ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ

Shivamogga Dasara 2026: ಶಿವಮೊಗ್ಗದಲ್ಲಿ ಜಂಬೂ ಸವಾರಿ ವೇಳೆ ಬೆದರಿದ ಆನೆ; ಅಂಬಾರಿ ಹೊತ್ತು ದಿಕ್ಕಾಪಾಲಾಗಿ ಓಟ!

ಶಿವಮೊಗ್ಗ ನಗರದ ಕೋಟೆ ಶ್ರೀ ಸೀತಾರಾಮಾಂಜನೇಯ ದೇವಸ್ಥಾನದ ಕಡೆಯಿಂದ ಫ್ರೀಡಂ ಪಾರ್ಕ್‌ನತ್ತ ಜಂಬೂ ಸವಾರಿ ಸಾಗುತ್ತಿದ್ದಾಗ ಈ ಘಟನೆ ನಡೆದಿದೆ. ಜನರ ಗುಂಪಿನ ನಡುವೆ ಹೋಗುತ್ತಿದ್ದಾಗ ಅಂಬಾರಿ ಹೊತ್ತ ಆನೆ ಬೆದರಿದೆ. ಈ ವೇಳೆ ದಿಕ್ಕಾಪಾಲಾಗಿ ಓಡಿದ್ದು, ಆನೆಯನ್ನು ನಿಯಂತ್ರಿಸಲು ಮಾವುತರು ಅರಣ್ಯ ಇಲಾಖೆ ಸಿಬ್ಬಂದಿ ಹರಸಾಹಸಪಟ್ಟರು.

ಶಿವಮೊಗ್ಗ: ವಿಜಯದಶಮಿ ಅಂಗವಾಗಿ ಶಿವಮೊಗ್ಗದಲ್ಲಿ ನಡೆದ ದಸರಾ ಜಂಬೂ ಸವಾರಿ ವೇಳೆ (Shivamogga Dasara 2026) ಬೆಳ್ಳಿಯ ಅಂಬಾರಿ ಹೊತ್ತಿದ್ದ ಸೋಮಣ್ಣ ಆನೆ ದಿಢೀರ್ ಬೆದರಿದ ಪರಿಣಾಮ ಕೆಲಕಾಲ ಆತಂಕದ ವಾತಾವರಣ ನಿರ್ಮಾಣವಾಯಿತು. ಆನೆ ದಿಕ್ಕಾಪಾಲಾಗಿ ಓಡಿದ್ದರಿಂದ ಕಾರು ಜಖಂಗೊಂಡಿದ್ದು, ಆನೆಯ ಆರ್ಭಟ ಕಂಡ ಜನರು ಭಯಭೀತರಾದರು.

ನಗರದ ಕೋಟೆ ಶ್ರೀ ಸೀತಾರಾಮಾಂಜನೇಯ ದೇವಸ್ಥಾನದ ಕಡೆಯಿಂದ ಫ್ರೀಡಂ ಪಾರ್ಕ್‌ನತ್ತ ಜಂಬೂ ಸವಾರಿ ಸಾಗುತ್ತಿದ್ದಾಗ ಈ ಘಟನೆ ನಡೆದಿದೆ. ಕೋಟೆ ಆಂಜನೇಯ ಸ್ವಾಮಿ ದೇವಸ್ಥಾನವನ್ನು ದಾಟುತ್ತಿದ್ದಂತೆ ಸೋಮಣ್ಣ ಆನೆ ಬೆದರಿದ್ದು, ಜನರ ಗುಂಪಿನ ನಡುವೆ ವಾಸವಿ ಶಾಲೆಯತ್ತ ಓಡಿದೆ. ಈ ಸಂದರ್ಭದಲ್ಲಿ ಆನೆಯನ್ನು ನಿಯಂತ್ರಿಸಲು ಮಾವುತರು, ಕಾವಾಡಿಗರು ಹಾಗೂ ಅರಣ್ಯ ಇಲಾಖೆ ಸಿಬ್ಬಂದಿ ಸಾಕಷ್ಟು ಪ್ರಯತ್ನ ನಡೆಸಿದರು.



ಆನೆ ದಿಢೀರ್ ಬೆದರಿದ್ದರಿಂದ ಮೆರವಣಿಗೆಯನ್ನು ವೀಕ್ಷಿಸುತ್ತಿದ್ದ ಜನರಲ್ಲಿ ಆತಂಕ ಉಂಟಾಯಿತು. ಆನೆಯ ಓಡಾಟದ ವೇಳೆ ಕಾರು ಜಖಂಗೊಂಡಿದ್ದು, ಸ್ಥಳದಲ್ಲಿ ಕೆಲಕಾಲ ಗೊಂದಲದ ವಾತಾವರಣ ನಿರ್ಮಾಣವಾಗಿತ್ತು.

ಶಿವಮೊಗ್ಗ ದಸರಾ ಜಂಬೂ ಸವಾರಿಯಲ್ಲಿ ಸೋಮಣ್ಣ ಆನೆ ಇದೇ ಮೊದಲ ಬಾರಿಗೆ ಬೆಳ್ಳಿಯ ಅಂಬಾರಿಯನ್ನು ಹೊತ್ತಿತ್ತು. ಸಾಗರ್ ಮತ್ತು ಬಹದ್ದೂರ್ ಆನೆಗಳು ಮೆರವಣಿಗೆಯಲ್ಲಿ ಅದರೊಂದಿಗೆ ಸಾಗುತ್ತಿದ್ದವು. ಇದಕ್ಕೂ ಮುನ್ನ ಶಾಸಕ ಚನ್ನಬಸಪ್ಪ ಅವರು ಚಾಮುಂಡೇಶ್ವರಿಗೆ ಪುಷ್ಪಾರ್ಚನೆ ಸಲ್ಲಿಸುವ ಮೂಲಕ ಜಂಬೂ ಸವಾರಿಗೆ ಚಾಲನೆ ನೀಡಿದ್ದರು. ಕೋಟೆ ಶಿವಪ್ಪನಾಯಕ ಅರಮನೆಯಿಂದ ಅಲ್ಲಮಪ್ರಭು ಮೈದಾನದವರೆಗೆ ಸಾಗುತ್ತಿದ್ದ ಮೆರವಣಿಗೆಯ ಸಂದರ್ಭದಲ್ಲಿ ಘಟನೆ ನಡೆದಿದೆ.