ಫೋಟೋ ಗ್ಯಾಲರಿ ಬಿಗ್​ಬಾಸ್ ಬಜೆಟ್​ T20 ವಿಶ್ವಕಪ್​ ವಿದೇಶ ವಿಶ್ವವಾಣಿ ಪ್ರಾಪರ್ಟಿ ಫ್ಯಾಷನ್​ ಧಾರ್ಮಿಕ ಕ್ರೈಂ ಪ್ರವಾಸಿ ಪ್ರಪಂಚ ಸಂಪಾದಕೀಯ ಉದ್ಯೋಗ

ʼಪುಸ್ತಕ ಮನೆʼ ಖ್ಯಾತಿಯ ಕನ್ನಡಿಗ ಅಂಕೇ ಗೌಡಗೆ ಪದ್ಮಶ್ರೀ ಪ್ರಶಸ್ತಿ ಪ್ರಕಟ

ಭಾರತ ಸರ್ಕಾರದ ಈ ಸಾಲಿನ ಪ್ರತಿಷ್ಠಿತ ಪದ್ಮ ಪ್ರಶಸ್ತಿ ಪ್ರಕಟವಾಗಿದೆ. ಈ ಪೈಕಿ ಕನ್ನಡಿಗೆ ಅಂಕೇಗೌಡ ಅವರಿಗೆ ಪದ್ಮಶ್ರೀ ಘೋಷಿಸಲಾಗಿದೆ. ಮೈಸೂರು ಮೂಲದ ಇವರು 20 ಲಕ್ಷಕ್ಕೂ ಅಧಿಕ ಪುಸ್ತಕ ಸಂಗ್ರಹಿಸುವ ಮೂಲಕ ಗಮನ ಸೆಳೆದಿದ್ದಾರೆ. ಇವರು ಸಾಹಿತ್ಯದಲ್ಲಿ ಸ್ನಾತಕೋತ್ತರ ಪದವಿ ಪಡೆದಿದ್ದಾರೆ.

ಕನ್ನಡಿಗ ಅಂಕೇ ಗೌಡಗೆ ಪದ್ಮಶ್ರೀ ಪ್ರಶಸ್ತಿ ಪ್ರಕಟ

ಅಂಕೇ ಗೌಡ -

Ramesh B
Ramesh B Jan 25, 2026 2:49 PM

ಬೆಂಗಳೂರು, ಜ. 25: ಭಾರತ ಸರ್ಕಾರದ 2026ನೇ ಸಾಲಿನ ಪ್ರತಿಷ್ಠಿತ ಪದ್ಮ ಪ್ರಶಸ್ತಿ (Padma Awards) ಪ್ರಕಟವಾಗಿದೆ. ಈ ಪೈಕಿ ಕನ್ನಡಿಗ ಅಂಕೇ ಗೌಡ (Anke Gowda) ಅವರಿಗೆ ಪದ್ಮಶ್ರೀ (Padma Shri 2026) ಘೋಷಿಸಲಾಗಿದೆ. ಮಂಡ್ಯ ಮೂಲದ ಇವರು 20 ಲಕ್ಷಕ್ಕೂ ಅಧಿಕ ಪುಸ್ತಕ ಸಂಗ್ರಹಿಸುವ ಮೂಲಕ ಗಮನ ಸೆಳೆದಿದ್ದಾರೆ. ಇವರು ಕನ್ನಡ ಸಾಹಿತ್ಯದಲ್ಲಿ ಸ್ನಾತಕೋತ್ತರ ಪದವಿ ಪಡೆದಿದ್ದಾರೆ. ಮಂಡ್ಯ ಜಿಲ್ಲೆ ಪಾಂಡವಪುರ ತಾಲೂಕಿನ ಹರಳಹಳ್ಳಿ ಗ್ರಾಮದಲ್ಲಿ ಅಂಕೇಗೌಡ ಅವರ ಅಪರೂಪದ ಗ್ರಂಥಾಲಯ ʼಪುಸ್ತಕ ಮನೆʼ ಇದೆ.

ಕಾರ್ಖಾನೆಯಲ್ಲಿದ್ದುಕೊಂಡೇ ಪುಸ್ತಕ ಸಂಗ್ರಹಿಸುವ ಹವ್ಯಾಸ ಬೆಳೆಸಿಕೊಂಡಿದ್ದ ಅಂಕೇಗೌಡ ಸಂಗ್ರಹಿಸಿರುವ ಅಪರೂಪದ ಗ್ರಂಥಾಲಯ ಈ ʼಪುಸ್ತಕ ಮನೆʼ. ಇಲ್ಲಿ ಸುಮಾರು 20 ಲಕ್ಷಕ್ಕೂ ಹೆಚ್ಚು ಪುಸ್ತಕಗಳಿವೆ. ಇಲ್ಲಿ ಯಾವುದೇ ಶುಲ್ಕ ಸಂಗ್ರಹಿಸುವುದಿಲ್ಲ. ಯಾವ ಪುಸ್ತಕವನ್ನು ಯಾರು ಬೇಕಾದರೂ ಬಂದು ಓದಿಕೊಂಡು ಹೋಗಬಹುದು ಎನ್ನುವುದು ವಿಶೇಷ.

ಅಂಕೇ ಗೌಡ ಅವರಿಗೆ ಪದ್ಮಶ್ರೀ ಪ್ರಶಸ್ತಿ ಘೋಷಣೆ:



ಸೈಟ್‌ ಮಾರಾಟ

ಅಂಕೇ ಗೌಡ ಪುಸ್ತಕ ಸಂಗ್ರಹ ಹೆಚ್ಚುತ್ತಿದ್ದಂತೆಯೇ ಅದನ್ನೆಲ್ಲ ಇಡಲು ಮನೆಯ ಜಾಗ ಸಾಲುತ್ತಿರಲಿಲ್ಲ. ಹೀಗಾಗಿ ಅವರು ಮೈಸೂರಿನಲ್ಲಿದ್ದ ತಮ್ಮ ಸ್ವಂತ ಸೈಟ್‌ ಮಾರಿ ಬೃಹತ್ ಗ್ರಂಥಾಲಯ ಕಟ್ಟಿದ್ದಾರೆ. ಹೀಗೆ ದೊಡ್ಡ ಜಾಗದಲ್ಲಿ ದೊಡ್ಡ ಲೈಬ್ರರಿ ತಲೆ ಎತ್ತಿ ನಿಂತಿದೆ. ಇಲ್ಲಿ ರಾಮಾಯಣದ ಬಗ್ಗೆ 500ಕ್ಕೂ ಹೆಚ್ಚು ಲೇಖಕರ ಪುಸ್ತಕಗಳಿವೆ. ಭಗವದ್ಗೀತೆಗೆ ಸಂಬಂಧಿಸಿದಂತೆ 3 ಸಾವಿರಕ್ಕೂ ಹೆಚ್ಚು ಗ್ರಂಥ, ಮಾತ್ರವಲ್ಲ ಕಲೆ, ಸಾಹಿತ್ಯ, ವಿಜ್ಞಾನ-ತಂತ್ರಜ್ಞಾನ ಹೀಗೆ ಎಲ್ಲ ಪ್ರಕಾರಗಳ ಜಗತ್ತಿನ ಪ್ರಮುಖ ಪುಸ್ತಕಗಳು ಇಲ್ಲಿ ಲಭ್ಯ. ಅಂಕೇಗೌಡ ಅವರಿಗೆ ಮಡದಿ ವಿಜಯಲಕ್ಷ್ಮೀ ಸಾಥ್‌ ನೀಡುತ್ತಿದ್ದಾರೆ. ಈಗಾಗಲೇ ಈ ಪುಸ್ತಕದ ಮನೆ ಲಿಮ್ಕಾ ಬುಕ್ ಆಫ್ ರೆಕಾರ್ಡ್‌ಗೆ ಸೇರಿಕೊಂಡಿದೆ.‌

ಖ್ಯಾತ ನಟ ಅನಂತನಾಗ್‌ಗೆ ಪದ್ಮಭೂಷಣ ಪ್ರಶಸ್ತಿ ಪ್ರದಾನ, ರಿಕ್ಕಿ ಕೇಜ್‌ಗೆ ಪದ್ಮಶ್ರೀ

ಆರ್‌. ಅಶೋಕ್‌ ಅಭಿನಂದನೆ

ಅಂಕೇ ಗೌಡ ಅವರಿಗೆ ಬಿಜೆಪಿ ನಾಯಕ ಆರ್‌. ಅಶೋಕ್‌ ಅಭಿನಂದನೆ ಸಲ್ಲಿಸಿದ್ದಾರೆ. ಈ ಬಗ್ಗೆ ಎಕ್ಸ್‌ನಲ್ಲಿ ಬರೆದುಕೊಂಡಿದ್ದಾರೆ. ʼʼಪುಸ್ತಕ ಪ್ರೇಮಿ, 'ಪುಸ್ತಕ ಮನೆ'ಯ ಅಂಕೇಗೌಡರಿಗೆ ಪದ್ಮಶ್ರೀ ಗೌರವ! ಸುಮಾರು 20 ಲಕ್ಷ ಪುಸ್ತಕಗಳನ್ನು ಸಂಗ್ರಹಿಸಿ, ಅವುಗಳಿಗಾಗಿಯೇ ತಮ್ಮ ಜೀವನವನ್ನು ಮುಡಿಪಾಗಿಟ್ಟ ಮಂಡ್ಯದ ಪಾಂಡವಪುರದ ಶ್ರೀ ಅಂಕೇಗೌಡ ಅವರಿಗೆ ದೇಶದ ಪ್ರತಿಷ್ಠಿತ 'ಪದ್ಮಶ್ರೀ' ಪ್ರಶಸ್ತಿ ಲಭಿಸಿರುವುದು ಕನ್ನಡಿಗರೆಲ್ಲರಿಗೂ ಹೆಮ್ಮೆಯ ಸಂಗತಿʼʼ ಎಂದಿದ್ದಾರೆ.

ʼʼಒಬ್ಬ ವ್ಯಕ್ತಿ ಅಸಾಧಾರಣ ಶ್ರಮದಿಂದ ಜ್ಞಾನದ ಭಂಡಾರವನ್ನೇ ಕಟ್ಟಬಲ್ಲರು ಎಂಬುದಕ್ಕೆ ಇವರೇ ಸಾಕ್ಷಿ. ಜ್ಞಾನದಾಸೋಹಿ ಅಂಕೇಗೌಡರಿಗೆ ಹೃತ್ಪೂರ್ವಕ ಅಭಿನಂದನೆಗಳು. ನಿಮ್ಮ ಈ ಸಾಧನೆ ಮುಂದಿನ ಪೀಳಿಗೆಗೆ ಮಾದರಿಯಾಗಲಿʼʼ ಎಂದು ಬರೆದುಕೊಂಡಿದ್ದಾರೆ.