ದೆಹಲಿ: ಹಿರಿಯ ಸಾಹಿತಿ ಎಸ್.ಎಲ್. ಭೈರಪ್ಪ (SL Bhyrappa) ಇಹಲೋಕ ತ್ಯಜಿಸಿದ್ದು, ಕನ್ನಡ ಸಾರಸ್ವತ ಲೋಕ ಬಡವಾಗಿದೆ. ಸೆಪ್ಟೆಂಬರ್ 24ರಂದು ಅವರು ಬೆಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದಾರೆ. ತಮ್ಮ ಕಾದಂಬರಿ ಮೂಲಕ ಕನ್ನಡದ ಕೀರ್ತಿಯನ್ನು ರಾಷ್ಟ್ರ, ಅಂತಾರಾಷ್ಟ್ರೀಯ ಮಟ್ಟಕ್ಕೆ ಕೊಂಡೊಯ್ದ ಹೆಗ್ಗಳಿಕೆ ಅವರಿಗೆ ಸಲ್ಲುತ್ತದೆ. ಅವರ ನಿಧನಕ್ಕೆ ಪ್ರಧಾನಿ ನರೇಂದ್ರ ಮೋದಿ (Narendra Modi), ರಾಷ್ಟ್ರಪತಿ ದ್ರೌಪದಿ ಮುರ್ಮು (Droupadi Murmu) ಸೇರಿ ಅನೇಕರು ಕಂಬನಿ ಮಿಡಿದಿದ್ದಾರೆ. ಎಸ್.ಎಸ್. ಭೈರಪ್ಪ ಯುವ ತಲೆಮಾರಿಗೆ ಸ್ಫೂರ್ತಿ ಎಂದು ದ್ರೌಪದಿ ಮುರ್ಮು ಬಣ್ಣಿಸಿದ್ದಾರೆ.
ʼʼಕನ್ನಡ ಸಾಹಿತ್ಯದ ಅತ್ಯುನ್ನತ ವ್ಯಕ್ತಿ ಮತ್ತು ಪದ್ಮ ಭೂಷಣ ಪ್ರಶಸ್ತಿ ಪುರಸ್ಕೃತ ಡಾ. ಎಸ್.ಎಲ್. ಭೈರಪ್ಪ ಅವರ ನಿಧನದಿಂದ ತೀವ್ರ ದುಃಖವಾಗಿದೆ. ಅವರು ಸಾಹಿತ್ಯ ಮಾತ್ರವಲ್ಲದೆ ತತ್ವಶಾಸ್ತ್ರ, ಸಂಸ್ಕೃತಿ ಮತ್ತು ಬೌದ್ಧಿಕ ವಿಚಾರಣಾ ಕ್ಷೇತ್ರಗಳಿಗೆ ಗಮನಾರ್ಹ ಕೊಡುಗೆ ನೀಡಿದ್ದಾರೆ. ಅವರು ತಮ್ಮ ಕೃತಿಗಳ ಮೂಲಕ ಕನ್ನಡ ಸಾಹಿತ್ಯವನ್ನು ರಾಷ್ಟ್ರೀಯ ಮತ್ತು ಜಾಗತಿಕ ಮಟ್ಟಕ್ಕೆ ಕೊಂಡೊಯ್ದಿದ್ದಾರೆ. ಅವರ ಕೃತಿ, ಅವರ ಜೀವನ ಭವಿಷ್ಯದ ಪೀಳಿಗೆಗೆ ಸ್ಫೂರ್ತಿ ನೀಡುತ್ತಲೇ ಇರುತ್ತದೆ. ಭೈರಪ್ಪ ಅವರ ನಿಧನಕ್ಕೆ ಸಂತಾಪಗಳನ್ನು ವ್ಯಕ್ತಪಡಿಸುತ್ತೇನೆʼʼ ಎಂದು ದ್ರೌಪದಿ ಮುರ್ಮು ತಮ್ಮ ಎಕ್ಸ್ ಖಾತೆಯಲ್ಲಿ ಬರೆದುಕೊಂಡಿದ್ದಾರೆ.
ಈ ಸುದ್ದಿಯನ್ನೂ ಓದಿ: Sl Bhairappa: ಹುಟ್ಟೂರಿನ ಜನರ ಬವಣೆಗೆ ಮರುಗಿ ನೀರು ತರಿಸಿದ ಭೈರಪ್ಪ
ಇನ್ನು ಕೇಂದ್ರ ಗೃಹ ಸಚಿವ ಅಮಿತ್ ಶಾ ಕೂಡ ಸಂತಾಪ ಸೂಚಿಸಿದ್ದಾರೆ. ʼʼಕನ್ನಡದ ಪ್ರಸಿದ್ಧ ಕಾದಂಬರಿಕಾರ ಎಸ್.ಎಲ್. ಭೈರಪ್ಪ ಅವರ ನಿಧನದ ಸುದ್ದಿ ಅತ್ಯಂತ ದುಃಖ ತಂದಿದೆ. 6 ದಶಕಗಳ ಕಾಲ ಭೈರಪ್ಪನವರು ಭಾರತೀಯ ದಾರ್ಶನಿಕ ಪರಂಪರೆಯ ಜ್ಞಾನ ಮತ್ತು ಸಾಮಾಜಿಕ ವಿಚಾರಗಳ ಆಳವಾದ ಒಳನೋಟಗಳಿಂದ ನಮ್ಮ ಸಾಹಿತ್ಯವನ್ನು ಸಮೃದ್ಧಗೊಳಿಸಿದ್ದರು. 2023ರಲ್ಲಿ ನರೇಂದ್ರ ಮೋದಿ ಸರ್ಕಾರವು ಅವರಿಗೆ ಪದ್ಮ ಭೂಷಣ ಪ್ರಶಸ್ತಿ ನೀಡಿ ಗೌರವಿಸಿದೆ. ಅವರ ಅಗಲಿಕೆ ಸಮಾಜಕ್ಕೆ ತುಂಬಲಾರದ ನಷ್ಟʼʼ ಎಂದು ಕನ್ನಡದಲ್ಲೇ ಬರೆದುಕೊಂಡಿದ್ದಾರೆ.
ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಸಾಹಿತ್ಯ ಲೋಕಕ್ಕೆ ಭೈರಪ್ಪ ನೀಡಿದ ಕೊಡುಗೆಗಳನ್ನು ಸ್ಮರಿಸಿಕೊಂಡಿದ್ದಾರೆ. ʼʼಕನ್ನಡದ ಖ್ಯಾತ ಬರಹಗಾರರು ಹಾಗೂ ಕಾದಂಬರಿಕಾರ ಎಸ್.ಎಲ್. ಭೈರಪ್ಪ ಅವರ ನಿಧನದ ಸುದ್ದಿ ತಿಳಿದು ದುಃಖವಾಯಿತು. ವೈವಿಧ್ಯ ವಿಷಯಗಳನ್ನು ಒಳಗೊಂಡ ಅವರ ಕೃತಿಗಳಿಗೆ ಕರ್ನಾಟಕದಲ್ಲಿ ಅಪಾರ ಅಭಿಮಾನಿಗಳಿದ್ದಾರೆ. ಜತೆಗೆ ಕೃತಿಗಳು ಹಲವು ಭಾಷೆಗಳಿಗೆ ಅನುವಾದಗೊಂಡಿದೆ. ಸಾಹಿತ್ಯ ಮತ್ತು ಶಿಕ್ಷಣ ಕ್ಷೇತ್ರಕ್ಕೆ ನೀಡಿದ ಕೊಡುಗೆಗಾಗಿ ಭೈರಪ್ಪ ಅವರಿಗೆ 2015ರಲ್ಲಿ ಸಾಹಿತ್ಯ ಅಕಾಡೆಮಿ ಫೆಲೋಶಿಪ್ ಮತ್ತು 2023ರಲ್ಲಿ ಪದ್ಮಭೂಷಣ ಪ್ರಶಸ್ತಿಯನ್ನು ನೀಡಲಾಗಿದೆʼʼ ಎಂದು ಹೇಳಿದ್ದಾರೆ.
ಪ್ರಧಾನಿ ನರೇಂದರ ಮೋದಿ ಇದಕ್ಕೂ ಮೊದಲು ಭೈರಪ್ಪ ಜತೆಗಿನ ತಮ್ಮ ಫೋಟೊ ಪೋಸ್ಟ್ ಮಾಡಿ ದುಃಖ ವ್ಯಕ್ತಪಡಿಸಿದ್ದರು. ʼʼಸಾಹಿತ್ಯ ಕ್ಷೇತ್ರದ ಧೀಮಂತ ವ್ಯಕ್ತಿಯೊಬ್ಬ ಇಂದು ನಮ್ಮನ್ನು ಅಗಲಿದ್ದಾರೆ. ನಿರ್ಭೀತ ಮತ್ತು ಕಾಲಾತೀತ ಚಿಂತಕರಾಗಿದ್ದ ಅವರು ತಮ್ಮ ಚಿಂತನಶೀಲ ಕೃತಿಗಳಿಂದ ಕನ್ನಡ ಸಾಹಿತ್ಯವನ್ನು ಆಳವಾಗಿ ಶ್ರೀಮಂತಗೊಳಿಸಿದ್ದಾರೆ. ನಮ್ಮ ಇತಿಹಾಸ ಮತ್ತು ಸಂಸ್ಕೃತಿಯ ಬಗ್ಗೆ ಅವರ ಅಚಲವಾದ ಉತ್ಸಾಹವು ಮುಂಬರುವ ವರ್ಷಗಳಲ್ಲಿ ಯುವ ಪೀಳಿಗೆಗೆ ಮಾದರಿಯಾಗಲಿದೆ. ಸಾಹಿತ್ಯ ಕ್ಷೇತ್ರದಲ್ಲಿ ಧೀಮಂತ ವ್ಯಕ್ತಿಯನ್ನು ನಾವು ಕಳೆದುಕೊಂಡಿದ್ದೇವೆ. ಅವರ ಆತ್ಮಕ್ಕೆ ಶಾಂತಿ ಸಿಗಲಿʼʼ ಎಂದು ಮೋದಿ ಎಕ್ಸ್ ಮೂಲಕ ತಿಳಿಸಿದ್ದರು.