Rangaswamy Mookanahalli Column: ಮಕ್ಕಳು ನಮ್ಮ ಕನಸನ್ನು ಪೂರೈಸಲು ಹುಟ್ಟಿಲ್ಲ !
ಪ್ರಥಮ ಹತ್ತು ವರ್ಷ ಟೈಮ್‌ಪಾಸ್ ಮಾಡುವುದು ಅಭ್ಯಾಸ ಮಾಡಿಕೊಂಡ ಮಕ್ಕಳು ಈಗ ಓದುವುದಕ್ಕೆ ಹೇಗೆ ಸಾಧ್ಯ? ಪ್ರಮಾಣ ಮಾಡಿ ಹೇಳುತ್ತೇನೆ, ಕಳೆದ ಹತ್ತು ವರ್ಷದಿಂದ ಇದೇ ಪ್ಯಾಟ್ರನ್ ನೋಡುತ್ತಾ ಬಂದಿದ್ದೇನೆ. ಹೋಗಲಿ ಮಕ್ಕಳು ತಾವು ಸೇರಿಕೊಂಡ ಇತರ ತರಗತಿ ಗಳಲ್ಲಿ ಏನಾದರೂ ಕ್ಷಮತೆಯನ್ನು ಗಳಿಸಿಕೊಂಡರೆ ಎಂದರೆ ಅದಕ್ಕೂ ಉತ್ತರ ‘ಇಲ್ಲ’ ಎನ್ನುವುದೇ ಆಗಿರುತ್ತದೆ.
-
ವಿಶ್ವರಂಗ
‘ಮಕ್ಕಳು ನಮ್ಮ ಕನಸುಗಳನ್ನು ಪೂರೈಸಲು ಹುಟ್ಟಿದವರಲ್ಲ, ತಮ್ಮ ಕನಸುಗಳನ್ನು ಪೂರೈಸಿಕೊಳ್ಳಲು ಹುಟ್ಟಿದವರು’ ಎನ್ನುವ ಪರಿಜ್ಞಾನ ಪೋಷಕರಲ್ಲಿ ಬೆಳೆಯಲಿ. ಎಲ್ಲವನ್ನೂ ಕಲಿಯಬೇಕು ಎನ್ನುವ ಹುಚ್ಚಾಟಕ್ಕೆ ಚೂರಾದರೂ ತೆರೆ ಬೀಳಲಿ. ಬಾಲ್ಯದಲ್ಲಿ ಸಹಜವಾದ ಆಟಗಳನ್ನು ಅವರು ಆಡುವಂತಾಗಲಿ.
ಅದೊಂದು ಕಾಲವಿತ್ತು. ಆಗ ಮಕ್ಕಳು ಬಹುತೇಕ ಸಮಯವನ್ನು ಆಟದಲ್ಲಿ ಕಳೆಯು ತ್ತಿದ್ದರು. ಇದರರ್ಥ ಮನೆಯಿಂದ ಹೊರಗಿರುತ್ತಿದ್ದರು. ಇಳಿಸಂಜೆಯಾದರೂ ಮನೆಗೆ ಬರದಿದ್ದರೆ ಮಾತ್ರ ಹೆತ್ತವರು ‘ಮಕ್ಕಳೇಕೆ ಇನ್ನೂ ಮನೆಗೆ ಬಂದಿಲ್ಲ?’ ಎಂದು ಚಿಂತಿಸು ತ್ತಿದ್ದರು. ಇವತ್ತು ಕಾಲ ಬದಲಾಗಿದೆ. ಮಕ್ಕಳು ಅರೆಕ್ಷಣ ಕಣ್ಣಿಗೆ ಕಾಣದಿದ್ದರೆ ಸಾಕು ಹುಡುಕಾಟ ಶುರುವಾಗುತ್ತದೆ.
ಸಹಜವಾಗಿದ್ದ ಬದುಕು ಯಾಂತ್ರಿಕವಾಗಿದೆ. ಬಾರ್ಸಿಲೋನಾ ನಗರದಿಂದ ಬೆಂಗಳೂರಿಗೆ ಮರಳಿ ಬಂದಾಗ ನಮಗೊಂದು ಅಚ್ಚರಿ ಕಾದಿತ್ತು. ಮಕ್ಕಳನ್ನು ಸಂಗೀತಕ್ಕೆ, ಅಬ್ಯಾಕಸ್, ಡಾನ್ಸ್ ಕ್ಲಾಸಿಗೆ, ಕರಾಟೆ, ಸ್ವಿಮ್ಮಿಂಗ್, ಚೆಸ್, ಕ್ರಿಕೆಟ್ ಹೀಗೆ ಒಂದಲ್ಲ ಒಂದು ತರಗತಿಗೆ ಸೇರಿಸುವುದು ಆ ಅಚ್ಚರಿ! ಬಹಳಷ್ಟು ಮಕ್ಕಳು ಎರಡು ಅಥವಾ ಮೂರಕ್ಕೂ ಹೆಚ್ಚು ತರಗತಿಗೆ ಸೇರಿದ್ದರು.
ಇದರ ಜತೆಗೆ ಟ್ಯೂಷನ್ ಬೇರೆ. ಮಕ್ಕಳಿಗೆ ಉಸಿರಾಡಲು ಕೂಡ ಪುರುಸೊತ್ತಿಲ್ಲವಲ್ಲ ಎಂದು ನಾನು ಹಲವಾರು ಬಾರಿ ಬೇಸರ ಪಟ್ಟುಕೊಂಡದ್ದು ಉಂಟು. ಹೀಗೆ ಅನೇಕ ಕ್ಲಾಸುಗಳಿಗೆ ಸೇರಿಸಿದ ಪೋಷಕರು ಯಾವುದಕ್ಕೂ ಸೇರಿಸದ ನಮ್ಮಂಥ ಪೋಷಕರ ಮೇಲೆ ಒಂದು ರೀತಿಯ ಒತ್ತಡವನ್ನು ತರಲು ಕೂಡ ಪ್ರಯತ್ನಿಸುತ್ತಾರೆ.
“ನಿಮ್ಮ ಮಗಳನ್ನು ಯಾವ ಕ್ಲಾಸಿಗೂ ಸೇರಿಸಿಲ್ಲವೇ?" ಎನ್ನುವ ಕುಹಕದ ಮಾತುಗಳಿಗೆ ನಾವೆಂದೂ ತಲೆ ಕೆಡಿಸಿಕೊಳ್ಳಲಿಲ್ಲ. ಬದಲಿಗೆ ಇನ್ನಷ್ಟು ನಗು ಮುಖದಿಂದ “ಇಲ್ಲ ಯಾವ ಕ್ಲಾಸಿಗೂ ಸೇರಿಸಿಲ್ಲ" ಎಂದು ಹೇಳುತ್ತಿದ್ದೆವು.
ಇದನ್ನೂ ಓದಿ: Rangaswamy Mookanahalli Column: ಜಗತ್ತು ಕಿಂಡ್ಲ್ ಬರ್ಗರ್ ಟ್ರ್ಯಾಪ್ʼನಲ್ಲಿ ಸಿಲುಕಿದೆಯೇ ?
ನನ್ನ ಪತ್ನಿ ರಮ್ಯ ಹಾಗೂ ಹೀಗೂ ಸಮಾಜದ ಕಟ್ಟಳೆಗೆ ಕಟ್ಟು ಬಿದ್ದು ಸುಮ್ಮನಿರುತ್ತಿದ್ದಳು. ನಾನು ಮಾತ್ರ ಯಾವ ಮುಲಾಜು ಇಲ್ಲದೆ “ನೀವು ಹಣವನ್ನು ಪೋಲು ಮಾಡುತ್ತಿದ್ದೀರಿ, ನಿಮಗೇನು ಬೇಕು ಅದನ್ನು ಮಗುವಿನ ಮೇಲೆ ಹೇರಿಕೆ ಮಾಡುತ್ತಿದ್ದೀರಿ, ಮಗುವಿಗೇನು ಬೇಕು ಎಂದು ಕೇಳಿದ್ದೀರಾ?" ಎಂದು ಕೇಳುತ್ತಿದ್ದೆ.
ಜತೆಗೆ “ಯಾವ ವಲಯದಲ್ಲಿ ನಿಮ್ಮ ಮಗು ಶ್ರೇಷ್ಠತೆ ಬೆಳಸಿಕೊಳ್ಳಬೇಕು ಎಂದು ಬಯಸಿ ದ್ದೀರಿ?" ಎಂದು ಕೇಳುತ್ತಿದ್ದೆ. ಕರಾಟೆ, ಈಜು, ಡಾ.ಸಂಗೀತ, ಕ್ರಿಕೆಟ್ ಜತೆಗೆ ಓದಿನಲ್ಲೂ ಕಡಿಮೆಯಾಗಬಾರದು ಎಂದರೆ ಅದು ಹೇಗೆ ಸಾಧ್ಯ?" ಎಂದು ಕೇಳುತ್ತಿದ್ದೆ.
“ನಿಮ್ಮ ಮಕ್ಕಳು ಕೊಹ್ಲಿಯಂತೆ ಕ್ರಿಕೆಟ್ ಆಡಬೇಕು, ಪಿ.ಟಿ. ಉಷಾರಂತೆ ಓಡಬೇಕು, ಗುಕೇಶ ನಂತೆ ಚೆಸ್ ಮಾಸ್ಟರ್ ಆಗಬೇಕು, ಮೈಕಲ್ ಜಾಕ್ಸನ್, ಪ್ರಭುದೇವರನ್ನು ಮೀರಿಸಿ ನೃತ್ಯ ಮಾಡಬೇಕು, ಇದೆಲ್ಲದರ ಜತೆಗೆ ಆತ ಅಥವಾ ಆಕೆ ವಿದ್ಯಾಭ್ಯಾಸದಲ್ಲೂ ಮುಂದುವರಿಯ ಬೇಕು... ಹೇಗೆ ಸಾಧ್ಯ ಕಣ್ರೀ?!" ಎಂದು ಕೇಳುತ್ತಿದ್ದೆ.
ಅವರು ನಿರುತ್ತರರಾಗುತ್ತಿದ್ದರು. ಮಗಳು ಅನನ್ಯ ಆರನೇ ತರಗತಿಗೆ ಬಂದಾಗ ಅವಳಲ್ಲಿ ಮಾತಾಡುವ ಕಲೆ, ಚತುರತೆ ಮತ್ತು ಆಸಕ್ತಿ ಇರುವುದನ್ನು ಗಮನಿಸಿ ಅವಳನ್ನು ಪಬ್ಲಿಕ್ ಸ್ಪೀಕಿಂಗ್ ಕೋರ್ಸಿಗೆ ಸೇರಿಸಿದೆವು. ಸಾವಿರಾರು ಜನರ ಮುಂದೆ ನಿಂತು ಮಾತಾಡುವ ಕ್ಷಮತೆ ಯನ್ನು ಆಕೆ ಗಳಿಸಿಕೊಂಡಿದ್ದಾಳೆ.
ಮಕ್ಕಳಲ್ಲಿ ಯಾವ ಕ್ಷಮತೆಯಿದೆ, ಅವರಿಗೆ ಯಾವುದರಲ್ಲಿ ಆಸಕ್ತಿಯಿದೆ ಎನ್ನುವುದನ್ನು ಅರಿತುಕೊಂಡು ನಾವು ಅದರ ಮೇಲೆ ಕೆಲಸ ಮಾಡಬೇಕು. ಅದನ್ನು ಬಿಟ್ಟು ಸಿಕ್ಕ ಸಿಕ್ಕ ತರಗತಿಗೆ ಸೇರಿಸಿದರೆ ಆ ಮಕ್ಕಳು ಸಮಯವನ್ನು ಎಲ್ಲಿಂದ ಹೊಂದಿಸಿಕೊಂಡಾರು? ವಿಪರ್ಯಾಸ ನೋಡಿ, ಹೀಗೆ ಬಯಸುವ ಪೋಷಕರು, ‘ಮಕ್ಕಳ ವಯಸ್ಸಿನಲ್ಲಿ ತಾವು ಏನು ಮಾಡುತ್ತಿದ್ದೆವು?’ ಎನ್ನುವ ಅವಲೋಕನ ಮಾಡಿಕೊಳ್ಳಬೇಕಲ್ಲವೇ? ಹಾಗೂ ಹೀಗೂ ಹತ್ತನೇ ತರಗತಿ ತನಕ ಎಲ್ಲಾ ತರಗತಿಗಳಿಗೆ ಮಣ್ಣು ಹೊತ್ತ ಮಕ್ಕಳು ವಿದ್ಯಾಭ್ಯಾಸದಲ್ಲಿ ಮಕಾಡೆ ಮಲಗಿವೆ ಎನ್ನುವುದು ಪೋಷಕರಿಗೆ ಅರ್ಥವಾಗಿ ಬಿಡುತ್ತದೆ. ಆಗ ನೋಡಿ ಗಡ್ಡಕ್ಕೆ ಬೆಂಕಿ ಬಿದ್ದರೆ ಬಾವಿ ತೊಡುವ ತುರ್ತಿನಲ್ಲಿ ಅವರು ಅಖಾಡಕ್ಕೆ ಇಳಿದು ಬಿಡುತ್ತಾರೆ. ಸೇರಿಸಿದ ಎಲ್ಲಾ ಕೋರ್ಸುಗಳಿಂದ ಮಕ್ಕಳನ್ನು ತೆಗೆದು ಬಿಡುತ್ತಾರೆ. ‘ಓದು’ ಎಂದು ಒತ್ತಡ ಹೇರಲು ಶುರುಮಾಡುತ್ತಾರೆ.
ಪ್ರಥಮ ಹತ್ತು ವರ್ಷ ಟೈಮ್ ಪಾಸ್ ಮಾಡುವುದು ಅಭ್ಯಾಸ ಮಾಡಿಕೊಂಡ ಮಕ್ಕಳು ಈಗ ಓದುವುದಕ್ಕೆ ಹೇಗೆ ಸಾಧ್ಯ? ಪ್ರಮಾಣ ಮಾಡಿ ಹೇಳುತ್ತೇನೆ, ಕಳೆದ ಹತ್ತು ವರ್ಷದಿಂದ ಇದೇ ಪ್ಯಾಟ್ರನ್ ನೋಡುತ್ತಾ ಬಂದಿದ್ದೇನೆ. ಹೋಗಲಿ ಮಕ್ಕಳು ತಾವು ಸೇರಿಕೊಂಡ ಇತರ ತರಗತಿ ಗಳಲ್ಲಿ ಏನಾದರೂ ಕ್ಷಮತೆಯನ್ನು ಗಳಿಸಿಕೊಂಡರೆ ಎಂದರೆ ಅದಕ್ಕೂ ಉತ್ತರ ‘ಇಲ್ಲ’ ಎನ್ನುವುದೇ ಆಗಿರುತ್ತದೆ.
ಆ ಕ್ಲಾಸಿನಿಂದ ಈ ಕ್ಲಾಸು, ಈ ಕ್ಲಾಸಿನಿಂದ ಆ ಕ್ಲಾಸು ಇಷ್ಟರ ಸಮಯ ಕಳೆದು ಹೋಗಿರು ತ್ತದೆ. ಬೆಂಗಳೂರಿನಲ್ಲಿ ಸರಾಸರಿ ಮಾಸಿಕ 15000 ರುಪಾಯಿ ಹಣವನ್ನು ಈ ರೀತಿಯ ಕೋರ್ಸುಗಳಿಗೆ ಪೋಷಕರು ವ್ಯಯಿಸುತ್ತಿದ್ದಾರೆ ಎನ್ನುತ್ತದೆ ಅಂಕಿ-ಅಂಶ. ಇದೊಂದು ಸಾಮಾಜಿಕ ಒತ್ತಡವಾಗಿದೆ.
ಮಕ್ಕಳನ್ನು ಕಂಡ ಕಂಡ ಕೋರ್ಸಿಗೆ ಸೇರಿಸದ ಪೋಷಕರನ್ನು ಕಂಜೂಸು ಎನ್ನುವಂತೆ ನೋಡಲಾಗುತ್ತದೆ. ತಮ್ಮ ಮಕ್ಕಳು ಕೊಹ್ಲಿ ಅಥವಾ ಗುಕೇಶ್ ಆಗಿಬಿಡುತ್ತಾರೆ ಎಂದು ಸಂಭ್ರಮಿಸುತ್ತಾರೆ. ಹೀಗೆ ಈ ಗುಂಪಿಗೆ ಸೇರದವರನ್ನು ಅಯ್ಯೋ ಪಾಪ ಎನ್ನುವಂತೆ ನೋಡಲಾಗುತ್ತದೆ. ಕೋರ್ಸಿಗೆ ಸೇರಿದವರೆ ಗುಕೇಶ್ ಆಗುವುದಿಲ್ಲ ಎಂದು ಇವರಿಗೆ ಹೇಗೆ ಹೇಳುವುದು? ಎಲ್ಲಕ್ಕಿಂತ ಮುಖ್ಯವಾಗಿ ಗುಕೇಶ್ ಚೆಸ್‌ನಲ್ಲಿ ಎಷ್ಟು ಮುಳುಗಿದ್ದರು ಎಂದರೆ ಆತನ ಪೋಷಕರು ಶಾಲೆಯನ್ನು ಬಿಡಿಸಿದ್ದರು, ಆತನ ಗಮನವೆ ಚೆಸ್ ಮೇಲೆ ಮಾತ್ರವಿತ್ತು.
ಆದರೆ ಬಹುತೇಕ ಮಕ್ಕಳಿಗೆ ಮತ್ತು ಪೋಷಕರಿಗೆ ಈ ರೀತಿಯ ನಿಖರತೆ ಇರುವುದಿಲ್ಲ. ಅವೆಲ್ಲವನ್ನೂ ಮಾಡುತ್ತಾ, ಶಿಕ್ಷಣದಲ್ಲೂ ಉತ್ತಮ ಅಂಕ ಗಳಿಸಬೇಕು ಎನ್ನುವುದು ಅವರ ಆಸೆ. ಇಷ್ಟೆ ಸಾಧಿಸಲು ನಮ್ಮಿಂದ ಸಾಧ್ಯವೇ? ನಮ್ಮ ಮಗು ಅಷ್ಟು ಶಕ್ತವೇ? ಎನ್ನುವುದನ್ನು ಪೋಷಕರು ಪರಾಮರ್ಶಿಸುವುದು ಒಳ್ಳೆಯದು.
ಇನ್ನಷ್ಟು ಪೋಷಕರನ್ನು ನೋಡಿದ್ದೇನೆ. ಅವರು ತಮ್ಮ ಮಕ್ಕಳು ಆಲ್‌ರೌಂಡರ್ ಎಂದು ಕರೆದುಕೊಳ್ಳುವುದರಲ್ಲಿ ಬಹಳ ಖುಷಿಯನ್ನು ಕಾಣುತ್ತಾರೆ. ಈ ಆಲ್‌ರೌಂಡರ್ ಕಾನ್ಸೆಪ್ಟ್ ನನಗೆ ಇಲ್ಲಿಯವರೆಗೂ ಅರ್ಥವಾಗಿಲ್ಲ. ಯಾವುದಕ್ಕೂ ಪೂರ್ಣವಾಗಿ ನ್ಯಾಯ ಒದಗಿಸದ ರೀತಿಯಿದು. ಕ್ರಿಕೆಟ್ ಆಟದಲ್ಲಿ ಮಾತ್ರ ಆಲ್ ರೌಂಡರ್ ಇರಬಹುದು. ನಿಜಜೀವನದಲ್ಲಿ ಎಲ್ಲವನ್ನೂ ಒಟ್ಟೊಟ್ಟಿಗೆ ನಿಭಾಯಿಸಿದವರ ಸಂಖ್ಯೆ ಎಷ್ಟಿರಬಹುದು? ಚೆನ್ನಾಗಿ ಓದಿ ಆ ನಂತರ ಬೇರೆ ವೃತ್ತಿಯಲ್ಲಿ ತೊಡಗಿಕೊಂಡವರು ಸಿಕ್ಕಬಹುದು.
ಆದರೆ ಎರಡನ್ನೂ ಒಂದೇ ಸಮಯದಲ್ಲಿ ಸರಿಯಾಗಿ ಮಾಡುವ ಕ್ಷಮತೆ ಎಷ್ಟು ಮಕ್ಕಳಿಗೆ ಇರಲು ಸಾಧ್ಯ? ಅಷ್ಟು ಕ್ಷಮತೆ ಮಗುವಿಗೆ ಇದೆಯೇ ಎನ್ನುವುದನ್ನು ಪೋಷಕರು ತಿಳಿದು ಕೊಳ್ಳಬೇಕು. ಕೊಹ್ಲಿ, ತೆಂಡೂಲ್ಕರ್ ಸಹಿತ ಬಹುತೇಕ ಕ್ರೀಡಾಪಟುಗಳು, ಅಥ್ಲೀಟ್‌ಗಳು ವಿದ್ಯಾಭ್ಯಾಸವನ್ನು ಅರ್ಧಕ್ಕೆ ಬಿಟ್ಟವರೇ, ಎಲ್ಲೋ ಅಲ್ಲೊಬ್ಬ ಇಲ್ಲೊಬ್ಬ ಅನಿಲ್ ಕುಂಬ್ಳೆ, ಜಾವಗಲ್ ಶ್ರೀನಾಥ್ ಸಿಗಬಹುದು.
ನಾನಿಲ್ಲಿ ಹೇಳುತ್ತಿರುವುದು ಮೆಜಾರಿಟಿ ಬಗ್ಗೆ, ಅಪವಾದಗಳ ಬಗ್ಗೆಯಲ್ಲ ಎನ್ನುವುದನ್ನು ಗಮನಿಸಬೇಕು. ಇದಕ್ಕೆ ಪೂರಕವಾಗಿ ಒಂದು ಕಥೆಯಿದೆ. ರಾಜನೊಬ್ಬ ತನ್ನ ಮಗನನ್ನು ಗುರುವಿನ ಆಶ್ರಮಕ್ಕೆ ಸೇರಿಸಿ ಆತನನ್ನು ಬಹಳ ಕಡಿಮೆ ಸಮಯದಲ್ಲಿ ಸಕಲ ವಿದ್ಯಾಪಾ ರಂಗತನನ್ನಾಗಿಸಲು ಕೇಳುತ್ತಾನೆ. ಆಗ ಗುರು ಅತ್ಯಂತ ವಿನಯದಿಂದ “ಸಮಯ ಬೇಡುವ ಕಾರ್ಯವಿದು" ಎಂದು ಹೇಳುತ್ತಾರೆ.
ರಾಜನಿಗೆ ಉತ್ತರ ರುಚಿಸುವುದಿಲ್ಲ, ಥೇಟ್ ಈಗಿನ ಪೋಷಕರಂತೆ! ವರ್ಷ ಬಿಟ್ಟು ಹೋದಾಗ ಕೂಡ ರಾಜನಿಗೆ ಮಗನ ಅಭಿವೃದ್ಧಿ ನೋಡಿ ಖುಷಿಯಾಗುವುದಿಲ್ಲ. ಆತ ಗುರುವನ್ನು ಮೂದಲಿಸುವ ರೀತಿಯಲ್ಲಿ “ಬೇಗ ಕಲಿಸುವ ಕ್ಷಮತೆ ನಿಮಗಿಲ್ಲ" ಎನ್ನುತ್ತಾನೆ. ಗುರು ಸಂಯಮ ಕಳೆದುಕೊಳ್ಳದೆ, ಹತ್ತಾರು ಮೊಲವನ್ನು ಆಟದ ಮೈದಾನದಲ್ಲಿ ಬಿಟ್ಟು ಎಲ್ಲವನ್ನೂ ಒಟ್ಟಿಗೆ ಹಿಡಿಯುವಂತೆ ರಾಜನಿಗೆ ಹೇಳುತ್ತಾರೆ.
ಒಂದೊಂದು ದಿಕ್ಕಿನಲ್ಲಿ ಒಂದೊಂದು ಮೊಲ ಓಡುತ್ತಿರುತ್ತದೆ. ಅದನ್ನು ನೋಡಿದ ರಾಜ “ಇದು ಅಸಾಧ್ಯ ಒಂದೊಂದೂ ಬೇರೆ ಬೇರೆ ದಿಕ್ಕಿಗೆ ಓಡುತ್ತಿದೆ; ಎಲ್ಲವನ್ನೂ ಒಟ್ಟಿಗೆ ಹಿಡಿಯಲು ಹೇಗೆ ಸಾಧ್ಯ?" ಎನ್ನುತ್ತಾನೆ. ಆಗ ಗುರು ವಿನಮ್ರತೆಯಿಂದ, “ಮಹಾರಾಜಾ, ಸತ್ಯವಾದ ಮಾತನ್ನೇ ಹೇಳಿದಿರಿ, ನೀವು ಕೇಳುವ ಎಲ್ಲಾ ವಿದ್ಯೆಗಳು ಕೂಡ ಒಂದೊಂದು ಮೊಲದಂತೆ, ಎಲ್ಲವನ್ನೂ ಒಮ್ಮೆಲೇ ಕಲಿಯುವುದು ಮತ್ತು ಅದರ ಮೇಲೆ ಪ್ರಭುತ್ವ ಸಾಧಿಸುವುದು ಕಷ್ಟಸಾಧ್ಯ.
ಕೋಟಿಗೊಬ್ಬರಿಗೆ ಸಾಧ್ಯವಾಗಬಹುದು; ಆದರೆ ಅದನ್ನೇ ನಾವು ಸಾಮಾನ್ಯ ಎನ್ನುವಂತೆ, ಎಲ್ಲರೂ ಮಾಡಲಿ ಎನ್ನುವಂತೆ ಬಿಂಬಿಸುವುದು ತಪ್ಪು" ಎಂದು ಹೇಳುತ್ತಾರೆ. ರಾಜನಿಗೆ ತನ್ನ ತಪ್ಪಿನ ಅರಿವಾಗುತ್ತದೆ ಎನ್ನುವುದರ ಮೂಲಕ ಕಥೆಯ ಅಂತ್ಯವಾಗುತ್ತದೆ. ಆದರೆ ಇವತ್ತಿನ ಪೋಷಕರಿಗೆ ಈ ಸತ್ಯ ಅರಿವಾಗುವುದು ಯಾವಾಗ? ಸ್ಥಿತಿವಂತ ಪೋಷಕರಲ್ಲಿ, ಯಶಸ್ವಿ ಪೋಷಕರಲ್ಲಿ ಇನ್ನೊಂದು ಗುಣವಿದೆ.
ತಾವೇನೋ ಇತರರಿಗಿಂತ, ಸಮಾ ಜಕ್ಕಿಂತ ಭಿನ್ನ ಎನ್ನುವುದು ಆ ಗುಣ. ಅದರ ಜತೆಗೆ ಮಕ್ಕಳು ಸೋಲುತ್ತಾರೆ ಎನ್ನುವುದನ್ನು ಇವರು ಸಹಿಸಲಾರರು. ಅವರ ಸರೀಕರೊಂದಿಗೆ ತಮ್ಮ ಮಗ/ಮಗಳು ಹೀಗೆ ಎಂದು ಹೇಳಿಕೊಂಡು ತಿರುಗಬೇಕಲ್ಲ!
ಮಕ್ಕಳು ಕಡಿಮೆ ಅಂಕ ತೆಗೆದುಬಿಟ್ಟರೆ ಹೇಗೆ? ಹಣವಿದೆ, ಹೀಗಾಗಿ ಮಕ್ಕಳನ್ನು ಕೇವಲ ಶಿಕ್ಷಣಕ್ಕೆ ಸೀಮಿತಗೊಳಿಸುವುದು ಹೇಗೆ? ನಾವು ಸಮಾಜದ ಸಾಮಾನ್ಯರಂತೆ ಆಗುವು ದಿಲ್ಲವೇ? ಎನ್ನುವ ದ್ವಂದ್ವ ಇವರದು. ಹೀಗಾಗಿ ಅವರ ಹುಚ್ಚಾಟಕ್ಕೆ ಬಲಿಯಾಗುವುದು ಮಕ್ಕಳು.
ಈಜು, ಕರಾಟೆ, ಸಂಗೀತ, ನಾಟಕ, ಚೆಸ್, ಕ್ರಿಕೆಟ್, ಅಬಾಕಸ್ ಕ್ಲಾಸುಗಳಲ್ಲಿ ದಣಿದ ಮಕ್ಕಳು ಮನೆಗೆ ಬಂದು ಪುಸ್ತಕದಲ್ಲಿ ಮುಖ ಹುದುಗಿಸಿ ಮಲಗಿಬಿಡುತ್ತವೆ. ಅವು ಕೂಡ ಮನುಷ್ಯ ರಲ್ಲವೇ? ಅವಕ್ಕೂ ದಣಿವಾಗುತ್ತದೆಯಲ್ಲವೇ? ಮಕ್ಕಳು ಎಂದಾಕ್ಷಣ ಅವು ನಮ್ಮ ಕನಸು ಗಳನ್ನು ನನಸು ಮಾಡುವ ಮಷಿನ್ ಗಳಲ್ಲ.
ಅವುಗಳ ಬೇಕು-ಬೇಡಗಳನ್ನು ನಾವು ಅರಿಯದೆ ನಮಗಿಷ್ಟ ಎಂತಲೋ, ಸಮಾಜದ ಜನರ ಎದುರಿಗೆ ಬೀಗಬೇಕು ಎನ್ನುವ ಕಾರಣಕ್ಕೋ ಅವರ ಮೇಲೆ ಹೇರಿಕೆ ಮಾಡುವುದು ತಪ್ಪು. ನೀವು ಹೇರಿಕೆ ಮಾಡಿದರು ಕೂಡ ನೀವು ಬಯಸಿದ ಫಲಿತಾಂಶ ಸಿಕ್ಕುವುದಿಲ್ಲ ಎನ್ನುವುದು ಮಾತ್ರ ಶತಃಸಿದ್ಧ.
ಮಗಳು ಅನನ್ಯಳ ಧ್ವನಿ ಕೇಳಿ “ಸಂಗೀತಕ್ಕೆ ಹಾಕಿ" ಎಂದವರ ಸಂಖ್ಯೆ, “ಮುಖಭಾವ ಚಂದ ವಿದೆ ಅವಳನ್ನು ನಾಟಕಕ್ಕೆ ಸೇರಿಸಿ" ಎಂದವರ ಸಂಖ್ಯೆ, “ಸುಮ್ಮನೆ ಕೂತು ಓದಿದರೆ ಆರೋಗ್ಯವಿರುವುದಿಲ್ಲ ಅವಳನ್ನು ಸ್ಪೋರ್ಟ್ಸ್‌ಗೆ ಸೇರಿಸಿ" ಎಂದವರ ಸಂಖ್ಯೆ ಲೆಕ್ಕಕ್ಕೆ ಇಡಲು ಹೋಗಲಿಲ್ಲ. ಅವರುಗಳು ಹೇಳಿದ್ದು ಕೇಳಲೂ ಇಲ್ಲ. ಮಗಳನ್ನು ನಿನಗೇನು ಇಷ್ಟ? ನಿನಗೇನು ಬೇಕು? ಎಂದು ಕೇಳಿದ್ದೆವು.
“ಡ್ಯಾನ್ಸು, ನಾಟಕ, ಸಂಗೀತ ಇವೆ ಬೇಡ, ಸ್ಪೋರ್ಟ್ಸ್ ಖಂಡಿತ ನನಗಲ್ಲ; ವಿದ್ಯಾಭಾಸ ನನ್ನ ಶಕ್ತಿ, ವಯಲಿನ್ ಇಷ್ಟ, ಗಣಿತ ಮತ್ತು ವಿಜ್ಞಾನ ಎಂದರೆ ಉಸಿರು" ಎಂದಳು. ಅವಳಿಷ್ಟಕ್ಕೆ ನಾವು ನೀರೆರೆಯುತ್ತ ಹೋದೆವು. ಸಮಾಜಕ್ಕೆ ಹೆದರಿ ನಾವು ಅವಳನ್ನು ಇಲ್ಲಸಲ್ಲದ ಕೋರ್ಸುಗಳಿಗೆ ಸೇರಿಸಲಿಲ್ಲ.
ಎಲ್ಲರೂ ಹೀಗೆ ಮಾಡಬೇಕು ಅಂತಲ್ಲ, ಮಕ್ಕಳಿಗೆ ಏನು ಬೇಕು ಅದನ್ನು ಮಾಡಬೇಕು ಎನ್ನುವ ಅರ್ಥದಲ್ಲಿ ಹೇಳಿದ್ದು. ಅನನ್ಯಳ ಜತೆಯಲ್ಲಿ ಓದುತ್ತಿದ್ದ ಮಕ್ಕಳಲ್ಲಿ ಬಹುತೇಕ ಮಕ್ಕಳು ಎಲ್ಲಾ ತರಗತಿಗಳಿಗೂ ಸೇರಿದ್ದರು. ಹತ್ತನೇ ತರಗತಿ ಬರುತ್ತಿದಂತೆ ಎಲ್ಲರೂ ಬಿಟ್ಟರು. ಇವತ್ತಿಗೆ ಒಂದು ಪ್ರತಿಶತ ಮಕ್ಕಳು ಕೂಡ ಬಾಲ್ಯದಲ್ಲಿ ಶುರು ಮಾಡಿದ ಅಭ್ಯಾಸ ವನ್ನು ಮುಂದುವರಿಸುತ್ತಿಲ್ಲ.
ಆದರೆ ಆ ಸಮಯದಲ್ಲಿ ಅತ್ತ ಪೋಷಕರು ಹಣವನ್ನು ಕಳೆದುಕೊಂಡರು, ಇತ್ತ ಮಕ್ಕಳು ಬಾಲ್ಯವನ್ನು! ‘ಮಕ್ಕಳು ನಮ್ಮ ಕನಸುಗಳನ್ನು ಪೂರೈಸಲು ಹುಟ್ಟಿದವರಲ್ಲ, ತಮ್ಮ ಕನಸುಗಳನ್ನು ಪೂರೈಸಿಕೊಳ್ಳಲು ಹುಟ್ಟಿದವರು’ ಎನ್ನುವ ಪರಿಜ್ಞಾನ ಪೋಷಕರಲ್ಲಿ ಬೆಳೆಯಲಿ. ಎಲ್ಲವನ್ನೂ ಕಲಿಯಬೇಕು ಎನ್ನುವ ಹುಚ್ಚಾಟಕ್ಕೆ ಚೂರಾದರೂ ತೆರೆ ಬೀಳಲಿ. ಬಾಲ್ಯದಲ್ಲಿ ಸಹಜವಾದ ಆಟಗಳನ್ನು ಅವರು ಆಡುವಂತಾಗಲಿ.