#ದೆಹಲಿರಿಸಲ್ಟ್​ ಧಾರ್ಮಿಕ ವಿಶ್ವವಾಣಿ ಕ್ಲಬ್‌ ಹೌಸ್‌ ರಾಜಕೀಯ ಸಂಪಾದಕೀಯ ಫ್ಯಾಷನ್‌ ಲೋಕ ಉದ್ಯೋಗ

Kote Honda Ravindra: ಇನ್ನುಮುಂದೆ ರಾಜ್ಯ ನಕ್ಸಲ್ ಮುಕ್ತ; ಭೂಗತನಾಗಿದ್ದ ನಕ್ಸಲ್‌ ಕೋಟೆಹೊಂಡ ರವಿ ಶರಣಾಗತಿ

ಹಲವು ವರ್ಷಗಳಿಂದ ಭೂಗತನಾಗಿದ್ದ ನಕ್ಸಲ್‌ ಕೋಟೆಹೊಂಡ ರವಿ ಇಂದು ಬೆಳಗ್ಗೆ 11 ಗಂಟೆಗೆ ಚಿಕ್ಕಮಗಳೂರಿನ ಪೊಲೀಸ್ ವರಿಷ್ಠಾಧಿಕಾರಿಗಳ ಕಚೇರಿಯಲ್ಲಿ ಶರಣಾಗಲಿದ್ದಾನೆ. ಈ ಬಗ್ಗೆ ಸಿಎಂ ಸಿದ್ದರಾಮಯ್ಯ ಮಾಹಿತಿಯನ್ನು ನೀಡಿದ್ದಾರೆ.

ಭೂಗತನಾಗಿದ್ದ ನಕ್ಸಲ್‌  ಕೋಟೆಹೊಂಡ ರವಿ ಶರಣಾಗತಿ

Kote Honda Ravindra

Profile Vishakha Bhat Feb 1, 2025 9:58 AM

ಬೆಂಗಳೂರು: ಕರ್ನಾಟಕದ ನಕ್ಸಲ್‌ ನಾಯಕ ವಿಕ್ರಂ ಗೌಡ ಹತನಾದ ನಂತರ ಮಹಿಳೆಯರು ಸೇರಿದಂತೆ 6 ನಕ್ಸಲೈಟ್‌ಗಳು ಸರ್ಕಾರದ ಎದುರು ಶರಣಾಗಿದ್ದರು. ರಾಜ್ಯದಲ್ಲಿ ಕೊನೆಯ ನಕ್ಸಲೈಟ್‌ ಆಗಿ ಉಳಿದಿದ್ದ ಕೋಟೆಹೊಂಡ ರವಿ ಇದೀಗ ಶರಣಾಗತಿಗೆ ಒಪ್ಪಿಗೆ ಸೂಚಿಸಿದ್ದಾನೆ ಎಂದು ತಿಳಿದು ಬಂದಿದೆ. ಈತ ಹಲವು ವರ್ಷಗಳಿಂದ ಯಾರ ಸಂಪರ್ಕಕ್ಕೂ ಸಿಕ್ಕಿರಲಿಲ್ಲ. ಇದೀಗ ಪುನರ್ವಸತಿ ಸಮಿತಿ ಹಾಗೂ ಶಾಂತಿಗಾಗಿ ನಾಗರೀಕರ ವೇದಿಕೆ ಮುಖಂಡರು ಮಾತುಕತೆ ನಡೆಸಿದ ನಂತರ ಕೋಟೆಹೊಂಡ ರವಿ ಶಸ್ತ್ರಾಸ್ತ್ರ ತ್ಯಜಿಸಿ ಮುಖ್ಯವಾಹಿನಿಗೆ ಬರಲು ಒಪ್ಪಿಕೊಂಡಿದ್ದಾನೆ.

ಚಿಕ್ಕಮಗಳೂರಿನ ಎಸ್‌ಪಿ ಕಚೇರಿಯಲ್ಲಿ ಶರಣಾಗತಿ

ಶೃಂಗೇರಿ ತಾಲೂಕಿನ ಕಿಗ್ಗಾ ಗ್ರಾಮದ ಕೋಟೆಹೊಂಡ ರವೀಂದ್ರ ಇಂದು ಬೆಳಗ್ಗೆ 11 ಗಂಟೆಗೆ ಚಿಕ್ಕಮಗಳೂರಿನ ಪೊಲೀಸ್ ವರಿಷ್ಠಾಧಿಕಾರಿಗಳ ಕಚೇರಿಯಲ್ಲಿ ಶರಣಾಗಲಿದ್ದಾನೆ. ಕಳೆದ 18 ವರ್ಷಗಳಿಂದ ನಕ್ಸಲ್ ರವೀಂದ್ರ ಭೂಗತನಾಗಿದ್ದ. ಇಂದು ಎಸ್ ಪಿ ವಿಕ್ರಂ ಆಮ್ಟೆ, ಡಿಸಿ ವೀಣಾ ನಾಗರಾಜ್ ಮುಂದೆ ಶರಣಾಗಲಿದ್ದಾನೆ. ಈತನ ಶರಣಾಗತಿಯ ಬಗ್ಗೆ ಪ್ರತಿಕ್ರಿಯೆ ನೀಡಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ, ಕೊನೆಯ ಭೂಗತ ನಕ್ಸಲ್ ಕೋಟೆಹೊಂಡ ರವಿ ನೆಮ್ಮಾರ್‌ ಫಾರೆಸ್ಟ್‌ ಐಬಿಯಲ್ಲಿ ಶರಣಾಗಿದ್ದಾನೆ ಎಂದು ತಿಳಿಸಿದ್ದಾರೆ.

ಫಾರೆಸ್ಟ್‌ ಐಬಿಯಿಂದ ನಾವು ಆತನನ್ನು ಚಿಕ್ಕಮಗಳೂರಿಗೆ ಕರೆದುಕೊಂಡು ಹೋಗಲಿದ್ದೇವೆ. ಇದಿಷ್ಟೇ ಅಲ್ಲದೆ ಹಲವು ವರ್ಷಗಳಿಂದ ತಲೆ ಮರೆಸಿಕೊಂಡಿರುವ ತೊಂಬಿಟ್ಟು ಲಕ್ಷ್ಮೀ ಉಡುಪಿ ಅಥವಾ ಚಿಕ್ಕಮಗಳೂರಿನಲ್ಲಿ ಶರಣಾಗಲಿದ್ದಾಳೆ ಎಂದು ಅವರು ಹೇಳಿದ್ದಾರೆ.

ಆಪರೇಷನ್ ನಕ್ಸಲ್ ಶರಣಾಗತಿ ಪೂರ್ಣ

ರಾಜ್ಯ ಸರ್ಕಾರ ನಡೆಸಿದ್ದ ಆಪರೇಷನ್ ನಕ್ಸಲ್ ಶರಣಾಗತಿ ಇದೀಗ ಪೂರ್ಣಗೊಂಡಿದೆ. ರಾಜ್ಯವನ್ನು ನಕ್ಸಲ್ ಮುಕ್ತ ರಾಜ್ಯವನ್ನಾಗಿ ಮಾಡಲು ನಿರಂತರವಾಗಿ ಶ್ರಮಿಸಿದ 22 ಪೊಲೀಸ್ ಅಧಿಕಾರಿಗಳು ಮತ್ತು ಸಿಬ್ಬಂದಿಗಳ ತಂಡಕ್ಕೆ ಸಿಎಂ ಸಿದ್ದರಾಮಯ್ಯ ಮುಖ್ಯಮಂತ್ರಿ ಪದಕವನ್ನು ಘೋಷಿಸಿದ್ದಾರೆ. ಗುಪ್ತಚರ ಇಲಾಖೆ ನಕ್ಸಲ್ ಶರಣಾಗತಿ ಮಾಹಿತಿ ನೀಡಿದ್ದು, ಕರ್ನಾಟಕವು ಸಂಪೂರ್ಣವಾಗಿ ನಕ್ಸಲ್ ಮುಕ್ತ ರಾಜ್ಯವಾಗಿದೆ ಎಂದು ಖಚಿತಪಡಿಸಿದೆ.

ಈ ಸುದ್ದಿಯನ್ನೂ ಓದಿ: Vikram Gowda: ನಕ್ಸಲರ ಶರಣಾಗತಿಗೆ ನಿರಾಕರಿಸಿದ್ದ ವಿಕ್ರಂ ಗೌಡ; ನಕ್ಸಲ್‌ ನಾಯಕನ ಆಡಿಯೊ ವೈರಲ್‌!

ಆರು ನಕ್ಸ್‌ಲೈಟ್‌ಗಳು ರಾಜ್ಯ ಸರ್ಕಾರದ ಎದುರು ಶರಣಗಾಗಿದ್ದರೂ ಕೋಟೆಹೊಂಡ ರವಿ ಮಾತ್ರ ಮುಖ್ಯವಾಹಿನಿಗೆ ಬಾರದೇ ಇದ್ದಿದ್ದು ಆತನ ಕುಟುಂಬಕ್ಕೆ ಬೇಸರ ಮೂಡಿಸಿತ್ತು.

ರವೀಂದ್ರ ಶರಣಾದರೆ ಸಂತೋಷದಿಂದ ಸ್ವೀಕರಿಸುತ್ತೇವೆ ಎಂದು ಕುಟುಂಬದವರು ಮಾಧ್ಯಮಗಳಿಗೆ ಹಿಂದೆ ತಿಳಿಸಿದ್ದರು. ಇದೀಗ ಆತ ಮುಖ್ಯವಾಹಿನಿಗೆ ಬರಲು ಒಪ್ಪಿಗೆ ಸೂಚಿಸಿದ್ದಾನೆ.