Operation Sindoor: ಆಪರೇಷನ್ ಸಿಂಧೂರ್ ಯಶಸ್ವಿ: ಭಾರತೀಯ ಸೇನೆಯ ಹೆಸರಿನಲ್ಲಿ ಮೇ 8ರಂದು ರಾಜ್ಯಾದ್ಯಂತ ವಿಶೇಷ ಪೂಜೆ
ಮೇ 7ರಂದು ಮುಂಜಾನೆ ಭಾರತವು ಪಾಕಿಸ್ತಾನ, ಪಾಕ್ ಆಕ್ರಮಿತ ಕಾಶ್ಮೀರದ ಭಯೋತ್ಪಾದಕ ಶಿಬಿರಗಳ ಮೇಲೆ ಆಪರೇಷನ್ ಸಿಂಧೂರ್ ಹೆಸರಿನಲ್ಲಿ ಸೇನಾ ಕಾರ್ಯಾಚರಣೆಯನ್ನು ಯಶಸ್ವಿಯಾಗಿ ನೆರವೇರಿಸಿದೆ. ಈ ಹಿನ್ನೆಲೆಯಲ್ಲಿ ಮೇ 8ರಂದು ರಾಜ್ಯದ ದೇವಾಲಯಗಳಲ್ಲಿ ಸೈನಿಕರ ಕ್ಷೇಮಾಭಿವೃದ್ಧಿಗಾಗಿ ವಿಶೇಷ ಪೂಜೆ ನಡೆಯಲಿದೆ.


ಬೆಂಗಳೂರು: ಏ. 22ರಂದು ಜಮ್ಮು ಕಾಶ್ಮೀರ ಪಹಲ್ಗಾಮ್‌ನಲ್ಲಿ ನಡೆದ ಭಯೋತ್ಪಾದಕ ದಾಳಿಗೆ ಉತ್ತರವಾಗಿ ಮೇ 7ರಂದು ಮುಂಜಾನೆ ಭಾರತವು ಪಾಕಿಸ್ತಾನ, ಪಾಕ್ ಆಕ್ರಮಿತ ಕಾಶ್ಮೀರದ ಭಯೋತ್ಪಾದಕ ಶಿಬಿರಗಳ ಮೇಲೆ ಆಪರೇಷನ್ ಸಿಂಧೂರ್ (Operation Sindoor) ಹೆಸರಿನಲ್ಲಿ ಸೇನಾ ಕಾರ್ಯಾಚರಣೆಯನ್ನು ಯಶಸ್ವಿಯಾಗಿ ನೆರವೇರಿಸಿ, ಧ್ವಂಸಗೊಳಿಸಿದೆ. ಈ ಹಿನ್ನೆಲೆಯಲ್ಲಿ ಮೇ 8ರಂದು ರಾಜ್ಯದ ದೇವಾಲಯಗಳಲ್ಲಿ ಸೈನಿಕರ ಕ್ಷೇಮಾಭಿವೃದ್ಧಿಗಾಗಿ ವಿಶೇಷ ಪೂಜೆ ನಡೆಯಲಿದೆ ಎಂದು ಸಾರಿಗೆ ಹಾಗೂ ಮುಜರಾಯಿ ಸಚಿವ ರಾಮಲಿಂಗಾ ರೆಡ್ಡಿ (Ramalinga Reddy) ತಿಳಿಸಿದರು.
ಭಾರತದ ಹೆಮ್ಮೆಯ ಸೇನಾ ಕಾರ್ಯಾಚರಣೆಗೆ ಶುಭಾಶಯಗಳನ್ನು ತಿಳಿಸಿದ ಅವರು, ಮುಜರಾಯಿ ಇಲಾಖಾ ವ್ಯಾಪ್ತಿಯ ಎಲ್ಲ ದೇವಾಲಯಗಳಲ್ಲಿ ಭಾರತೀಯ ಸೇನೆಯ ಹೆಸರಿನಲ್ಲಿ ವಿಶೇಷ ಪೂಜೆ ಮಾಡಿ, ಭಾರತೀಯ ಸೇನೆಗೆ ಮತ್ತಷ್ಟು ಶಕ್ತಿಯನ್ನು ಕರುಣಿಸಲು ಎಂದು ಪ್ರಾರ್ಥಿಸಬೇಕು ಎಂದು ಕರೆ ನೀಡಿದರು.
ಸಚಿವರ ನಿರ್ದೇಶನದಂತೆ ಮೇ 8ರಂದು ರಾಜ್ಯದ ಎಲ್ಲ ಮುಜುರಾಯಿ ದೇವಸ್ಥಾನಗಳಲ್ಲಿ ಸೈನಿಕರ ಆರೋಗ್ಯಕ್ಕಾಗಿ ಪ್ರಾರ್ಥಿಸಿ ವಿಶೇಷ ಪೂಜೆ ನಡೆಯಲಿದ್ದು, ಬೆಂಗಳೂರು ಹನುಮಂತನಗರದ ಶ್ರೀ ಗವಿ ಗಂಗಾಧರೇಶ್ವರ ದೇವಸ್ಥಾನದಲ್ಲಿ ಬೆಳಗ್ಗೆ 8:30ರಿಂದ 9 ಗಂಟೆವರೆಗೆ ಧಾರ್ಮಿಕ ಕಾರ್ಯಕ್ರಮ ಜರುಗಲಿದೆ. ಇನ್ನು ಬೆಳಗ್ಗೆ 10:30ರಿಂದ 11:00 ಗಂಟೆವರೆಗೆ ಬೆಂಗಳೂರಿನ ಬನಶಂಕರಿ ಬಸ್ ಸ್ಟಾಪ್ ಪಕ್ಕದ ಶ್ರೀ ಬನಶಂಕರಿ ದೇವಸ್ಥಾನದಲ್ಲಿ ವಿಶೇಷ ಪಾರ್ಥನೆ ನೆರವೇರಲಿದೆ ಎಂದು ಪ್ರಕಟಣೆ ತಿಳಿಸಿದೆ.
ಈ ಸುದ್ದಿಯನ್ನೂ ಓದಿ: Operation Sindoor: ಪಹಲ್ಗಾಮ್ ದಾಳಿಗೆ ಸೇಡು ತೀರಿಸಿಕೊಂಡ ಭಾರತ; ಸಿನಿಮಾ ಮಂದಿ ಏನಂದ್ರು?
80 ಉಗ್ರರು ಮಟಾಶ್
ಪಹಲ್ಗಾಮ್‌ನಲ್ಲಿ ನಡೆದ ಉಗ್ರ ದಾಳಿಯನ್ನು ಪ್ರಧಾನಿ ನರೇಂದ್ರ ಮೋದಿ ಶಕ್ತವಾಗಿ ವಿರೋಧಿಸಿದ್ದರು. ರಕ್ತ ಹರಿಸಿದವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವುದಾಗಿ ಎಚ್ಚರಿಕೆ ನೀಡಿದ್ದರು. ಅದರಂತೆ ಇದೀಗ ಭಾರತೀಯ ಸೇನೆ ಪಾಕಿಸ್ತಾನದ ಮೇಲೆ ದಾಳಿ ನಡೆಸಿ 9 ಉಗ್ರ ತಾಣಗಳನ್ನು ಧ್ವಂಸಗೊಳಿಸಿದೆ. ಈ ದಾಳಿಯಲ್ಲಿ ಸುಮಾರು 80 ಉಗ್ರರು ಸಾವನ್ನಪ್ಪಿದ್ದಾರೆ.
ಬುಧವಾರ ಮುಂಜಾನೆ 1:05ಕ್ಕೆ ಆರಂಭವಾದ ಆಪರೇಷನ್ ಸಿಂಧೂರ 1: 30ಕ್ಕೆ ಮುಕ್ತಾಯ ಕಂಡಿತು. ಪ್ರಧಾನಿ ಮೋದಿ ಪ್ರತಿಯೊಂದು ಹಂತದಲ್ಲಿಯೂ ಕಾರ್ಯಾಚರಣೆಯ ಮೇಲ್ವಿಚಾರಣೆ ನಡೆಸಿದರು. ಸುಮಾರು 25 ನಿಮಿಷಗಳ ಕಾಲ ನಡೆದ ದಾಳಿಯಲ್ಲಿ ಉಗ್ರ ನೆಲೆಗಳು, ತರಬೇತಿ ಶಿಬಿರಗಳನ್ನು ನಾಮಾವಶೇಷವಾಗಿವೆ.
ಸೇನಾಪಡೆಗಳಿಗೆ ಅಭಿನಂದನೆ ಸಲ್ಲಿಸಿದ ಮೋದಿ
ನವದೆಹಲಿ: ಬುಧವಾರ ನಸುಕಿನಲ್ಲಿ ಉಗ್ರರ ಮೇಲೆ ದಾಳಿ ಮಾಡಿದ ಬಳಿಕ ಪ್ರಧಾನಿ ನರೇಂದ್ರ ಮೋದಿ ಅವರು ಸಂಪುಟ ಸಭೆಯನ್ನು ಕರೆದಿದ್ದರು. ಈ ಸಭೆಯಲ್ಲಿ ಮೂರು ಪಡೆಗಳ ಮುಖ್ಯಸ್ಥರು, ರಕ್ಷಣಾ ಮಂತ್ರಿ ರಾಜನಾಥ್ ಸಿಂಗ್ ಸೇರಿದಂತೆ ಹಲವರು ಉಪಸ್ಥಿತರಿದ್ದರು. ಸಭೆಯಲ್ಲಿ ಮಾತನಾಡಿದ ಮೋದಿ ಸೇನಾ ಪಡೆಗಳಿಗೆ ಅಭಿನಂದನೆ ಸಲ್ಲಿಸಿದರು. ʼʼಪಾಕಿಸ್ತಾನ ಮತ್ತು ಪಾಕ್ ಆಕ್ರಮಿತ ಕಾಶ್ಮೀರ (ಪಿಒಕೆ)ದಾದ್ಯಂತ ಭಯೋತ್ಪಾದಕ ಶಿಬಿರಗಳನ್ನು ಗುರಿಯಾಗಿಸಿಕೊಂಡು ಭಾರತ ಆಪರೇಷನ್ ಸಿಂಧೂರ್ ನಡೆಸಿದ್ದು ಎಲ್ಲರಿಗೂ ಹೆಮ್ಮೆಯ ಕ್ಷಣʼʼ ಎಂದು ಅವರು ಬಣ್ಣಿಸಿದರು.
ಪಹಲ್ಗಾಮ್ ದಾಳಿ ಬಳಿಕ ಸೇನಾ ಪಡೆಗಳಿಗೆ ಸಂಪೂರ್ಣ ಸ್ವಾತಂತ್ರ ನೀಡಿದ್ದ ಮೋದಿ, ನಮ್ಮವರ ಹತ್ಯೆ ಮಾಡಿದವರನ್ನು ಸಮಯ, ಸಂದರ್ಭ, ನೋಡಿ ಹೊಡೆಯಿರಿ ಎಂದು ಹೇಳಿದ್ದರು. ಇದೀಗ ಭಾರತೀಯ ಸೇನೆ ಉಗ್ರರ ವಿರುದ್ದ ಸೇಡು ತೀರಿಸಿಕೊಂಡಿದೆ.