ರಾಯಚೂರು: ಕಾಂಗ್ರೆಸ್ ಸರ್ಕಾರದ ವೈಫಲ್ಯಗಳನ್ನು ಖಂಡಿಸಿ ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ (B.Y Vijayendra) ನೇತೃತ್ವದಲ್ಲಿ ನಡೆಯಲಿರುವ ಬಳ್ಳಾರಿ ಚಲೋʼ (Ballari Chalo) ಪಾದಯಾತ್ರೆಗೆ ಇಂದು ರಾಯಚೂರು ಜಿಲ್ಲೆಯ ಲಿಂಗಸುಗೂರಿನಲ್ಲಿ ಚಾಲನೆ ಸಿಗಲಿದೆ. ಲಿಂಗಸುಗೂರಿನ ಬೆಂಗಳೂರು ಬೈಪಾಸ್ ರಸ್ತೆಯಲ್ಲಿ ಬೆಳಗ್ಗೆ 10:30ಕ್ಕೆ ಬಹಿರಂಗ ಸಮಾವೇಶ ನಡೆಯಲಿದ್ದು, ಮಧ್ಯಾಹ್ನ 1 ಗಂಟೆಗೆ ಪಾದಯಾತ್ರೆ ಆರಂಭವಾಗಲಿದೆ.
ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ, ಕೇಂದ್ರ ಸಚಿವ ಪ್ರಲ್ಹಾದ ಜೋಶಿ , ವಿಧಾನಸಭೆ ಪ್ರತಿಪಕ್ಷ ನಾಯಕ ಆರ್.ಅಶೋಕ್ , ಪರಿಷತ್ ಪ್ರತಿಪಕ್ಷ ನಾಯಕ ಛಲವಾದಿ ನಾರಾಯಣಸ್ವಾಮಿ , ಮಾಜಿ ಸಿಎಂಗಳಾದ ಬಿ.ಎಸ್.ಯಡಿಯೂರಪ್ಪ, ಜಗದೀಶ್ ಶೆಟ್ಟರ್, ಬಸವರಾಜ ಬೊಮ್ಮಾಯಿ, ರಾಜ್ಯ ಸಹ ಉಸ್ತುವಾರಿ ಪಿ.ಸುಧಾಕರ್ ರೆಡ್ಡಿ, ಮಾಜಿ ಡಿಸಿಎಂ ಗೋವಿಂದ ಕಾರಜೋಳ, ಮಾಜಿ ಸಚಿವರಾದ ಬಿ.ಶ್ರೀರಾಮುಲು, ಜಿ.ಜನಾರ್ದನ ರೆಡ್ಡಿ, ರಾಜುಗೌಡ ನಾಯಕ್, ಶಿವನಗೌಡ ನಾಯಕ್, ಶಾಸಕರಾದ ಮಾನಪ್ಪ ವಜ್ಜಲ್, ಡಾ.ಎಸ್.ಶಿವರಾಜ್ ಪಾಟೀಲ್, ಕೋರ್ ಕಮಿಟಿ ಸದಸ್ಯರು, ಸಂಸದರು, ಶಾಸಕರು ಸೇರಿ ಹಲವರು ಪಾದಯಾತ್ರೆಯಲ್ಲಿ ಭಾಗವಹಿಸಲಿದ್ದಾರೆ.
ಲಿಂಗಸುಗೂರಿನಿಂದ ಸಂತೆಕೆಲ್ಲೂರುವರೆಗೆ 12 ಕಿ.ಮೀ. ಪಾದಯಾತ್ರೆ ನಡೆಯಲಿದೆ. ಬಳಿಕ ಸಂತೆಕೆಲ್ಲೂರಿನ ಘನಮಠೇಶ್ವರ ಮಠದಲ್ಲಿ ಬಿಜೆಪಿ ನಾಯಕರು ರಾತ್ರಿ ವಾಸ್ತವ್ಯ ಮಾಡಲಿದ್ದಾರೆ. ಬಳಿಕ ನಾಳೆ ಸಂತೆಕೆಲ್ಲೂರಿನಿಂದ ಮಸ್ಕಿ ತಾಲೂಕಿನ ಗುಡುದೂರುವರೆಗೆ 21 ಕಿ.ಮೀ. ಪಾದಯಾತ್ರೆ ನಡೆಯಲಿದೆ. ಗುಡುದೂರಿನಲ್ಲಿ ಸಂಜೆ ವಿರಾಮ ಪಡೆದು ಮಸ್ಕಿಯಲ್ಲಿ ರಾತ್ರಿ ವಾಸ್ತವ್ಯ ಮಾಡಲಿದ್ದಾರೆ. ಸೆಪ್ಟೆಂಬರ್ 3ರಂದು ಗುಡುದೂರಿನಿಂದ ಸಿಂಧನೂರುವರೆಗೆ ಸುಮಾರು 20 ಕಿ.ಮೀ. ಪಾದಯಾತ್ರೆ ನಡೆಯಲಿದೆ.
ಸೆಪ್ಟೆಂಬರ್ 4ರಂದು ಸಿಂಧನೂರಿನಿಂದ ಕೊಪ್ಪಳ ಜಿಲ್ಲೆಯ ಕನಕಗಿರಿ ಕ್ಷೇತ್ರದ ಕಾರಟಗಿವರೆಗೆ 15 ಕಿ.ಮೀ. ಪಾದಯಾತ್ರೆ ನಡೆಯಲಿದೆ. ಇದರೊಂದಿಗೆ ರಾಯಚೂರು ಜಿಲ್ಲೆಯ ಲಿಂಗಸುಗೂರು, ಮಸ್ಕಿ ಹಾಗೂ ಸಿಂಧನೂರು ಕ್ಷೇತ್ರಗಳಲ್ಲಿ ಪಾದಯಾತ್ರೆ ನಡೆಯಲಿದೆ.
ಪಾದಯಾತ್ರೆಯ ಉದ್ದೇಶವೇನು?
ಕರ್ನಾಟಕದ ಕಾಂಗ್ರೆಸ್ ಸರ್ಕಾರದ ವೈಫಲ್ಯಗಳು, ಭ್ರಷ್ಟಾಚಾರ ಮತ್ತು ಜನವಿರೋಧಿ ನೀತಿಗಳನ್ನು ಖಂಡಿಸಿ ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸುವುದು ಮತ್ತು ಸರ್ಕಾರದ ವಿರುದ್ಧ ಬೃಹತ್ ಪ್ರತಿಭಟನೆ ಹಮ್ಮಿಕೊಳ್ಳುವುದು ಬಿಜೆಪಿ ಹಮ್ಮಿಕೊಂಡಿರುವ ‘ಬಳ್ಳಾರಿ ಚಲೋ’ ಪಾದಯಾತ್ರೆಯ ಮುಖ್ಯ ಉದ್ದೇಶವಾಗಿದೆ. ವಾಲ್ಮೀಕಿ ಪರಿಶಿಷ್ಟ ಪಂಗಡಗಳ ಅಭಿವೃದ್ಧಿ ನಿಗಮದಲ್ಲಿ ನಡೆದಿದೆ ಎನ್ನಲಾದ ಕೋಟ್ಯಂತರ ರೂಪಾಯಿ ಹಣದ ದುರ್ಬಳಕೆ ಮತ್ತು ಹಗರಣವನ್ನು ಖಂಡಿಸುವುದು. ಮಾಜಿ ಸಚಿವ ಬಿ. ನಾಗೇಂದ್ರ ಅವರು ಈಗಾಗಲೇ ರಾಜೀನಾಮೆ ನೀಡಿದ್ದರೂ, ಲೂಟಿಯಾದ ಎಸ್‌ಸಿ/ಎಸ್‌ಟಿ ಸಮುದಾಯದ ಹಣವನ್ನು ಸಂಪೂರ್ಣವಾಗಿ ಮರುಪಡೆಯಬೇಕು ಎಂದು ಈಗಾಗಲೇ ಬಿಜೆಪಿ ನಾಯಕರು ಆಗ್ರಹಿಸಿದ್ದಾರೆ.
ಬರ ಪರಿಸ್ಥಿತಿ ನಿರ್ವಹಣೆಯಲ್ಲಿ ಸರ್ಕಾರ ಸಂಪೂರ್ಣ ವಿಫಲ, ಬಿಜೆಪಿ ಸರ್ಕಾರ ಎಸ್‌ಸಿಎಸ್‌ಟಿಗೆ ಹೆಚ್ಚಿಸಿದ್ದ ಮೀಸಲು ಪ್ರಮಾಣಕ್ಕೆ ಕಡಿತ, ವಿಧವಾ ವೇತನ, ಸಂಧ್ಯಾ ಸುರಕ್ಷಾ, ವೃದ್ಧಾಪ್ಯ ವೇತನದಂಥ ಪಿಂಚಣಿಗಳ ಸ್ಥಗಿತ, ಗೃಹಲಕ್ಷ್ಮಿ ಫಲಾನುಭವಿಗಳಿಗೆ ಎರಡು ತಿಂಗಳಿನಿಂದ ಹಣ ನೀಡದೇ ಇರುವುದು ಸೇರಿದಂತೆ ಅನೇಕ ವಿಷಯಗಳನ್ನಿಟ್ಟುಕೊಂಡು ಬಿಜೆಪಿ ಪಾದಯಾತ್ರೆಗೆ ಸಜ್ಜಾಗಿದೆ.