ಶಿವಮೊಗ್ಗ, ಫೆ. 8: ಮಹಿಳೆಯೊಬ್ಬರು ಹಿಂದೂ ಧರ್ಮ ತೊರೆದು ಕ್ರೈಸ್ತ ಧರ್ಮಕ್ಕೆ ಮತಾಂತರಗೊಂಡಿದ್ದು, ಬಳಿಕ ಪತಿ ಹಾಗೂ ಮಕ್ಕಳನ್ನೂ ಸಹ ಮತಾಂತರಗೊಳ್ಳಲು ಕಿರುಕುಳ ನೀಡಿರುವ ಘಟನೆ ಜಿಲ್ಲೆಯ ಭದ್ರಾವತಿಯಲ್ಲಿ (Bhadravathi) ನಡೆದಿದೆ. ಈ ಸಂಬಂಧ ಭದ್ರಾವತಿಯ ಬೊಮ್ಮನಕಟ್ಟೆ ನಿವಾಸಿ ಬಿ. ವಿನಯ್ ಎಂಬುವವರು ಪತ್ನಿ ಪ್ರಿಯತಾ ಆರ್. ವಿರುದ್ಧ ಪೇಪರ್ ಟೌನ್ ಪೊಲೀಸ್ ಠಾಣೆಗೆ ದೂರು ಸಲ್ಲಿಸಿದ್ದಾರೆ.
ನನ್ನ ಪತ್ನಿ ಕ್ರೈಸ್ತ ಧರ್ಮಕ್ಕೆ ಮತಾಂತರಗೊಂಡಿದ್ದಾಳೆ. ಈಗ ನಾನು ಮತ್ತು ನನ್ನ ಇಬ್ಬರು ಹೆಣ್ಣು ಮಕ್ಕಳನ್ನೂ ಮತಾಂತರಗೊಳ್ಳುವಂತೆ ಒತ್ತಾಯಿಸಿ ಮಾನಸಿಕವಾಗಿ ಕಿರುಕುಳ ನೀಡುತ್ತಿದ್ದಾಳೆ ಎಂದು ಪತಿ ವಿನಯ್ ಆರೋಪಿಸಿದ್ದಾರೆ.
ವಿನಯ್ 2011ರಲ್ಲಿ ಹಾಸನ ಜಿಲ್ಲೆಯ ಬೇಲೂರು ತಾಲೂಕಿನ ಹಳೇಬೀಡು ಬನಶಂಕರಿ ಕಲ್ಯಾಣ ಮಂಟಪದಲ್ಲಿ ಪ್ರಿಯತಾ ಆರ್. ಅವರನ್ನು ಹಿಂದೂ ಸಂಪ್ರದಾಯದಂತೆ ಶಾಸ್ತ್ರೋಕ್ತವಾಗಿ ವಿವಾಹವಾಗಿದ್ದರು. ಈ ದಂಪತಿಗೆ ಇಬ್ಬರು ಹೆಣ್ಣು ಮಕ್ಕಳಿದ್ದಾರೆ. ಆದರೆ, ಪತ್ನಿ ಮತಾಂತರಗೊಂಡ ಬಳಿ ಇವರ ಸಂಸಾರದಲ್ಲಿ ಬಿರುಕು ಮೂಡಿದೆ.
ಕ್ರೈಸ್ತ ಧರ್ಮದ ಕಡೆಗೆ ಆಕರ್ಷಿತರಾಗಿದ್ದು ಹೇಗೆ?
2015ರಲ್ಲಿ ಶಿವಮೊಗ್ಗದ ಪ್ರತಿಷ್ಠಿತ ಪೋದಾರ್ ಇಂಟರ್ನ್ಯಾಷನಲ್ ಶಾಲೆಯಲ್ಲಿ ಪ್ರಿಯತಾ ಶಿಕ್ಷಕಿಯಾಗಿ ಕೆಲಸಕ್ಕೆ ಸೇರಿದ್ದರು. ಅಲ್ಲಿ ಅದೇ ಶಾಲೆಯಲ್ಲಿದ್ದ ಮರಿಯಾ ಪ್ರಿಯದರ್ಶಿನಿ ಎಂಬ ಸಹೋದ್ಯೋಗಿಯ ಸಂಪರ್ಕ ಬೆಳೆದಿದೆ. ಮರಿಯಾ ಅವರ ಪ್ರಭಾವದಿಂದ ಪ್ರಿಯತಾ ಹಿಂದೂ ಧರ್ಮದ ಆಚರಣೆಗಳನ್ನು ಬಿಟ್ಟು ಕ್ರೈಸ್ತ ಧರ್ಮದ ಕಡೆಗೆ ಆಕರ್ಷಿತರಾಗಿದ್ದಾರೆ. ಕ್ರಮೇಣ ಅವರು ಸಂಪೂರ್ಣವಾಗಿ ಮತಾಂತರಗೊಂಡಿದ್ದಾರೆ ಎಂದು ಪತಿ ವಿನಯ್ ಆರೋಪಿಸಿದ್ದಾರೆ.
ಮತಾಂತರಗೊಂಡ ನಂತರ ಪ್ರಿಯತಾ ನಿಯಮಿತವಾಗಿ ಚರ್ಚ್‌ಗೆ ಹೋಗಲಾರಂಭಿಸಿದರು. ಮನೆಯಲ್ಲಿಯೇ ಬೈಬಲ್ ತಂದು ಇಟ್ಟುಕೊಂಡು ಓದುವುದು, ಯೇಸುಕ್ರಿಸ್ತನನ್ನು ಪೂಜಿಸುವುದನ್ನು ರೂಢಿಸಿಕೊಂಡರು. ಪತಿ ಎಷ್ಟೇ ಬುದ್ಧಿವಾದ ಹೇಳಿದರೂ, ‘ನಾನು ಕ್ರೈಸ್ತ ಧರ್ಮ ಪಾಲಿಸುತ್ತಿದ್ದೇನೆ, ನೀವೂ ಅದನ್ನೇ ಪಾಲಿಸಿ’ ಎಂದು ಒತ್ತಾಯಿಸಿದ್ದಾರೆ. ಕೇವಲ ಪತಿಯನ್ನು ಮಾತ್ರವಲ್ಲದೆ, ತಮ್ಮ ಹಿರಿಯ ಮಗಳಿಗೂ ಕ್ರೈಸ್ತ ಧರ್ಮವನ್ನೇ ಪಾಲಿಸುವಂತೆ ಪ್ರಿಯತಾ ಒತ್ತಾಯಿಸುತ್ತಿದ್ದರು ಎಂದು ಆರೋಪಿಸಿದ್ದಾರೆ.
ಮಂಡ್ಯದಲ್ಲಿ ಘೋರ ಘಟನೆ; ಪಕ್ಕದ ಮನೆಯವರ ಕಿರುಕುಳ, ಬೆದರಿಕೆಗೆ ಬೇಸತ್ತು ತಾಯಿ-ಮಗಳು ಆತ್ಮಹತ್ಯೆ
ಮತಾಂತರದ ವಿಚಾರವಾಗಿ ಮನೆಯಲ್ಲಿ ನಿತ್ಯ ಜಗಳವಾಗುತ್ತಿತ್ತು. 2019ರಲ್ಲಿ ಒಮ್ಮೆ ತವರು ಮನೆಗೆ ಹೋಗಿದ್ದ ಪತ್ನಿಯನ್ನು 2020ರಲ್ಲಿ ಮನವೊಲಿಸಿ ಕರೆತಂದಿದ್ದರು. ಆದರೆ, 2024ರ ವೇಳೆಗೆ ಅವರ ವರ್ತನೆ ಮತ್ತಷ್ಟು ತೀವ್ರವಾಯಿತು. ಇದೇ ಕಾರಣಕ್ಕೆ ನಂತರ 2025ರಲ್ಲಿ ಗಂಡ-ಮಕ್ಕಳನ್ನು ಬಿಟ್ಟು ತವರು ಮನೆಗೆ ಪತ್ನಿ ತೆರಳಿದ್ದರು. ಸ್ನೇಹಿತರ ಮೂಲಕ ಸಂಧಾನಕ್ಕೆ ಪ್ರಯತ್ನಿಸಿದಾಗ, ‘ನೀವು ಮತ್ತು ಮಕ್ಕಳು ಮತಾಂತರಗೊಂಡರೆ ಮಾತ್ರ ನಾನು ವಾಪಸ್ ಬರುತ್ತೇನೆ’ ಎಂದು ಹೇಳಿದ್ದಾರೆ ಎಂದು ವಿನಯ್ ತಮ್ಮ ದೂರಿನಲ್ಲಿ ಉಲ್ಲೇಖಿಸಿದ್ದಾರೆ.