ಫೋಟೋ ಗ್ಯಾಲರಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Caste Census: ರಾಜ್ಯ ಸರ್ಕಾರದ ಜಾತಿಗಣತಿಗೆ ಸಚಿವರಿಂದಲೇ ವಿರೋಧ

ಸಿದ್ದರಾಮಯ್ಯ ಸರ್ಕಾರದ ಮಹತ್ವಾಕಾಂಕ್ಷಿ ಜಾತಿಗಣತಿಗೆ ಸಚಿವರಿಂದಲೇ ವಿರೋಧ ವ್ಯಕ್ತವಾಗುತ್ತಿದೆ. ಗುರುವಾರ (ಸೆಪ್ಟೆಂಬರ್ 18) ನಡೆದ ಸಭೆಯಲ್ಲಿ ಸಿಎಂ ಸಿದ್ದರಾಮಯ್ಯ ಮುಂದೆಯೇ ಕೆಲವು ಸಚಿವರು ಆಕ್ಷೇಪ ವ್ಯಕ್ತಪಡಿಸಿದ್ದಾರೆ ಎನ್ನಲಾಗಿದೆ. 331 ಹೊಸದಾಗಿ ಜಾತಿಗಳ ಸೇರ್ಪಡೆಗೆ ಆಕ್ಷೇಪ ವ್ಯಕ್ತಪಡಿಸಿದ ಕೆಲ ಸಚಿವರು, ಹೊಸ ಜಾತಿಗಳ ಸೇರ್ಪಡೆಯಿಂದ ಗೊಂದಲ ಸೃಷ್ಟಿಯಾಗಿದೆ ಎಂದಿದ್ದಾರೆ.

ಜಾತಿಗಣತಿಗೆ ಸಚಿವರಿಂದಲೇ ವಿರೋಧ

-

Ramesh B Ramesh B Sep 18, 2025 6:45 PM

ಬೆಂಗಳೂರು: ಸಿದ್ದರಾಮಯ್ಯ (Siddaramaiah) ಸರ್ಕಾರದ ಮಹತ್ವಾಕಾಂಕ್ಷಿ ಜಾತಿಗಣತಿಗೆ (Caste Census) ಪ್ರತಿಪಕ್ಷಗಳ ನಾಯಕರು ಮಾತ್ರವಲ್ಲದೆ ಹಲವು ಸಚಿವರು ವಿರೋಧ ವ್ಯಕ್ತಪಡಿಸಿದ್ದಾರೆ. ಗುರುವಾರ (ಸೆಪ್ಟೆಂಬರ್ 18) ನಡೆದ ಸಭೆಯಲ್ಲಿ ಸಿಎಂ ಸಿದ್ದರಾಮಯ್ಯ ಮುಂದೆಯೇ ಹಲವು ಸಚಿವರು ಆಕ್ಷೇಪ ವ್ಯಕ್ತಪಡಿಸಿದ್ದಾರೆ ಎನ್ನಲಾಗಿದೆ. 331 ಹೊಸದಾಗಿ ಜಾತಿಗಳ ಸೇರ್ಪಡೆಗೆ ಆಕ್ಷೇಪ ವ್ಯಕ್ತಪಡಿಸಿದ ಕೆಲ ಸಚಿವರು, ಹೊಸ ಜಾತಿಗಳ ಸೇರ್ಪಡೆಯಿಂದ ಗೊಂದಲ ಸೃಷ್ಟಿಯಾಗಿದೆ. ಈ ಗೊಂದಲವನ್ನು ಸರಿಪಡಿಸದ ಹೊರತು ಜಾತಿಗಣತಿ ಬೇಡ ಎಂದಿದ್ದಾರೆ. ಗೊಂದಲದ ನಡುವೆ ಜಾತಿಗಣತಿ ಮುಂದುವರಿಸಿದರೆ ಭವಿಷ್ಯದಲ್ಲಿ ಸಮಸ್ಯೆಯಾಬಹುದು ಎಂದೂ ಎಚ್ಚರಿಕೆ ನೀಡಿದ್ದಾರೆ.

ಸಮೀಕ್ಷೆ ಬಗ್ಗೆ ಸಿಎಂ ಸಿದ್ದರಾಮಯ್ಯ, ಭೈರತಿ ಸುರೇಶ್​, ಸಂತೋಷ್​ ಲಾಡ್ ಹಾಗೂ ಕೆ.ಎಚ್​. ಮುನಿಯಪ್ಪ ಮಾತ್ರ ಒಲವು ವ್ಯಕ್ತಪಡಿಸಿದ್ದಾರೆ ಎಂದು ತಿಳಿದುಬಂದಿದೆ. ಹೀಗಾಗಿ ಜಾತಿಗಣತಿ ಸಮೀಕ್ಷೆ ಮುಂದೂಡಿಕೆಯಾಗುವ ಸಾಧ್ಯತೆ ಎದೆ ಎನ್ನುವ ಗುಸುಗುಸು ಕೂಡ ಆರಂಭವಾಗಿದೆ.

ಇನ್ನು ಜಾತಿ ಪಟ್ಟಿಯಲ್ಲಿ ಮತಾಂತರಿತ ಕ್ರಿಶ್ಚಿಯನ್‌ ಧರ್ಮದೊಂದಿಗೆ ಮೂಲ ಜಾತಿ ಪ್ರತ್ಯೇಕವಾಗಿ ತೋರಿಸಿರುವುದು ವಿವಾದಕ್ಕೆ ಕಾರಣವಾಗಿದೆ. ಜತೆಗೆ ಪ್ರಬಲ ಜಾತಿಗಳಲ್ಲೂ ಉಪಜಾತಿಗಳ ಗೊಂದಲ ಉಂಟಾಗಿ ಆ ಸಮುದಾಯಗಳಲ್ಲೇ ವಿರೋಧ ವ್ಯಕ್ತವಾಗಿದೆ. ಸಮೀಕ್ಷೆಯ ಕೆಲ ವಿಚಾರಗಳನ್ನು ಬಿಜೆಪಿ ವಿರೋಧಿಸಿ ಸಮಾಜ ಒಡೆಯುವ ಕಾರ್ಯಕ್ಕೆ ಕೈ ಹಾಕಿದೆ ಎಂದು ಸರ್ಕಾರ ಆರೋಪಿಸಿದೆ. ಅದಾಗ್ಯೂ ಕೆಲ ಜಾತಿಗಳಲ್ಲಿನ ಈ ಸಮೀಕ್ಷೆಯ ಅಂಶಗಳಿಗೆ ಆಡಳಿತರೂಢ ಕಾಂಗ್ರೆಸ್‌ನಲ್ಲೂ ವಿರೋಧ ವ್ಯಕ್ತವಾಗಿದೆ.

ಈ ಸುದ್ದಿಯನ್ನೂ ಓದಿ: Caste census: ಸೆ.22 ರಿಂದ ರಾಜ್ಯದಲ್ಲಿ ಜಾತಿ ಸಮೀಕ್ಷೆ; ಜಾತಿ-ಉಪಜಾತಿಗಳ ಪಟ್ಟಿ ಇಲ್ಲಿದೆ

ಜಾತಿಗಳ ಪಟ್ಟಿಯಲ್ಲಿ ಮತಾಂತರಿತ ಕ್ರಿಶ್ಚಿಯನ್‌ ಧರ್ಮದೊಂದಿಗೆ ಮೂಲ ಜಾತಿಯನ್ನು ಪ್ರತ್ಯೇಕವಾಗಿ ತೋರಿಸಲಾಗಿದೆ. ಸರ್ಕಾರ ಜಾತಿ ಸಮೀಕ್ಷೆಯ ಹೆಸರಿನಲ್ಲಿ ಹೊಸ ಕ್ರೈಸ್ತ ಜಾತಿಗಳನ್ನು ಸೃಷ್ಟಿಸಿ ಗೊಂದಲ ಉಂಟು ಮಾಡುತ್ತಿದೆ. ಸಾಮಾಜಿಕ, ಶೈಕ್ಷಣಿಕ ಸಮೀಕ್ಷೆ ನಡೆಸಲು ಹೊರಟಿರುವ ಕಾಂಗ್ರೆಸ್‌ ಕ್ರೈಸ್ತರನ್ನು ಹಿಂದೂ ಜಾತಿಗಳ ನಡುವೆ ಎಳೆದು ತಂದು ಸಮಾಜವನ್ನು ದಿಕ್ಕು ತಪ್ಪಿಸುತ್ತಿದೆ ಎಂದು ಬಿಜೆಪಿ ಆರೋಪಿಸಿದೆ.

ಜಾತಿ-ಉಪಜಾತಿಗಳ ಪಟ್ಟಿ ಬಿಡುಗಡೆ

ಈ ಮಧ್ಯೆ ಕರ್ನಾಟಕದಲ್ಲಿ ಗುರುತಿಸಿರುವ 1,561 ಜಾತಿ-ಉಪಜಾತಿಗಳ ಪಟ್ಟಿಯನ್ನು (ಎಸ್.ಸಿ., ಎಸ್.ಟಿ. ಹೊರತುಪಡಿಸಿ) ರಾಜ್ಯ ಸರ್ಕಾರ ಬಿಡುಗಡೆ ಮಾಡಿದೆ. ರಾಜ್ಯದ 7 ಕೋಟಿ ಜನರ ಸಾಮಾಜಿಕ, ಶೈಕ್ಷಣಿಕ ಪರಿಸ್ಥಿತಿ ತಿಳಿದುಕೊಳ್ಳುವ ಉದ್ದೇಶದಿಂದ ಮಧುಸೂಧನ ನಾಯ್ಕ್ ಅವರ ಅಧ್ಯಕ್ಷತೆಯ ಆಯೋಗ ಸಮೀಕ್ಷೆ ಕಾರ್ಯ ಕೈಗೊಳ್ಳಲಿದೆ ಎಂದು ಸರ್ಕಾರ ಹೇಳಿದೆ. 2015ರಲ್ಲಿ ಆಯೋಗದ ಅಧ್ಯಕ್ಷರಾಗಿದ್ದ ಕಾಂತರಾಜ್ ವರದಿಯನ್ನು ಸಲ್ಲಿಸಿದ್ದರು. ಕಾಂತರಾಜ್ ವರದಿ ಸಲ್ಲಿಸಿ 10 ವರ್ಷ ಆದ ಕಾರಣ ಹೊಸ ಸಮೀಕ್ಷೆಗೆ ತೀರ್ಮಾನ ಮಾಡಿ, ಆ ಕಾರ್ಯವನ್ನು ಶಾಶ್ವತ ಹಿಂದುಳಿದ ವರ್ಗಗಳ ಆಯೋಗಕ್ಕೆ ವಹಿಸಲಾಗಿದೆ. ಈ ಬಗ್ಗೆ ಸಿಎಂ ಸಿದ್ದರಾಮಯ್ಯ ಇತ್ತೀಚೆಗೆ ಮಾಹಿತಿ ನೀಡಿದ್ದರು.

ಸೆಪ್ಟೆಂಬರ್‌ 22ರಿಂದ ಅಕ್ಟೋಬರ್‌ 7ರವರೆಗೆ ಕರ್ನಾಟಕ ರಾಜ್ಯ ಹಿಂದುಳಿದ ಆಯೋಗವು ಸಾಮಾಜಿಕ ಮತ್ತು ಶೈಕ್ಷಣಿಕ ಸಮೀಕ್ಷೆಯನ್ನು ಕೈಗೊಳ್ಳಲಿದೆ. ಈ ಸಮೀಕ್ಷೆ ಕಾರ್ಯದಲ್ಲಿ ಪ್ರತಿಯೊಬ್ಬರೂ ಪಾಲ್ಗೊಳ್ಳಬೇಕು. ಯಾರೂ ಸಮೀಕ್ಷೆಯಿಂದ ಹೊರಗುಳಿಯಬಾರದು. ಆನ್‌ಲೈನ್‌ ಮೂಲಕವೂ ಸಮೀಕ್ಷೆಯಲ್ಲಿ ಪಾಲ್ಗೊಳ್ಳಲು ಅವಕಾಶ ಕಲ್ಪಿಸಲಾಗಿದೆ. ಹೆಚ್ಚಿನ ಮಾಹಿತಿಗೆ ಕರ್ನಾಟಕ ಹಿಂದುಳಿದ ವರ್ಗಗಳ ಆಯೋಗದ ಸಹಾಯವಾಣಿ ಸಂಖ್ಯೆ 8050770004ಕ್ಕೆ ಕರೆ ಮಾಡಬಹುದು ಎಂದು ರಾಜ್ಯ ಸರ್ಕಾರ ತಿಳಿಸಿದೆ.