ಫೋಟೋ ಗ್ಯಾಲರಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

PM Narendra Modi: ಇಂದು ಬೆಂಗಳೂರಿನಲ್ಲಿ ಮೋದಿ, ನಮ್ಮ ಮೆಟ್ರೋ ಹಳದಿ ಮಾರ್ಗಕ್ಕೆ ಚಾಲನೆ

ಕಾರ್ಯಕ್ರಮದ ವೇದಿಕೆಯಲ್ಲಿ ಪ್ರಧಾನಿ ಜೊತೆಗೆ 9 ಗಣ್ಯರಿಗೆ ಮಾತ್ರ ಅವಕಾಶ ಕಲ್ಪಿಸಲಾಗಿದೆ. ರಾಜ್ಯಪಾಲ ಥಾವರ್ ಚೆಂದ ಗೆಹ್ಲೊಟ್, ಮುಖ್ಯಮಂತ್ರಿ ಸಿದ್ದರಾಮಯ್ಯ, ಕೇಂದ್ರ ಸಚಿವರಾದ ಮನೋಹರ ಲಾಲ್ ಕಟ್ಟರ್, ಅಶ್ವಿನಿ ವೈಷ್ಣವ್, ಹೆಚ್‍ಡಿ ಕುಮಾರಸ್ವಾಮಿ, ವಿ. ಸೋಮಣ್ಣ, ಶೋಭಾ ಕರಂದ್ಲಾಜೆ, ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್, ಸಂಸದ ತೇಜಸ್ವಿ ಸೂರ್ಯ, ರಾಜ್ಯ ಬಿಜೆಪಿ ಅಧ್ಯಕ್ಷ ಬಿ.ವೈ ವಿಜಯೇಂದ್ರ ಗೆ ಮಾತ್ರ ವೇದಿಕೆಯಲ್ಲಿ ಅವಕಾಶ ಕಲ್ಪಿಸಲಾಗಿದೆ.

ಇಂದು ಬೆಂಗಳೂರಿನಲ್ಲಿ ಮೋದಿ, ನಮ್ಮ ಮೆಟ್ರೋ ಹಳದಿ ಮಾರ್ಗಕ್ಕೆ ಚಾಲನೆ

ಹರೀಶ್‌ ಕೇರ ಹರೀಶ್‌ ಕೇರ Aug 10, 2025 7:21 AM

ಬೆಂಗಳೂರು : ಇಂದು ಬೆಂಗಳೂರಿಗೆ ಪ್ರಧಾನ ಮಂತ್ರಿ ನರೇಂದ್ರ ಮೋದಿ (PM Narendra Modi) ಭೇಟಿ ನೀಡಲಿದ್ದಾರೆ. ಪ್ರಧಾನಿ ನರೇಂದ್ರ ಮೋದಿ ಅವರು ನಮ್ಮ ಮೆಟ್ರೋ ಹಳದಿ ಮಾರ್ಗವನ್ನು (Namma metro yellow line) ಉದ್ಘಾಟಿಸಲಿದ್ದಾರೆ. ಈ ಮಾರ್ಗವು ಆರ್‌.ವಿ. ರಸ್ತೆಯಿಂದ ಬೊಮ್ಮಸಂದ್ರದವರೆಗೆ 19.15 ಕಿ.ಮೀ ವರೆಗೆ ವಿಸ್ತರಿಸಿದೆ.

ಹಳದಿ ಮಾರ್ಗವು 16 ನಿಲ್ದಾಣಗಳನ್ನು ಹೊಂದಿದೆ. ಈ ಮಾರ್ಗದಲ್ಲಿ ರೈಲುಗಳು ಚಾಲಕ ರಹಿತವಾಗಿ ಸಂಚರಿಸಲಿವೆ. ಆರಂಭದಲ್ಲಿ ಹಳದಿ ಮಾರ್ಗದಲ್ಲಿ ಮೂರು ರೈಲುಗಳು ಸಂಚರಿಸಲಿವೆ. ಈ ಯೋಜನೆಯು ದಕ್ಷಿಣ ಬೆಂಗಳೂರನ್ನು ನಗರದ ಕೇಂದ್ರ ಭಾಗಕ್ಕೆ ಸಂಪರ್ಕಿಸುತ್ತದೆ. ಹಳದಿ ಮಾರ್ಗವನ್ನು ₹5,056.99 ಕೋಟಿ ವೆಚ್ಚದಲ್ಲಿ ನಿರ್ಮಿಸಲಾಗಿದೆ. ಆಗಸ್ಟ್ 15 ರ ಗಡುವಿನ ಮೊದಲು ಕಾರ್ಯಾಚರಣೆಯನ್ನು ಪ್ರಾರಂಭಿಸಲಿದೆ.

ಕಾರ್ಯಕ್ರಮದ ವೇದಿಕೆಯಲ್ಲಿ ಪ್ರಧಾನಿ ಜೊತೆಗೆ 9 ಗಣ್ಯರಿಗೆ ಮಾತ್ರ ಅವಕಾಶ ಕಲ್ಪಿಸಲಾಗಿದೆ. ರಾಜ್ಯಪಾಲ ಥಾವರ್ ಚೆಂದ ಗೆಹ್ಲೊಟ್, ಮುಖ್ಯಮಂತ್ರಿ ಸಿದ್ದರಾಮಯ್ಯ, ಕೇಂದ್ರ ಸಚಿವರಾದ ಮನೋಹರ ಲಾಲ್ ಕಟ್ಟರ್, ಅಶ್ವಿನಿ ವೈಷ್ಣವ್, ಹೆಚ್‍ಡಿ ಕುಮಾರಸ್ವಾಮಿ, ವಿ. ಸೋಮಣ್ಣ, ಶೋಭಾ ಕರಂದ್ಲಾಜೆ, ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್, ಸಂಸದ ತೇಜಸ್ವಿ ಸೂರ್ಯ, ರಾಜ್ಯ ಬಿಜೆಪಿ ಅಧ್ಯಕ್ಷ ಬಿ.ವೈ ವಿಜಯೇಂದ್ರ ಗೆ ಮಾತ್ರ ವೇದಿಕೆಯಲ್ಲಿ ಅವಕಾಶ ಕಲ್ಪಿಸಲಾಗಿದೆ.

ಈ ಮಾರ್ಗವು 19.15 ಕಿಲೋಮೀಟರ್ ಉದ್ದವಿದ್ದು, ಇದು ಕಾರ್ಯಾರಂಭ ಮಾಡಿದ ನಂತರ ಪ್ರತಿದಿನ ಸುಮಾರು 8 ಲಕ್ಷ ಪ್ರಯಾಣಿಕರಿಗೆ ಅನುಕೂಲವಾಗುವ ನಿರೀಕ್ಷೆಯಿದೆ. ಈ ಮಾರ್ಗದ ಉದ್ಘಾಟನೆಯು ಬೆಂಗಳೂರಿನ ಅತಿ ದೊಡ್ಡ ಸಂಚಾರ ದಟ್ಟಣೆಯ ಸಮಸ್ಯೆಗಳಲ್ಲಿ ಒಂದಾದ ಸಿಲ್ಕ್ ಬೋರ್ಡ್ ಜಂಕ್ಷನ್ ದಟ್ಟಣೆಗೆ ಬಹುಮಟ್ಟಿಗೆ ಪರಿಹಾರ ನೀಡಲಿದೆ ಎಂದು ನಿರೀಕ್ಷಿಸಲಾಗಿದೆ. ನಗರದ ಮೂಲಸೌಕರ್ಯಕ್ಕೆ ಆದ್ಯತೆ ನೀಡುತ್ತಿರುವ ಪ್ರಧಾನಿ ಮೋದಿಯವರಿಗೆ ಸಂಸದ ತೇಜಸ್ವಿ ಸೂರ್ಯ ಅವರು ಧನ್ಯವಾದ ತಿಳಿಸಿದ್ದಾರೆ.

ಈ ಮಾರ್ಗದಲ್ಲಿ ಸಂಚಾರ ಆರಂಭಿಸಲು ಮೆಟ್ರೋ ರೈಲು ಸುರಕ್ಷತಾ ಆಯೋಗ (CMRS) ಈಗಾಗಲೇ ಅನುಮತಿ ನೀಡಿದೆ. ದಕ್ಷಿಣ ವೃತ್ತದ ಆಯುಕ್ತ ಅನಂತ್ ಮಧುಕರ್ ಚೌಧರಿ ನೇತೃತ್ವದ ತಂಡವು ಜುಲೈ 22 ರಿಂದ 25ರ ವರೆಗೆ ಮಾರ್ಗದ ಸಂಪೂರ್ಣ ತಪಾಸಣೆ ಮತ್ತು ವಿವಿಧ ಪರೀಕ್ಷೆಗಳನ್ನು ನಡೆಸಿ, ಸುರಕ್ಷತೆಯ ಬಗ್ಗೆ ಖಚಿತಪಡಿಸಿಕೊಂಡಿದೆ. ಮಾರ್ಗದ ಕಾರ್ಯಾಚರಣೆಗಾಗಿ ಈಗಾಗಲೇ ಮೂರು ರೈಲುಗಳು ಬೆಂಗಳೂರನ್ನು ತಲುಪಿವೆ ಮತ್ತು ನಾಲ್ಕನೇ ರೈಲು ಉದ್ಘಾಟನಾ ದಿನಾಂಕದೊಳಗೆ ನಗರವನ್ನು ತಲುಪುವ ನಿರೀಕ್ಷೆಯಿದೆ.

ಇದನ್ನೂ ಓದಿ: Narendra Modi: ನಾಳೆ ಬೆಂಗಳೂರಿನ ಜನರೊಂದಿಗೆ ಇರಲು ಎದುರು ನೋಡುತ್ತಿದ್ದೇನೆ: ಕನ್ನಡದಲ್ಲೇ ಪ್ರಧಾನಿ ಮೋದಿ ಎಕ್ಸ್‌ ಪೋಸ್ಟ್‌!