ಸಾಲು ಸಾಲು ಹಬ್ಬಗಳು ಈಗಾಗಲೇ ಶುರುವಾಗಿದ್ದು, ಗ್ರಾಹಕರ ಖುಷಿಗೆ ಬೆಲೆ ಏರಿಕೆ ತಣ್ಣೀರೆರೆಚಿದಂತಾಗಿದೆ. ಈಗಾಗಲೇ ಅಕ್ಕಿ ಬೆಲೆಯಲ್ಲಿ ಏರಿಕೆ ಉಂಟಾಗಿದ್ದು, ಎಲ್ ನಿನೋ ಎಫೆಕ್ಟ್ನಿಂದ ಮಳೆ ಕೊರತೆ ಉಂಟಾಗಿ ತೊಗರಿ ಬೇಳೆ ಇಳುವರಿ ಕುಸಿದಿದೆ. ಇದರ ಪರಿಣಾಮ ತೊಗರಿ ಬೆಳೆ ಸೇರಿದಂತೆ ಹಲವು ಕಾಳುಗಳ ದರ ಗಗನೆಕ್ಕೇರಿದೆ. ಕಳೆದ 15 ದಿನಗಳ ಅಂತರದಲ್ಲಿಯೇ ಪ್ರತಿ ಕೆಜಿ ತೊಗರಿ ಬೇಳೆಯಲ್ಲಿ 30 ರೂ. ದರ ಏರಿಕೆಯಾಗಿದೆ.
ಇದೀಗ ಪ್ರತಿ ಕೆಜಿ ತೊಗರಿ ಬೇಳೆ ದರ 140 ರೂ. ಏರಿಕೆಯಾಗಿದೆ. ಪ್ರೀಮಿಯಂ ಗುಣಮಟ್ಟದ ತೊಗರಿ ಬೇಳೆ ದರವು ಅ.1 ರಂದು ಪ್ರತಿ ಕೆ.ಜಿಗೆ 146 ಇತ್ತು ಇದೀಗ 160 ರೂ.ಗೆ ಏರಿಕೆಯಾಗಿದೆ. ಈ ಮೂಲಕ ತೊಗರಿ ಬೇಳೆ ಇದೇ ಮೊದಲ ಬಾರಿಗೆ ದಾಖಲೆ ಮಟ್ಟದಲ್ಲಿ ಏರಿಕೆಯಾಗಿದೆ. ಕಳೆದ ತಿಂಗಳು ಪ್ರತಿ ಕ್ವಿಂಟಲ್ ತೊಗರಿಗೆ ಕನಿಷ್ಠ 7,100ರಿಂದ ಗರಿಷ್ಠ 9,500 ದರವಿತ್ತು. ಆದೇ ಅ.1 ರಂದು ಕನಿಷ್ಠ 8,500 ಹಾಗೂ ಗರಿಷ್ಠ 10 ಸಾವಿರ ರೂ. ದರ ಏರಿಕೆ ಮೂಲಕ ಕಳೆದ 15 ದಿನಗಳಲ್ಲಿ ಪ್ರತಿ ಕ್ವಿಂಟಲ್ಗೆ 1,500ರಷ್ಟು ಏರಿಕೆಯಾಗಿದೆ.
ಕಲಬುರಗಿ ಜಿಲ್ಲೆಯಲ್ಲಿ ಮುಂಗಾರು ಅವಧಿಯಲ್ಲಿ 6.30 ಲಕ್ಷ ಹೆಕ್ಟೇರ್ ಪ್ರದೇಶದಲ್ಲಿ ತೊಗರಿ ಬಿತ್ತನೆ ಗುರಿ ಹೊಂದಲಾಗಿತ್ತು. ಮಳೆ ಕೊರತೆಯಿಂದ ಬರೀ 5.34 ಲಕ್ಷ ಹೆಕ್ಟೇರ್ನಲ್ಲಿ ತೊಗರಿ ಬಿತ್ತನೆಯಾಗಿದೆ. ಬರ ಆವರಿಸಿದ್ದರಿಂದ 5.34 ಲಕ್ಷ ಹೆಕ್ಟೇರ್ ಪೈಕಿ 4.04 ಲಕ್ಷ ಹೆಕ್ಟೇರ್ ಪ್ರದೇಶದಲ್ಲಿ ಬಿತ್ತಿದ ತೊಗರಿ ಮಳೆಯಿಲ್ಲದೆ ಒಣಗಿದೆ.
ಅಕ್ಕಿ ಬೆಲೆಯೂ ಏರಿಕೆ
ರಾಜ್ಯದಲ್ಲಿ ಅಕ್ಕಿ ಉತ್ಪಾದನೆ ಕುಸಿದಿದ್ದು, ಕಳೆದ ಮೂರು ತಿಂಗಳುಗಳಲ್ಲಿ ಪ್ರಮುಖ ಅಕ್ಕಿ ತಳಿಗಳ ಬೆಲೆ ಪ್ರತಿ ಕೆಜಿಗೆ ರೂ.25 ರಿಂದ ರೂ.30 ರಷ್ಟು ಭಾರಿ ಏರಿಕೆ ಕಂಡಿದೆ. ದೇಶದ ಪ್ರಮುಖ ಭತ್ತ ಉತ್ಪಾದಕ ರಾಜ್ಯಗಳಲ್ಲೊಂದಾದ ಕರ್ನಾಟಕದಲ್ಲಿ ಈ ಬಾರಿ ಉತ್ಪಾದನೆ ಕುಸಿಯುವ ನಿರೀಕ್ಷೆಯಿದೆ. ಜೂನ್ನಲ್ಲಿ ಭತ್ತದ ಬಿತ್ತನೆ ಪ್ರಮಾಣ ಗಣನೀಯವಾಗಿ ಕಡಿಮೆಯಾಗಿದೆ. ಕರ್ನಾಟಕದಲ್ಲಿ ಸಾಮಾನ್ಯವಾಗಿ ವಾರ್ಷಿಕ ಸುಮಾರು 13 ಲಕ್ಷ ಹೆಕ್ಟೇರ್ ಪ್ರದೇಶದಲ್ಲಿ ಭತ್ತ ಬೆಳೆಯಲಾಗುತ್ತದೆ. ಆದರೆ, ಈ ಬಾರಿ ಮಳೆ ಕೊರತೆಯಿಂದಾಗಿ ಭತ್ತ ಬಿತ್ತನೆ ಪ್ರದೇಶ ತೀರಾ ಕಡಿಮೆ ಇದೆ.