Tamannaah Bhatia: ಮೈಸೂರು ಸ್ಯಾಂಡಲ್ ಸೋಪ್ ರಾಯಭಾರಿ ತಮನ್ನಾಗೆ 6.2 ಕೋಟಿ ಸಂಭಾವನೆ; ಎಂ.ಬಿ.ಪಾಟೀಲ್ ಹೇಳಿದ್ದೇನು?
Tamannaah Bhatia: ನಟಿ ತಮನ್ನಾ ಅವರನ್ನು 6.2 ಕೋಟಿ ರೂಪಾಯಿ ಸಂಭಾವನೆಯೊಂದಿಗೆ ಎರಡು ವರ್ಷಗಳ ಅವಧಿಗೆ ಕೆಎಸ್‌ಡಿಎಲ್ ಪ್ರಚಾರ ರಾಯಭಾರಿಯನ್ನಾಗಿ ನೇಮಿಸಿಕೊಂಡಿರುವುದಕ್ಕೆ ಕೆಲವರು ಅಪಸ್ವರ ಎತ್ತಿರುವುದಕ್ಕೆ ಬೃಹತ್ ಮತ್ತು ಮಧ್ಯಮ ಕೈಗಾರಿಕಾ ಎಂ.ಬಿ.ಪಾಟೀಲ್ ಅವರು ಸ್ಪಷ್ಟನೆ ನೀಡಿದ್ದಾರೆ.


ಬೆಂಗಳೂರು: ಕರ್ನಾಟಕದ ಹೆಮ್ಮೆಯ ಸಂಕೇತವಾಗಿರುವ ಕರ್ನಾಟಕ ಸಾಬೂನು ಮತ್ತು ಮಾರ್ಜಕಗಳ ನಿಯಮಿತ (ಕೆಎಸ್‌ಡಿಎಲ್) ಸಂಸ್ಥೆಯನ್ನು ಜಾಗತಿಕ ಮಟ್ಟಕ್ಕೆ ಕೊಂಡೊಯ್ಯುವ ಉದ್ದೇಶದಿಂದ ನಟಿ ತಮನ್ನಾ ಭಾಟಿಯಾ (Tamannaah Bhatia) ಅವರನ್ನು ಪ್ರಚಾರ ರಾಯಭಾರಿಯನ್ನಾಗಿ (Mysore Sandal Soap) ನೇಮಿಸಿಕೊಳ್ಳಲಾಗಿದೆ. ಇದರಲ್ಲಿ ಅವರ ವರ್ಚಸ್ಸು, ಡಿಜಿಟಲ್ ಪ್ರಸ್ತುತಿ ಮತ್ತು ಯುವಜನರೊಂದಿಗೆ ಅವರ ಸಂಪರ್ಕ ಇವುಗಳನ್ನು ಮಾತ್ರ ಪರಿಗಣಿಸಲಾಗಿದೆ ಎಂದು ಬೃಹತ್ ಮತ್ತು ಮಧ್ಯಮ ಕೈಗಾರಿಕಾ ಸಚಿವ ಎಂ.ಬಿ. ಪಾಟೀಲ್ (MB Patil) ಗುರುವಾರ ಸ್ಪಷ್ಟಪಡಿಸಿದ್ದಾರೆ.
ತಮನ್ನಾ ಅವರನ್ನು 6.2 ಕೋಟಿ ರೂಪಾಯಿ ಸಂಭಾವನೆಯೊಂದಿಗೆ ಎರಡು ವರ್ಷಗಳ ಅವಧಿಗೆ ಕೆಎಸ್‌ಡಿಎಲ್ ಪ್ರಚಾರ ರಾಯಭಾರಿಯನ್ನಾಗಿ ನೇಮಿಸಿಕೊಂಡಿರುವುದಕ್ಕೆ ಕೆಲವರು ಅಪಸ್ವರ ಎತ್ತಿರುವುದಕ್ಕೆ ಅವರು ಪ್ರತಿಕ್ರಿಯಿಸಿದ್ದಾರೆ.
ಕೆಎಸ್‌ಡಿಎಲ್ ಕಳೆದ ಸಾಲಿನಲ್ಲಿ 1,785 ಕೋಟಿ ರೂಪಾಯಿ ವಹಿವಾಟು ನಡೆಸಿದೆ. ಇದರಲ್ಲಿ ಕರ್ನಾಟಕದ ಪಾಲು ಶೇ. 18ರಷ್ಟಿದೆ. ಉಳಿದದ್ದು ಆಂಧ್ರಪ್ರದೇಶ, ತೆಲಂಗಾಣ, ತಮಿಳುನಾಡು, ಕೇರಳ ಮತ್ತು ಮಹಾರಾಷ್ಟ್ರದಿಂದ ಬಂದಿದೆ. ಸಂಸ್ಥೆಯ ವಹಿವಾಟನ್ನು 2030ರ ವೇಳೆಗೆ 5,000 ಕೋಟಿ ರೂಪಾಯಿಗೆ ಕೊಂಡೊಯ್ಯುವ ಗುರಿ ಇಟ್ಟುಕೊಂಡು ಈಗ ದಾಪುಗಾಲು ಹಾಕುತ್ತಿದ್ದೇವೆ. ಇಂತಹ ಸಂದರ್ಭದಲ್ಲಿ ಮಾರುಕಟ್ಟೆ ತಂತ್ರವೇ ಮುಖ್ಯವಾಗುತ್ತದೆ. ಇದು ಮಾರುಕಟ್ಟೆ ಪರಿಣತರ ಸಮಿತಿಯ ತೀರ್ಮಾನವಾಗಿದೆ ಎಂದು ಅವರು ಹೇಳಿದ್ದಾರೆ.

ನಾವು ದೀಪಿಕಾ ಪಡುಕೋಣೆ, ರಶ್ಮಿಕಾ ಮಂದಣ್ಣ, ಪೂಜಾ ಹೆಗಡೆ, ಕಿಯಾರಾ ಅಡ್ವಾಣಿ ಅವರನ್ನೂ ಪರಿಗಣಿಸಿ ನೋಡಿದೆವು. ಆದರೆ ತಮನ್ನಾ ಅವರು ಡಿಜಿಟಲ್ ಲೋಕದಲ್ಲಿ 2.8 ಕೋಟಿ ಫಾಲೋಯರ್ಸ್ ಹೊಂದಿ, ಉಳಿದವರಿಗಿಂತ ಮುಂದಿದ್ದಾರೆ. ಜತೆಗೆ ಅವರು ಅಖಿಲ ಭಾರತ ಮಟ್ಟದ ವರ್ಚಸ್ಸು ಹೊಂದಿದ್ದಾರೆ. ಹೀಗಾಗಿ ಅವರನ್ನೇ ಬ್ರ್ಯಾಂಡ್ ಅಂಬಾಸಿಡರ್ ಆಗಿ ನೇಮಿಸಿಕೊಳ್ಳಲಾಗಿದೆ. ಇದು ಕೆಎಸ್‌ಡಿಎಲ್ ಸಂಸ್ಥೆಗೆ ನಾವು ತರುತ್ತಿರುವ ಸಮಗ್ರ ಪರಿವರ್ತನೆಯಲ್ಲಿ ಕೇವಲ ಒಂದು ಅಂಶವಷ್ಟೆ ಎಂದು ಅವರು ವಿವರಿಸಿದ್ದಾರೆ.
ಕೆಎಸ್‌ಡಿ ಎಲ್‌ನ ಉದ್ಯೋಗಿಗಳು ಕನ್ನಡಿಗರೇ ಆಗಿದ್ದಾರೆ. ಬರುವ ಲಾಭಾಂಶದಲ್ಲಿ ಶೇ. 30ರಷ್ಟನ್ನು ಸರಕಾರಕ್ಕೆ ಕೊಡಲಾಗುತ್ತಿದೆ. ಈಗ ಯೂರೋಪ್ ಮತ್ತು ಮಧ್ಯಪ್ರಾಚ್ಯ ರಾಷ್ಟ್ರಗಳಲ್ಲಿ ಮಾರುಕಟ್ಟೆ ವಿಸ್ತರಣೆ ಮಾಡಲಾಗುತ್ತಿದೆ. ಇವುಗಳ ಭಾಗವಾಗಿ 435 ವಿತರಕರನ್ನು ಹೊಸದಾಗಿ ನೇಮಿಸಿಕೊಳ್ಳಲಾಗಿದೆ. ಜತೆಗೆ ಇ-ಕಾಮರ್ಸ್ ಮೂಲಕ 500 ಕೋಟಿ ರೂಪಾಯಿ ವಹಿವಾಟು ನಡೆಸುವ ಮತ್ತು ರಫ್ತಿನಿಂದ 150 ಕೋಟಿ ರೂಪಾಯಿ ಗಳಿಸುವ ಗುರಿ ಹೊಂದಿದ್ದೇವೆ ಎಂದು ಪಾಟೀಲ್ ಪ್ರತಿಪಾದಿಸಿದ್ದಾರೆ.
ಈ ಸುದ್ದಿಯನ್ನೂ ಓದಿ | Tamannaah Bhatia: ಮೈಸೂರು ಸ್ಯಾಂಡಲ್ ಸೋಪ್‌ಗೆ ರಾಯಭಾರಿಯಾಗಿ ಬಹುಭಾಷಾ ನಟಿ ತಮನ್ನಾ ಭಾಟಿಯಾ ಆಯ್ಕೆ
ಇಷ್ಟಕ್ಕೂ ಒಂದು ಸರ್ಕಾರಿ ಸಂಸ್ಥೆ ಹೊಸ ಘಟಕವನ್ನು ವಿಜಯಪುರದಲ್ಲಿ ಆರಂಭಿಸುವ ಹಂತಕ್ಕೆ ಹೋಗುತ್ತಿದೆ ಎನ್ನುವುದೇ ಹೆಮ್ಮೆಯ ವಿಷಯ. ಹೀಗೆ ಮಾಡಿದ ನಂತರ ಅದನ್ನು ವಿಶ್ವಮಟ್ಟಕ್ಕೆ ತೆಗೆದುಕೊಂಡು ಹೋಗಬೇಕಾಗಿದೆ. ಹಾಗೆಯೇ ಬ್ರ್ಯಾಂಡಿಂಗ್ ಹೆಚ್ಚಿಸಲು ಪ್ಯಾಕಿಂಗ್ ಬದಲಿಸುವ ವ್ಯವಸ್ಥೆ ಮಾಡಲಾಗುತ್ತಿದೆ ಎಂದು ಹೇಳಿದರು.
![]()
109 ವರ್ಷಗಳ ಇತಿಹಾಸವಿರುವ ಕೆಎಸ್ಡಿಎಲ್ ಕರ್ನಾಟಕದ ಹೆಮ್ಮೆಯ ಉದ್ಯಮವಾಗಿದೆ. ಇದಕ್ಕೆ ಸಂಪೂರ್ಣ ಹೊಸತನದ ಸ್ಪರ್ಶ ನೀಡುತ್ತಿದ್ದು, ಉತ್ತರ ಭಾರತ ಮತ್ತು ವಿದೇಶಗಳಲ್ಲೂ ಮಾರುಕಟ್ಟೆ ವಿಸ್ತರಣೆ ಮಾಡಲಾಗುತ್ತಿದೆ. ಇದರಲ್ಲಿ ಗೆಲ್ಲಬೇಕೆಂದರೆ ನಾವು ಅದಕ್ಕೆ ತಕ್ಕಂತೆ ಕಾರ್ಯತಂತ್ರ ರೂಪಿಸಬೇಕು. ತಮನ್ನಾ ಅವರನ್ನು ಬ್ರ್ಯಾಂಡ್ ಅಂಬಾಸಿಡರ್ ಮಾಡಿಕೊಂಡಿರುವುದು ಇದಕ್ಕೆ ತಕ್ಕ ಒಂದು ಉಪಕ್ರಮವಷ್ಟೆ. ಇದನ್ನು ಯಾರೂ ತಪ್ಪಾಗಿ ಭಾವಿಸಬಾರದು.
ಅಪ್ಪಾಜಿ ನಾಡಗೌಡ, ಅಧ್ಯಕ್ಷರು, ಕೆಎಸ್ಡಿಎಲ್.