Nandini milk price hike: ನಂದಿನಿ ಹಾಲಿನ ದರ ಹೆಚ್ಚಳ; ನಾಳೆಯಿಂದಲೇ ಪರಿಷ್ಕೃತ ದರ ಜಾರಿ!
Nandini milk price hike: ಈ ಹಿಂದೆ ಲೀಟರ್ ಪೊಟ್ಟಣದಲ್ಲಿ 50 ಮಿ.ಲೀ. ಹೆಚ್ಚುವರಿ ಹಾಲು ನೀಡಿ 2 ರೂ. ಏರಿಕೆ ಮಾಡಲಾಗಿತ್ತು, ಈಗ ಅದನ್ನು ಕೆಎಂಎಫ್ ಹಿಂಪಡೆಯಲಿದೆ. ಮಂಗಳವಾರದಿಂದ ಲೀಟರ್ ಹಾಲಿನ ಮೇಲೆ 4 ರೂ. ಏರಿಕೆಯಾಗಲಿದ್ದು, ಮೊಸರಿನ ದರವೂ 4 ರೂ. ಏರಿಕೆಯಾಗಲಿದೆ.


ಬೆಂಗಳೂರು: ಮುಖ್ಯಮಂತ್ರಿ ಸಿದ್ದರಾಮಯ್ಯ (CM Siddaramaiah) ನೇತೃತ್ವದಲ್ಲಿ ಇತ್ತೀಚೆಗೆ ನಡೆದ ಸಚಿವ ಸಂಪುಟ ಸಭೆಯಲ್ಲಿ ಕೆಎಂಎಫ್ (KMF) ನಂದಿನಿ ಹಾಲಿನ ದರ ಲೀಟರ್‌ಗೆ 4 ರೂ. ಏರಿಕೆಗೆ ಅನುಮೋದನೆ ನೀಡಲಾಗಿತ್ತು. ಇದೀಗ ಪರಿಷ್ಕೃತ ದರ ಏ. 1ರಿಂದ ಜಾರಿಯಾಗಲಿದ್ದು, ಗ್ರಾಹಕರಿಗೆ ಬೆಲೆ ಏರಿಕೆಯ ಬಿಸಿ ತಟ್ಟಲಿದೆ. ಈ ಹಿಂದೆ ಲೀಟರ್ ಪೊಟ್ಟಣದಲ್ಲಿ 50 ಮಿ.ಲೀ. ಹೆಚ್ಚುವರಿ ಹಾಲು ನೀಡಿ 2 ರೂ. ಏರಿಕೆ ಮಾಡಲಾಗಿತ್ತು, ಈಗ ಅದನ್ನು ಹಿಂಪಡೆಯಲಾಗುತ್ತದೆ. ಮಂಗಳವಾರದಿಂದ ಲೀಟರ್ ಹಾಲಿನ ಮೇಲೆ 4 ರೂ. ಏರಿಕೆಯಾಗಲಿದ್ದು, ಮೊಸರಿನ ದರವೂ 4 ರೂ. ಏರಿಕೆಯಾಗಲಿದೆ.
ಕೆಲ ದಿನಗಳ ಹಿಂದೆ ರಾಜ್ಯದ ರೈತರು ಕೆಎಂಎಫ್ ಮುಂದೆ ಹಾಲಿನ ದರ ಏರಿಸುವಂತೆ ಪ್ರತಿಭಟನೆ ನಡೆಸಿದ್ದರು. ಹಾಲು ಒಕ್ಕೂಟಗಳು ನಂದಿನಿ ಹಾಲಿನ ದರ ಏರಿಸುವಂತೆ ಕೆಎಂಎಫ್‌ಗೆ ಒತ್ತಡ ಹೇರಿದ್ದವು. ಈ ಹಿನ್ನೆಲೆಯಲ್ಲಿ ಕೆಎಂಎಫ್ ಆಡಳಿತ ಮಂಡಳಿ ರಾಜ್ಯದಲ್ಲಿ ಹಾಲಿನ ದರ ಏರಿಕೆಗೆ ಅನುಮತಿ ನೀಡುವಂತೆ ಸರ್ಕಾರ ಮನವಿ ಮಾಡಿತ್ತು. ರಾಜ್ಯ ಸರ್ಕಾರಕ್ಕೆ ಕೆಎಂಎಫ್ ಪ್ರತಿ ಲೀಟರ್‌ಗೆ 10 ರೂಪಾಯಿ ಹೆಚ್ಚಳ ಮಾಡುವಂತೆ ಪ್ರಸ್ತಾವನೆ ಕಳಿಸಿತ್ತು.
ಹೈನುಗಾರಿಕೆಯ ಖರ್ಚು ವೆಚ್ಚಗಳ ಹೆಚ್ಚಳದಿಂದಾಗಿ ಹಾಲಿನ ಬೆಲೆ ಏರಿಸಬೇಕಾದ ಅನಿವಾರ್ಯತೆ ಎದುರಾಗಿದೆ. ಹಾಲಿನ ದರ ಹೆಚ್ಚಿಸದಿದ್ದರೆ ಜಿಲ್ಲಾ ಹಾಲು ಒಕ್ಕೂಟಗಳು ನಷ್ಟ ಅನುಭವಿಸಬೇಕಾಗುತ್ತದೆ. ಮತ್ತೊಂದೆಡೆ ರೈತರು ಆರ್ಥಿಕ ಸಂಕಷ್ಟಕ್ಕೆ ಸಿಲುಕಬೇಕಾಗುತ್ತದೆ. ಇತರೆ ಬ್ರ್ಯಾಂಡ್‌ಗಳ ಹಾಲಿನ ದರಕ್ಕೆ ಹೋಲಿಸಿದರೆ ರಾಜ್ಯದ ನಂದಿನಿ ಹಾಲಿನ ಬೆಲೆ ತುಂಬಾ ಕಡಿಮೆಯಿದೆ ಎಂದು ಪ್ರಸ್ತಾವದಲ್ಲಿ ಉಲ್ಲೇಖಿಸಲಾಗಿತ್ತು.
ಕಳೆದ ವರ್ಷ ಜೂನ್‌ನಲ್ಲಷ್ಟೇ ಕೆಎಂಎಫ್, ಪ್ರತಿ ಲೀಟರ್‌ಗೆ 2 ರೂಪಾಯಿ ಹಾಲಿನ ದರ ಏರಿಕೆ ಮಾಡಿತ್ತು. 2024ರ ಜೂನ್ 26ರಿಂದ ಅನ್ವಯವಾಗುವಂತೆ ಹಾಲಿನ ದರ ಪರಿಷ್ಕರಣೆಯೊಂದಿಗೆ ಗ್ರಾಹಕರಿಗೆ ಹೆಚ್ಚುವರಿ ಹಾಲು ವಿತರಿಸಲು ಆರಂಭಿಸಿತ್ತು. ನಂದಿನಿ ಬ್ರ್ಯಾಂಡ್‌ನ ಎಲ್ಲಾ ಮಾದರಿಯ ಹಾಲಿನ ದರದಲ್ಲಿ ಲೀಟರ್‌ಗೆ 2 ರೂ. ಹೆಚ್ಚಿಸಲಾಗಿತ್ತು. ಗ್ರಾಹಕರು ಕೊಡುವ 2 ರೂ. ಹೆಚ್ಚುವರಿ ಹಣಕ್ಕೆ ಪ್ರತಿಯಾಗಿ 50 ಎಂಎಲ್ ಹೆಚ್ಚುವರಿ ಹಾಲು ನೀಡಲಾಗುತ್ತಿತ್ತು. ಇದೀಗ ಹೆಚ್ಚುವರಿ 50 ಎಂಎಲ್ ಹಾಲು ಕಡಿತಗೊಳಿಸಿ, ಮತ್ತೆ ನಂದಿನಿ ಹಾಲಿನ ದರ 4 ರೂ. ಏರಿಕೆ ಮಾಡಲಾಗುತ್ತಿದೆ.
ಈ ಸುದ್ದಿಯನ್ನೂ ಓದಿ | Gold Price Today: ಚಿನ್ನದ ದರದಲ್ಲಿ ಕೊಂಚ ಇಳಿಕೆ; ಇಂದಿನ ರೇಟ್ ಹೀಗಿದೆ