ಮರಳು ದಂಧೆ ವಿರುದ್ಧ ಸಮರ ಸಾರಿದ ಜೆಡಿಎಸ್ ಶಾಸಕಿ ಮನೆಗೆ ನುಗ್ಗಿ ಜೀವ ಬೆದರಿಕೆ!
ಜೀವ ಬೆದರಿಕೆ ಸಂಬಂಧ ರಾಯಚೂರು ಎಸ್ಪಿ ಅರುಣಾಂಶು ಗಿರಿ ಅವರ ಕಚೇರಿಗೆ ಜೆಡಿಎಸ್ ಶಾಸಕಿ ಕರೆಮ್ಮ ನಾಯಕ್ ಅವರು ತೆರಳಿ ದೂರು ನೀಡಿದ್ದಾರೆ. ಅಕ್ರಮ ಮರಳುಗಾರಿಕೆ ತಡೆಯಲು ಹೋದರೆ ಯಾರೂ ಇಲ್ಲದ ಸಮಯ ನೋಡಿ ಮನೆ ಬಳಿ ಬಂದು ಬೆದರಿಕೆ ಹಾಕಿದ್ದಾರೆ. ಹೀಗಾಗಿ ತಮಗೆ ರಕ್ಷಣೆ ನೀಡಬೇಕು ಎಂದು ಶಾಸಕಿ ಕೋರಿದ್ದಾರೆ.
ದೇವದುರ್ಗ ಜೆಡಿಎಸ್ ಶಾಸಕಿ ಕರೆಮ್ಮ ನಾಯಕ್ -
ರಾಯಚೂರು: ಶಿಡ್ಲಘಟ್ಟದಲ್ಲಿ ಪೌರಾಯುಕ್ತೆಗೆ ಕಾಂಗ್ರೆಸ್ ಮುಖಂಡ ಧಮ್ಕಿ ಹಾಕಿದ ಘಟನೆ ಬೆನ್ನಲ್ಲೇ ಇದೀಗ ಶಾಸಕಿಯೊಬ್ಬರಿಗೆ ಕಿಡಿಗೇಡಿಗಳು ಬೆದರಿಕೆ ಹಾಕಿರುವ ಪ್ರಕರಣ ಬೆಳಕಿಗೆ ಬಂದಿದೆ. ರಾಯಚೂರು ಜಿಲ್ಲೆಯ ದೇವದುರ್ಗ ಕ್ಷೇತ್ರದ ಜೆಡಿಎಸ್ ಶಾಸಕಿ ಕರೆಮ್ಮ ಜಿ. ನಾಯಕ್‌ಗೆ (Karemma G Nayak) ಮರಳು ದಂಧೆಕೋರರು ಧಮ್ಕಿ ಹಾಕಿದ್ದು, ಈ ಸಂಬಂಧ ಪೊಲೀಸ್ ಠಾಣೆಗೆ ಶಾಸಕಿ ದೂರು ನೀಡಿದ್ದಾರೆ.
ರಾಯಚೂರು ಎಸ್ಪಿ ಅರುಣಾಂಶು ಗಿರಿ ಅವರ ಕಚೇರಿಗೆ ಜೆಡಿಎಸ್ ಶಾಸಕಿ ತೆರಳಿ ದೂರು ನೀಡಿದ್ದಾರೆ. ಅಕ್ರಮ ಮರಳುಗಾರಿಕೆ ತಡೆಯಲು ಹೋದರೆ ಯಾರೂ ಇಲ್ಲದ ಸಮಯ ನೋಡಿ ಮನೆ ಬಳಿ ಬಂದು ಬೆದರಿಕೆ ಹಾಕಿದ್ದಾರೆ. ಒಬ್ಬರು ಶಾಸಕರ ಮನೆಗೆ ಏಕಾಏಕಿ ನುಗ್ಗುತ್ತಾರೆ ಎಂದರೆ ಏನು ಗತಿ? ಅಂತ ಕರೆಮ್ಮ ಜಿ ನಾಯಕ್ ಆತಂಕ ವ್ಯಕ್ತಪಡಿಸಿದ್ದಾರೆ.
ಶ್ರೀನಿವಾಸ್ ನಾಯಕ್ ಎಂಬ ರೌಡಿ ನೂರಾರು ಜನರನ್ನು ಕರೆದುಕೊಂಡು ಬಂದು ನನಗೆ ಬೆದರಿಕೆ ಹಾಕಿದ್ದಾರೆ ಎಂದು ದೂರು ನೀಡಿದ್ದೇನೆ. ಈ ಬಗ್ಗೆ ಪರಿಶೀಲನೆ ನಡೆಸಿ ಕ್ರಮ ತೆಗೆದುಕೊಳ್ಳುತ್ತೇವೆ ಅಂತ ಎಸ್ಪಿಯವರು ಭರವಸೆ ನೀಡಿದ್ದಾರೆ ಎಂದು ಶಾಸಕಿ ತಿಳಿಸಿದ್ದಾರೆ.
ರಾಯಚೂರು ಭಾಗದ ಕೃಷ್ಣಾ ನದಿ ತೀರದಲ್ಲಿ ನಡೆಯುತ್ತಿರುವ ಅಕ್ರಮ ಮರಳು ದಂಧೆಕೋರರ ವಿರುದ್ಧ ಶಾಸಕಿ ಕರೆಮ್ಮ ಜಿ ನಾಯಕ್ ಸಮರ ಸಾರಿದ್ದರು. ದಂಧೆಕೋರರ ವಿರುದ್ಧ ಕಠಿಣ ಕ್ರಮಕೈಗೊಳ್ಳುವಂತೆ ಪೊಲಿಸರಿಗೆ ಸೂಚನೆ ನೀಡಿದ್ದರು. ಈ ಸೂಚನೆ ಮೇರೆಗೆ ಪೊಲೀಸರು, ಅಕ್ರಮ ಮರಳು ದಂಧೆ ಮೇಲೆ ದಾಳಿ ಮಾಡಿದ್ದು, ಅಕ್ರಮ ಮರಳುಗಾರಿಕೆಗೆ ಬಳಸಿದ್ದ ಏಳು ವಾಹನಗಳನ್ನು ಜಪ್ತಿ ಮಾಡಿ ಕೇಸ್ ದಾಖಲಿಸಿದ್ದರು. ಇದರಿಂದ ಆಕ್ರೋಶಗೊಂಡ ದಂಧೆಕೋರರು ಶಾಸಕಿ ಕರೆಮ್ಮ ನಿವಾಸಕ್ಕೆ ನುಗ್ಗಿ, ಬೆದರಿಕೆ ಹಾಕಿದ್ದಾರೆ ಎಂಬ ಆರೋಪ ಕೇಳಿಬಂದಿದೆ.