ಬೆಂಗಳೂರು: ಹುಲಿಕಲ್ ಘಾಟ್‌ನಲ್ಲಿ ರಸ್ತೆ ತಡೆಗೋಡೆ ಕುಸಿದು ಮೃತಪಟ್ಟ ಮೂವರು ಕಾರ್ಮಿಕರ ಕುಟುಂಬಗಳಿಗೆ ತಲಾ 5 ಲಕ್ಷ ಪರಿಹಾರವನ್ನು ಸಿಎಂ ಸಿದ್ದರಾಮಯ್ಯ ಅವರು ಘೋಷಿಸಿದ್ದಾರೆ. ಈ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಸಿಎಂ ಅವರು, ಕಾರ್ಮಿಕರ ಸಾವಿಗೆ ಸಂತಾಪ ಸೂಚಿಸಿ, ಪರಿಹಾರ ಘೋಷಿಸಿದ್ದಾರೆ.
ಶಿವಮೊಗ್ಗ ಜಿಲ್ಲೆ ಹೊಸನಗರ ತಾಲೂಕಿನ ಹುಲಿಕಲ್ ಘಾಟಿ ತಿರುವಿನಲ್ಲಿ ರಸ್ತೆ ತಡೆಗೋಡೆ ನಿರ್ಮಾಣ ಕಾಮಗಾರಿಯ ವೇಳೆ ಮಣ್ಣು ಕುಸಿದು ಮೂವರು ಕಾರ್ಮಿಕರು ಮೃತಪಟ್ಟ ಸುದ್ದಿ ಕೇಳಿ ದುಃಖವಾಯಿತು. ಮೃತ ದುರ್ದೈವಿ ಕಾರ್ಮಿಕರ ಆತ್ಮಕ್ಕೆ ಚಿರಶಾಂತಿ ದೊರಕಲಿ, ಅವರ ಕುಟುಂಬ ಸದಸ್ಯರಿಗೆ ನೋವು ಭರಿಸುವ ಶಕ್ತಿ ಸಿಗಲಿ ಎಂದು ಪ್ರಾರ್ಥಿಸುತ್ತೇನೆ.
ಘಟನೆ ಸಂಬಂಧ ಜಿಲ್ಲಾ ಉಸ್ತುವಾರಿ ಸಚಿವರಾದ ಮಧು ಬಂಗಾರಪ್ಪ ಅವರೊಂದಿಗೆ ಮಾತುಕತೆ ನಡೆಸಿ, ಮಾಹಿತಿ ಪಡೆದಿದ್ದೇನೆ. ಕುಟುಂಬಕ್ಕೆ ಆಧಾರವಾಗಿದ್ದ ದುಡಿಯುವ ಜೀವಗಳು ಈ ಘಟನೆಯಲ್ಲಿ ಬಲಿಯಾಗಿದ್ದು, ಮಾನವೀಯ ನೆಲೆಯಲ್ಲಿ ಮೃತ ಕಾರ್ಮಿಕರ ಕುಟುಂಬಕ್ಕೆ ತಲಾ ರೂ.5 ಲಕ್ಷ ಪರಿಹಾರ ನೀಡಲಾಗುವುದು ಎಂದು ಸಿಎಂ ತಿಳಿಸಿದ್ದಾರೆ.
ಹುಲಿಕಲ್ ಘಾಟ್‌ನಲ್ಲಿ ಗುಡ್ಡ ಕುಸಿದು ಮೂವರು ಕಾರ್ಮಿಕರ ಸಾವು
ಶಿವಮೊಗ್ಗ: ಜಿಲ್ಲೆಯ ಹುಲಿಕಲ್ ಘಾಟ್‌ನಲ್ಲಿ (ಬಾಳೇಬರೆ) (hulikal ghat) ಗುಡ್ಡ ಕುಸಿತ ಸಂಭವಿಸಿ, ಮೂವರು ಕಾರ್ಮಿಕರು ಮೃತಪಟ್ಟ ಘಟನೆ ನಡೆದಿತ್ತು. ಸ್ಥಳದಲ್ಲಿಯೇ ಇದ್ದ ಕಾಮಗಾರಿ ಮೇಲ್ವಿಚಾರಕ ಸೇರಿ ಮೂವರು ಮೃತಪಟ್ಟಿದ್ದರು. ಕಾಮಗಾರಿ ಮೇಲ್ವಿಚಾರಕ ಚಕ್ಕಾರು ಗ್ರಾಮದ ರಾಘು (37), ಹಾವೇರಿ ಜಿಲ್ಲೆಯ ನೆಲಗಲು ಗ್ರಾಮದ ರಾಜು (30) ಹಾಗೂ ಶಬ್ಬೀರ್(40) ಮೃತ ಕಾರ್ಮಿಕರು.
ಮಲೆನಾಡು ಮತ್ತು ಕರಾವಳಿ ಸಂಪರ್ಕಕ್ಕೆ ಹುಲಿಕಲ್ ಘಾಟ್ ಮುಖ್ಯ ಸಂಪರ್ಕ ಸೇತುವೆಯಾಗಿದೆ. ರಾತ್ರಿ ವೇಳೆ ಆಗುಂಬೆ ಘಾಟಿಯಲ್ಲಿ ವಾಹನಗಳ ಸಂಚಾರಕ್ಕೆ ಅವಕಾಶ ಇಲ್ಲದ ಕಾರಣ ಎಲ್ಲ ರೀತಿಯ ವಾಹನಗಳು ಹುಲಿಕಲ್ ಘಾಟ್‌ನಲ್ಲೇ ಸಂಚರಿಸುತ್ತವೆ. ಗುರುವಾರ ಸಂಜೆಯಿಂದಲೇ ಘಾಟಿ ಮಾರ್ಗ ಬಂದ್ ಮಾಡಿದ್ದರಿಂದ ಈ ರಸ್ತೆಯಲ್ಲಿ ಸಂಚಾರ ಅಸ್ತವ್ಯಸ್ತಗೊಂಡಿತ್ತು. ಶಿವಮೊಗ್ಗದಿಂದ ಗುರುವಾರ ಸಂಜೆ ಹುಲಿಕಲ್ ಘಾಟ್ ಮಾರ್ಗವಾಗಿ ಕರಾವಳಿ ಕಡೆಗೆ ಹೊರಟ ಸಾವಿರಾರು ವಾಹನಗಳು ಘಾಟಿವರೆಗೆ ಬಂದು ಬಳಿಕ ನಾಗೋಡಿ – ಕೊಲ್ಲೂರು ಮಾರ್ಗವಾಗಿ ಕರಾವಳಿ ಕಡೆಗೆ ಸಂಚರಿಸಿದವು. ಹುಲಿಕಲ್ ಘಾಟ್‌ನಲ್ಲಿ ಕಾಮಗಾರಿ ವೇಳೆ ಧರೆ ಕುಸಿತವಾಗಿತ್ತು. ಮಣ್ಣಿನ ಅಡಿಯಲ್ಲಿ ಸಿಲುಕಿ ಕಾಮಗಾರಿ ಮೇಲ್ವಿಚಾರಕ ನಗರ ನಿವಾಸಿ ರಾಘವೇಂದ್ರ ಸೇರಿ ಮೂವರು ಸಾವನ್ನಪ್ಪಿದ್ದರು.
ಗಾಯಾಳುಗಳನ್ನು ನಗರ ಮತ್ತು ಹೊಸನಗರ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಮೃತದೇಹ ಹೊರತೆಗೆಯುವ ಕೆಲಸವನ್ನು ಅಗ್ನಿಶಾಮಕ ದಳ & ಸ್ಥಳೀಯರ ನೆರವಿನಿಂದ ನಡೆಸಲಾಗುತ್ತಿದೆ.