ಶಿವಮೊಗ್ಗ: ಮಾಜಿ ಡಿಸಿಎಂ ಹಾಗೂ ಹಿರಿಯ ಬಿಜೆಪಿ ನಾಯಕ ಕೆ.ಎಸ್. ಈಶ್ವರಪ್ಪ (K S Eshwarappa) ಅವರಿಗೆ ಜೀವ ಬೆದರಿಕೆ ಕರೆ ಬಂದಿದ್ದು, ಈ ಸಂಬಂಧ ಅವರು ಶಿವಮೊಗ್ಗ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗೆ ದೂರು ಸಲ್ಲಿಸಿದ್ದಾರೆ. ಅಕ್ಟೋಬರ್ 17ರ ರಾತ್ರಿ ಈಶ್ವರಪ್ಪ ಅವರ ಅಧಿಕೃತ ಮೊಬೈಲ್ ಸಂಖ್ಯೆಗೆ ಕರೆ ಮಾಡಿದ ದುಷ್ಕರ್ಮಿಗಳು ಅವಾಚ್ಯ ಶಬ್ದಗಳಿಂದ ನಿಂದಿಸಿ, ಪ್ರಾಣ ಬೆದರಿಕೆ ಹಾಕಿದ್ದಾರೆ ಎಂದು ದೂರಿನಲ್ಲಿ ಉಲ್ಲೇಖಿಸಲಾಗಿದೆ.
ಅಕ್ಟೋಬರ್ 17ರ ರಾತ್ರಿ 8:49ಕ್ಕೆ 7019994981 ಸಂಖ್ಯೆಯಿಂದ ರಿಜ್ವಾನ್ ಬೇಗ್ ಎಂಬಾತ ಹಾಗೂ ರಾತ್ರಿ 10:49ಕ್ಕೆ 9823658527 ಸಂಖ್ಯೆಯಿಂದ ಫರಾನ್ ರಶೀದ್ ಎಂಬಾತ ಕರೆ ಮಾಡಿ ಬೆದರಿಕೆ ಹಾಕಿದ್ದು, 'ಟ್ರಾಯ್' ತಂತ್ರಾಂಶದ ಮೂಲಕ ಇವರ ಹೆಸರುಗಳು ಪತ್ತೆಯಾಗಿವೆ. ಈ ಘಟನೆಯಿಂದ ತಮಗೂ ಹಾಗೂ ತಮ್ಮ ಕುಟುಂಬದವರಿಗೂ ತೀವ್ರ ಆತಂಕ ಉಂಟಾಗಿದ್ದು, ಕೂಡಲೇ ತಪ್ಪಿತಸ್ಥರ ವಿರುದ್ಧ ಕಠಿಣ ಕಾನೂನು ಕ್ರಮ ಜರುಗಿಸಬೇಕೆಂದು ಈಶ್ವರಪ್ಪ ಅವರು ಪೊಲೀಸರನ್ನು ಆಗ್ರಹಿಸಿದ್ದಾರೆ.
ಬೆದರಿಕೆ ಕರೆಗಳ ಕುರಿತು ಮಾಧ್ಯಮಗಳೊಂದಿಗೆ ಮಾತನಾಡಿರುವ ಈಶ್ವರಪ್ಪ, ಮೊದಲ ಕರೆ ಬಂದಾಗ ತಾನು ಕುಟುಂಬದವರೊಂದಿಗೆ ಚಿತ್ರಮಂದಿರದಲ್ಲಿದ್ದೆ. “ಮೊದಲ ಕರೆ ಮಾಡಿದ ವ್ಯಕ್ತಿ, ‘ನೀವು ಕೆ.ಎಸ್. ಈಶ್ವರಪ್ಪನಾ?’ ಎಂದು ಕೇಳಿದ. ಅದಕ್ಕೆ ನಾನು ಹೌದು ಎಂದು ಉತ್ತರಿಸಿದೆ. ಬಳಿಕ ಆತ ಏನೇನೋ ಮಾತನಾಡುತ್ತಿದ್ದ. ವಿಷಯವೇನು ಎಂದು ಕೇಳಿ, ಪೊಲೀಸ್ ದೂರು ನೀಡುವುದಾಗಿ ತಿಳಿಸಿದೆ. ಅದಕ್ಕೆ ಆತ, ‘ಪರವಾಗಿಲ್ಲ, ದೂರು ಕೊಡಿ’ ಎಂದಿದ್ದಾನೆ” ಎಂದು ಈಶ್ವರಪ್ಪ ವಿವರಿಸಿದ್ದಾರೆ. ಮೊದಲ ಕರೆ ಮಾಡಿದ ವ್ಯಕ್ತಿಯೊಂದಿಗೆ ತಾವೂ ಸ್ವಲ್ಪ ಗಟ್ಟಿಯಾದ ಧ್ವನಿಯಲ್ಲಿ ಮಾತನಾಡಿದ್ದಾಗಿ ತಿಳಿಸಿದ ಅವರು, ಮತ್ತೆ ಕರೆ ಮಾಡುವುದಾಗಿ ಆತ ಹೇಳಿದ್ದರೂ ಈವರೆಗೆ ಮರಳಿ ಕರೆ ಮಾಡಿಲ್ಲ ಎಂದಿದ್ದಾರೆ.
ಎರಡನೇ ಕರೆ ಮಾಡಿದ ವ್ಯಕ್ತಿ ಸಚಿವ ಜಮೀರ್ ಅಹ್ಮದ್ ಕುರಿತು ತಾವು ಈ ಹಿಂದೆ ಮಾತನಾಡಿದ್ದ ವಿಚಾರವನ್ನು ಪ್ರಸ್ತಾಪಿಸಿದ್ದಾನೆ ಎಂದು ಈಶ್ವರಪ್ಪ ಹೇಳಿದ್ದಾರೆ. ಈ ಹಿಂದೆಯೂ ತಮಗೆ ಬೆದರಿಕೆ ಕರೆಗಳು ಬಂದಿದ್ದು, ಆ ಸಂದರ್ಭದಲ್ಲಿಯೂ ಪೊಲೀಸರಿಗೆ ದೂರು ನೀಡಿದ್ದಾಗಿ ತಿಳಿಸಿದ್ದಾರೆ. ಆದರೆ, ಹಿಂದಿನ ಕರೆಗಳು ವಿದೇಶಗಳಿಂದ ಬಂದಿದ್ದವು. ಈಗ ಕರೆ ಮಾಡಿದವರು ಭಾರತದಲ್ಲೇ ಇರುವವರಿರಬಹುದು ಎಂಬ ಅನುಮಾನವಿದೆ ಎಂದು ಅವರು ಹೇಳಿದ್ದಾರೆ.
ಟೈಗರ್ ಶ್ರಾಫ್ ಮೇಲೆ ಗುಂಡಿನ ದಾಳಿ; ರಾಜಸ್ಥಾನದಲ್ಲಿ ಅಪ್ರಾಪ್ತ ಸೇರಿ ಮೂವರು ಆರೋಪಿಗಳ ಬಂಧನ
ಎರಡು ಬೆದರಿಕೆ ಕರೆಗಳ ಕುರಿತು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳಿಗೆ ದೂರು ನೀಡಿರುವುದಾಗಿ ತಿಳಿಸಿದ ಈಶ್ವರಪ್ಪ, ಪ್ರಕರಣದ ಬಗ್ಗೆ ಕ್ರಮ ಕೈಗೊಳ್ಳುವ ಭರವಸೆಯನ್ನು ಪೊಲೀಸರು ನೀಡಿದ್ದಾರೆ ಎಂದಿದ್ದಾರೆ. ತಮಗೆ ಹಾಗೂ ಕುಟುಂಬದವರಿಗೆ ಭದ್ರತೆ ಒದಗಿಸುವುದರ ಜೊತೆಗೆ, ಕರೆ ಮಾಡಿದವರನ್ನು ಪತ್ತೆಹಚ್ಚಿ ಸೂಕ್ತ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಅವರು ಆಗ್ರಹಿಸಿದ್ದಾರೆ.