ಫೋಟೋ ಗ್ಯಾಲರಿ ಆಪರೇಷನ್​ ಸಿಂಧೂರ ಐಪಿಎಲ್​ ಫ್ಯಾಷನ್​ ವಿದೇಶ ಧಾರ್ಮಿಕ ಕ್ರೈಂ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Actress Ramya: ಮೈಸೂರು ಸ್ಯಾಂಡಲ್ ಸೋಪಿಗೆ ತಮನ್ನಾ ರಾಯಭಾರಿ; ತೆರಿಗೆದಾರರ ಹಣ ಪೋಲು ಎಂದ ರಮ್ಯಾ

Mysore Sandal Soap: ಬರೋಬ್ಬರಿ 6 ಕೋಟಿ ರೂ. ನೀಡಿ ಮೈಸೂರು ಸ್ಯಾಂಡಲ್‌ ಸೋಪಿಗೆ ರಾಯಭಾರಿಯನ್ನಾಗಿ ಬಹುಭಾಷಾ ನಟಿ ತಮನ್ನಾ ಭಾಟಿಯಾ ಅವರನ್ನು ನೇಮಿಸಿಕೊಳ್ಳಲಾಗಿದೆ. ಸರ್ಕಾರದ ಈ ನಡೆಯನ್ನು ನಟಿ ರಮ್ಯಾ ಟೀಕಿಸಿದ್ದು, ತೆರಿಗೆದಾರರ ಹಣ ಪೋಲಾಗುತ್ತದೆ ಎಂದಿದ್ದಾರೆ.

ಮೈಸೂರು ಸ್ಯಾಂಡಲ್ ಸೋಪಿಗೆ ತಮನ್ನಾ ರಾಯಭಾರಿ; ರಮ್ಯಾ ಕಿಡಿ

Profile Ramesh B May 24, 2025 5:05 PM

ಬೆಂಗಳೂರು: ಶತಮಾನ ಪೂರೈಸಿದ, ಕರ್ನಾಟಕದ ಹೆಮ್ಮೆಯ ಸಂಕೇತ ಕರ್ನಾಟಕ ಸಾಬೂನು ಮತ್ತು ಮಾರ್ಜಕಗಳ ನಿಯಮಿತ (KSDL) ಸಂಸ್ಥೆಯನ್ನು ಜಾಗತಿಕ ಮಟ್ಟಕ್ಕೆ ಕೊಂಡೊಯ್ಯುವ ಉದ್ದೇಶದಿಂದ ಬಹುಭಾಷಾ ನಟಿ ತಮನ್ನಾ ಭಾಟಿಯಾ (Tamannaah Bhatia) ಅವರನ್ನು ಪ್ರಚಾರ ರಾಯಭಾರಿಯನ್ನಾಗಿ (Mysore Sandal Soap) ನೇಮಿಸಿಕೊಳ್ಳಲಾಗಿದ್ದು, ವಿವಾದದ ಕಿಡಿ ಹೊತ್ತಿಕೊಂಡಿದೆ. ಕನ್ನಡೇತರ ನಟಿಯ ಆಯ್ಕೆಗೆ ಹಲವರು ಸರ್ಕಾರದ ವಿರುದ್ಧ ಕಿಡಿಕಾರುತ್ತಿದ್ದಾರೆ. ಜತೆಗೆ ಇದೀಗ ರಾಜಕಾರಣಿ, ನಟಿ, ಕಾಂಗ್ರೆಸ್‌ ಮಾಜಿ ಸಂಸದೆ ರಮ್ಯಾ (Actress Ramya) ಕೂಡ ಈ ನಡೆಯನ್ನು ಟೀಕಿಸಿದ್ದಾರೆ. ಈ ಬಗ್ಗೆ ಅವರು ಇನ್‌ಸ್ಟಾಗ್ರಾಮ್‌ ಸ್ಟೋರಿಯಲ್ಲಿ ತಮ್ಮ ಅಭಿಪ್ರಾಯ ಹಂಚಿಕೊಂಡಿದ್ದಾರೆ.

6 ಕೋಟಿ ರೂ. ಸಂಭಾವನೆ ನೀಡಿ ತಮನ್ನಾ ಅವರನ್ನು 2 ವರ್ಷಗಳ ಅವಧಿಗೆ ರಾಯಭಾರಿಯನ್ನಾಗಿಸಿದ ನಿರ್ಧಾರದ ವಿರುದ್ಧ ಈಗಾಗಲೇ ಕನ್ನಡಪರ ಸಂಘಟನೆಗಳು, ನೆಟ್ಟಿಗರು, ಕನ್ನಡಿಗರು ಆಕ್ಷೇಪ ವ್ಯಕ್ತಪಡಿಸಿದ್ದಾರೆ. ಈ ಸಾಲಿಗೆ ಇದೀಗ ರಮ್ಯಾ ಕೂಡ ಸೇರಿದ್ದಾರೆ.

ಈ ಸುದ್ದಿಯನ್ನೂ ಓದಿ: Tamannaah Bhatia: ಮೈಸೂರು ಸ್ಯಾಂಡಲ್ ಸೋಪ್‌ ರಾಯಭಾರಿ ತಮನ್ನಾಗೆ 6.2 ಕೋಟಿ ಸಂಭಾವನೆ; ಎಂ.ಬಿ.ಪಾಟೀಲ್‌ ಹೇಳಿದ್ದೇನು?

ರಮ್ಯಾ ಏನಂದ್ರು?

ʼʼಆಧುನಿಕ ಯುಗದಲ್ಲಿಉತ್ಪನ್ನವೊಂದನ್ನು ಜನರಿಗೆ ತಲುಪಿಸಲು ಹಲವು ದಾರಿಗಳಿವೆ. ಉತ್ಪನ್ನವನ್ನು ಜನರಿಗೆ ತಲುಪಿಸಲು ಸೆಲೆಬ್ರಿಟಿಯೊಬ್ಬರನ್ನು ಆಯ್ಕೆ ಮಾಡಿ ಅವರ ಮೂಲಕವೇ ಪ್ರಚಾರ ಮಾಡಬೇಕು ಎಂಬುದು ಹಳೆಯ ಮಾದರಿ. ಅಲ್ಲದೆ ಇದರಿಂದ ತೆರಿಗೆದಾರರ ಹಣವನ್ನು ಪೋಲು ಮಾಡಿದಂತಾಗುತ್ತದೆʼʼ ಎಂದು ರಮ್ಯಾ ಹೇಳಿದ್ದಾರೆ.

ಮುಂದುವರಿದು, ʼʼತಮ್ಮ ನೆಚ್ಚಿನ ತಾರೆ ಪ್ರಚಾರ ಮಾಡುತ್ತಿದ್ದಾರೆ ಎನ್ನುವ ಕಾರಣಕ್ಕೆ ಈಗ ಯಾರೂ ಪ್ರಾಡೆಕ್ಟ್‌ ಖರೀದಿಸುವುದಿಲ್ಲ. ಅವರಿಗೆ ಗೊತ್ತು ಸೋಪು ಬಳಸುವುದರಿಂದ ತಾವು ರಾಯಭಾರಿಯಂತೆ ಕಾಣಿಸಿಕೊಳ್ಳುವುದಿಲ್ಲ ಎನ್ನುವ ಸತ್ಯ. ಪ್ರಾಡೆಕ್ಟ್ ಚೆನ್ನಾಗಿದ್ದರೆ ಬಳಕೆದಾರರು ನಂಬಿಕಸ್ತ ಗ್ರಾಹಕರಾಗುತ್ತಾರೆ. ಮತ್ತೆ ಮತ್ತೆ ಖರೀದಿಸುತ್ತಾರೆ. ಮೈಸೂರು ಸ್ಯಾಂಡಲ್​ ಒಂದೊಳ್ಳೆ ಪ್ರಾಡಕ್ಟ್. ಜತೆಗೆ ಶತಮಾನಗಳ ಇತಿಹಾಸವನ್ನೂ ಹೊಂದಿದೆ. ಹಾಗಾಗಿ ಅದಕ್ಕೆ ಉತ್ತಮ ಗ್ರಾಹಕರಿದ್ದಾರೆʼʼ ಎಂದು ನಟಿ ರಮ್ಯಾ ವಿವರಿಸಿದ್ದಾರೆ.

ʼʼಮೈಸೂರು ಸ್ಯಾಂಡಲ್ ಸೋಪು ಬಳಸುತ್ತಿರುವ ಪ್ರತಿಯೊಬ್ಬ ಕನ್ನಡಿಗನೂ ರಾಯಭಾರಿಯೇ. ಕನ್ನಡಿಗನೇ ಮೈಸೂರು ಸ್ಯಾಂಡಲ್ ಸೋಪಿನ ಮಹತ್ವವನ್ನು ದೇಶ, ವಿದೇಶಗಳಲ್ಲಿ ಸಾರುತ್ತಾ ಬಂದಿದ್ದಾನೆ. ಮೈಸೂರು ಸ್ಯಾಂಡಲ್ ಸೋಪು ಕನ್ನಡಿಗರ ಹೆಮ್ಮೆಯ ಸಂಕೇತʼʼ ಎಂದಿದ್ದಾರೆ.

''ವಿಶ್ವದ ಅತ್ಯಂತ ದೊಡ್ಡ ಕಂಪನಿ ಆ್ಯಪಲ್ ಯಾವುದೇ ರಾಯಭಾರಿಯನ್ನು ಹೊಂದಿಲ್ಲ. ತನ್ನ ಗ್ರಾಹಕರನ್ನೇ ರಾಯಭಾರಿಗಳನ್ನಾಗಿಸುವ ಅವರ ಜಾಹೀರಾತು ನನಗೆ ಬಹಳ ಇಷ್ಟವಾಗುತ್ತದೆʼʼ ಎಂದು ರಮ್ಯಾ ವಿವರಿಸಿದ್ದಾರೆ.

ಸಚಿವ ಎಂ.ಬಿ.ಪಾಟೀಲ್‌ ಹೇಳಿದ್ದೇನು?

ತಮನ್ನಾ ಅವರನ್ನು 6.2 ಕೋಟಿ ರೂಪಾಯಿ ಸಂಭಾವನೆಯೊಂದಿಗೆ 2 ವರ್ಷಗಳ ಅವಧಿಗೆ ಕೆಎಸ್‌ಡಿಎಲ್ ಪ್ರಚಾರ ರಾಯಭಾರಿಯನ್ನಾಗಿ ನೇಮಿಸಿಕೊಂಡಿರುವುದಕ್ಕೆ ಬೃಹತ್ ಮತ್ತು ಮಧ್ಯಮ ಕೈಗಾರಿಕಾ ಸಚಿವ ಎಂ.ಬಿ. ಪಾಟೀಲ್‌ ಸಮರ್ಥಿಸಿಕೊಂಡಿದ್ದಾರೆ. ʼʼತಮನ್ನಾ ಡಿಜಿಟಲ್ ಲೋಕದಲ್ಲಿ 2.8 ಕೋಟಿ ಫಾಲೋಯರ್ಸ್ ಹೊಂದಿದ್ದಾರೆ. ಜತೆಗೆ ಅವರು ಅಖಿಲ ಭಾರತ ಮಟ್ಟದ ವರ್ಚಸ್ಸು ಹೊಂದಿದ್ದಾರೆ. ಹೀಗಾಗಿ ಅವರನ್ನೇ ಬ್ರ್ಯಾಂಡ್ ಅಂಬಾಸಿಡರ್ ಆಗಿ ನೇಮಿಸಿಕೊಳ್ಳಲಾಗಿದೆ. ಇದು ಕೆಎಸ್‌ಡಿಎಲ್ ಸಂಸ್ಥೆಗೆ ನಾವು ತರುತ್ತಿರುವ ಸಮಗ್ರ ಪರಿವರ್ತನೆಯಲ್ಲಿ ಕೇವಲ ಒಂದು ಅಂಶವಷ್ಟೆʼʼ ಎಂದು ವಿವರಿಸಿದ್ದಾರೆ.