PM Narendra Modi: ಉಡುಪಿ ಶ್ರೀಕೃಷ್ಣ ಸನ್ನಿಧಾನಕ್ಕೆ ಆಗಮಿಸಲಿರುವ ಪ್ರಧಾನಿ ನರೇಂದ್ರ ಮೋದಿ; ಯಾವಾಗ, ಇಲ್ಲಿದೆ ವಿವರ
Udupi Sri Krishna Math: ಪ್ರಧಾನಿ ನರೇಂದ್ರ ಮೋದಿ ಅವರು ಶ್ರೀಮಠದಲ್ಲಿ ಶ್ರೀಕೃಷ್ಣ ದೇವರ ದರ್ಶನದ ನಂತರ ಶ್ರೀಕೃಷ್ಣ ಮಠದಲ್ಲಿ ನಡೆಯಲಿರುವ ‘ಲಕ್ಷ ಕಂಠ ಗೀತಾ ಪಾರಾಯಣ – ಬೃಹತ್ ಗೀತೋತ್ಸವʼ ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದಾರೆ. ಪ್ರಧಾನಿ ಸ್ವಾಗತಕ್ಕೆ ಈಗಾಗಲೇ ಭರದ ಸಿದ್ಧತೆ ಹಾಗೂ ಭದ್ರತಾ ವ್ಯವಸ್ಥೆಗಳು ನಡೆಯುತ್ತಿವೆ.
ಉಡುಪಿಗೆ ನರೇಂದ್ರ ಮೋದಿ ಭೇಟಿಯ ಸಂಗ್ರಹ ಚಿತ್ರ -
ಹರೀಶ್ ಕೇರ
Oct 30, 2025 8:22 AM
ಉಡುಪಿ: ಕನಕದಾಸರಿಗೆ ಶ್ರೀಕೃಷ್ಣನೊಲಿದ (Udupi) ದಿವ್ಯ ತಾಣ, ಕರ್ನಾಟಕ ಕರಾವಳಿಯ ಉಡುಪಿ ಶ್ರೀ ಕೃಷ್ಣ ಮಠಕ್ಕೆ (Sri Krishna Math) ಪ್ರಧಾನಿ ನರೇಂದ್ರ ಮೋದಿ (PM Narendra Modi) ನವೆಂಬರ್ 28ರಂದು ಆಗಮಿಸಲಿದ್ದಾರೆ. ಮಧ್ಯಾಹ್ನ 12 ಗಂಟೆಗೆ ಶ್ರೀಕೃಷ್ಣ ಮಠ ಪ್ರವೇಶಿಸಿ, ಪೊಡವಿಯೊಡೆಯ ಶ್ರೀಕೃಷ್ಣನ ದರ್ಶನ ಮಾಡಿ ಆಶೀರ್ವಾದ ಪಡೆಯಲಿದ್ದಾರೆ. ಈ ನಿಟ್ಟಿನಲ್ಲಿ ಪ್ರಧಾನಿ ಸ್ವಾಗತಕ್ಕೆ ಈಗಾಗಲೇ ಭರದ ಸಿದ್ಧತೆ ನಡೆಸುತ್ತಿದ್ದು, ಶಿಸ್ತು ಬದ್ದ ಭದ್ರತೆಯ ತಯಾರಿಯನ್ನುಈಗಾಗಲೇ ಪೊಲೀಸ್ ವ್ಯವಸ್ಥೆ ನಡೆಸುತ್ತಿದೆ ಎನ್ನುವ ವಿಷಯ ತಿಳಿದು ಬಂದಿದೆ.
ಮೋದಿ ಅವರ ಈ ಭೇಟಿ ಉಡುಪಿಯಲ್ಲಿ ಭಾರೀ ಉತ್ಸಾಹ ಮತ್ತು ಸಿದ್ಧತೆಯ ವಾತಾವರಣವನ್ನು ನಿರ್ಮಿಸಿದೆ. ಉಡುಪಿ ಶ್ರೀಕೃಷ್ಣ ಮಠದ ಪೇಜಾವರ, ಪುತ್ತಿಗೆ, ಪಲಿಮಾರು ಸೇರಿ ಎಲ್ಲಾ ಅಷ್ಟಮಠಗಳ ಯತಿಗಳು ಪ್ರಧಾನಿ ಆಗಮನದ ಹಿನ್ನೆಲೆಯಲ್ಲಿ ವಿಶೇಷ ಪೂಜೆ ಮತ್ತು ಸ್ವಾಗತ ಸಿದ್ಧತೆಯನ್ನು ನಡೆಸಿಕೊಂಡಿದ್ದರ ಕುರಿತು ಮಾಧ್ಯಮಗಳಲ್ಲಿ ಹಂಚಿಕೊಂಡಿದ್ದಾರೆ.
ಬೃಹತ್ ಗೀತೋತ್ಸವ
ಪ್ರಧಾನಿ ನರೇಂದ್ರ ಮೋದಿ ಅವರು ಶ್ರೀಮಠದಲ್ಲಿ ಶ್ರೀಕೃಷ್ಣ ದೇವರ ದರ್ಶನದ ನಂತರ ಶ್ರೀಕೃಷ್ಣ ಮಠದಲ್ಲಿ ನಡೆಯಲಿರುವ ‘ಲಕ್ಷ ಕಂಠ ಗೀತಾ ಪಾರಾಯಣ – ಬೃಹತ್ ಗೀತೋತ್ಸವʼ ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದಾರೆ. ಈ ಅಪೂರ್ವ ಧಾರ್ಮಿಕ ಉತ್ಸವದಲ್ಲಿ ಸಾವಿರಾರು ಭಕ್ತರು ಒಂದೇ ಸಮಯದಲ್ಲಿ ಶ್ರೀಮದ್ ಭಗವದ್ಗೀತೆಯ ಶ್ಲೋಕಗಳನ್ನು ಪಠಿಸುವ ಮೂಲಕ ಆತ್ಮಶುದ್ಧಿ ಮತ್ತು ವಿಶ್ವಶಾಂತಿಯ ಸಂದೇಶ ನೀಡಲಿದ್ದಾರೆಂದು ಉಡುಪಿ ಕೃಷ್ಣನ ಭಕ್ತ ಮಂಡಳಿ ಪತ್ರಿಕಾಗೋಷ್ಠಿಗಳಲ್ಲಿ ಮಾಹಿತಿ ನೀಡಿದ್ದಾರೆ.
ಇದನ್ನೂ ಓದಿ: Modi-Putin: ತೈಲ ಒಪ್ಪಂದದ ಮಾತುಕತೆ; ಒಂದೇ ಕಾರಿನಲ್ಲಿ ಪ್ರಯಾಣಿಸಿದ ಮೋದಿ-ಪುಟಿನ್
ಶ್ರೀಕೃಷ್ಣ ಮಠದ ಪರಂಪರೆಯ ಪ್ರಕಾರ, ಗೀತಾ ಪಾರಾಯಣವು ಭಕ್ತಿ ಮತ್ತು ಧ್ಯಾನದ ಸಮ್ಮಿಶ್ರಣವಾಗಿದ್ದು, ಮೋದಿಯವರ ಉಪಸ್ಥಿತಿ ಈ ಕಾರ್ಯಕ್ರಮಕ್ಕೆ ರಾಷ್ಟ್ರೀಯ ಪ್ರಾಮುಖ್ಯತೆ ನೀಡಲಿದೆ. ಪ್ರಧಾನಿ ಅವರ ಭೇಟಿಗೆ ಭದ್ರತಾ ವ್ಯವಸ್ಥೆ ಕಟ್ಟು ನಿಟ್ಟಾಗಿದ್ದು, ಉಡುಪಿ ಪೊಲೀಸ್ ಇಲಾಖೆಯು SP, DSP ಮಟ್ಟದ ಅಧಿಕಾರಿಗಳ ನೇತೃತ್ವದಲ್ಲಿ ನಗರಮಟ್ಟದ ಭದ್ರತಾ ಯೋಜನೆ ರೂಪಿಸಿದೆ.
ಮಠದ ಆವರಣದಲ್ಲಿ ಭಕ್ತರ ಸುರಕ್ಷತೆಗಾಗಿ ವಿಶೇಷ ಪಾಸ್ ವ್ಯವಸ್ಥೆ ಜಾರಿಗೆ ತಂದಿದ್ದು, ಮಠ ಪ್ರವೇಶದ ಮಾರ್ಗಗಳಲ್ಲಿ ನಿಗದಿತ ನಿಯಮಗಳನ್ನು ಪಾಲಿಸಬೇಕೆಂದು ಆಡಳಿತ ಪ್ರಕಟಣೆ ಹೊರಡಿಸಿದೆ.