ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ

ನಟ ರವಿಚಂದ್ರನ್‌ಗೆ ವಿಧಾನ ಪರಿಷತ್ ಸ್ಥಾನ? ಸಿಎಂ ಡಿ.ಕೆ. ಶಿವಕುಮಾರ್‌ ಶಿಫಾರಸು?

V. Ravichandran: ಕನ್ನಡ ಚಿತ್ರರಂಗದ ಹಿರಿಯ ನಟ ಹಾಗೂ ನಿರ್ದೇಶಕ ರವಿಚಂದ್ರನ್ ಅವರನ್ನು ಕಲಾ ಕ್ಷೇತ್ರದ ಕೋಟಾದಡಿ ವಿಧಾನ ಪರಿಷತ್ ಸದಸ್ಯರನ್ನಾಗಿ ಮಾಡಲು ಪ್ರಯತ್ನ ನಡೆಯುತ್ತಿದೆ ಎಂಬ ಸುದ್ದಿ ಹರಿದಾಡುತ್ತಿದೆ. ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಸ್ವತಃ ರವಿಚಂದ್ರನ್ ಹೆಸರನ್ನು ಶಿಫಾರಸು ಮಾಡಿದ್ದಾರೆ ಎನ್ನಲಾಗಿದ್ದು, ಈ ಬಗ್ಗೆ ಕಾಂಗ್ರೆಸ್ ಅಥವಾ ಸಿಎಂ ಕಚೇರಿಯಿಂದ ಯಾವುದೇ ಅಧಿಕೃತ ಮಾಹಿತಿ ಹೊರಬಂದಿಲ್ಲ. ರವಿಚಂದ್ರನ್ ಹಾಗೂ ಡಿ.ಕೆ. ಶಿವಕುಮಾರ್ ಅವರ ಆತ್ಮೀಯ ಸ್ನೇಹ ಈ ಚರ್ಚೆಗೆ ಮತ್ತಷ್ಟು ಬಲ ನೀಡಿದೆ.

ರವಿಚಂದ್ರನ್ (ಸಂಗ್ರಹ ಚಿತ್ರ)

ಬೆಂಗಳೂರು, ಆ. 29: ಕನ್ನಡ ಚಿತ್ರರಂಗದ ‘ಕನಸುಗಾರ’ ರವಿಚಂದ್ರನ್ (V. Ravichandran) ಇದೀಗ ರಾಜಕೀಯ ಅಂಗಳಕ್ಕೆ ಎಂಟ್ರಿ ಕೊಡಲಿದ್ದಾರೆಯೇ ಎಂಬ ಚರ್ಚೆ ಜೋರಾಗಿದೆ. ಕಲಾ ಕ್ಷೇತ್ರದ ಸಾಧಕರ ಕೋಟಾದಡಿ ಅವರನ್ನು ವಿಧಾನ ಪರಿಷತ್ ಸದಸ್ಯರನ್ನಾಗಿ ಮಾಡಲು ಪ್ರಯತ್ನ ನಡೆಯುತ್ತಿದೆ ಎಂಬ ಸುದ್ದಿ ಹರಿದಾಡುತ್ತಿದೆ. ಮೂಲಗಳ ಪ್ರಕಾರ, ರವಿಚಂದ್ರನ್ ಅವರ ಹೆಸರನ್ನು ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಶಿಫಾರಸು ಮಾಡಿದ್ದಾರೆ ಎನ್ನಲಾಗುತ್ತಿದೆ. ಆದರೆ ಈ ಬಗ್ಗೆ ಕಾಂಗ್ರೆಸ್ ಪಕ್ಷವಾಗಲಿ ಅಥವಾ ಮುಖ್ಯಮಂತ್ರಿ ಕಚೇರಿಯಾಗಲಿ ಈವರೆಗೆ ಯಾವುದೇ ಅಧಿಕೃತ ಮಾಹಿತಿ ನೀಡಿಲ್ಲ.

ರವಿಚಂದ್ರನ್ ಯಾವುದೇ ರಾಜಕೀಯ ಪಕ್ಷದೊಂದಿಗೆ ಸಕ್ರಿಯವಾಗಿ ಗುರುತಿಸಿಕೊಂಡಿಲ್ಲ. ಆದರೆ ಡಿ.ಕೆ. ಶಿವಕುಮಾರ್ ಹಾಗೂ ರವಿಚಂದ್ರನ್ ಅವರ ನಡುವಿನ ಆತ್ಮೀಯ ಸ್ನೇಹದ ಬಗ್ಗೆ ಹಲವು ಸಂದರ್ಭಗಳಲ್ಲಿ ಚರ್ಚೆಯಾಗಿದೆ. ರವಿಚಂದ್ರನ್ ಇತ್ತೀಚೆಗೆ ಡಿ.ಕೆ. ಶಿವಕುಮಾರ್ ಅವರನ್ನು ಭೇಟಿಯಾಗಿರುವುದು ಕೂಡ ಈ ಚರ್ಚೆಗೆ ಮತ್ತಷ್ಟು ಬಲ ನೀಡಿದೆ.

ವಂದೇ ಮಾತರಂ 2 ಚರಣ ಹಾಡುವ ಕಾಂಗ್ರೆಸ್ ನಿರ್ಧಾರ ರಾಜ್ಯದಲ್ಲೂ ಜಾರಿ: ಖಾಸಗಿ ಸುದ್ದಿ ವಾಹಿನಿ ಚರ್ಚೆಯಲ್ಲಿ ಡಿಕೆಶಿ

ಕೆಲ ತಿಂಗಳ ಹಿಂದೆ ನಡೆದ ‘ಮದ್ದೂರಮ್ಮ ಉತ್ಸವ’ದಲ್ಲೂ ರವಿಚಂದ್ರನ್ ಡಿ.ಕೆ. ಶಿವಕುಮಾರ್ ಅವರನ್ನು ಭಾವುಕವಾಗಿ ಕೊಂಡಾಡಿದ್ದರು. ಕಷ್ಟದ ಸಂದರ್ಭದಲ್ಲಿ ತಮಗೆ ನೆರವಾದ ಡಿಕೆಶಿ ಅವರ ಋಣವನ್ನು ಜೀವನಪೂರ್ತಿ ಮರೆಯುವುದಿಲ್ಲ ಎಂದು ಹೇಳಿದ್ದ ಅವರು, ಅವರ ನಾಯಕತ್ವವನ್ನು ಶ್ಲಾಘಿಸಿದ್ದರು. ಇತ್ತ ಡಿ.ಕೆ. ಶಿವಕುಮಾರ್ ಕೂಡ ರವಿಚಂದ್ರನ್ ತಮ್ಮ ಬಾಲ್ಯದ ಗೆಳೆಯ ಹಾಗೂ ಶಾಲಾ ಸಹಪಾಠಿ ಎಂದು ಹಲವು ಬಾರಿ ಹೇಳಿಕೊಂಡಿದ್ದಾರೆ.

ಹೀಗಾಗಿ, ‘ಕನಸುಗಾರ’ ರವಿಚಂದ್ರನ್ ರಾಜಕೀಯ ಪ್ರವೇಶ ಮಾಡಲಿದ್ದಾರಾ? ವಿಧಾನ ಪರಿಷತ್ ಸದಸ್ಯರಾಗಲಿದ್ದಾರಾ? ಎಂಬ ಕುತೂಹಲ ಅಭಿಮಾನಿಗಳಲ್ಲಿ ಮೂಡಿದೆ. ಆದರೆ ಸದ್ಯಕ್ಕೆ ಇದು ಅಧಿಕೃತವಾಗಿಲ್ಲ.