ನಿಲುಗಡೆಯಿಂದ ರಾಮನಗರದ ಜನರಿಗೆ ಹೆಚ್ಚು ಅನುಕೂಲ ಆಗುತ್ತದೆ ಎಂದರು.
ಮದ್ದೂರಿನಲ್ಲಿ ಮತ್ತೊಂದು ರೈಲು ನಿಲ್ದಾಣ
ಪಟ್ಟಣದಲ್ಲಿ ಹಾಲಿ ಇರುವ ರೈಲು ನಿಲ್ದಾಣ ಪಟ್ಟಣದ ಜನರಿಗೆ ದೂರದಲ್ಲಿದ್ದು, ಅದು ಸುಮಾರು ನೂರು ವರ್ಷಗಳಷ್ಟು ಹಳೆಯದು. ಹೀಗಾಗಿ ಪಟ್ಟಣದಲ್ಲಿ ಮತ್ತೊಂದು ಸುಸಜ್ಜಿತ ರೈಲು ನಿಲ್ದಾಣ ಅಗತ್ಯವಿದೆ ಎಂದು ಸಚಿವ ಸೋಮಣ್ಣ ಅವರಿಗೆ ಎಚ್.ಡಿ. ಕುಮಾರಸ್ವಾಮಿ ಮನವರಿಕೆ ಮಾಡಿಕೊಟ್ಟರು. ಇದಕ್ಕೆ ಸ್ಪಂದಿಸಿದ ಸಚಿವ ಸೋಮಣ್ಣ, ತಕ್ಷಣವೇ ಈ ಬಗ್ಗೆ ಕ್ರಮ ವಹಿಸಲಾಗುವುದು ಎಂದು ಭರವಸೆ ನೀಡಿದರು.
ಜಾಗವನ್ನು ಗುರುತಿಸಿದರೆ ತಕ್ಷಣವೇ ಆ ಜಾಗದ ಸಮೀಕ್ಷೆಗೆ ಅಧಿಕಾರಿಗಳನ್ನು ಕಳಿಸಲಾಗುವುದು. ಪಟ್ಟಣದಲ್ಲಿ ಈಗಿರುವ ರೈಲು ನಿಲ್ದಾಣ ಸಾಕಾಗುತ್ತಿಲ್ಲ, ಪ್ರಯಾಣಿಕರ ದಟ್ಟಣೆ ಜಾಸ್ತಿ ಇದೆ. ಹೀಗಾಗಿ ಎರಡನೇ ನಿಲ್ದಾಣ ಬೇಕು ಎಂದು ಎಚ್.ಡಿ. ಕುಮಾರಸ್ವಾಮಿ ಅವರು ಮತ್ತು ಡಿ.ಸಿ. ತಮ್ಮಣ್ಣ ಅವರು ಮನವಿ ಮಾಡಿದ್ದಾರೆ. ಮದ್ದೂರು ನಿಲ್ದಾಣ ಬಹಳ ಹಳೆಯ ನಿಲ್ದಾಣ. ಈ ನಿಲ್ದಾಣವನ್ನು ಮೇಲ್ದರ್ಜೆಗೆ ಏರಿಸಿ ಆಧುನಿಕರಣ ಮಾಡಲಾಗುವುದು. ಇನ್ನು ಆರು ತಿಂಗಳಲ್ಲಿ ಹಳೆಯ ನಿಲ್ದಾಣದ ಆಧುನೀಕರಣ ಕಾಮಗಾರಿ ಮುಗಿಸಲಾಗುವುದು. ನಾನು ಮತ್ತು ಎಚ್.ಡಿ. ಕುಮಾರಸ್ವಾಮಿ ಅವರು ಸೇರಿ ಉದ್ಘಾಟನೆ ಮಾಡುತ್ತೇವೆ ಎಂದು ಮದ್ದೂರು ಜನರಿಗೆ ಭರವಸೆ ನೀಡಿದರು.
ಇನ್ನು ನಾಲ್ಕೈದು ದಿನಗಳಲ್ಲಿ ಹಿರಿಯ ಅಧಿಕಾರಿಗಳು ಮದ್ದೂರಿಗೆ ಭೇಟಿ ನೀಡಿ ಪರಿಶೀಲನೆ ನಡೆಸುವರು. ಹಾಗೆಯೇ, ಇಲ್ಲಿ ಕೆಲ ರೈಲುಗಳನ್ನು ನಿಲುಗಡೆಗೆ ಬೇಡಿಕೆ ಇದೆ. ಅದನ್ನು ಪರಿಶೀಲನೆ ಮಾಡುತ್ತೇವೆ. ಈ ಬಗ್ಗೆ ರೈಲ್ವೆ ಸಚಿವರು ಆಶ್ವಾಸನೆ ನೀಡಿದ್ದಾರೆ ಎಂದು ಸಚಿವ ಎಚ್.ಡಿ. ಕುಮಾರಸ್ವಾಮಿ ಹೇಳಿದರು.
ಮದ್ದೂರು ತಾಲೂಕಿನ ನಿಡಘಟ್ಟ ಬಳಿ ವಿಶೇಷ ರೈಲನ್ನು ನಿಲ್ಲಿಸಿ ಗ್ರಾಮಸ್ಥರನ್ನು ಭೇಟಿಯಾದ ಸಚಿವರುಗಳು, ಅಲ್ಲಿ ರೈಲ್ವೆ ಅಂಡರ್ ಪಾಸ್ ನಿರ್ಮಾಣದ ತುರ್ತು ಅಗತ್ಯವಿದೆ ಎಂಬುದನ್ನು ಪರಿಶೀಲಿಸಿದರು. ಈ ಸಂದರ್ಭದಲ್ಲಿ ಸಚಿವರಿಗೆ ಅಹವಾಲು ಸಲ್ಲಿಸಿದ ಗ್ರಾಮಸ್ಥರು, ಕೃಷಿ ಚಟುವಟಿಕೆಗಳಿಗೆ ಹಾಗೂ ವಾಹನಗಳ ಸುಗಮ ಸಂಚಾರಕ್ಕೆ ಅನುಕೂಲವಾಗುವ ರೀತಿಯಲ್ಲಿ ಅಂಡರ್ ಪಾಸ್ ನಿರ್ಮಿಸಬೇಕು ಎಂದು ಕೋರಿದರು. ಅದಕ್ಕೂ ಸ್ಪಂದಿಸಬೇಕು ಎಂದು ಕೇಂದ್ರ ಸಚಿವರು ರೈಲ್ವೆ ಸಚಿವರನ್ನು ಕೋರಿದರು. ತಕ್ಷಣವೇ ಅಧಿಕಾರಿಗಳನ್ನು ಕಳುಹಿಸಿ ಸಮೀಕ್ಷೆ ನಡೆಸಲಾಗುವುದು, ಸಮೀಕ್ಷೆ ವರದಿ ಬಂದ ನಂತರ ತಕ್ಷಣವೇ ಅಂಡರ್ ಪಾಸ್ ಕಾಮಗಾರಿ ಕೈಗೊಳ್ಳಲಾಗುವುದು ಎಂದು ಎಚ್.ಡಿ. ಕುಮಾರಸ್ವಾಮಿ ಮತ್ತು ಸೋಮಣ್ಣ ಅವರು ಸಾರ್ವಜನಿಕರಿಗೆ ಭರವಸೆ ನೀಡಿದರು
ಹನಕೆರೆ ರೈಲ್ವೆ ನಿಲ್ದಾಣದಲ್ಲಿ ಸಾರ್ವಜನಿಕರ ಅಹಬಾಲು ಸ್ವೀಕರಿಸಿದ ಸಚಿವರುಗಳು, ನಿಲ್ದಾಣದ ಸ್ಥಿತಿಗತಿಗಳನ್ನು ಪರಿಶೀಲಿಸಿದರು. ಅಲ್ಲದೆ, ನಿಲ್ದಾಣ ಅಭಿವೃದ್ಧಿಗೆ ಕ್ರಮ ವಹಿಸಲಾಗುವುದು ಎಂದು ಭರವಸೆ ನೀಡಿದರು. ಇಲ್ಲಿಯೂ ಕೆಲವೆಡೆ ರೈಲ್ವೆ ಅಂಡರ್ ಪಾಸ್‌ಗಳನ್ನು ನಿರ್ಮಿಸಬೇಕು ಎಂದು ಸಾರ್ವಜನಿಕರು ಮನವಿ ಮಾಡಿದರು.
ಪದೇ ಪದೇ ಲೆವೆಲ್ ಕ್ರಾಸಿಂಗ್‌ಗಳಲ್ಲಿ ರೈಲ್ವೆ ಗೇಟ್‌ಗಳನ್ನು ಹಾಕುವುದರ ಮೂಲಕ ರೈತರಿಗೆ ಕಷ್ಟವಾಗುತ್ತಿದೆ. ಕಬ್ಬು ಸಾಗಿಸುವ ವಾಹನಗಳಿಗೆ ಅಡ್ಡಿ ಆಗುತ್ತಿದೆ. ಅಲ್ಲದೆ, ಶಾಲಾ ಮಕ್ಕಳಿಗೆ ಕೂಡ ತೊಂದರೆ ಆಗುತ್ತಿದೆ ಎಂದು ಗ್ರಾಮಸ್ಥರು ದೂರಿದರು. ಇವರ ಬೇಡಿಕೆಗೆ ಸ್ಪಂದಿಸಿದ ಕುಮಾರಸ್ವಾಮಿ ಅವರು ಗ್ರಾಮಸ್ಥರ ಪರವಾಗಿ ರೈಲ್ವೆ ಸಚಿವರಿಗೆ ಬೇಡಿಕೆ ಇಟ್ಟು, ಅದಷ್ಟು ಬೇಗ ಲೆವೆಲ್ ಕ್ರಾಸಿಂಗ್‌ಗಳಲ್ಲಿ ಮೇಲು ಸೇತುವೆ ಅಥವಾ ನಿರ್ಮಾಣ ಮಾಡಲು ಕೋರಿದರು. ನಂತರ ಯಲಿಯೂರು, ಪಾಂಡವಪುರ, ಶ್ರೀರಂಗಪಟ್ಟಣ ನಿಲ್ದಾಣದಲ್ಲಿ ರೈಲಿನಿಂದ ಕೆಳಗಿಳಿದ ಸಚಿವರು ಸಾರ್ವಜನಿಕರ ಅಹವಾಲು ಸ್ವೀಕರಿಸಿದರು.
15 ದಿನಗಳಲ್ಲಿ ಎಲ್ಲಾ ಅರ್ಜಿಗಳ ಬಗ್ಗೆ ಕ್ರಮ
ಸಾರ್ವಜನಿಕರು ಸಲ್ಲಿಸಿರುವ ಮನವಿಗಳ ಬಗ್ಗೆ ಸಚಿವ ಎಚ್.ಡಿ. ಕುಮಾರಸ್ವಾಮಿ ಅವರು ರೈಲ್ವೇ ಸಚಿವ ಸೋಮಣ್ಣ ಮತ್ತು ಉನ್ನತ ರೈಲ್ವೆ ಅಧಿಕಾರಿಗಳ ಜತೆ ಮಾತುಕತೆ ನಡೆಸಿದರು. ಜನತೆಯ ಬೇಡಿಕೆಗಳು ತುರ್ತು ರೀತಿಯಲ್ಲಿದ್ದು ಅವುಗಳನ್ನು ಆದಷ್ಟು ಬೇಗ ಪರಿಹಾರ ಮಾಡಬೇಕು ಎಂದು ಕೋರಿದರು. ಇದಕ್ಕೆ ಸ್ಪಂದಿಸಿದ ಸಚಿವ ಸೋಮಣ್ಣ ಅವರು, ಒಂದು ವಾರ ಅಥವಾ 15 ದಿನಗಳಲ್ಲಿ ಜನತೆ ನೀಡಿರುವ ಎಲ್ಲ ಅರ್ಜಿಗಳನ್ನು ಪರಿಶೀಲಿಸಿ ಕ್ರಮ ವಹಿಸುತ್ತೇವೆ. ತಮ್ಮೊಂದಿಗೆ ಮತ್ತೊಂದು ಸುತ್ತಿನ ಸಭೆ ನಡೆಸಲಾಗುವುದು. ಅಧಿಕಾರಿಗಳ ಜತೆಯು ನಾನು ಸಭೆ ನಡೆಸುತ್ತೇನೆ ಎಂದು ತಿಳಿಸಿದರು.
ಮಂಡ್ಯದಲ್ಲಿ ಕೆಲವು ಹೊಸ ರೈಲುಗಳ ನಿಲುಗಡೆ ಮಾಡಬೇಕು ಎಂದು ರೈಲ್ವೆ ಸಚಿವರನ್ನು ಕೋರಿದ್ದೇನೆ. ಅದೇ ರೀತಿ ಕೆಲ ಡೆಮೋ ರೈಲುಗಳನ್ನು ಸಂಚಾರಕ್ಕೆ ಅನುವು ಮಾಡಿಕೊಡಬೇಕು ಎಂದು ಕೇಳಿದ್ದೇನೆ. ಅಲ್ಲದೆ, ಕೆಲವು ಪ್ರಮುಖ ರೈಲುಗಳ ನಿಲುಗಡೆ ಕೋರಿ ಕೋರಿಕೆ ಸಲ್ಲಿಸಿದ್ದೇನೆ ಎಂದು ಕೇಂದ್ರ ಸಚಿವ ಎಚ್.ಡಿ. ಕುಮಾರಸ್ವಾಮಿ ತಿಳಿಸಿದರು.
ಮುಖ್ಯವಾಗಿ ಬೆಂಗಳೂರು-ಮೈಸೂರು ನಡುವಿನ ಪ್ರಮುಖ ನಗರವಾದ ಮಂಡ್ಯ ಕೃಷಿ ಮತ್ತು ವಾಣಿಜ್ಯ ಚಟುವಟಿಕೆಗಳಲ್ಲಿ ಮುಂಚೂಣಿ ನಗರವಾಗಿದೆ. ಅಲ್ಲದೆ ಪ್ರವಾಸೋದ್ಯಮ ವಲಯದಲ್ಲೂ ಪ್ರಮುಖವಾಗಿದೆ. ಹೀಗಾಗಿ ಮಂಡ್ಯದ ರೈಲ್ವೆ ನಿಲ್ದಾಣವನ್ನು ಅತ್ಯಾಧುನಿಕ ಮತ್ತು ಸುಸಜ್ಜಿತ ನಿಲ್ದಾಣವನ್ನಾಗಿ ಪರಿವರ್ತಿಸಬೇಕು ಎಂದು ರೈಲ್ವೆ ಸಚಿವರಿಗೆ ಮನವಿ ಮಾಡಿದರು. ಹೆಚ್ಚು ಫ್ಲಾಟ್ ಫಾರ್ಮ್‌ಗಳನ್ನು ಮಾಡುವುದು ಹಾಗೂ ಹಾಲಿ ಇರುವ ಪ್ಲಾಟ್ ಫಾರ್ಮ್‌ಗಳನ್ನು ಅಭಿವೃದ್ಧಿಪಡಿಸಿ ಪ್ರಯಾಣಿಕರು ಸುಲಭವಾಗಿ ಸಂಚಾರ ಮಾಡುವ ನಿಟ್ಟಿನಲ್ಲಿ ನಿಲ್ದಾಣವನ್ನು ಅಭಿವೃದ್ಧಿಪಡಿಸಬೇಕು ಎಂದು ಸಾರ್ವಜನಿಕರು, ಇಬ್ಬರು ಸಚಿವರುಗಳನ್ನು ಕೋರಿದರು.
ಇದಕ್ಕೆ ಸ್ಪಂದಿಸಿದ ಕೇಂದ್ರ ಸಚಿವ ಎಚ್.ಡಿ. ಕುಮಾರಸ್ವಾಮಿ ಅವರು, ಈಗಾಗಲೇ ಕೇಂದ್ರ ರೈಲ್ವೆ ಸಚಿವರಾದ ಅಶ್ವಿನಿ ವೈಷ್ಣವ್ ಮತ್ತು ರಾಜ್ಯ ಸಚಿವರಾದ ವಿ ಸೋಮಣ್ಣ ಅವರ ಸಹಕಾರದಿಂದ ಮಂಡ್ಯ ನಿಲ್ದಾಣವು ಆಧುನಿಕ ನಿರ್ಧಾರವಾಗಿ ರೂಪಗೊಳ್ಳುತ್ತಿದೆ. ಪ್ರಧಾನಿ ನರೇಂದ್ರ ಮೋದಿ ಅವರ ನಾಯಕತ್ವದಲ್ಲಿ ರೈಲು ನಿಲ್ದಾಣಗಳು ವಿಮಾನ ನಿಲ್ದಾಣಗಳ ರೀತಿಯಲ್ಲಿ ಅಭಿವೃದ್ಧಿ ಹೊಂದುತ್ತಿವೆ. ಹೀಗಾಗಿ ಮಂಡ್ಯ ರೈಲು ನಿಲ್ದಾಣವನ್ನು ಕಂಡು ಕೇಳರಿಯದ ರೀತಿಯಲ್ಲಿ ಆಧುನಿಕವಾಗಿ ಅಭಿವೃದ್ಧಿ ಮಾಡುವ ನಿಟ್ಟಿನಲ್ಲಿ ಈಗಾಗಲೇ ಕ್ರಮ ವಹಿಸಿದ್ದೇವೆ ಎಂದು ಕೇಂದ್ರ ಸಚಿವ ಎಚ್.ಡಿ. ಕುಮಾರಸ್ವಾಮಿ ಅವರು ಮಾಹಿತಿ ನೀಡಿದರು.
ರಾಜ್ಯದಲ್ಲಿ ಎಲೆಕ್ಟ್ರಿಕ್ ವಾಹನೋದ್ಯಮಕ್ಕೆ ಉತ್ತೇಜನ; ಉದ್ಯಮಿಗಳ ಜತೆ ಎಚ್.ಡಿ. ಕುಮಾರಸ್ವಾಮಿ ಮಹತ್ವದ ಸಭೆ
ಸಚಿವರ ಜತೆ ನೈರುತ್ಯ ವಿಭಾಗೀಯ ರೈಲ್ವೆ ವ್ಯವಸ್ಥಾಪಕ ಅಶುತೋಷ್ ಕುಮಾರ್ ಸಿಂಗ್ (ಬೆಂಗಳೂರು) ಸೇರಿ ಹಿರಿಯ ರೈಲ್ವೆ ಅಧಿಕಾರಿಗಳು, ಮಾಜಿ ಸಚಿವರಾದ ಡಿ.ಸಿ. ತಮ್ಮಣ್ಣ, ಸಿ.ಎಸ್. ಪುಟ್ಟರಾಜು, ಸಾ.ರಾ. ಮಹೇಶ್, ಮೈಸೂರು ಮತ್ತು ಕೊಡಗು ಲೋಕಸಭಾ ಕ್ಷೇತ್ರದ ಸಂಸದ ಚಾಮರಾಜ ಕೃಷ್ಣರಾಜ ಒಡೆಯರ್ ಉಪಸ್ಥಿತರಿದ್ದರು.