ಶಿವಮೊಗ್ಗ: ಪಶು ವೈದ್ಯೆ ಡಾ. ಸಮೀಕ್ಷಾ ಸಾವಿಗೆ ಕಾರಣವಾಗಿದ್ದ ನೀರಾನೆ ಹಂಸಿಣಿ (Hippopotamus Hamsini) ಬಹು ಅಂಗಾಂಗ ಸೋಂಕಿನಿಂದ ಮೃತಪಟ್ಟಿದೆ. ಇತ್ತೀಚೆಗೆ ನೀರಾನೆ ಹೊಟ್ಟೆಯಲ್ಲಿ ಭ್ರೂಣ ಮೃತಪಟ್ಟು, ದೇಹಕ್ಕೆ ಸೋಂಕು ವ್ಯಾಪಿಸಿತ್ತು. ಗರ್ಭಾಶಯದ ಸೋಂಕು ದೇಹ ಪೂರ್ತಿ ಹರಡಿದ್ದ ಹಿನ್ನೆಲೆ ಚಿಕಿತ್ಸೆ ಫಲಿಸದೇ ಮೃಗಾಲಯದಲ್ಲಿ ನೀರಾನೆ ಮೃತಪಟ್ಟಿದೆ.
ನೆನ್ನೆಯಿಂದಲೇ ನೀರಾನೆ ಚಿಕಿತ್ಸೆಗೆ ಸ್ಪಂದಿಸುತ್ತಿರಲಿಲ್ಲ. ವೈದ್ಯರ ತಂಡವು ಡಾರ್ಟಿಂಗ್ ಮತ್ತು ಪೋಲ್ ಸಿರಿಂಜ್ ಮೂಲಕ ಮೆಡಿಸಿನ್ ನೀಡುತ್ತಿತ್ತು. ಬನ್ನೇರುಘಟ್ಟ ಮತ್ತು ಮೈಸೂರಿನ ತಜ್ಞ ವೈದ್ಯರ ಶ್ರಮದ ನಡುವೆಯೂ ನೀರಾನೆ ಮೃತಪಟ್ಟಿದೆ. ನೀರಾನೆಯ ರಕ್ತ, ಸಗಣಿ, ಬ್ಲಡ್ ಕ್ಲಾಟ್ಸ್ ಸ್ಯಾಂಪಲ್ ಸಂಗ್ರಹಿಸಿ ವೈದ್ಯರು ಪರೀಕ್ಷಿಸಿದ್ದರು.
ಕಳೆದ ಮಾ.18 ರಿಂದಲೇ ನೀರಾನೆ ಆಹಾರ ತ್ಯಜಿಸಿತ್ತು. ಮಾ.19 ರಂದು ಡಾ. ಸಮೀಕ್ಷಾ ಮೇಲೆ ದಾಳಿ ಮಾಡಿತ್ತು. ಚಿಕಿತ್ಸೆ ಫಲಿಸದೇ ಮಾ.20 ರಂದು ಬೆಂಗಳೂರಿನ ಸಕಲವಾರ ಮೂಲದ ಡಾ. ಸಮೀಕ್ಷಾ ಮೃತಪಟ್ಟಿದ್ದರು. ಪಶುವೈದ್ಯೆ ಮೇಲೆ ದಾಳಿ ಮಾಡಿದ 25ನೇ ದಿನದಲ್ಲೇ ನೀರಾನೆ ಹಂಸಿಣಿ ಕೂಡ ಸಾವಿಗೀಡಾಗಿದೆ.
ನೀರಾನೆಯ ಮರಣೋತ್ತರ ಪರೀಕ್ಷೆ ನಡೆಸಲು ಮೃಗಾಲಯ ಅಧಿಕಾರಿಗಳು ನಿರ್ಧರಿಸಿದ್ದಾರೆ. ಪರೀಕ್ಷೆ ಬಳಿಕ ಅಂತ್ಯಕ್ರಿಯೆ ನಡೆಸಲಿದ್ದಾರೆ. ನೀರಾನೆ ಮೃತದೇಹ ಪರೀಕ್ಷೆಗೆ ಬೆಂಗಳೂರಿನಿಂದ ವನ್ಯಜೀವಿ ವೈದ್ಯರ ತಂಡ ಆಗಮಿಸುತ್ತಿದೆ. ವನ್ಯಜೀವಿ ವೈದ್ಯರ ತಂಡ ಹಾಗೂ ಶಿವಮೊಗ್ಗ ಪಶು ವಿಶ್ವವಿದ್ಯಾಲಯ ತಂಡದಿಂದ ಮರಣೋತ್ತರ ಪರೀಕ್ಷೆ ನಡೆಯಲಿದೆ.
ಬೆಂಗಳೂರಿನಲ್ಲಿ ಘೋರ ಘಟನೆ; 14 ವರ್ಷದ ಮಗಳನ್ನು ಕೊಂದು ತಾಯಿಯೂ ಆತ್ಮಹತ್ಯೆ!
ನೀರಾನೆ ದಾಳಿಯಿಂದ ಮೃತಪಟ್ಟಿದ್ದ ಡಾ.ಸಮೀಕ್ಷಾ ರೆಡ್ಡಿ
ಮಾ.19ರಂದು ರಾತ್ರಿ ವನ್ಯಜೀವಿ ವೈದ್ಯೆ ಡಾ.ಸಮೀಕ್ಷಾ ರೆಡ್ಡಿ ಮೇಲೆ ನೀರಾನೆ ದಾಳಿ ಮಾಡಿತ್ತು. ಸಮೀಕ್ಷಾ ರೆಡ್ಡಿ (26) ಮೂಲತಃ ಬೆಂಗಳೂರಿನ ಬನ್ನೇರುಘಟ್ಟ ನಿವಾಸಿ. ಹೆಬ್ಬಾಳದ ಪಶುವೈದ್ಯಕೀಯ ಕಾಲೇಜಿನಲ್ಲಿ (ಜಿಕೆವಿಕೆ) ಪದವಿ ಮುಗಿಸಿದ್ದ ಅವರು ಒಂದೂವರೆ ತಿಂಗಳ ಹಿಂದಷ್ಟೇ ಮೃಗಾಲಯದಲ್ಲಿ ಗುತ್ತಿಗೆ ಆಧಾರದಲ್ಲಿ ನೇಮಕಗೊಂಡು ತರಬೇತಿ ಪಡೆಯುತ್ತಿದ್ದರು.
ಆ ದಿನ ರಾತ್ರಿ ಸುಮಾರು 10.30 ರ ಸುಮಾರಿಗೆ ಅವರು ಮೃಗಾಲಯದ ಆಸ್ಪತ್ರೆಗೆ ಹೋಗಿ ಹಕ್ಕಿಯೊಂದಕ್ಕೆ ಚಿಕಿತ್ಸೆ ನೀಡಿದರು. ನಂತರ ಅವರು ಗರ್ಭಿಣಿ ನೀರಾನೆ ಆವರಣಕ್ಕೆ ಪ್ರವೇಶಿಸಿ ಥರ್ಮಲ್ ಕ್ಯಾಮೆರಾ ಬಳಸಿ ಅದರ ದೇಹದ ಉಷ್ಣತೆಯನ್ನು ಪರಿಶೀಲಿಸಿದ್ದರು. ಈ ಸಮಯದಲ್ಲಿ, ನೀರಾನೆ ಅವರ ಮೇಲೆ ದಾಳಿ ಮಾಡಿ ಗಂಭೀರವಾಗಿ ಗಾಯಗೊಳಿಸಿತ್ತು. ಚಿಕಿತ್ಸೆ ಫಲಕಾರಿಯಾಗದೆ ಸಮೀಕ್ಷಾ ಮೃತಪಟ್ಟಿದ್ದರು.
ಪಶುವೈದ್ಯರ ಸುರಕ್ಷಿತ ಕಾರ್ಯನಿರ್ವಹಣೆಗೆ ಮಾನದಂಡ
ನೀರಾನೆ ದಾಳಿಯಿಂದ ಪಶುವೈದ್ಯೆ ಸಾವನ್ನಪ್ಪಿದ ಘಟನೆ ಬೆನ್ನಲ್ಲೇ ರಾಜ್ಯ ಸರ್ಕಾರ ಎಚ್ಚೆತ್ತುಕೊಂಡು, ಪಶುವೈದ್ಯರ ಸುರಕ್ಷಿತ ಕಾರ್ಯನಿರ್ವಹಣೆಗೆ ಮಾನದಂಡ ಕಾರ್ಯವಿಧಾನ (SOP)ಗಳನ್ನು ರೂಪಿಸುವಂತೆ ಅಧಿಕಾರಿಗಳಿಗೆ ಸೂಚನೆ ನೀಡಿತ್ತು.