Padma Bhushan Award: ಖ್ಯಾತ ನಟ ಅನಂತನಾಗ್‌ಗೆ ಪದ್ಮಭೂಷಣ ಪ್ರಶಸ್ತಿ ಪ್ರದಾನ, ರಿಕ್ಕಿ ಕೇಜ್‌ಗೆ ಪದ್ಮಶ್ರೀ
ತಮ್ಮ ವೈವಿಧ್ಯಮಯ ನಟನೆ ಮೂಲಕ ಕೋಟ್ಯಂತರ ಜನರ ಮನ ಗೆದ್ದಿರುವ ನಟ ಅನಂತನಾಗ್ (Anant Nag) ಅವರು ಭಾರತದ ಅತ್ಯುನ್ನತ ನಾಗರಿಕ ಪ್ರಶಸ್ತಿಗಳಲ್ಲಿ ಒಂದಾದ ಪದ್ಮಭೂಷಣವನ್ನು ಪಡೆದಿದ್ದು, ರಾಷ್ಟ್ರಪತಿಗಳಿಂದ ಪದ್ಮಭೂಷಣ ಪುರಸ್ಕಾರವನ್ನು (Padma Bhushan Award) ಪಡೆದರು.

ಹಿರಿಯ ನಟ ಅನಂತನಾಗ್ ಪದ್ಮಭೂಷಣ ಪ್ರಶಸ್ತಿಪಡೆದರು.

ನವದೆಹಲಿ: ಕನ್ನಡದ ಹಿರಿಯ ನಟ ಅನಂತನಾಗ್ (Anant Nag) ಅವರಿಗೆ ಮೇ 27ರಂದು ರಾಷ್ಟ್ರಪತಿ ಭವನದಲ್ಲಿ ರಾಷ್ಟ್ರಪತಿ ದ್ರೌಪದಿ ಮುರ್ಮು (President Droupadi Murmu) ಅವರು ಪದ್ಮಭೂಷಣ ಪ್ರಶಸ್ತಿಯನ್ನು (Padma Bhushan Award) ನೀಡಿ ಗೌರವಿಸಿದರು. ರಾಷ್ಟ್ರಪತಿಗಳು ಮಂಗಳವಾರ ದೆಹಲಿಯ ರಾಷ್ಟ್ರಪತಿ ಭವನದಲ್ಲಿ ನಡೆದ 2ನೇ ನಾಗರಿಕ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ವಿವಿಧ ವಿಭಾಗಗಳು ಮತ್ತು ಕ್ಷೇತ್ರಗಳ ಪುರಸ್ಕೃತರಿಗೆ ಪದ್ಮ ಪ್ರಶಸ್ತಿಗಳನ್ನು ಪ್ರದಾನ ಮಾಡಿದರು. ಕರ್ನಾಟಕದ ಖ್ಯಾತ ನಟ ಅನಂತನಾಗ್ ಅವರಿಗೆ ಪದ್ಮಭೂಷಣ, ಕರ್ನಾಟಕದ ವಯಲಿನ್ ವಾದಕ ಎಲ್. ಸುಬ್ರಹ್ಮಣ್ಯಂ ಅವರಿಗೆ ಪದ್ಮವಿಭೂಷಣ, ಕರ್ನಾಟಕ ಮೂಲದ ಸಂಗೀತ ನಿರ್ದೇಶಕ ರಿಕಿ ಕೇಜ್ ಅವರಿಗೆ ಪದ್ಮಶ್ರೀ ಪ್ರಶಸ್ತಿ ನೀಡಿ ಗೌರವಿಸಲಾಯಿತು.
ತಮ್ಮ ವೈವಿಧ್ಯಮಯ ನಟನೆ ಮೂಲಕ ಕೋಟ್ಯಂತರ ಜನರ ಮನ ಗೆದ್ದಿರುವ ಅನಂತನಾಗ್ ಅವರು ಭಾರತದ ಅತ್ಯುನ್ನತ ನಾಗರಿಕ ಪ್ರಶಸ್ತಿಗಳಲ್ಲಿ ಒಂದಾದ ಪದ್ಮಭೂಷಣವನ್ನು ಪಡೆದಿದ್ದು, ರಾಷ್ಟ್ರಪತಿಗಳಿಂದ ಪುರಸ್ಕಾರವನ್ನು ಪಡೆದರು. ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಪ್ರಧಾನ ಮಂತ್ರಿ ನರೇಂದ್ರ ಮೋದಿ, ಉಪರಾಷ್ಟ್ರಪತಿ ಜಗದೀಪ್ ಧಂಕರ್, ಕೇಂದ್ರ ಸಚಿವರಾದ ಅಮಿತ್ ಶಾ, ಎಸ್ ಜೈಶಂಕರ್, ಪ್ರಹ್ಲಾದ್ ಜೋಶಿ, ಜಿತೇಂದ್ರ ಸಿಂಗ್, ಜಿ ಕಿಶನ್ ರೆಡ್ಡಿ ಮತ್ತು ಇತರ ಹಲವಾರು ಸಚಿವರು ಮತ್ತು ಗಣ್ಯರು ಉಪಸ್ಥಿತರಿದ್ದರು.
1973ರಿಂದ ಕನ್ನಡ ಸೇರಿದಂತೆ ವಿವಿಧ ಭಾಷೆಗಳ ಸಿನಿಮಾಗಳಲ್ಲಿ ಅನಂತ್ ನಾಗ್ ಅವರು ನಟಿಸಿದ್ದಾರೆ. ಬಣ್ಣದ ಬದುಕಿನಲ್ಲಿ 52 ವರ್ಷಗಳ ಸುದೀರ್ಘ ಅನುಭವ ಹೊಂದಿರುವ ಅನಂತ್ ನಾಗ್ ಅವರು ಬಹುಭಾಷೆಯಲ್ಲಿ ಅಭಿಮಾನಿಗಳನ್ನು ಹೊಂದಿದ್ದಾರೆ. ಇಂದಿಗೂ ಸಿನಿಮಾ ಕೆಲಸಗಳಲ್ಲಿ ಸಕ್ರಿಯವಾಗಿರುವ ಅವರಿಗೆ ಪದ್ಮ ಪ್ರಶಸ್ತಿ ದೊರೆತುದಕ್ಕೆ ಅಭಿಮಾನಿಗಳು ಸಂತಸ ವ್ಯಕ್ತಪಡಿಸಿದ್ದಾರೆ. ಅನಂತ್ ಪದ್ಮಭೂಷಣ ಪ್ರಶಸ್ತಿಯನ್ನು ಸ್ವೀಕರಿಸುವಾಗ ಅವರ ಪತ್ನಿ ಗಾಯತ್ರಿ ಸಹ ಸಮಾರಂಭದಲ್ಲಿ ಇದ್ದರು.
ಇದೇ ವೇದಿಕೆಯಲ್ಲಿ ಕರ್ನಾಟಕದ ಮತ್ತೋರ್ವ ಪ್ರತಿಭೆ ಸಂಗೀತ ನಿರ್ದೇಶಕ ರಿಕಿ ಕೇಜ್‌ಗೆ ಪದ್ಮಶ್ರೀ ಪ್ರಶಸ್ತಿ ಪ್ರದಾನ ಮಾಡಲಾಗಿದೆ. ರಿಕಿ ಕೇಜ್ ಅವರು ಮೂರು ಗ್ರ್ಯಾಮಿ ಪ್ರಶಸ್ತಿಗಳನ್ನು ಗೆದ್ದಿರುವುದು ವಿಶೇಷ. ಕಾರ್ಯಕ್ರಮದಲ್ಲಿ 71 ವ್ಯಕ್ತಿಗಳನ್ನು ಸನ್ಮಾನಿಸಲಾಯಿತು. ನಟಿ ಶೋಭನಾ, ತೆಲುಗು ನಟ ನಂದಮೂರಿ ಬಾಲಕೃಷ್ಣ ಅವರಿಗೆ ಕೂಡ ಪದ್ಮ ಪ್ರಶಸ್ತಿಗಳನ್ನು ಪ್ರದಾನ ಮಾಡಲಾಯಿತು. ದೇಶದ ಅತ್ಯುನ್ನತ ನಾಗರಿಕ ಗೌರವಗಳಲ್ಲಿ ಒಂದಾದ ಪದ್ಮಶ್ರೀ, ಪದ್ಮಭೂಷಣ ಮತ್ತು ಪದ್ಮವಿಭೂಷಣ ಎಂಬ ಮೂರು ವಿಭಾಗಗಳಲ್ಲಿ ಪದ್ಮ ಪ್ರಶಸ್ತಿಗಳನ್ನು ನೀಡಲಾಗುತ್ತದೆ. ಕಲೆ, ಸಾಮಾಜಿಕ ಕಾರ್ಯ, ಸಾರ್ವಜನಿಕ ವ್ಯವಹಾರಗಳು, ವಿಜ್ಞಾನ ಮತ್ತು ಎಂಜಿನಿಯರಿಂಗ್, ವ್ಯಾಪಾರ ಮತ್ತು ಕೈಗಾರಿಕೆ, ಔಷಧ ಮತ್ತು ಸಾಹಿತ್ಯ ಸೇರಿದಂತೆ ವಿವಿಧ ವಿಭಾಗಗಳಲ್ಲಿ ಪ್ರಶಸ್ತಿಗಳನ್ನು ನೀಡಲಾಗುತ್ತದೆ.
ರಾಷ್ಟ್ರಪತಿ ಮುರ್ಮು ಅವರು ಭಾರತದ ಎರಡನೇ ಅತ್ಯುನ್ನತ ನಾಗರಿಕ ಪ್ರಶಸ್ತಿಯಾದ ಪದ್ಮವಿಭೂಷಣವನ್ನು ಭಾರತದ ಮಾಜಿ ಮುಖ್ಯ ನ್ಯಾಯಮೂರ್ತಿ ನ್ಯಾಯಮೂರ್ತಿ (ನಿವೃತ್ತ) ಜಗದೀಶ್ ಸಿಂಗ್ ಖೇಹರ್ ಅವರಿಗೆ ಸಾರ್ವಜನಿಕ ವ್ಯವಹಾರಗಳ ಕ್ಷೇತ್ರಕ್ಕೆ ನೀಡಿದ ಕೊಡುಗೆಗಾಗಿ ಪ್ರದಾನ ಮಾಡಿದರು. ಜಾನಪದ, ಭಕ್ತಿ ಮತ್ತು ಛಠ್ ಗೀತೆಗಳಿಗೆ ಹೆಸರುವಾಸಿಯಾದ ಪ್ರಸಿದ್ಧ ಜಾನಪದ ಗಾಯಕಿ ಶಾರದಾ ಸಿನ್ಹಾ ಅವರಿಗೆ ಕಲೆ-ಜಾನಪದ ಸಂಗೀತ ಕ್ಷೇತ್ರಕ್ಕೆ ನೀಡಿದ ಕೊಡುಗೆಗಾಗಿ ಮರಣೋತ್ತರವಾಗಿ ಪದ್ಮವಿಭೂಷಣ ಪ್ರಶಸ್ತಿಯನ್ನು ನೀಡಲಾಗಿದೆ. ಅವರ ಪುತ್ರ ಅಂಶುಮಾನ್ ಸಿನ್ಹಾ ಅವರ ಪರವಾಗಿ ಪ್ರಶಸ್ತಿಯನ್ನು ಸ್ವೀಕರಿಸಿದರು.
ಸಂಗೀತ ಕ್ಷೇತ್ರದ ಸಾಧನೆಗಾಗಿ ವಯಲಿನ್ ವಾದಕ ಎಲ್. ಸುಬ್ರಮಣ್ಯಂ ಪದ್ಮವಿಭೂಷಣ ಸ್ವೀಕರಿಸಿದರು. ಡಾ. ಶೋಭನಾ ಚಂದ್ರಕುಮಾರ್ ಅವರು ಜಾನಪದ ನೃತ್ಯ ಕಲೆಗಳಿಗೆ ನೀಡಿದ ಕೊಡುಗೆಗಾಗಿ ರಾಷ್ಟ್ರಪತಿ ದ್ರೌಪದಿ ಮುರ್ಮು ಅವರಿಂದ ಪದ್ಮಭೂಷಣ ಪ್ರಶಸ್ತಿಯನ್ನು ಪಡೆದರು. ಕುಮುದಿನಿ ರಜನಿಕಾಂತ್ ಲಖಿಯಾ ಅವರು ಕಲಾ ಕ್ಷೇತ್ರಕ್ಕೆ ನೀಡಿದ ಕೊಡುಗೆಗಾಗಿ ರಾಷ್ಟ್ರಪತಿ ಮುರ್ಮು ಅವರು ಮರಣೋತ್ತರವಾಗಿ ಪದ್ಮವಿಭೂಷಣ ಪ್ರಶಸ್ತಿಯನ್ನು ಪ್ರದಾನ ಮಾಡಿದರು. ಅವರ ಮೊಮ್ಮಗ ಅವರ ಪರವಾಗಿ ಪ್ರಶಸ್ತಿಯನ್ನು ಪಡೆದರು.
ಪ್ರಧಾನಿಯವರ ಆರ್ಥಿಕ ಸಲಹಾ ಮಂಡಳಿಯ ಅಧ್ಯಕ್ಷರಾಗಿ ಸೇವೆ ಸಲ್ಲಿಸಿದ ಅರ್ಥಶಾಸ್ತ್ರಜ್ಞ ಬಿಬೇಕ್ ದೇಬ್ರಾಯ್ ಅವರಿಗೆ ಸಾಹಿತ್ಯ ಮತ್ತು ಶಿಕ್ಷಣ ಕ್ಷೇತ್ರಕ್ಕೆ ನೀಡಿದ ಕೊಡುಗೆಗಾಗಿ ಮರಣೋತ್ತರವಾಗಿ ಪದ್ಮಭೂಷಣ ಪ್ರಶಸ್ತಿಯನ್ನು ನೀಡಲಾಗಿದೆ. ಅವರ ಪತ್ನಿ ಅವರ ಪರವಾಗಿ ಪ್ರಶಸ್ತಿಯನ್ನು ಪಡೆದರು.
ಇದನ್ನೂ ಓದಿ: Padma Award: ಹಿರಿಯ ನಟ ಅನಂತ್ ನಾಗ್ ಸೇರಿ 68 ಗಣ್ಯರಿಗೆ ಪದ್ಮ ಪ್ರಶಸ್ತಿ ಪ್ರದಾನ
ರಾಷ್ಟ್ರಪತಿ ಭವನದಲ್ಲಿ ನಡೆದ ಕಾರ್ಯಕ್ರಮದಲ್ಲಿ ಕನ್ನಡದ ಹಿರಿಯ ನಟ ಅನಂತ್ ನಾಗ್ ಅವರು ರಾಷ್ಟ್ರಪತಿ ದ್ರೌಪದಿ ಮುರ್ಮು ಅವರಿಂದ ಪದ್ಮಭೂಷಣ ಸ್ವೀಕರಿಸಿದರು.
— PIB in Karnataka (@PIBBengaluru) May 27, 2025
ಕಳೆದ 5 ದಶಕಗಳಲ್ಲಿ ಭಾರತೀಯ ಚಿತ್ರರಂಗಕ್ಕೆ ನೀಡಿದ ಬಹುಮುಖ ಪ್ರತಿಭೆ ಮತ್ತು ಕೊಡುಗೆಗೆ ಅನಂತ್ ನಾಗ್ ಹೆಸರುವಾಸಿಯಾಗಿದ್ದಾರೆ.#PeoplesPadma #PadmaAwards2025
1/2 pic.twitter.com/0xpE2gEbLX