ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ

Dr Shalini Rajaneesh Column: ನವರಾತ್ರಿಗೆ ರಂಗೇರಿಸುವ ದುರ್ಗೆಯ ಪೂಜೆ, ಜಂಬೂಸವಾರಿ !

ಚಾಮುಂಡೇಶ್ವರಿ ಮೈಸೂರಿನ ಅಧಿದೇವತೆ, ಸಪ್ತಮಾತೃಕೆಯರಲ್ಲಿ ಏಳನೆಯವಳು. ಹಿಂದೂ ಧರ್ಮದಲ್ಲಿ, ಚಾಮುಂಡೇಶ್ವರಿ ಪ್ರಬಲವಾದ ದೇವತೆ. ಚಾಮುಂಡಿ ಎಂದೊಡನೆ ಈಕೆ ಶಿಷ್ಟ ಪುರಾಣದ ವಿಶಿಷ್ಟ ಶಕ್ತಿದೇವತೆ. ಆದಿಶಕ್ತಿಯಾಗಿ ಹುಟ್ಟಿ ದುಷ್ಟ ಶಿಕ್ಷಕಿ- ಶಿಷ್ಟರಕ್ಷಕಿಯಾಗಿ ಮಹಿಷ ನನ್ನು ಕೊಂದು, ಲೋಕ ಕಂಟಕರಾಗಿದ್ದ ಚಂಡ-ಮುಂಡರೆಂಬ ರಕ್ಕಸರನ್ನು ಸಂಹರಿಸಿ ‘ಚಾಮುಂಡಿ’ ಯಾಗಿದ್ದಾಳೆಂಬುದು ತಿಳಿಯುತ್ತದೆ.

ಡಾ.ಶಾಲಿನಿ ರಜನೀಶ್‌,

ಸರಕಾರದ ಮುಖ್ಯ ಕಾರ್ಯದರ್ಶಿ

ನನ್ನ ಹಿಂದಿನ ಲೇಖನದಲ್ಲಿ ಮೈಸೂರು ದಸರಾದ ಇತಿಹಾಸ, ಮೈಸೂರು ಒಡೆಯರ ಕಾಲದ ದಸರಾ ಆಚರಣೆ ಗಳ ಬಗ್ಗೆ ಬರೆದಿದ್ದೆ. ಈ ಲೇಖನದಲ್ಲಿ ಮೈಸೂರು ದಸರಾ ಸಂದರ್ಭದಲ್ಲಿ ಆಚರಿಸಲ್ಪಡುವ ನವ ರಾತ್ರಿ ಉತ್ಸವ, ವಿಜಯದಶಮಿ ಹಬ್ಬ ಮತ್ತು ಧಾರ್ಮಿಕ ಆಚರಣೆಗಳ ಬಗ್ಗೆ ತಿಳಿದುಕೊಳ್ಳೋಣ.

ಮಹಿಷಾಸುರ ಮರ್ದಿನಿ ಚಾಮುಂಡೇಶ್ವರಿ ದೇವಿ

ಚಾಮುಂಡೇಶ್ವರಿ ಮೈಸೂರಿನ ಅಧಿದೇವತೆ, ಸಪ್ತಮಾತೃಕೆಯರಲ್ಲಿ ಏಳನೆಯವಳು. ಹಿಂದೂ ಧರ್ಮದಲ್ಲಿ, ಚಾಮುಂಡೇಶ್ವರಿ ಪ್ರಬಲವಾದ ದೇವತೆ. ಚಾಮುಂಡಿ ಎಂದೊಡನೆ ಈಕೆ ಶಿಷ್ಟ ಪುರಾಣದ ವಿಶಿಷ್ಟ ಶಕ್ತಿದೇವತೆ. ಆದಿಶಕ್ತಿಯಾಗಿ ಹುಟ್ಟಿ ದುಷ್ಟ ಶಿಕ್ಷಕಿ- ಶಿಷ್ಟರಕ್ಷಕಿಯಾಗಿ ಮಹಿಷ ನನ್ನು ಕೊಂದು, ಲೋಕ ಕಂಟಕರಾಗಿದ್ದ ಚಂಡ-ಮುಂಡರೆಂಬ ರಕ್ಕಸರನ್ನು ಸಂಹರಿಸಿ ‘ಚಾಮುಂಡಿ’ ಯಾಗಿದ್ದಾಳೆಂಬುದು ತಿಳಿಯುತ್ತದೆ.

ಮೈಸೂರಿನ ದೊಡ್ಡದೇವರಾಜ ಒಡೆಯರ್ ಅವರು ಬೆಟ್ಟವನ್ನೇರಲು ಬರುವ ಭಕ್ತಾದಿಗಳಿಗೆ ಅನುಕೂಲ ವಾಗಲೆಂದು 1101 ಮೆಟ್ಟಿಲುಗಳನ್ನು ಕಟ್ಟಿಸಿ, 700ನೇ ಮೆಟ್ಟಿಲ ಬಳಿ ಬೃಹತ್ ನಂದಿ ವಿಗ್ರಹವನ್ನು ಸ್ಥಾಪಿಸಿದ್ದಾರೆ. ಆಶ್ವಯುಜ ಶುಕ್ಲ ಪಕ್ಷದ ನವರಾತ್ರಿಯ ಸಮಯದಲ್ಲಿ ಭಾರತಾದಾದ್ಯಂತ ಚಾಮುಂಡಿ ಆರಾಧನೆ ದುರ್ಗೆಯ ಹೆಸರಿನಲ್ಲಿ ಬಹಳ ವೈಭವಯುತವಾಗಿ ನಡೆಯುತ್ತದೆ.

ಇದನ್ನೂ ಓದಿ: Dr Shalini Rajaneesh Column: ಪರಂಪರೆಯ ಪುಟಗಳಲ್ಲಿ ಸುಂದರ ಮೈಸೂರು ದಸರಾ

ನವರಾತ್ರಿ ದಿನಗಳಲ್ಲಿ ಚಾಮುಂಡಿ ಬೆಟ್ಟದಲ್ಲಿರುವ ದೇಗುಲದಲ್ಲಿ ಅಷ್ಟಲಕ್ಷ್ಮೀಯರ, ಅಷ್ಟ ದುರ್ಗೆಯರ ಆರಾಧನೆಯನ್ನು ಮಾಡಲಾಗುತ್ತದೆ. ನವ ದಿನವು ದೇವಿಗೆ ವಿಶಿಷ್ಟವಾದ ಅಲಂಕಾರಗಳನ್ನು, ಉಡುಗೆ-ತೊಡುಗೆ, ಆಭರಣಗಳಿಂದ ಚಾಮುಂಡೇಶ್ವರಿಯನ್ನು ಸಿಂಗರಿಸಿ ಭಕ್ತವೃಂದಕ್ಕೆ ಸಂತಸವನ್ನು ನೀಡುತ್ತಾರೆ.

ನವರಾತ್ರಿಯಂದು ಮಾತೃದೇವತೆಯ ಆರಾಧನೆಯ ಹಿನ್ನೆಲೆ: ಇಡೀ ಪ್ರಪಂಚದ ಸೃಷ್ಟಿ- ಸ್ಥಿತಿ-ಲಯಗಳಿಗೆ ಒಂದು ಶಕ್ತಿಯೇ ಕಾರಣ; ಅದು ಸ್ತ್ರೀ ದೇವತೆ ಎಂದು ಪ್ರಕೃತಿಯನ್ನು ಮಾತೃ ರೂಪದಲ್ಲಿ ನೋಡುವ ಪರಂಪರೆಯಿಂದ ಆರಂಭವಾಗಿದೆ. ಇದು ಶಾಕ್ತ ಪರಂಪರೆಯ ಮೂಲದಲ್ಲಿದ್ದು ಶಕ್ತಿ ದೇವತೆಯನ್ನು ಮಹಾಕಾಲೀ-ಮಹಾಲಕ್ಷ್ಮೀ-ಮಹಾಸರಸ್ವತಿಯಾಗಿ ನೋಡಲಾಗಿದೆ. ಇದೇ ಮುಂದುವರಿದು ಶರನ್ನವರಾತ್ರಿಯಲ್ಲಿ ದೇವಿ ಆರಾಧನೆಯು ಜನಪ್ರಿಯಗೊಂಡಿದೆ.

ನವರಾತ್ರಿ ಪೂಜೆ ದಸರಾ ಆಚರಣೆ

‘ದುರ್ಗಾ’ ಎಂದರೆ, ಭಕ್ತರ ದುರ್ಗತಿಯನ್ನು ನಾಶ ಮಾಡುವವಳು ಎಂದರ್ಥ. ಈ ದುರ್ಗಾ ದೇವಿಯ ಸ್ತುತಿಗಳು ವೇದದಲ್ಲಿಯೇ ಕಂಡು ಬರುತ್ತವೆ. ಇವಳನ್ನು ದುರ್ಗಾಲಕ್ಷ್ಮೀ, ವಿಷ್ಣು ದುರ್ಗಾ ಎಂದೂ ಕರೆಯಲಾಗಿದೆ. ಪುರಾಣಗಳಲ್ಲಿ ಮಹಿಷಾಸುರ ಮರ್ದಿನಿಯ ಕಥೆಗಳು ಹೆಚ್ಚು ವಿವರಣಾತ್ಮಕವಾಗಿ ವರ್ಣಿಸಲ್ಪಟ್ಟಿವೆ.

Screenshot_2 ok

ರಂಭಾಸುರನ ಮಗನಾದ ಮಹಿಷಾಸುರನು ‘ಒಂದು ಹೆಣ್ಣಿನಿಂದ ಮಾತ್ರ ಸಾವು ಬರಲಿ’ ಎಂಬ ವರ ಬಲದಿಂದ ಕೊಬ್ಬಿ ದೇವ ಮತ್ತು ಮನುಷ್ಯರಿಗೆ ತೊಂದರೆ ನೀಡುತ್ತಾ ಅವರೆಲ್ಲರನ್ನೂ ಲೋಕಭ್ರಷ್ಟರನ್ನಾಗಿ ಮಾಡಿದ. ಇದರಿಂದ ನೊಂದ ದೇವತೆಗಳು ತ್ರಿಮೂರ್ತಿಗಳಲ್ಲಿ ತಮ್ಮನ್ನು ಕಾಪಾಡುವಂತೆ ಮೊರೆಯಿಟ್ಟರು. ಆಗ ತ್ರಿಮೂರ್ತಿಗಳ ಸ್ವರೂಪವಾಗಿ ಆದಿಶಕ್ತಿಯು ಆವಿರ್ಭವಿಸಿದಳು. ಅವಳಿಗೆ ತ್ರಿಮೂರ್ತಿಗಳು ಮತ್ತು ಎಲ್ಲಾ ದೇವತೆಗಳು ತಮ್ಮ ತಮ್ಮ ಶಕ್ತಿಗಳನ್ನು ನೀಡಿದರು. ಈ ಸಮಯದಲ್ಲಿ ಆದಿಶಕ್ತಿಯ ನೇತೃತ್ವದ ದೇವಗಣದ ಮೇಲೆ ಮಹಿಷಾಸುರನ ಅಧಿಪತ್ಯದಲ್ಲಿ, ಚಂಡ- ಮುಂಡರು, ಶುಂಭ-ನಿಶುಂಭರು, ರಕ್ತಬೀಜಾ ಸುರ ಮುಂತಾದ ಆಸುರೀ ಶಕ್ತಿಗಳು ಯುದ್ಧ ಮಾಡಿದರು.

ಯುದ್ಧದಲ್ಲಿ ಪಾರ್ವತೀ ಶಕ್ತಿಯು ಚಂಡ-ಮುಂಡರನ್ನು ವಧೆ ಮಾಡಿ ಚಾಮುಂಡೇಶ್ವರಿಯಾದಳು. ಶುಂಭ- ನಿಶುಂಭರನ್ನು ಸರಸ್ವತಿಯು ಸಂಹಾರ ಮಾಡಿ ಮಹಾಸರಸ್ವತಿಯಾದಳು. ಮಹಾಲಕ್ಷ್ಮಿಯು ಮಹಿಷಾಸುರ ನನ್ನು ಮರ್ದಿಸಿ ‘ಮಹಿಷಾ ಸುರಮರ್ದಿನಿ’ಯಾಗಿ, ಅನಂತರ ಮೂರು ಶಕ್ತಿಗಳು ಒಟ್ಟಾಗಿ ಒಬ್ಬಳೇ ಚಂಡಿ- ಜಗಜ್ಜನನೀ ಎಂಬುದನ್ನು ಜಗತ್ತಿಗೆ ತೋರಿಸಿಕೊಟ್ಟರು. ಅಂದಿನಿಂದ ಆ ದೇವಿಯ ಹೆಸರಲ್ಲಿ, ‘ಮಹಿಷ’ ಎಂಬ ಅಜ್ಞಾನ ಮತ್ತು ಅಹಂಕಾರಗಳಿಂದ ನಮ್ಮನ್ನು ದೂರೀಕರಿಸಿ ಸನ್ಮಾರ್ಗ ನೀಡುವಂತೆ ಪೂಜೆಗಳನ್ನು ಆಚರಿಸಲಾಗುತ್ತಿದ್ದು ಅದೇ ನವರಾತ್ರಿ ಉತ್ಸವವಾಗಿ ಮಾರ್ಪಟ್ಟಿದೆ.

ನವರಾತ್ರಿಯನ್ನು ಒಂಬತ್ತು ದಿನಗಳ ಕಾಲ ಶರದೃತುವಿನಲ್ಲಿ ಆಚರಿಸುವುದರಿಂದ ಇದನ್ನು ‘ಶರನ್ನವರಾತ್ರಿ’ ಎಂದು ಕರೆಯಲಾಗುತ್ತಿದ್ದು, ಈ ಸಮಯದಲ್ಲಿ ದೇವೀ ಆರಾಧನೆಗೆ ಮಹತ್ವವನ್ನು ನೀಡಲಾಗಿದೆ. ಇದು ನಿಜಾರ್ಥದಲ್ಲಿ ಶಕ್ತಿರೂಪ ದಲ್ಲಿರುವ ಪ್ರಕೃತಿ ಮಾತೆಯ ಆರಾಧನೆ ಯಾಗಿದೆ. ಆದ್ದರಿಂದಲೇ ಈ ನವರಾತ್ರಿ ಗಳಲ್ಲಿಯೂ ಶಕ್ತಿ ಸ್ವರೂಪಿಣಿಯರಾದ ದುರ್ಗಾ, ಮಹಾಲಕ್ಷ್ಮಿ, ಮಹಾಕಾಳಿ, ಮಹಾಸರಸ್ವತಿಯರ ವಿವಿಧ ರೂಪಗಳನ್ನು ಪ್ರಮುಖವಾಗಿ ಆರಾಧಿಸಲಾಗುತ್ತದೆ. ಅಂದರೆ, ಸ್ತ್ರೀ ದೇವತೆಗಳನ್ನು ಮಾತೃ ಸ್ವರೂಪದಲ್ಲಿ ಪೂಜಿಸಲಾಗುತ್ತದೆ.

Screenshot_4 ok

ನವರಾತ್ರಿ ಮತ್ತು ವಿಜಯದಶಮಿಯನ್ನು ಸೇರಿಸಿ ಹತ್ತು ದಿನಗಳ ಉತ್ಸವವನ್ನಾಗಿ ಆಚರಿಸುವುದು ಪ್ರಮುಖವಾಗಿ ರೂಢಿಯಲ್ಲಿದೆ. ಮೊದ ಲನೆಯ ದಿನ ಘಟಸ್ಥಾಪನೆ ಮಾಡಿ ದೇವಿಯ ಶಕ್ತಿಗಳ ವಿವಿಧ ಮಂತ್ರಜಪ, ಪುರಾಣಗಳ ಪಠಣ, ಪೂಜೆ, ಕುಮಾರಿಪೂಜೆ, ಸರಸ್ವತೀ ಪೂಜೆ, ಸುಹಾಸಿನಿ ಪೂಜೆ, ವ್ರತ, ತಪಾನುಷ್ಠಾನ, ಉಪವಾಸ ಇತ್ಯಾದಿಗಳನ್ನು ಆಚರಿಸಲಾಗುತ್ತದೆ.

ಹತ್ತನೆಯ ದಿನದ ವಿಜಯದಶಮಿ ಆಚರಣೆಯನ್ನು ‘ಅಪರಾಜಿತಾ ದೇವಿ’ಯ ಪೂಜೆಯನ್ನಾಗಿ, ಅಂದರೆ, ವಿಜಯಲಕ್ಷ್ಮಿ ದೇವಿಯ ಪೂಜೆ ಯಾಗಿ ಆಚರಿಸುವ ಸಂಪ್ರದಾಯವನ್ನು ಕಾಣುತ್ತೇವೆ.

ನವರಾತ್ರಿಯಲ್ಲಿ ʼದೇವಿ ಪೂಜೆʼ ಏಕೆ ವಿಶೇಷ?

ನವರಾತ್ರಿಯ ಸಂದರ್ಭದಲ್ಲಿ ಸರಸ್ವತೀ ಪೂಜೆ, ಕಾಲರಾತ್ರಿ ಪೂಜೆ, ದುರ್ಗಾಷ್ಟಮಿ ಪೂಜೆ, ಆಯುಧ ಪೂಜೆ, ಸೀಮೋಲ್ಲಂಘನ ಮುಂತಾದ ವಿಧಿ-ವಿಧಾನಗಳು ಇವೆ. ಇದಕ್ಕೂ ಪೌರಾಣಿಕ ಹಿನ್ನೆಲೆಯಿದೆ.

ಮೂಲಾ ನಕ್ಷತ್ರದಲ್ಲಿ ಸರಸ್ವತಿ ದೇವಿಯ ಆವಿರ್ಭಾವವಾದ್ದರಿಂದ ಅಂದು ಸರಸ್ವತೀ ಪೂಜೆ. ದೇವಿಯು ಕಾಲರಾತ್ರಿಯಾಗಿ ಅಂದು ಮಹಿಷಾಸುರ ಸಂಹಾರ ಮಾಡಿದ್ದರಿಂದ ಕಾಳರಾತ್ರಿ ಪೂಜೆಯ ದಿನದಂದು ಮಹಿಷಾಸುರ ಸಂಹಾರ ಮಾಡಿ ಅಂದು ದೇವಿಗೆ ಬಲಿ ನೀಡಲಾಗುತ್ತದೆ.

ದುರ್ಗಾಷ್ಟಮಿಯ ದಿನ ದುರ್ಗೆ ಅಸುರರನ್ನು ಸಂಹಾರ ಮಾಡಿದ ದಿನವಾದ್ದರಿಂದ ‘ದುರ್ಗಾಪೂಜೆ’, ‘ಚಂಡಿ ಹೋಮ’ಗಳು ಮತ್ತು ಪಾಂಡವರು ಗೋಗ್ರಹಣ ಕಾಲದಲ್ಲಿ ತಮ್ಮ ಆಯುಧಗಳನ್ನು ಬನ್ನಿ ಮರದಿಂದ ಮರಳಿ ಪಡೆದು ದುರ್ಗೆಯ ಅನುಗ್ರಹವನ್ನು ಪಡೆದ ದಿನವಾದ್ದರಿಂದ ಅಂದು ಆಯುಧಗಳ ಪೂಜೆ ಮತ್ತು ವಿಜಯದಶಮಿಯಂದು ಯುದ್ಧ ಗೆದ್ದುದರಿಂದ ಗೋಗ್ರಹಣ ಮುಗಿದು ಗೋಮೋಚನ ವಾದ ದಿನ ರಾವಣನನ್ನು ಶ್ರೀರಾಮ ನಿಗ್ರಹಿಸಿದ ದಿನ, ಮತ್ತು ಅಪರಾಜಿತೆಯಾದ ತಾಯಿ ವಿಜಯಲಕ್ಷ್ಮಿಯನ್ನು ಒಲಿಸಿಕೊಳ್ಳುವ ದಿನವಾದ್ದರಿಂದ ಅದು ರಾಜರಿಗೆ ಪ್ರಶಸ್ತವಾದ ಸೀಮೋಲ್ಲಂಘನ, ಬನ್ನಿ ಮಹಾಕಾಲಿಯ ಅನುಗ್ರಹಕ್ಕಾಗಿ ಬನ್ನಿ ಮರದ ಪೂಜೆ ಮತ್ತು ವಿಜಯದಶಮಿಯ ಯಾತ್ರೆಗಳನ್ನು ಮಾಡಲಾಗುತ್ತದೆ.

ರಾಕ್ಷಸರ ಮತ್ತು ದೇವಿಯರ ಯುದ್ಧ ಒಂಬತ್ತು ದಿನಗಳ ಕಾಲ ನಡೆದು ರಕ್ತ ಬೀಜಾಸುರನೂ ಸೇರಿದಂತೆ ಎಲ್ಲ ರಾಕ್ಷಸರೂ ಹತರಾಗಿ ದೇವಿಯ ಕೃಪೆಯಿಂದ ದೇವತೆಗಳು ಸ್ವರ್ಗವನ್ನು ಮರಳಿ ಪಡೆದುಕೊಂಡರು. ಭಾರತೀಯರ ನಂಬಿಕೆಯ ಪ್ರಕಾರ ಭಂಡಾಸುರನನ್ನು ದೇವಿಯು ಒಂಬತ್ತು ದಿನ ಯುದ್ಧ ಮಾಡಿ, ಹತ್ತನೆಯ ದಿನ ವಿಜಯದಶಮಿಯಂದು ಸಂಹರಿಸಿದಳು. ಆದ್ದರಿಂದ ವಿಜಯದಶಮಿಯೂ ದೇವಿಯ ವಿಜಯದ ದಿನವೇ.

ನವರಾತ್ರಿಯನ್ನು ಆಚರಿಸುವಾಗ ಒಂಬತ್ತು ರಾತ್ರಿಗಳಲ್ಲಿ ಕ್ರಮವಾಗಿ, ನಾನಾ ಬಗೆಯ ಧ್ಯಾನ, ಪಾರಾಯಣ, ಜಪದ ಮೂಲಕ ದೇವಿಯ ಆರಾಧನೆಯನ್ನು ಮಾಡಲಾಗುತ್ತದೆ. ಅದರ ಕ್ರಮ ಹೇಗೆಂದರೆ-

  1. ಮಹಾಕಾಳಿ: ಮಧುಕೈಟಭರನ್ನು ಸಂಹರಿಸಿದವಳು
  2. ಮಹಾಲಕ್ಷ್ಮೀ: ಮಹಿಷಾಸುರನನ್ನು ಮರ್ದಿಸಿದವಳು
  3. ಚಾಮುಂಡಾ: ಚಂಡ ಮುಂಡರನ್ನು ಸಂಹರಿಸಿದವಳು
  4. ಕಾಳಿ: ರಕ್ತಬೀಜಾಸುರನನ್ನು ಸಂಹರಿಸಿದವಳು
  5. ದುರ್ಗಿ: ಕಂಸನ ಸಂಹಾರ ಮಾಡಿದವಳು
  6. ರಕ್ತದಂತೀ: ಸರ್ವ ರಾಕ್ಷಸ ಸೈನ್ಯ ನಾಶ ಮಾಡಿದವಳು
  7. ಶಾಕಂಭರಿ: ಕ್ಷಾಮವನ್ನು ನಿವಾರಿಸುವವಳು
  8. ದುರ್ಗಾ: ದುರ್ಗ ರಾಕ್ಷಸ ಮತ್ತು ದುರ್ಗತಿಯನ್ನು ನಾಶಮಾಡಿದವಳು
  9. ಭ್ರಾಮರಿ: ಅರುಣ ದೈತ್ಯನ ಸಂಹಾರ ಮಾಡಿದವಳು ಶಾಕ್ತತಂತ್ರಗಳು ಮತ್ತು ಪುರಾಣಗಳ ಪ್ರಕಾರ ನವರಾತ್ರಿಯ ಸಂದರ್ಭದಲ್ಲಿ ಒಂಬತ್ತೂ ದಿನಗಳಲ್ಲೂ ದಿನಕ್ಕೆ ಒಂದು ಅವತಾರದಂತೆ ನವ ದುರ್ಗೆಯರನ್ನು ಪೂಜಿಸಲಾಗುತ್ತದೆ.

ಅವರೆಂದರೆ- 1. ಶೈಲಪುತ್ರೀ 2. ಬ್ರಹ್ಮಚಾರಿಣೀ 3. ಚಂದ್ರಘಂಟಾ 4. ಕೂಷ್ಮಾಂಡಾ 5. ಸ್ಕಂದಮಾತಾ 6. ಕಾತ್ಯಾಯನೀ 7. ಕಾಲರಾತ್ರಿ 8. ಮಹಾಗೌರೀ 9. ಸಿದ್ದಿಧಾತ್ರಿ

ಚಾಮುಂಡಿ ಬೆಟ್ಟದಲ್ಲಿ ಶಕ್ತಿಪೀಠದ ಕ್ರಮದಲ್ಲಿ 3 ದೇವತೆಯರ ಸ್ವರೂಪದಲ್ಲಿ ನಿತ್ಯ ಆಗಮೋಕ್ತ ಪೂಜೆ ನಡೆಯುತ್ತದೆ. ನವರಾತ್ರಿ ಸಂದರ್ಭ ದೇವಿಗೆ ದಿನವೂ ಅಲಂಕಾರ ಮಾಡಲಾಗುತ್ತದೆ. ಏಳು ಮಾತೃಕೆಯರು, ಮಹಾಕಾಲೀ, ಮಹಾ ಸರಸ್ವತೀ, ಮಹಾಲಕ್ಷ್ಮಿ ಅಲಂಕಾರದಲ್ಲಿ ದೇವಿ ಶೋಭಿಸುತ್ತಾಳೆ.

ಹತ್ತು ದಿನಗಳ ಪೂಜೆಯಲ್ಲಿ ತಾಯಿಯನ್ನು ಕೆಳಗಿನ ಈ ಅಲಂಕಾರಗಳಲ್ಲಿ ಆಣಿಗೊಳಿಸಲಾಗುತ್ತದೆ-

1.ಬ್ರಾಹ್ಮ ಅಲಂಕಾರ: ಚತುರ್ಮುಖ ಬ್ರಹ್ಮ ಶಕ್ತಿ

2.ಮಾಹೇಶ್ವರೀ ಅಲಂಕಾರ: ಶಿವನ ಶಕ್ತಿ

  1. ಕೌಮಾರೀ ಅಲಂಕಾರ: ಸುಬ್ರಹ್ಮಣ್ಯನ ಶಕ್ತಿ
  2. ವೈಷ್ಣವೀ ಅಲಂಕಾರ: ವಿಷ್ಣುವಿನ ಶಕ್ತಿ
  3. ವಾರಾಹಿ ಅಲಂಕಾರ: ವರಾಹದೇವರ ಶಕ್ತಿ
  4. ಇಂದ್ರಾಣೀ ಅಲಂಕಾರ: ದೇವೇಂದ್ರನ ಶಕ್ತಿ
  5. ಸರಸ್ವತೀ ಅಲಂಕಾರ (ಬೆಳಗ್ಗೆ): ಚಾಮುಂಡಾ ಕಾಲರಾತ್ರಿ (ರಾತ್ರಿ)
  6. ಮಹಾಕಾಲೀ ಸಿಂಹವಾಹಿನಿ: ದುರ್ಗಾ
  7. ಗಜಲಕ್ಷ್ಮೀ: ಸಮಸ್ತೈಶ್ವರ್ಯದ ಸಂಕೇತ
  8. ಕಮಲದ ಮೇಲೆ ಮಹಾಲಕ್ಷ್ಮೀ: ವಿಜಯದಶಮಿಯ ದಿನ ಅಪರಾಜಿತೆ ಅರಮನೆ ಮತ್ತು ಚಾಮುಂಡೇಶ್ವರಿ ದೇವಾಲಯ ಕ್ರಮದಲ್ಲಿ ನವರಾತ್ರಿಯನ್ನು ಮೂರು ಭಾಗ ಮಾಡಿ ಪೂಜೆ ನಡೆಸಲಾಗುತ್ತದೆ. ಇದು ಮಾರ್ಕಂಡೇಯ ಪುರಾಣೋಕ್ತವಾದ ದುರ್ಗಾಸಪ್ತಶತೀ ಚಂಡಿ ಪೂಜಾ ಕ್ರಮವಾಗಿದೆ.

1.ಮೊದಲ ಮೂರು ರಾತ್ರಿಗಳಲ್ಲಿ: ಮಹಾಕಾಲಿ ದುರ್ಗೆಯನ್ನು (ಶೌರ್ಯಕ್ಕಾಗಿ).

  1. ಎರಡನೆಯ ಮೂರು ರಾತ್ರಿಗಳಲ್ಲಿ: ಮಹಾ ಲಕ್ಷ್ಮೀಯನ್ನು (ಸಂಪತ್ತು, ಸಮೃದ್ಧಿಗಾಗಿ).
  2. ಮೂರನೆಯ ಮೂರು ರಾತ್ರಿಗಳಲ್ಲಿ: ಮಹಾ ಸರಸ್ವತಿಯನ್ನು (ವಿದ್ಯೆ, ವಿವೇಕ, ಜ್ಞಾನಕ್ಕಾಗಿ).

ದುರ್ಗಾಷ್ಟಮೀ: ದುರ್ಗಾಷ್ಟಮೀ ಹೆಸರೇ ಹೇಳುವಂತೆ ನವರಾತ್ರಿಯ ಎಂಟನೆಯ ದಿನ. ದುರ್ಗೆಯನ್ನು ಪೂಜಿಸಲಾಗುತ್ತದೆ. ಮಹಾರಾಣಿಯವರು ಸುಹಾಸಿನಿ ಅಥವಾ ಸುಮಂಗಲಿಯರಿಗೆ (108 ಮಂದಿ) ಪೂಜೆಯನ್ನು ಮಾಡಿ ಅವರಿಗೆ ವಸ್ತ್ರಾದಿಗಳನ್ನು ನೀಡುತ್ತಾರೆ.

ಆಯುಧಪೂಜೆ: ಮಹಾನವಮಿ ಎಂದರೆ ನವಮೀ ತಿಥಿಗಳ ಮಹತ್ತರವಾದ ಒಂಬತ್ತನೆಯ ದಿನ. ಆಶ್ವಯುಜ ಮಾಸದ ಈ ದಿನ ಚಂಡಿ ಹೋಮದ ಪೂರ್ಣಾಹುತಿಯನ್ನು ಮಾಡಲಾಗುತ್ತದೆ. ಚಂಡೀಹವನ, ಕುಮಾರಿ ಪೂಜೆ: ಈ ಆಯುಧ ಗಳು ಸೋಮೇಶ್ವರ ದೇವಾಲಯದಿಂದ ಬರುವ ವೇಳೆಗೆ ಕನ್ನಡಿ ತೊಟ್ಟಿ ಯಲ್ಲಿ ಮಹಾರಾಜರು ಮತ್ತು ಅರಮನೆಯ ಎಲ್ಲ ಪುರೋಹಿತರು ಚಂಡಿ ಹೋಮದ ಪೂರ್ಣಾಹುತಿ ಯನ್ನು ಮಾಡುತ್ತಾರೆ.

ಮುಖ್ಯ ದ್ರವ್ಯಗಳಾಗಿ ಮೊಸರು, ತುಪ್ಪ ಇತ್ಯಾದಿಗಳಿದ್ದು, ಉಳಿದಂತೆ ಪೂರ್ಣಾಹುತಿ ದ್ರವ್ಯಗಳಿರು ತ್ತವೆ. ಇದು ಶತಚಂಡಿಕಾ ಪಾರಾ ಯಣದ ಮತ್ತು ಒಂದು ಲಕ್ಷ ದುರ್ಗಾ ಮಂತ್ರದ ಪೂರ್ಣಾಹುತಿ ಯಾಗಿರುತ್ತದೆ. ಆಗಲೇ 16 ಕಲಶ ಗಳಲ್ಲಿ ದೇವಿ ಪೂಜೆ ಮತ್ತು ನವದುರ್ಗೆಯರ ಸ್ವರೂಪದಲ್ಲಿ 2-10 ವರ್ಷದ ಒಂಬತ್ತು ಕನ್ನಿಕೆಯರ ಕುಮಾರಿಪೂಜೆಯೂ ನೆರವೇರುತ್ತವೆ.

ಮಹಾರಾಜರು ನಿತ್ಯ ಪೂಜೆ ಮುಗಿಸಿ, ರಾಜ ಪೋಷಾಕನ್ನು ಧರಿಸಿ ಹೊರಭಾಗದ ಭದ್ರಾಸನದಲ್ಲಿ ಕುಳಿತು ತಮ್ಮ ಕ್ರಮ ಪರಂಪರೆಯಲ್ಲಿ ಬಂದ ಪಟ್ಟದ ಕತ್ತಿ ಸೇರಿದಂತೆ ವಿವಿಧ ಆಯುಧಗಳಿಗೆ ಪೂಜೆ ಸಲ್ಲಿಸುತ್ತಾರೆ. ಈ ಸಮಯದಲ್ಲಿ ವಾದ್ಯ ಘೋಷ, ಬ್ಯಾಂಡ್ ಮೊಳಗುತ್ತಿರುತ್ತದೆ. ಕಲ್ಯಾಣ ಮಂಟಪದಿಂದ ಹೊರಬರುವ ಮಹಾರಾಜರು ತೊಟ್ಟಿಯಲ್ಲಿ ನಿರ್ಮಿಸಿರುವ ಒಂದು ವೇದಿಕೆಯಲ್ಲಿ ನಿಲ್ಲುತ್ತಾರೆ. ಅಲ್ಲಿ ಪಟ್ಟದ ಹಸು, ಪಟ್ಟದ ಕುದುರೆ, ಪಟ್ಟದ ಆನೆ, ಪಲ್ಲಕ್ಕಿಗಳು, ಬೆಳ್ಳಿಯ ರಥ, ಈಗ ಬಳಸುತ್ತಿರುವ ಎಲ್ಲ ಆಧುನಿಕ ಕಾರುಗಳಿಗೆ ಪೂಜೆ ಸಲ್ಲಿಸಲಾಗುತ್ತದೆ.

ಅಂದು ಸಂಜೆಯ ದರ್ಬಾರ್, ಚಾಮುಂಡಾ ಪೂಜೆಯ ಉತ್ತರವಿಧಿ ಆಚರಿಸಿ, ಮಹಾರಾಜರು ಮತ್ತು ಮಹಾರಾಣಿ ಮೊದಲ ದಿನ ಧರಿಸಿದ್ದ ತಮ್ಮ ಕಂಕಣಗಳನ್ನು ಪ್ರತ್ಯೇಕವಾಗಿ ವಿಸರ್ಜಿಸುತ್ತಾರೆ. ಸಿಂಹಾ ಸನಕ್ಕೆ ಜೋಡಿಸಿದ್ದ ಸಿಂಹಕ್ಕೆ ಪೂಜೆ ಮಾಡಿ ವಿಸರ್ಜಿಸಲಾಗುತ್ತದೆ. ಅಲ್ಲಿಗೆ ನವರಾತ್ರಿಯ ಆಚರಣೆಗಳು ಸಂಪನ್ನವಾಗಿ ವಿಜಯದಶಮಿಯ ಆಚರಣೆಗಳಿಗೆ ಅನುವಾಗುತ್ತಾರೆ. ವಿಜಯದಶಮಿ: ಹತ್ತನೆಯ ದಿನವೇ ವಿಜಯ ದಶಮಿ, ಮಹಾರಾಜರು ಮೊದಲಿಗೆ ದಂಪತಿ ಪೂಜೆಯನ್ನು ಮಾಡುತ್ತಾರೆ.

ರಾಮಾಯಣದಲ್ಲಿ ರಾಮನು ರಾವಣನನ್ನು ಸಂಹರಿಸಿ ಆಯೋಧ್ಯೆಗೆ ಮರಳಿ ಪಟ್ಟಾಭಿಷೇಕವಾದ ಸರ್ಗವನ್ನು ಪಾರಾ ಯಣ ಮಾಡಲಾಗುತ್ತದೆ. ಇದು ರಾಮ ಪಟ್ಟಾಭಿಷೇಕ ಕಾರ್ಯಕ್ರಮ. ಬಳಿಕ ಮಹಾ ರಾಜರು ಸಾಮಾನ್ಯ ವಸ್ತ್ರಗಳನ್ನು ಧರಿಸಿ ಆತ್ಮ ವಿಲಾಸ ಗಣಪತಿಯ ದರ್ಶನ ಪಡೆದು, ಆಯುಧಗಳಿಗೆ ಪೂಜೆ ಮಾಡಿ, ಪಟ್ಟದ ಕತ್ತಿಯಿಂದ ಕೂಷ್ಮಾಂಡ ಬಲಿ (ಕುಂಬಳಕಾಯಿ ಛೇದನ) ನೀಡುತ್ತಾರೆ. (ಹಿಂದೆ ಪಟ್ಟದ ಕತ್ತಿ ಯಿಂದ ಪ್ರಾಣಿಬಲಿ ಕೊಡುತ್ತಿದ್ದ ಸಂಕೇತವೂ ಹೌದು.) ಪಟ್ಟದ ಕತ್ತಿಯನ್ನು ಹಿಡಿದ ಮಹಾರಾಜರೊಂದಿಗೆ ಪರಿವಾರದವರು ಸವಾರಿ ತೊಟ್ಟಿಗೆ ಬರುತ್ತಾರೆ.

ವಜ್ರಮುಷ್ಟಿಕಾಳಗ: ಅಲ್ಲಿ ಕೆಮ್ಮಣ್ಣು ಹಾಕಿ ಅಖಾಡವನ್ನು ಸಿದ್ಧಪಡಿಸಿರುತ್ತಾರೆ. ರಾಜ ಮಾತೆಯ ಅನುಮತಿ ಪಡೆದು ವಜ್ರಮುಷ್ಟಿ ಕಾಳಗ ಆರಂಭವಾಗುತ್ತದೆ. ವಜ್ರಮುಷ್ಟಿ ಕಾಳಗ ಮುಕ್ತಾಯವಾದ ಬಳಿಕ ಮಹಾರಾಜರು ಪಟ್ಟದ ಕತ್ತಿಯನ್ನು ಪಲ್ಲಕ್ಕಿಯಲ್ಲಿ ಮೊಹರಿನ (ರಾಜ ಮುದ್ರೆ) ಜೊತೆ ಇಡುತ್ತಾರೆ. ಜೊತೆಗೆ ರಾಜ ವಂಶದ ಇತರ ಆಯುಧಗಳನ್ನೂ ಇಡಲಾಗು ತ್ತದೆ. ರಾಜಪರಿವಾರದವರು, ಬಂಧುಗಳು, ಅರಮನೆಯ ಭಟರು, ಅಂಗರಕ್ಷಕ ಪಡೆ ಎಲ್ಲರೂ ಸೇರಿ ದಸರಾ ಮೆರವಣಿಗೆಯಲ್ಲಿ ಪಾಲ್ಗೊಳ್ಳುತ್ತಾರೆ. ಮಹಾರಾಜರು ಬೆಳ್ಳಿ ರಥದಲ್ಲಿ ಕುಳಿತು (ಅಥವಾ ಕಾರಿನಲ್ಲಿ) ಶಮೀ ಪೂಜೆಗೆ ಹೊರಡುತ್ತಾರೆ. ಹಿಂದೆ ಮಹಾರಾಜರೇ ಚಿನ್ನದ ಅಂಬಾರಿಯಲ್ಲಿ ಆನೆಯ ಮೇಲೆ ಕುಳಿತು ಜಂಬೂ ಸವಾರಿಯಲ್ಲಿ ಬನ್ನಿಮಂಟಪಕ್ಕೆ ಹೋಗುತ್ತಿದ್ದರು. 1969ರಲ್ಲಿ ಈ ಪದ್ಧತಿ ನಿಂತುಹೋಯಿತು. ಈಗ ಸರಕಾರಿ ಪ್ರಾಯೋಜಿತ ಜಂಬೂ ಸವಾರಿ ಬನ್ನಿ ಮಂಟಪಕ್ಕೆ ಹೋಗುತ್ತದೆ.

ಜಂಬೂ ಸವಾರಿಯ ನಂತರ ದಸರಾ ಮುಕ್ತಾಯವಾಗುತ್ತದೆ. ನವರಾತ್ರಿಯ ದಿನಗಳು ಸಂಸಾರದ ದುಃ ಖಗಳಿಂದ ವಿಮೋಚನೆಗೊಂಡು ಮೋಕ್ಷ ಮಾರ್ಗ ವನ್ನು ಪಡೆಯಲು ದೇವಿಯ ಆರಾಧನೆಗೆ ಪ್ರಶಸ್ತ ವಾಗಿರುವ ದಿನಗಳು. ಈ ಒಂಬತ್ತು ದಿನಗಳ ಜೊತೆಗೆ ರಾವಣನ ಮೇಲಿನ ರಾಮನ ವಿಜಯದ ನೆನಪಿನ ವಿಜಯದಶಮಿ ಆಚರಣೆಯನ್ನು ಸೇರಿಸಿ ಒಟ್ಟು ಹತ್ತು ದಿನಗಳ ಆಚರಣೆಯಾಗಿರು ವುದರಿಂದ ಇದು ‘ದಸರಾ’ ಆಗಿದೆ.

ದಸರಾ ಉತ್ಸವ ಪ್ರಪಂಚಾದ್ಯಂತ ಆಚರಿಸಲ್ಪಡುತ್ತಿದ್ದರೂ ಮೈಸೂರು ದಸರಾ ತನ್ನ ವಿಶಿಷ್ಟ ಆಚರಣೆ ಗಳಿಂದಾಗಿ ವಿಶ್ವಮಾನ್ಯತೆಯನ್ನು ಪಡೆದಿದೆ. ನನ್ನ ಮುಂದಿನ ಲೇಖನದಲ್ಲಿ ಆಧುನಿಕ ಯುಗದ ದಸರಾ- ಕಣ್ಮನ ಸೆಳೆಯುವ ವಿಶೇಷತೆಗಳ ಬಗ್ಗೆ ತಿಳಿಸಿಕೊಡುತ್ತೇನೆ.