ರಾಮನಗರ, ಮಾ.23: ಬೆಳ್ಳಂಬೆಳಗ್ಗೆ ಸಂಭವಿಸಿದ ಭೀಕರ ರಸ್ತೆ ಅಪಘಾತದಲ್ಲಿ (Road Accident) ನಾಲ್ವರು ಸಾವನ್ನಪ್ಪಿದ ದುರ್ಘಟನೆ ಬೆಂಗಳೂರು ದಕ್ಷಿಣ ಜಿಲ್ಲೆಯ ರಾಮನಗರ (Ramanagara) ವ್ಯಾಪ್ತಿಯಲ್ಲಿ ಸಂಭವಿಸಿದೆ. ಬೆಂಗಳೂರು-ಮೈಸೂರು ಎಕ್ಸ್‌ಪ್ರೆಸ್‌ವೇಯಲ್ಲಿ (Bangalore Mysore Expressway) ಚನ್ನಪಟ್ಟಣ ತಾಲೂಕಿನ ಸಂಕಲಗೆರೆ (Sankalagere) ಗ್ರಾಮದ ಬಳಿ ಈ ಅಪಘಾತ ಸಂಭವಿಸಿದೆ.
ಕೇರಳದಿಂದ ಬೆಂಗಳೂರಿನತ್ತ ಬರುತ್ತಿದ್ದ ಬಸ್, ನಿದ್ರೆ ಮಂಪರಿನಿಂದ ಚಾಲಕನ ನಿಯಂತ್ರಣ ತಪ್ಪಿ ರಸ್ತೆ ಬದಿಯ ಪೆನ್ಸಿಂಗ್‌ಗೆ ಡಿಕ್ಕಿ ಹೊಡೆದಿದೆ ಎನ್ನಲಾಗಿದೆ. ಬಸ್‌ನಲ್ಲಿದ್ದ ನಾಲ್ವರು ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಮಾಹಿತಿ ತಿಳಿದ ತಕ್ಷಣ ಚನ್ನಪಟ್ಟಣ ಸಂಚಾರಿ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
ಪಿಕೆ ಟ್ರಾವೆಲ್ಸ್ ಎಂಬ ಬಸ್ ಅಪಘಾತಕ್ಕೀಡಾಗಿದ್ದು, ಮೃತರ ಪೈಕಿ ಇಬ್ಬರು ಬೆಂಗಳೂರಿನವರಾಗಿದ್ದಾರೆ. ಮೃತರನ್ನು ಕೇರಳದ ಕಾಜಿಕೋಟೆಯ ಮೊಹಮ್ಮದ್ ಫರಾನ್(22), ಸುಲ್ಫಿ (45), ಬೆಂಗಳೂರಿನ ಕಲಾಸಿಪಾಳ್ಯದ ನಿವಾಸಿ ರಶೀದ್(45) ಹಾಗೂ ಆಡುಗೋಡಿಯ ಅಣ್ಣೆಪಾಳ್ಯ ನಿವಾಸಿ ಸಾಕೇರ್ ಎಂದು ಗುರುತಿಸಲಾಗಿದೆ. ಕೇರಳದ ಕಣ್ಣೂರಿನ ಅಬ್ದುಲ್, ಅಲೇನ್ ಎಂಬುವರಿಗೆ ಗಾಯಗಳಾಗಿದ್ದು, ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ.
ದೇವನಹಳ್ಳಿ ರಾಷ್ಟ್ರೀಯ ಹೆದ್ದಾರಿಯಲ್ಲಿ ಭೀಕರ ಅಪಘಾತ
ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೇವನಹಳ್ಳಿ ರಾಷ್ಟ್ರೀಯ ಹೆದ್ದಾರಿಯಲ್ಲಿ ಭಾನುವಾರ ಟಿ.ಟಿ.ವಾಹನ ಲಾರಿಗೆ ಡಿಕ್ಕಿ ಹೊಡೆದಿದ್ದು ಟಿಟಿ ವಾಹನದಲ್ಲಿದ್ದ ಮೂವರು ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ಜಯಮ್ಮ (60) ಯಶೋದಮ್ಮ (60) ಮತ್ತು ಗಂಗಾ (38) ಸ್ಥಳದಲ್ಲೇ ಮೃತಪಟ್ಟವರು. ತುಮಕೂರು ಜಿಲ್ಲೆಯ ತಿಪಟೂರಿನ ವಿದ್ಯಾನಗರದ ಸ್ತ್ರೀ ಶಕ್ತಿ ಸಂಘದ 12 ಜನ ಕಾಶಿಗೆ ತೆರಳಲು ಕೆಂಪೇಗೌಡ ವಿಮಾನ ನಿಲ್ದಾಣಕ್ಕೆ ಆಗಮಿಸುತ್ತಿದ್ದ ವೇಳೆ ಈ ದುರ್ಘಟನೆ ನಡೆದಿದೆ.
ಇನ್ನು, ಧಾರವಾಡ ತಾಲೂಕಿನ ಚಿಕ್ಕಮಲ್ಲಿಗೆವಾಡ ರಸ್ತೆಯಲ್ಲಿ ಬೈಕ್‌ಗೆ ಲಾರಿ ಡಿಕ್ಕಿ ಹೊಡೆದ ಪರಿಣಾಮ ಲಕಮಾಪುರದ ಇಮಾಮ್ ಹೆಬ್ಬಳ್ಳಿ (23) ಅನಾಸ್ ಮುಲ್ಲಾನವರ (17) ಮೃತರಾಗಿದ್ದಾರೆ. ಬೆಂಗಳೂರಿನ ಕೆ.ಆರ್.ಪುರದಲ್ಲಿ ಇಂಡಿಕೇಟರ್ ಹಾಕದೆ ನಿಂತಿದ್ದ ಕ್ಯಾಂಟರ್ ವಾಹನಕ್ಕೆ ಟಾಟಾ ಇಂಟ್ರಾ ವಾಹನ ಡಿಕ್ಕಿ ಹೊಡೆದ ಪರಿಣಾಮ ಚಾಲಕ ಸೇರಿ ಮೂವರು ದಾರುಣ ಮೃತಪಟ್ಟಿದ್ದಾರೆ. ಸುರೇಶ್ (32), ಮಣಿಕಂಠ (39) ಮತ್ತು ಶ್ರೀನಿವಾಸ್ (35) ಮೃತರು.
ಅಪಘಾತದ ನಂತರವೂ ತಾಳ್ಮೆಯಿಂದ ವರ್ತಿಸಿದ ಬೆಂಗಳೂರಿನ ಕಾರು ಚಾಲಕ: ಮಾನವೀಯತೆ ಇತರರಿಗೂ ಮಾದರಿ ಎಂದ ನೆಟ್ಟಿಗರು