ಮಂಗಳೂರು: ಸೌಜನ್ಯ ಪರ ಹೋರಾಟಗಾರ ಮಹೇಶ್ ಶೆಟ್ಟಿ ತಿಮರೋಡಿ (Mahesh Shetty Timarodi) ವಿರುದ್ಧ ಮೂರನೇ ಬಾರಿಗೆ ಗಡಿಪಾರು(Exile) ಆದೇಶವನ್ನು ಪುತ್ತೂರು ಉಪವಿಭಾಗದ ಸಹಾಯಕ ಆಯುಕ್ತರು (AC) ಹೊರಡಿಸಿದ್ದಾರೆ. ಸಾರ್ವಜನಿಕ ಶಾಂತಿ ಮತ್ತು ಕಾನೂನು ಸುವ್ಯವಸ್ಥೆಯನ್ನು ಕಾಪಾಡುವ ದೃಷ್ಟಿಯಿಂದ ಈ ಕಠಿಣ ನಿರ್ಧಾರವನ್ನು ಕೈಗೊಳ್ಳಲಾಗಿದೆ ಎಂದು ಹೇಳಲಾಗಿದೆ.
ಪುತ್ತೂರು ಸಹಾಯಕ ಆಯುಕ್ತೆ ಸ್ಟೆಲ್ಲಾ ವರ್ಗೀಸ್ ಅವರು ಈ ಮಹತ್ವದ ಆದೇಶವನ್ನು ಜಾರಿಗೊಳಿಸಿದ್ದಾರೆ. ಈ ಆದೇಶದ ಪ್ರಕಾರ, ಮಹೇಶ್ ಶೆಟ್ಟಿ ತಿಮರೋಡಿ ಅವರು 2026ರ ಮಾರ್ಚ್ 16 ರಿಂದ ಸೆಪ್ಟೆಂಬರ್ 19 ರವರೆಗೆ ದಕ್ಷಿಣ ಕನ್ನಡ ಜಿಲ್ಲೆಯ ಗಡಿಯೊಳಗೆ ಪ್ರವೇಶಿಸುವಂತಿಲ್ಲ. ಈ ಆರು ತಿಂಗಳ ಅವಧಿಯಲ್ಲಿ ಅವರು ರಾಯಚೂರು ಜಿಲ್ಲೆಯ ಮಾನ್ವಿಯಲ್ಲಿ ನೆಲೆಸಬೇಕೆಂದು ಆದೇಶದಲ್ಲಿ ಕಟ್ಟುನಿಟ್ಟಾಗಿ ಸೂಚಿಸಲಾಗಿದೆ. ವಿವಿಧ ಪೊಲೀಸ್ ಠಾಣೆಗಳಲ್ಲಿ ದಾಖಲಾಗಿರುವ ಕ್ರಿಮಿನಲ್ ಪ್ರಕರಣಗಳು ಹಾಗೂ ಸಾರ್ವಜನಿಕ ಶಾಂತಿಗೆ ಭಂಗ ತರುವ ಸಾಧ್ಯತೆಗಳ ಹಿನ್ನೆಲೆಯಲ್ಲಿ ಈ ಕ್ರಮ ಜರುಗಿಸಲಾಗಿದೆ.
ಹೈಕೋರ್ಟ್ ನಿರ್ದೇಶನ ಮತ್ತು ಮರುಪರಿಶೀಲನೆ:
ಈ ಹಿಂದೆ ಹೊರಡಿಸಲಾಗಿದ್ದ ಗಡಿಪಾರು ಆದೇಶವನ್ನು ಪ್ರಶ್ನಿಸಿ ತಿಮರೋಡಿ ಅವರು ಕರ್ನಾಟಕ ಉಚ್ಚ ನ್ಯಾಯಾಲಯದ ಮೊರೆ ಹೋಗಿದ್ದರು. ಅರ್ಜಿಯ ವಿಚಾರಣೆ ನಡೆಸಿದ್ದ ನ್ಯಾಯಮೂರ್ತಿ ನಾಗಪ್ರಸನ್ನ ನೇತೃತ್ವದ ಏಕಸದಸ್ಯ ಪೀಠವು, ಈ ಹಿಂದಿನ ಆದೇಶವನ್ನು ಮರುಪರಿಶೀಲಿಸುವಂತೆ ಪುತ್ತೂರು ಎಸಿಗೆ ಸೂಚಿಸಿತ್ತು. ಪ್ರತಿವಾದಿಗಳ ಆಕ್ಷೇಪಣೆಗಳನ್ನು ಆಲಿಸಿ, ಕಾನೂನುಬದ್ಧ ಪ್ರಕ್ರಿಯೆಗಳನ್ನು ಪಾಲಿಸಿ ಹೊಸ ಆದೇಶ ಹೊರಡಿಸಲು ಮೂರು ವಾರಗಳ ಕಾಲಾವಕಾಶ ನೀಡಿತ್ತು. ಹೈಕೋರ್ಟ್ ನೀಡಿದ್ದ ಈ ಗಡುವಿನ ಅನ್ವಯ, ಪುತ್ತೂರು ಸಹಾಯಕ ಆಯುಕ್ತರು ಎಲ್ಲಾ ಆಯಾಮಗಳನ್ನು ಕೂಲಂಕಷವಾಗಿ ಪರಿಶೀಲಿಸಿ ಈಗ ಮೂರನೇ ಬಾರಿ ಈ ಆದೇಶವನ್ನು ಹೊರಡಿಸಿದ್ದಾರೆ.
ಹೈಕೋರ್ಟ್ ಸೂಚನೆಯನ್ನು ಪಾಲಿಸಿ, ನಿಯಮಬದ್ಧವಾಗಿಯೇ ಈ ಬಾರಿ ಆದೇಶ ನೀಡಲಾಗಿರುವುದರಿಂದ ಇದು ತಿಮರೋಡಿ ಅವರಿಗೆ ಕಾನೂನು ಹೋರಾಟದಲ್ಲಿ ದೊಡ್ಡ ಹಿನ್ನಡೆಯಾಗಿದೆ. ಸಾರ್ವಜನಿಕ ಶಾಂತಿಗೆ ಧಕ್ಕೆಯುಂಟು ಮಾಡುವ ಪ್ರಚೋದನಕಾರಿ ಭಾಷಣಗಳು, ಕಾನೂನು ಸುವ್ಯವಸ್ಥೆಗೆ ಭಂಗ ಉಂಟುಮಾಡುವ ಚಟುವಟಿಕೆಗಳು ಹಾಗೂ ವಿವಿಧ ಪೊಲೀಸ್ ಠಾಣೆಗಳಲ್ಲಿ ದಾಖಲಾಗಿರುವ ಕ್ರಿಮಿನಲ್ ಪ್ರಕರಣಗಳ ಹಿನ್ನೆಲೆ ಮಹೇಶ್ ಶೆಟ್ಟಿ ತಿಮರೋಡಿ ವಿರುದ್ಧ ಗಡಿಪಾರು ಕ್ರಮ ಕೈಗೊಳ್ಳಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ತಿಮರೋಡಿ ಮೇಲ್ಮನವಿ ಅರ್ಜಿ ವಜಾ
ಮಹೇಶ್ ಶೆಟ್ಟಿ ತಿಮರೋಡಿ ಗಡಿಪಾರು ಆದೇಶ ಪ್ರಶ್ನಿಸಿ ಹೈಕೋರ್ಟಿಗೆ ಮೇಲ್ಮನವಿ ಅರ್ಜಿ ಸಲ್ಲಿಸಿದ್ದರು. ಆದರೆ, ಈ ಮೇಲ್ಮನವಿಯನ್ನು ಹೈಕೋರ್ಟ್ ವಿಭಾಗಿಯ ಪೀಠ ಮಂಗಳವಾರ ವಜಾಗೊಳಿಸಿದೆ. ಈ ಮೊದಲು ಗಡಿಪಾರು ಸಂಬಂಧ ಅಕ್ಷೇಪಣೆ ಪರಿಗಣನೆಗೆ ಏಕ ಸದಸ್ಯ ಪೀಠ ಸೂಚಿಸಿತ್ತು. 3 ವಾರಗಳಲ್ಲಿ ಆಕ್ಷೇಪಣೆ ಪರಿಗಣಿಸಿ ಆದೇಶ ನೀಡಲು ಸೂಚಿಸಿತ್ತು. ಈ ಆದೇಶ ಪ್ರಶ್ನಿಸಿ ಮಹೇಶ ಶೆಟ್ಟಿ ತಿಮರೋಡಿ ಮೇಲ್ಮನವಿ ಅರ್ಜಿ ಸಲ್ಲಿಸಿದ್ದರು. ಆದರೆ, ಏಕ ಸದಸ್ಯ ಪೀಠದ ಆದೇಶ ಎತ್ತಿ ಹಿಡಿದು, ಮೇಲ್ಮನವಿ ಅರ್ಜಿಯನ್ನು ಹೈಕೋರ್ಟ್ ವಿಭಾಗಿಯ ಪೀಠ ವಜಾಗೊಳಿಸಿದೆ.