CS Shadakshari: ಇದೇ ವಾರದಲ್ಲಿ ಮುಖ್ಯಮಂತ್ರಿಗಳಿಗೆ ಒಪಿಎಸ್ ಸಮಿತಿ ವರದಿ ಸಲ್ಲಿಕೆ: ಸಿ.ಎಸ್. ಷಡಾಕ್ಷರಿ
Old pension scheme: ಸಮಿತಿ ನೀಡಲಿರುವ ವರದಿಯನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಪರಾಮರ್ಶಿಸಿ ಪಕ್ಷದ ಚುನಾವಣಾ ಪ್ರಣಾಳಿಕೆಯಲ್ಲಿ ಮಾಡಲಾಗಿದ್ದ ಘೋಷಣೆ ಹಾಗೂ ಸಂಘದ ಹಲವು ಕಾರ್ಯಕ್ರಮಗಳಲ್ಲಿ ನೀಡಿದ್ದ ಭರವಸೆಯಂತೆ ರಾಜ್ಯ ಸರ್ಕಾರಿ ನೌಕರರಿಗೆ ಈ ಹಿಂದಿನಂತೆ ಹಳೆಯ ಪಿಂಚಣಿ ಯೋಜನೆಯನ್ನು (OPS) ಮರು ಜಾರಿಗೊಳಿಸುವಂತೆ ನೌಕರರ ಸಂಘದ ರಾಜ್ಯಾಧ್ಯಕ್ಷ ಸಿ.ಎಸ್. ಷಡಾಕ್ಷರಿ ವಿನಂತಿಸಿದ್ದಾರೆ.
ಸಿಎಂ ಸಿದ್ದರಾಮಯ್ಯ, ಸಿಎಸ್ ಷಡಾಕ್ಷರಿ -
ಬೆಂಗಳೂರು, ಡಿ.04: ಕರ್ನಾಟಕ ರಾಜ್ಯ ಸರ್ಕಾರಿ ನೌಕರರಿಗೆ (Government employees) ಹಳೆಯ ಪಿಂಚಣಿ ಯೋಜನೆಯನ್ನು (Old pension scheme) ಜಾರಿಗೊಳಿಸುವ ಸಂಬಂಧ, OPS ಯೋಜನೆ ಜಾರಿಗೊಳಿಸಿರುವ ರಾಜ್ಯಗಳಿಗೆ ಭೇಟಿ ನೀಡಿ ಅಧ್ಯಯನ ನಡೆಸಿ ವರದಿ ನೀಡಲು ರಾಜ್ಯ ಸರ್ಕಾರ ರಚಿಸಿರುವ ಸಮಿತಿ ಈ ವಾರವೇ ತನ್ನ ವರದಿಯನ್ನು ಮುಖ್ಯಮಂತ್ರಿಗಳಿಗೆ ನೀಡಲಿದೆ ಎಂದು ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘದ ರಾಜ್ಯಾಧ್ಯಕ್ಷ ಸಿ.ಎಸ್. ಷಡಾಕ್ಷರಿ (CS Shadakshari) ತಿಳಿಸಿದ್ದಾರೆ.
2006ರಿಂದ ಜಾರಿಯಲ್ಲಿರುವ ಹೊಸ ಪಿಂಚಣಿ ಯೋಜನೆಯನ್ನು (NPS) ಹೋಗಲಾಡಿಸಿ ಈ ಹಿಂದಿನ ಹಳೆಯ ಪಿಂಚಣಿ ಯೋಜನೆಯನ್ನು (OPS) ಜಾರಿಗೊಳಿಸುವ ಸಂಬಂಧ, OPS ಯೋಜನೆ ಜಾರಿಗೊಳಿಸಿರುವ ರಾಜ್ಯಗಳಿಗೆ ಭೇಟಿ ನೀಡಿ ಅಧ್ಯಯನ ನಡೆಸಿ ವರದಿ ಸಲ್ಲಿಸುವಂತೆ ರಾಜ್ಯ ಸರ್ಕಾರವು ಸಮಿತಿಯನ್ನು ರಚಿಸಿತ್ತು. ಈ ಸಂಬಂಧ ಸರ್ಕಾರಕ್ಕೆ ಶೀಘ್ರ ವರದಿ ಸಲ್ಲಿಸುವಂತೆ ಸಂಘವು ಸಮಿತಿಯನ್ನು ಒತ್ತಾಯಿಸುತ್ತಲೇ ಬಂದಿತ್ತು.
ಡಿ.03ರಂದು ನೌಕರರ ಸಂಘದ ರಾಜ್ಯಾಧ್ಯಕ್ಷ ಸಿ.ಎಸ್. ಷಡಾಕ್ಷರಿ ಹಾಗೂ ಪದಾಧಿಕಾರಿಗಳ ನಿಯೋಗ NPS ಸಮಿತಿಯ ಸದಸ್ಯ ಹಾಗೂ ಆರ್ಥಿಕ ಇಲಾಖೆಯ ಕಾರ್ಯದರ್ಶಿಗಳಾದ ಡಾ.ಎಂ.ಟಿ ರೇಜು ಅವರನ್ನು ಭೇಟಿ ಮಾಡಿ ಚರ್ಚೆ ನಡೆಸಿದ ಸಂದರ್ಭದಲ್ಲಿ, ಇಡೀ ರಾಜ್ಯದ ನೌಕರರು NPS ರದ್ದುಪಡಿಸುವ ಸಂಬಂಧ ಒತ್ತಡ ಹಾಕುತ್ತಿದ್ದಾರೆ ಎಂಬ ಅಂಶವನ್ನೂ ಗಮನಕ್ಕೆ ತರಲಾಯಿತು. ಸಮಿತಿಯು ಈಗಾಗಲೇ ವರದಿಯನ್ನು ಸಿದ್ಧಪಡಿಸಿದ್ದು, ಈ ಸಂಬಂಧ ಒಂದು ವಾರದೊಳಗೆ ಸಮಿತಿಯ ಸಭೆಯನ್ನು ಏರ್ಪಡಿಸಿ ಸರ್ಕಾರಕ್ಕೆ ವರದಿ ಸಲ್ಲಿಸಲಾಗುವುದಾಗಿ ತಿಳಿಸಿರುತ್ತಾರೆ ಎಂದು ಈ ಸಂದರ್ಭದಲ್ಲಿ ತಿಳಿಸಲಾಗಿದೆ.
ಒಪಿಎಸ್ ಜಾರಿಗಾಗಿ ಹೋರಾಟಕ್ಕೆ ಸಿದ್ಧ: ಸಿ.ಎಸ್. ಷಡಾಕ್ಷರಿ
NPS ಸಮಿತಿಯು ನೀಡಲಿರುವ ವರದಿಯನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಪರಾಮರ್ಶಿಸಿ ಪಕ್ಷದ ಚುನಾವಣಾ ಪ್ರಣಾಳಿಕೆಯಲ್ಲಿ ಮಾಡಲಾಗಿದ್ದ ಘೋಷಣೆ ಹಾಗೂ ಸಂಘದ ಹಲವು ಕಾರ್ಯಕ್ರಮಗಳಲ್ಲಿ ಭಾಗವಹಿಸಿ, ಸಮಿತಿ ವರದಿ ನೀಡಿದ ಕೊಡಲೇ ಕ್ರಮವಹಿಸುವುದಾಗಿ ನೀಡಿದ್ದ ಭರವಸೆಯಂತೆ ರಾಜ್ಯ ಸರ್ಕಾರಿ ನೌಕರರಿಗೆ ಈ ಹಿಂದಿನಂತೆ ಹಳೆಯ ಪಿಂಚಣಿ ಯೋಜನೆಯನ್ನು (OPS) ಮರು ಜಾರಿಗೊಳಿಸುವಂತೆ ಸಮಸ್ತ ಸರ್ಕಾರಿ ನೌಕರರ ಪರವಾಗಿ ಸಂಘವು ಮತ್ತೊಮ್ಮೆ ಮನವಿ ಮಾಡುತ್ತದೆ ಎಂದು ನೌಕರರ ಸಂಘದ ರಾಜ್ಯಾಧ್ಯಕ್ಷ ಸಿ.ಎಸ್. ಷಡಾಕ್ಷರಿ ತಿಳಿಸಿದ್ದಾರೆ.
ಏನಿದು ಒಪಿಎಸ್, ಎನ್‌ಪಿಎಸ್, ಯುಪಿಎಸ್?
ರಾಜ್ಯದಲ್ಲಿ ಏಪ್ರಿಲ್ 2006ರಿಂದ ಎನ್‌ಪಿಎಸ್ ಜಾರಿಗೊಳಿಸಲಾಗಿತ್ತು. ಇದರಿಂದ 2006ರ ಏಪ್ರಿಲ್ ನಂತರ ಸೇರಿದ ಸರ್ಕಾರಿ ನೌಕರರಿಗೆ ಎನ್ಪಿಎಸ್ಗೆ ಒಳಪಡುತ್ತಾರೆ. ಅದಕ್ಕೂ ಮುನ್ನ ಸೇರಿದ್ದ ಸರ್ಕಾರಿ ನೌಕರರು ಒಪಿಎಸ್ಗೆ ಒಳಪಟ್ಟಿದ್ದಾರೆ. ರಾಜ್ಯದಲ್ಲಿ ಹಳೆ ಪಿಂಚಣಿ ಯೋಜನೆಗೆ ಒಳಪಟ್ಟ ಸುಮಾರು 2,29,497 ಮಂದಿ ಸರ್ಕಾರಿ ನೌಕರರಿದ್ದಾರೆ. ಅದೇ ರಾಷ್ಟ್ರೀಯ ಪಿಂಚಣಿ ಯೋಜನೆಗೆ ಒಳಪಟ್ಟ ಸುಮಾರು 2,82,536 ಸರ್ಕಾರಿ ನೌಕರರು ಇದ್ದಾರೆ ಎಂದು ಆರ್ಥಿಕ ಇಲಾಖೆ ಮಾಹಿತಿ ನೀಡಿದೆ.
ವಿಪಿನ್ ಸಿಂಗ್ ಭೇಟಿಯಾದ ಸಿ.ಎಸ್. ಷಡಾಕ್ಷರಿ
ಒಪಿಎಸ್ನಡಿ ನಿವೃತ್ತ ನೌಕರರು ತಾವು ಪಡೆದ ಅಂತಿಮ ವೇತನದ 50%ರಷ್ಟನ್ನು ಮಾಸಿಕ ಪಿಂಚಣಿಯಾಗಿ ಪಡೆಯುತ್ತಾರೆ. ತುಟ್ಟಿ ಭತ್ಯೆ ಹೆಚ್ಚುತ್ತಿದ್ದ ಹಾಗೆಯೇ ಪಿಂಚಣಿ ಮೊತ್ತವೂ ಹೆಚ್ಚಾಗುತ್ತದೆ. ಹೊಸ ಪಿಂಚಣಿ ಯೋಜನೆ (ಎನ್‌ಪಿಎಸ್) ಯಲ್ಲಿ ಪಿಂಚಣಿ ಯೋಜನೆಗೆ ನೌಕರರು ವಂತಿಕೆ ನೀಡಬೇಕಾಗಿದೆ. ಉದ್ಯೋಗದಲ್ಲಿರುವಾಗಲೇ ತಮ್ಮ ವೇತನದಲ್ಲಿನ ಒಂದರಷ್ಟು ಭಾಗವನ್ನು ಕೊಡುಗೆ ನೀಡಬೇಕು. ಷೇರು ಮಾರುಕಟ್ಟೆಯಲ್ಲಿ ಹೂಡಿಕೆ ಹಾಗೂ ಉಳಿತಾಯ ಇದರಲ್ಲಿದೆ. ಎನ್ಪಿಎಸ್ನಡಿ ಸರ್ಕಾರಿ ನೌಕರರು ಪಿಂಚಣಿ ನಿಧಿಗೆ 10%ರಷ್ಟು ಕೊಡುಗೆ ನೀಡಬೇಕು. ಉದ್ಯೋಗಿಗಳ ಎನ್‌ಪಿಎಸ್ ಖಾತೆಗಳಿಗೆ ಸರ್ಕಾರವು 14%ರಷ್ಟು ಕೊಡುಗೆ ನೀಡುತ್ತದೆ. ಸರ್ಕಾರ ವಾರ್ಷಿಕ 2,500 ಕೋಟಿ ರೂ. ಎನ್‌ಪಿಎಸ್ ನಿಧಿಗೆ ಕೊಡುಗೆ ನೀಡುತ್ತಿದೆ. ಕರ್ನಾಟಕದಲ್ಲಿ 2006ರಲ್ಲಿ ಎನ್‌ಪಿಎಸ್ ಜಾರಿಯಾದ ಬಳಿಕ ಸುಮಾರು 30,000 ಕೋಟಿ ರೂ. ಸಂಚಿತ ನಿಧಿ ಹೊಂದಿದೆ. ಇದರಲ್ಲಿ 60%ನ್ನು ನೌಕರರು ವಿತ್ ಡ್ರಾ ಮಾಡಬಹುದಾಗಿದೆ. ಉಳಿದ 40%ನ್ನು ವರ್ಷಾಸನದ ಮೇಲೆ ವ್ಯಯಿಸಲಾಗುತ್ತದೆ.