ಫೋಟೋ ಗ್ಯಾಲರಿ ಐಪಿಎಲ್​ ಸುನಿತಾ ವಿಲಿಯಮ್ಸ್​ ಫ್ಯಾಷನ್​ ವಿದೇಶ ಧಾರ್ಮಿಕ ಕ್ರೈಂ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Karnataka Budget 2025: ಸಿದ್ದರಾಮಯ್ಯ ಮಂಡಿಸಿದ್ದು ಹಲಾಲ್‌ ಬಜೆಟ್‌: ಬಿಜೆಪಿ ಟೀಕೆ

ಮುಖ್ಯಮಂತ್ರಿ ಸಿದ್ದರಾಮಯ್ಯ ದಾಖಲೆಯ ಬಜೆಟ್‌ ಮಂಡಿಸಿದ್ದು, ಇದನ್ನು ಪ್ರತಿಪಕ್ಷ ಬಿಜೆಪಿ ಹಲಾಲ್‌ ಬಜೆಟ್‌ ಎಂದು ಕರೆದಿದೆ. ಮುಸ್ಲಿಮರಿಗೆ ಭರಪೂರ ಕೊಡುಗೆ ಘೋಷಿಸುವ ಮೂಲಕ ಸಿದ್ದರಾಮಯ್ಯ ಅಲ್ಪಸಂಖ್ಯಾತರನ್ನು ಓಲೈಸುತ್ತಿದೆ ಎಂದು ತಿಳಿಸಿದೆ. ಈ ಬಗ್ಗೆ ಎಕ್ಸ್‌ನಲ್ಲಿ ಆಕ್ರೋಶ ಹೊರ ಹಾಕಿದೆ.

ಸಿದ್ದರಾಮಯ್ಯ ಮಂಡಿಸಿದ್ದು ಹಲಾಲ್‌ ಬಜೆಟ್‌: ಬಿಜೆಪಿ ಟೀಕೆ

Profile Ramesh B Mar 7, 2025 4:29 PM

ಬೆಂಗಳೂರು: ಮುಖ್ಯಮಂತ್ರಿ ಸಿದ್ದರಾಮಯ್ಯ (CM Siddaramaiah) ಶುಕ್ರವಾರ (ಮಾ. 7) ಬಜೆಟ್‌ ಮಂಡಿಸಿದ್ದಾರೆ (Karnataka Budget 2025). ಸಿದ್ದರಾಮಯ್ಯ ಮಂಡಿಸಿದ ಈ 16ನೇ ಬಜೆಟ್‌ ಗಾತ್ರ ಬರೋಬ್ಬರಿ 4,09,549 ಕೋಟಿ ರೂ. ವಿತ್ತೀಯ ಕೊರತೆ 90,428 ಕೋಟಿ ಟಿ ರೂ.. ಇದು ಜಿಎಸ್‌ಡಿಪಿಯ ಶೇ. 2.95ರಷ್ಟು. ಈ ಪೈಕಿ ಗ್ಯಾರಂಟಿ ಯೋಜನೆಗಳಿಗಾಗಿ 51,034 ಕೋಟಿ ರೂ. ಮೀಸಲಿಡಲಾಗಿದೆ. ಇದೀಗ ಪ್ರತಿಪಕ್ಷ ಬಿಜೆಪಿಯು (BJP Karnataka) ಕಾಂಗ್ರೆಸ್‌ ನೇತೃತ್ವದ ಸರ್ಕಾರವನ್ನು ಟೀಕಿಸಿದೆ. ಸಾಮಾಜಿಕ ಜಾಲತಾಣ ಎಕ್ಸ್‌ನಲ್ಲಿ ಈ ಬಗ್ಗೆ ಬರೆದುಕೊಂಡಿರುವ ಬಿಜೆಪಿ, ಬಜೆಟ್‌ನಲ್ಲಿ ಸಿದ್ದರಾಮಯ್ಯ ಅಲ್ಪಸಂಖ್ಯಾತ ಸಮುದಾಯ ಮುಸ್ಲಿಮರಿಗೆ ಭರಪೂರ ಕೊಡುಗೆ ಘೋಷಿಸಿ ಹಲಾಲ್‌ ಬಜೆಟ್‌ ಮಂಡಿಸಿದ್ದಾರೆ. ಜತೆಗೆ ಕರ್ನಾಟಕ ಬಜೆಟ್‌ ಅನ್ನು ಸಿದ್ದರಾಮಯ್ಯ ಇಸ್ಲಾಮೀಕರಣಗೊಳಿಸಿದ್ದಾರೆ ಎಂದಿದೆ.

ಬಿಜೆಪಿ ಹೇಳಿದ್ದೇನು?

ʼʼಕರ್ನಾಟಕ ಬಜೆಟ್‌ ಅನ್ನು ಇಸ್ಲಾಮೀಕರಣಗೊಳಿಸಿರುವ ಸಿಎಂ ಸಿದ್ದರಾಮಯ್ಯ ಅವರೆ, ಬಜೆಟ್‌ನಲ್ಲಿ ಎಸ್‌ಸಿ, ಎಸ್‌ಟಿ, ಒಬಿಸಿ ಸಮುದಾಯಗಳಿಗೆ ನೀವು ಕೊಟ್ಟಿರುವುದು ಕೇವಲ ಚಿಪ್ಪು ಮಾತ್ರʼʼ ಎಂದಿರುವ ಬಿಜೆಪಿ ಅದಕ್ಕಿರುವ ಕಾರಣವನ್ನು ಪಟ್ಟಿ ಮಾಡಿದೆ.



  • ಮುಸ್ಲಿಮರಿಗೆ ಸರ್ಕಾರಿ ಗುತ್ತಿಗೆಯಲ್ಲಿ ಮೀಸಲಾತಿ
  • ಮುಸ್ಲಿಮರ ಸರಳ ಮದುವೆಗೆ 50 ಸಾವಿರ ರೂ.
  • ವಕ್ಫ್‌, ಖಬರಸ್ಥಾನಗಳ ಮೂಲಸೌಕರ್ಯಕ್ಕೆ 150 ಕೋಟಿ ರೂ.
  • ಮುಸ್ಲಿಮರ ಸಾಂಸ್ಕೃತಿಕ ಕಾರ್ಯಕ್ರಮಕ್ಕೆ 50 ಲಕ್ಷ ರೂ.
  • ಮುಸ್ಲಿಮರು ಅತಿಹೆಚ್ಚು ವಾಸವಿರುವ ಪ್ರದೇಶದಲ್ಲಿ ಐಟಿಐ ಸ್ಥಾಪನೆ
  • KEA ಅಡಿ ಮುಸ್ಲಿಮ್ ವಿದ್ಯಾರ್ಥಿಗಳಿಗೆ ಶೇ. 50ರಷ್ಟು ಶುಲ್ಕ‌ ಕಡಿತ
  • ಉಲ್ಲಾಳದಲ್ಲಿ ಮುಸ್ಲಿಮ್ ವಿದ್ಯಾರ್ಥಿನಿಯರಿಗೆ ವಸತಿ ಸಹಿತ ಪಿಯುಸಿ ಕಾಲೇಜು
  • ಮುಸ್ಲಿಂ ವಿದ್ಯಾರ್ಥಿಗಳ ರಾಷ್ಟ್ರೀಯ ವಿದೇಶಿ ವಿದ್ಯಾರ್ಥಿ ವೇತನ ಏರಿಕೆ
  • ಬೆಂಗಳೂರಿನ ಹಜ್‌ ಭವನದಲ್ಲಿ ಹೆಚ್ಚುವರಿ ಕಟ್ಟಡ ನಿರ್ಮಾಣ
  • ಮುಸ್ಲಿಮ್‌ ವಿದ್ಯಾರ್ಥಿನಿಯರಿಗೆ ಸ್ವಯಂ ರಕ್ಷಣಾ ಕೌಶಲ್ಯ ತರಬೇತಿ

ದೇಶದ ಯಾವುದೇ ರಾಜ್ಯದಲ್ಲೂ ಇಲ್ಲದ ಕಾಂಗ್ರೆಸ್‌ನ ದಿವಾಳಿ ಮಾಡೆಲ್‌ ಜಾರಿ ಆಗುತ್ತಿದೆ ಎಂದು ಟೀಕಿಸಿದೆ. ಜತೆಗೆ ಇದನ್ನು ಹಲಾಲ್‌ ಬಜೆಟ್‌ ಎಂದೂ ಕರೆದಿದೆ.

ಈ ಸುದ್ದಿಯನ್ನೂ ಓದಿ: Karnataka Budget 2025: ಸಾಮಾಜಿಕ ಕಳಕಳಿ, ಉದ್ಯಮಸ್ನೇಹಿ ಬಜೆಟ್: ಎಂ.ಬಿ.ಪಾಟೀಲ್‌

ಬೊಗಳೆರಾಮಯ್ಯ ಬಜೆಟ್ ಎಂದ ಆರ್‌.ಅಶೋಕ್‌

ಸಾಮಾಜಿಕ ಮಾಧ್ಯಮ ಎಕ್ಸ್‌ನಲ್ಲಿ ಪ್ರತಿಕ್ರಿಯಿಸಿರುವ ವಿಪಕ್ಷಗಳ ನಾಯಕ ಆರ್‌.ಅಶೋಕ್‌, ʼʼಸಿದ್ದರಾಮಯ್ಯ ಅವರು ನಿರ್ಗಮಿಸುವ ಸಿಎಂ ಎಂದು ಜನಸಾಮಾನ್ಯರ ಮನಸ್ಸಿನಲ್ಲಿ ಗಟ್ಟಿಯಾದ ಅಭಿಪ್ರಾಯ ಮೂಡಿರುವುದರಿಂದ, ಈ ಬಜೆಟ್‌ನಿಂದ ಕನ್ನಡಿಗರಿಗೆ ಹೆಚ್ಚಿನ ನಿರೀಕ್ಷೆಗಳೇನೂ ಇರಲಿಲ್ಲ. ಆದರೂ ತಮ್ಮ ಕಡೆಯ ಬಜೆಟ್‌ನಲ್ಲಿ ಒಂದಿಷ್ಟಾದರೂ ಜನಪರ ಯೋಜನೆಗಳನ್ನು ಘೋಷಿಸುತ್ತಾರೆ ಎಂದು ಎದುರು ನೋಡುತ್ತಿದ್ದ ಜನರಿಗೆ ಈ ಬಜೆಟ್ ಸಂಪೂರ್ಣ ನಿರಾಸೆ ಮೂಡಿಸಿದೆ. ಇದು‌‌ ಕೇವಲ 'ಬೊಗಳೆರಾಮಯ್ಯ ಬಜೆಟ್'ʼ ಎಂದು ಟೀಕಿಸಿದ್ದಾರೆ.

ʼʼಇದು ಕೇವಲ ನಾಮಕಾವಸ್ತೆ ಬಜೆಟ್. ಶೀಘ್ರದಲ್ಲೇ ನಿವೃತ್ತಿ ಆಗುತ್ತಿರುವ ಮುಖ್ಯಮಂತ್ರಿಗಳ ನಿರ್ಗಮನದ ಬಜೆಟ್. ಇದರಿಂದ ಕರ್ನಾಟಕಕ್ಕೆ, ಕನ್ನಡಿಗರಿಗೆ ನಯಾಪೈಸೆ ಉಪಯೋಗವಿಲ್ಲʼʼ ಎಂದು ವಾಗ್ದಾಳಿ ನಡೆಸಿದ್ದಾರೆ. ʼʼಸಾಧನೆಯ ಬಲದಿಂದಾಗಲಿ, ದಿಟ್ಟ ನಾಯಕತ್ವದಿಂದಾಗಲಿ, ಅಹಿಂದ ನಾಮ ಜಪದಿಂದಾಗಲಿ ಚುನಾವಣೆಯನ್ನು ಎದುರಿಸಲು ಅಸಾಧ್ಯವೆಂದು ಗೊತ್ತಾದಾಗ ಅವಸರದಲ್ಲಿ ಐದು ಗ್ಯಾರೆಂಟಿ ಯೋಜನೆಗಳನ್ನು ಘೋಷಣೆ ಮಾಡಿ ಕರ್ನಾಟಕದಲ್ಲಿ ಕಾಂಗ್ರೆಸ್‌ ಅಧಿಕಾರಕ್ಕೆ ಬಂತು. ಈ ಗ್ಯಾರೆಂಟಿಗಳು ಬಡವರ ಮೇಲಿನ ಪ್ರೀತಿ ಇಲ್ಲವೇ ಕಾಳಜಿಯಿಂದ ಘೋಷಿಸಿದ್ದಲ್ಲ, ಇದರ ಹಿಂದಿನ ದುರುದ್ದೇಶ ಜನರನ್ನ ದಿಕ್ಕು ತಪ್ಪಿಸಿ, ಮತಗಳಿಸಿ ಅಧಿಕಾರಕ್ಕೆ ಏರುವುದು ಮಾತ್ರ ಆಗಿತ್ತುʼʼ ಎಂದಿದ್ದಾರೆ.