Pralhad Joshi: ರಾಜ್ಯ ಶೇಂಗಾ ಬೆಳೆಗಾರರಿಗೆ ಕೇಂದ್ರ ಸರ್ಕಾರ ಸಿಹಿ ಸುದ್ದಿ- ಬೆಂಬಲ ಬೆಲೆಯಲ್ಲಿ ಖರೀದಿ ಅವಧಿ ವಿಸ್ತರಣೆ
Pralhad Joshi: ಕೇಂದ್ರ ಸರ್ಕಾರ ಬೆಂಬಲ ಬೆಲೆಯಲ್ಲಿ ಶೇಂಗಾ ಖರೀದಿ ಪ್ರಕ್ರಿಯೆಯನ್ನು ಫೆಬ್ರವರಿ 15ರವರೆಗೆ ವಿಸ್ತರಿಸಿ ಆದೇಶ ಹೊರಡಿಸಿದೆ. ಕೇಂದ್ರ ಸರ್ಕಾರ ರಾಜ್ಯದಿಂದ ಈ ಬಾರಿ ಒಟ್ಟು 57703 ಮೆಟ್ರಿಕ್ ಟನ್ ಶೇಂಗಾವನ್ನು ಬೆಂಬಲ ಬೆಲೆಯಲ್ಲಿ ಖರೀದಿಸಲಿದೆ ಎಂದು ಕೇಂದ್ರ ಸಚಿವ ಪ್ರಲ್ಹಾದ್ ಜೋಶಿ ತಿಳಿಸಿದ್ದಾರೆ.
![ಬೆಂಬಲ ಬೆಲೆಯಲ್ಲಿ ಶೇಂಗಾ ಖರೀದಿ ಅವಧಿ ವಿಸ್ತರಣೆ](https://cdn-vishwavani-prod.hindverse.com/media/original_images/Pralhad_Joshi.jpg)
ಕೇಂದ್ರ ಸಚಿವ ಪ್ರಲ್ಹಾದ್ ಜೋಶಿ
![Profile](https://vishwavani.news/static/img/user.png)
ನವದೆಹಲಿ: ಕೇಂದ್ರ ಸರ್ಕಾರ (Central Government) ರಾಜ್ಯದ ಶೇಂಗಾ ಬೆಳೆಗಾರರಿಗೆ ಸಿಹಿ ಸುದ್ದಿ ನೀಡಿದೆ. ಬೆಂಬಲ ಬೆಲೆಯಲ್ಲಿ ಶೇಂಗಾ ಖರೀದಿ ಅವಧಿ ವಿಸ್ತರಿಸಿ ಆದೇಶಿಸಿದೆ. ರಾಜ್ಯದಲ್ಲಿ ಈ ಬಾರಿ ಅಧಿಕ ಪ್ರಮಾಣದಲ್ಲಿ ಶೇಂಗಾ (ನೆಲಗಡಲೆ) (Groundnut) ಬೆಳೆದ ಹಿನ್ನೆಲೆಯಲ್ಲಿ ಬೆಂಬಲ ಬೆಲೆ ಘೋಷಿಸಿ ರೈತರಿಗೆ ನೆರವಾಗಿದ್ದ ಕೇಂದ್ರ ಸರ್ಕಾರ, ಈಗ ಮತ್ತೆ ಖರೀದಿ ಅವಧಿಯನ್ನು ಮತ್ತಷ್ಟು ಕಾಲ ಮುಂದುವರಿಸಿ ಸಂಕಷ್ಟದಲ್ಲಿದ್ದ ಶೇಂಗಾದಾತರ ಕೈ ಹಿಡಿದಿದೆ. ರಾಜ್ಯದಲ್ಲಿ 2024-25ರ ರಾಬಿ ಋತುವಿನಲ್ಲಿ (ಹಿಂಗಾರು ಬೆಳೆ) ಬೆಳೆದ ಶೇಂಗಾವನ್ನು ಬೆಂಬಲ ಬೆಲೆ ಯೋಜನೆಯಡಿ 90 ದಿನಗಳ ಕಾಲ ಖರೀದಿಸುವಂತೆ ಕೇಂದ್ರ ಕೃಷಿ ಸಚಿವಾಲಯ ರಾಜ್ಯ ಸರ್ಕಾರಕ್ಕೆ ಅನುಮತಿ ನೀಡಿತ್ತು.
ಅವಧಿ ಹೆಚ್ಚಿಸಲು ಗಮನ ಸೆಳೆದಿದ್ದರು ಸಚಿವ ಜೋಶಿ
ಆದರೆ, ಹೆಚ್ಚಿನ ಪ್ರಮಾಣದಲ್ಲಿ ಬೆಳೆ ಇದ್ದುದರಿಂದ, ರೈತರ ಹಿತದೃಷ್ಟಿಯಿಂದ ಬೆಂಬಲ ಬೆಲೆ ಖರೀದಿಯ ಕಾಲಮಿತಿ ಹೆಚ್ಚಿಸುವಂತೆ ಧಾರವಾಡದ ಸಂಸದರೂ ಆಗಿರುವ ಕೇಂದ್ರ ಆಹಾರ ಮತ್ತು ನಾಗರಿಕ ಸರಬರಾಜು ಸಚಿವ ಪ್ರಲ್ಹಾದ್ ಜೋಶಿ (Pralhad Joshi) ಅವರು ಕೇಂದ್ರ ಕೃಷಿ ಸಚಿವರಲ್ಲಿ ಮನವಿ ಮಾಡಿದ್ದರು. ಅಲ್ಲದೇ, ಇತ್ತೀಚೆಗೆ ರಾಜ್ಯ ಸರ್ಕಾರ ಕೇಂದ್ರಕ್ಕೆ ಪ್ರಸ್ತಾವನೆ ಸಲ್ಲಿಸಿತ್ತು.
ಸಚಿವರ ಮನವಿಗೆ ಸ್ಪಂದಿಸಿ ಕ್ರಮ
ಕೇಂದ್ರ ಆಹಾರ ಸಚಿವ ಪ್ರಲ್ಹಾದ್ ಜೋಶಿ ಅವರ ಮನವಿ ಮೇರೆಗೆ ಕೇಂದ್ರ ಸರ್ಕಾರ ಬೆಂಬಲ ಬೆಲೆಯಲ್ಲಿ ಶೇಂಗಾ ಖರೀದಿ ಪ್ರಕ್ರಿಯೆಯನ್ನು ಫೆಬ್ರವರಿ 15ರವರೆಗೆ ವಿಸ್ತರಿಸಿ ಆದೇಶ ಹೊರಡಿಸಿದೆ.
57703 ಮೆಟ್ರಿಕ್ ಟನ್ ಖರೀದಿಗೆ ಸೂಚನೆ: ಕೇಂದ್ರ ಸರ್ಕಾರ ರಾಜ್ಯದಿಂದ ಈ ಬಾರಿ ಒಟ್ಟು 57703 ಮೆಟ್ರಿಕ್ ಟನ್ ಶೇಂಗಾವನ್ನು ಬೆಂಬಲ ಬೆಲೆಯಲ್ಲಿ ಖರೀದಿಸಲಿದೆ ಎಂದು ಅವರು ತಿಳಿಸಿದ್ದಾರೆ. ಮೊದಲಿಗೆ 36,974 ಮೆಟ್ರಿಕ್ ಟನ್ ಶೇಂಗಾ ಖರೀದಿಗೆ ರಾಜ್ಯಕ್ಕೆ ಸೂಚಿಸಲಾಗಿತ್ತು. ಈಗ ಅವಧಿ ವಿಸ್ತರಣೆ ಜತೆಗೆ ಮತ್ತೆ 20,730 ಮೆಟ್ರಿಕ್ ಟನ್ ಶೇಂಗಾವನ್ನು ಹೆಚ್ಚುವರಿಯಾಗಿ ಖರೀದಿಸುವಂತೆ ರಾಜ್ಯ ಸರ್ಕಾರಕ್ಕೆ ನಿರ್ದೇಶನ ನೀಡಲಾಗಿದೆ ಎಂದು ಸಚಿವರು ಮಾಹಿತಿ ನೀಡಿದ್ದಾರೆ.
ಈ ಸುದ್ದಿಯನ್ನೂ ಓದಿ | Vande Bharat Train: ಬೆಂಗಳೂರು- ಬೆಳಗಾವಿ ವಂದೇ ಭಾರತ್ ರೈಲು ಸಂಚಾರ ಶೀಘ್ರ ಆರಂಭ
ರಾಜ್ಯದಲ್ಲಿ ಶೇಂಗಾ ಬೆಳೆದ ರೈತರ ಪರಿಸ್ಥಿತಿ ಅರಿತು ಪ್ರಧಾನಮಂತ್ರಿ ನರೇಂದ್ರ ಮೋದಿ ಮತ್ತು ಕೃಷಿ ಸಚಿವ ಶಿವರಾಜಸಿಂಗ್ ಚವ್ಹಾಣ ಅವರು ಸ್ಪಂದಿಸಿದ್ದು, ಸಮಸ್ತ ರೈತರ ಪರವಾಗಿ ಕೃತಜ್ಞತೆ ಸಲ್ಲಿಸುವುದಾಗಿ ಕೇಂದ್ರ ಸಚಿವ ಪ್ರಲ್ಹಾದ್ ಜೋಶಿ ತಿಳಿಸಿದ್ದಾರೆ.