ಫೋಟೋ ಗ್ಯಾಲರಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

ವಿಷ್ಣುವರ್ಧನ್‌ ಹುಟ್ಟುಹಬ್ಬದಂದೇ ಫ್ಯಾನ್ಸ್‌ಗೆ ಗುಡ್‌ನ್ಯೂಸ್‌ ನೀಡಿದ ಕಿಚ್ಚ ಸುದೀಪ್‌; ಅಭಿಮಾನ ಕ್ಷೇತ್ರದ ಮಾಡೆಲ್‌ ರಿಲೀಸ್‌

Dr Vishnuvardhan: ಸಾಹಸಸಿಂಹ, ದಿವಂಗತ ಡಾ. ವಿಷ್ಣುವರ್ಧನ್‌ ಅವರ ಹುಟ್ಟುಹಬ್ಬದಂದು ನಟ ಕಿಚ್ಚ ಸುದೀಪ್‌ ಮಹತ್ವದ ಹೆಜ್ಜೆ ಇಟ್ಟಿದ್ದಾರೆ. ಈ ಹಿಂದೆ ವಿಷ್ಣುವರ್ಧನ್‌ ಅಭಿಮಾನ ಕ್ಷೇತ್ರ ನಿರ್ಮಿಸುವುದಾಗಿ ಘೋಷಿಸಿದ್ದ ಅವರು ಅದರ ಮಾಡೆಲ್‌ ರಿಲೀಸ್‌ ಮಾಡಿದ್ದಾರೆ.

ವಿಷ್ಣುವರ್ಧನ್‌ ಅಭಿಮಾನ ಕ್ಷೇತ್ರದ ಮಾಡೆಲ್‌ ರಿಲೀಸ್‌ ಮಾಡಿದ ಕಿಚ್ಚ

-

Ramesh B Ramesh B Sep 18, 2025 8:05 PM

ಬೆಂಗಳೂರು: ಸಾಹಸಸಿಂಹ, ದಿವಂಗತ ಡಾ. ವಿಷ್ಣುವರ್ಧನ್‌ (Dr Vishnuvardhan) ಅವರ ಹುಟ್ಟುಹಬ್ಬದಂದು (ಸೆಪ್ಟೆಂಬರ್‌ 18) ನಟ ಕಿಚ್ಚ ಸುದೀಪ್‌ (Kichcha Sudeepa) ಮಹತ್ವದ ಹೆಜ್ಜೆ ಇಟ್ಟಿದ್ದಾರೆ. ಈ ಹಿಂದೆ ವಿಷ್ಣುವರ್ಧನ್‌ ಅಭಿಮಾನ ಕ್ಷೇತ್ರ ನಿರ್ಮಿಸುವುದಾಗಿ ಘೋಷಿಸಿದ್ದ ಅವರು ಅದರ ಮಾಡೆಲ್‌ ರಿಲೀಸ್‌ ಮಾಡಿದ್ದಾರೆ. ವಿಷ್ಣುವರ್ಧನ್‌ ಹೆಸರಿನಲ್ಲಿ ಮಾದರಿ ಸ್ಮಾರಕ ನಿರ್ಮಿಸಲು ಅವರ ಅಭಿಮಾನಿಗಳಾದ ಸುದೀಪ್‌, ವೀರಕಪುತ್ರ ಶ್ರೀನಿವಾಸ್‌, ಅಶೋಕ್‌ ಖೇಣಿ, ಡಾ. ವಿಷ್ಣು ಸೇನಾ ಸಮಿತಿ ಮತ್ತಿತರರು ಮುಂದಾಗಿದ್ದು, ಅದರ ಝಲಕ್‌ ಇದೀಗ ಹೊರಬಿದ್ದಿದೆ.

ಈ ರೀತಿಯ ಪ್ರಯತ್ನ ದೇಶದಲ್ಲೇ ಮೊದಲು ಎನ್ನಲಾಗಿದ್ದು, ʼʼಅಭಿಮಾನದ ಕಲಾವಿದನಿಗೆ ಅಭಿಮಾನಿಗಳೇ ಅಭಿಮಾನದಿಂದ ನಿರ್ಮಿಸುತ್ತಿರುವ ಮೊಟ್ಟ ಮೊದಲ ಕ್ಷೇತ್ರʼʼ ಎಂದು ಬಣ್ಣಿಸಲಾಗಿದೆ. ಇದಕ್ಕೆ ಡಾ. ವಿಷ್ಣುವರ್ಧನ ಅಭಿಮಾನ ಕ್ಷೇತ್ರ ಎಂದು ಹೆಸರಿಡಲಾಗಿದೆ.



ಸದ್ಯ ರಿಲೀಸ್‌ ಆಗಿರುವ ಈ ಸ್ಮಾರಕದ ತ್ರೀಡಿ ಮಾಡೆಲ್‌ ಗಮನ ಸೆಳೆದಿದೆ. ಈ ಸ್ಮಾರಕದಲ್ಲಿ ಡಾ. ವಿಷ್ಣುವರ್ಧನ್‌ ಅವರ ವಿಶೇಷ ಭಾವಚಿತ್ರಗಳನ್ನು ಒಳಗೊಂಡ ಫೋಟೊ ಗ್ಯಾಲರಿ, ಪ್ರತಿಮೆ, ಲೈಬ್ರರಿ, ಧ್ಯಾನ ಕೇಂದ್ರ ಇರಲಿದೆ. ವಿಶಾಲ ಸ್ಥಳದಲ್ಲಿ, ಹಚ್ಚ ಹಸುರಿನ ನಡುವೆ ಇದು ತಲೆ ಎತ್ತಲಿದೆ. ಇಷ್ಟೇ ಅಲ್ಲದೆ ಇನ್ನಷ್ಟು ವೈಶಿಷ್ಟ್ಯ ಇದರಲ್ಲಿ ಇರಲಿದೆ ಎಂದು ಸುದೀಪ್‌ ತಿಳಿಸಿದ್ದಾರೆ.

ಈ ಸುದ್ದಿಯನ್ನೂ ಓದಿ: Kichcha Sudeepa: ದೇವಸ್ಥಾನ ಒಡೆದಷ್ಟೇ ಸಂಕಟವಾಗಿದೆ; ವಿಷ್ಣುವರ್ಧನ್‌ ಸಮಾಧಿ ತೆರವಿಗೆ ಕಿಚ್ಚ ಸುದೀಪ್‌ ಆಕ್ರೋಶ

ವಿಷ್ಣುವರ್ಧನ್‌ ಸ್ಮಾರಕ ನಿರ್ಮಾಣಕ್ಕೆ ಭೂಮಿ ಖರೀದಿಸಿದ್ದ ಸುದೀಪ್‌

ಬೆಂಗಳೂರಿನ ಅಭಿಮಾನ್ ಸ್ಟುಡಿಯೋದಲ್ಲಿದ್ದ ನಟ ವಿಷ್ಣುವರ್ಧನ್ ಅವರ ಸಮಾಧಿಯನ್ನು ಇತ್ತೀಚೆಗೆ ತೆರವುಗೊಳಿಸಲಾಗಿತ್ತು. ಈ ಬಗ್ಗೆ ಅಭಿಮಾನಿಗಳು ಆಕ್ರೋಶ ಹೊರಹಾಕಿದ್ದರು. ಇದರ ಬೆನ್ನಲ್ಲೇ ಪ್ರತಿಕ್ರಿಯಿಸಿದ್ದ ನಟ ಕಿಚ್ಚ ಸುದೀಪ್, ʼʼಈ ವಿಚಾರದಲ್ಲಿ ಅಭಿಮಾನಿಗಳ ಪರ ನಿಲ್ಲುತ್ತೇನೆ. ಸ್ಮಾರಕವಿದ್ದ ಜಾಗವನ್ನು ಉಳಿಸಲು ಹಾಗೂ ಮರುಸ್ಥಾಪನೆ ಮಾಡುವುದಕ್ಕೆ ನಾನು ತಯಾರಿದ್ದೀನಿʼʼ ಎಂದು ಹೇಳಿದ್ದರು. ಜತೆಗೆ ಕೆಂಗೇರಿ ಬಳಿ ವಿಷ್ಣು ಸ್ಮಾರಕ ನಿರ್ಮಾಣಕ್ಕೆ ಸುದೀಪ್‌ ಭೂಮಿ ಖರೀದಿಸಿದ್ದರು.

ವಿಷ್ಣುವರ್ಧನ್ ಅವರ ಅಭಿಮಾನಿಯೂ ಆದ ಕಿಚ್ಚ ಸುದೀಪ್, ವಿಷ್ಣುವರ್ಧನ್ ಸಮಾಧಿ ಧ್ವಂಸ ವಿಚಾರ ತಿಳಿದು ಭಾವುಕರಾಗಿದ್ದರು. ಮತ್ತೆ ನ್ಯಾಯಾಲಯಕ್ಕೆ ಹೋಗಿ, ಯಾವ ಸಂಸ್ಥೆ ಅಥವಾ ವ್ಯಕ್ತಿ ಅದನ್ನು ಖರೀದಿ ಮಾಡಿರುವರೋ, ಅವರ ಮನ ಒಲಿಸಿ, ಅವರಿಗೆ ಸಾಹಸ ಸಿಂಹರ ಸ್ಮಾರಕ ಇದ್ದ ಅಷ್ಟು ಜಾಗವನ್ನಾದರೂ ನಮಗೆ ಉಳಿಸಿ ಕೊಡುವುದಕ್ಕೆ ಮನವಿ ಮಾಡಲು ತಯಾರಿರುವುದಾಗಿ ಹೇಳಿದ್ದರು. ಅಭಿಮಾನ್ ಸ್ಟುಡಿಯೋದಿಂದ ಸ್ವಲ್ಪ ದೂರದಲ್ಲಿ ಸುದೀಪ್ ಅರ್ಧ ಎಕರೆ ಜಾಗ ಖರೀದಿಸಿದ್ದರು. ಸೆಪ್ಟೆಂಬರ್ 18ರಂದು ವಿಷ್ಣುವರ್ಧನ್ ಹುಟ್ಟುಹಬ್ಬದ ದಿನವೇ ಅಲ್ಲಿ ಸ್ಮಾರಕ ನಿರ್ಮಾಣಕ್ಕೆ ಅಡಿಗಲ್ಲು ಹಾಕುವುದಾಗಿ ಘೋಷಿಸಿದ್ದರು. ಈ ಬಗ್ಗೆ ಡಾ.ವಿಷ್ಣು ಸೇನಾ ಸಮಿತಿಯ ರಾಜ್ಯಾಧ್ಯಕ್ಷ ವೀರಕಪುತ್ರ ಶ್ರೀನಿವಾಸ್ ಮಾಹಿತಿ ನೀಡಿದ್ದರು. ಇದೀಗ ಸುದೀಪ್‌ ಕೊಟ್ಟ ಮಾತನ್ನು ಉಳಿಸಿಕೊಂಡಿದ್ದಾರೆ. ಒಂದು ವರ್ಷದೊಳಗೆ ಸ್ಮಾರಕದ ಕೆಲಸ ಮುಗಿಸಲು ತೀರ್ಮಾನಿಸಿರುವಾಗಿ ವೀರಕಪುತ್ರ ಶ್ರೀನಿವಾಸ್ ತಿಳಿಸಿದ್ದಾರೆ.