ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ

ಕರ್ನಾಟಕದಲ್ಲಿ ಹೆಚ್ಚುತ್ತಿದೆ ಎಚ್‌ಐವಿ ಆತಂಕ: ದೇಶದಲ್ಲೇ 3ನೇ ಸ್ಥಾನ, 2 ಲಕ್ಷಕ್ಕೂ ಅಧಿಕ ಸೋಂಕಿತರು!

ರಾಜ್ಯದಲ್ಲಿ 2 ಲಕ್ಷಕ್ಕೂ ಅಧಿಕ ಎಚ್‌ಐವಿ ಸೋಂಕಿತರು ಪತ್ತೆಯಾಗಿದ್ದು, ಆತಂಕ್ಕೀಡು ಮಾಡಿದೆ. ಬೆಂಗಳೂರು ನಗರ ಮತ್ತು ಬೆಳಗಾವಿ ಜಿಲ್ಲೆಯಲ್ಲಿ ಅತ್ಯಧಿಕ ಸಂಖ್ಯೆಯಲ್ಲಿದ್ದಾರೆ. ದೇಶದಲ್ಲಿ ಎಚ್‌ಐವಿ ಸೋಂಕಿತರ ಸಂಖ್ಯೆಯಲ್ಲಿ ಕರ್ನಾಟಕ 3 ನೇ ಸ್ಥಾನದಲ್ಲಿದೆ ಎಂದು ತಿಳಿದು ಬಂದಿದೆ.

ಸಂಗ್ರಹ ಚಿತ್ರ

ಬೆಂಗಳೂರು: ರಾಜ್ಯದಲ್ಲಿ 2 ಲಕ್ಷಕ್ಕೂ ಅಧಿಕ ಎಚ್‌ಐವಿ ಸೋಂಕಿತರು ಪತ್ತೆಯಾಗಿದ್ದು, ಆತಂಕ್ಕೀಡು ಮಾಡಿದೆ. ಬೆಂಗಳೂರು ನಗರ ಮತ್ತು ಬೆಳಗಾವಿ ಜಿಲ್ಲೆಯಲ್ಲಿ ಅತ್ಯಧಿಕ ಸಂಖ್ಯೆಯಲ್ಲಿದ್ದಾರೆ. ಎಚ್‌ಐವಿ (HIV case in Karnataka) ಸೋಂಕಿತರ ಸಂಖ್ಯೆಯಲ್ಲಿ ಕರ್ನಾಟಕ 3 ನೇ ಸ್ಥಾನದಲ್ಲಿದೆ. ಕರ್ನಾಟಕ ರಾಜ್ಯ ಏಡ್ಸ್ ನಿಯಂತ್ರಣ ಸೊಸೈಟಿ (KSAPS) ಮತ್ತು ರಾಷ್ಟ್ರೀಯ ಏಡ್ಸ್ ನಿಯಂತ್ರಣ ಸಂಸ್ಥೆ (NACO) ಬಿಡುಗಡೆ ಮಾಡಿರುವ ಇತ್ತೀಚಿನ ಅಂಕಿ-ಅಂಶಗಳು ರಾಜ್ಯದಲ್ಲಿ ಹೆಚ್‌ಐವಿ ಹರಡುವಿಕೆ ಮತ್ತು ಅದಕ್ಕೆ ಕಾರಣವಾಗುತ್ತಿರುವ ಅಂಶಗಳ ಕುರಿತು ಆಘಾತಕಾರಿ ಸತ್ಯಗಳನ್ನು ಹೊರಹಾಕಿವೆ.

ಕರ್ನಾಟಕದಲ್ಲಿ ಸದ್ಯ ಅಂದಾಜು 2.6 ಲಕ್ಷ ಜನರು ಎಚ್‌ಐವಿ ಸೋಂಕಿನಿಂದ ಬಳಲುತ್ತಿದ್ದು, ಸುಮಾರು 2,05,350 ಸೋಂಕಿತರು ಪ್ರಸ್ತುತ ಸರ್ಕಾರದ ಉಚಿತ ಆಂಟಿರಟ್ರೋವೈರಲ್ ಥೆರಪಿ (ART) ಚಿಕಿತ್ಸೆ ಪಡೆಯುತ್ತಿದ್ದಾರೆ. ಮತ್ತೊಂದು ಆಘಾತಕಾರಿ ವಿಷಯವೇನೆಂದರೆ ಅಂದಾಜು 56,406 ಜನರಿಗೆ ತಮಗೆ ಎಚ್‌ಐವಿ ಸೋಂಕು ತಗುಲಿರುವುದರ ಅರಿವೇ ಇಲ್ಲ. ತಮಗೆ ಸೋಂಕು ಇರುವುದು ತಿಳಿಯದ ಕಾರಣ ಇವರಿಂದ ಮತ್ತೊಬ್ಬರಿಗೆ ವೈರಸ್ ಹರಡುವ ಅಪಾಯ ಹೆಚ್ಚಾಗಿದೆ. ಇವರನ್ನು ಪತ್ತೆ ಹಚ್ಚಿ ಚಿಕಿತ್ಸೆಯ ವ್ಯಾಪ್ತಿಗೆ ತರುವುದೇ ಆರೋಗ್ಯ ಇಲಾಖೆಗೆ ಈಗಿರುವ ಅತಿ ದೊಡ್ಡ ಸವಾಲಾಗಿದೆ.

ಎಚ್‌ಐವಿ ಮತ್ತು ಏಡ್ಸ್ (ತಡೆ ಹಾಗೂ ನಿಯಂತ್ರಣ) ಕಾಯ್ದೆ 2017 ಪ್ರಕಾರ ಹೆಚ್‌ಐವಿ ಪರೀಕ್ಷೆಯನ್ನು ಕಡ್ಡಾಯಗೊಳಿಸುವಂತಿಲ್ಲ. ಸ್ವಯಂ ಪ್ರೇರಿತವಾಗಿ ಒಪ್ಪಿದ ಜನರಿಗೆ ಮಾತ್ರ ಎಚ್‌ಐವಿ ಪರೀಕ್ಷೆಯನ್ನು ಮಾಡಲಾಗುತ್ತಿದೆ. ಎಚ್‌ಐವಿ ಸೋಂಕನ್ನು ಸಂಪೂರ್ಣವಾಗಿ ಗುಣಪಡಿಸಲು ಯಾವುದೇ ಚಿಕಿತ್ಸೆ ಇರುವುದಿಲ್ಲ. ಆರೋಗ್ಯ ತಜ್ಞರ ಪ್ರಕಾರ, ಇತ್ತೀಚಿನ ದಿನಗಳಲ್ಲಿ ಬದಲಾಗುತ್ತಿರುವ ಲೈಂಗಿಕ ನಡವಳಿಕೆಗಳು ಮತ್ತು ಡೇಟಿಂಗ್ ಆ್ಯಪ್‌ಗಳ ಬಳಕೆ ಸೋಂಕು ಹರಡಲು ಪ್ರಮುಖ ಕಾರಣಗಳಾಗಿವೆ. ಇದರೊಂದಿಗೆ ಅಸುರಕ್ಷಿತ ಸಲಿಂಗ ಲೈಂಗಿಕ ಸಂಪರ್ಕದಿಂದ ಇನ್ನಷ್ಟು ಪ್ರಕರಣಗಳು ಹೆಚ್ಚಿವೆ.

ಕಣ್ಣಿನಲ್ಲಿ ಕಾಣಿಸುವುದೇ ಏಡ್ಸ್‌ ಕಾಯಿಲೆ ?

ಜಾಗೃತಿಗಾಗಿ ಹಲವು ಕಾರ್ಯಕ್ರಮ

ರಾಜ್ಯದಾದ್ಯಂತ 7700 ಶಾಲಾ ಹಾಗೂ ಪದವಿ ಪೂರ್ವ ಕಾಲೇಜು ವಿದ್ಯಾರ್ಥಿಗಳಿಗೆ ಹದಿಹರೆಯದ ಶಿಕ್ಷಣ ಕಾರ್ಯಕ್ರಮವನ್ನು ಆಯೋಜಿಸಿ, ವಿದ್ಯಾರ್ಥಿಗಳಲ್ಲಿ HIV ಕುರಿತು ಜಾಗೃತಿ ಮೂಡಿಸಲಾಗುತ್ತಿದೆ. ಮಾರುಕಟ್ಟೆ ಬಸ್ ನಿಲ್ದಾಣಗಳು, ಕಣಗಳು, ರೈಲು ನಿಲ್ದಾಣಗಳಂತಹ ಪ್ರಮುಖ ಸ್ಥಳಗಳಲ್ಲಿ ಫ್ಲಾಶ್ ಮಾಬ್‌ ಗಳನ್ನು ಆಯೋಜಿಸಿ ಸಾರ್ವಜನಿಕರಿಗೆ ಎಚ್‌ಐವಿ/ಏಡ್ಸ್ ಕುರಿತು ಮಾಹಿತಿ ನೀಡಲಾಗುತ್ತಿದೆ. ಯುವಜನರು ಕ್ಯೂಆರ್ ಕೋಡ್ (QR Code) ಬಳಸಿ ತಮ್ಮ ಲೈಂಗಿಕ ಆರೋಗ್ಯದ ಅಪಾಯವನ್ನು ತಾವೇ ಅನಾಮಧೇಯವಾಗಿ ಪರೀಕ್ಷಿಸಿಕೊಳ್ಳುವ ವ್ಯವಸ್ಥೆ ಮಾಡಲಾಗಿದೆ.

Vishakha Bhat Heggar

View all posts by this author