ಸಾಗರ: ತಾಲೂಕಿನ ಹೊನ್ನೇಸರದಲ್ಲಿ ಖ್ಯಾತ ರಂಗಕರ್ಮಿ, ಗಾಂಧಿವಾದಿ ಪ್ರಸನ್ನ (Prasanna Heggodu) ಅವರ ಮಾರ್ಗದರ್ಶನದಲ್ಲಿ ರೂಪುಗೊಂಡಿರುವ ʼಚರಕʼದ ʼಶ್ರಮಜೀವಿಗಳ ಆಶ್ರಮʼದಲ್ಲಿ ಎರಡು ದಿನಗಳ ʼಗಾಂಧಿ ಸಂತೆʼಗೆ (Gandhi Sante) ಶನಿವಾರ ಚಾಲನೆ ನೀಡಲಾಯಿತು. ದೇಸಿ ಉತ್ಪಾದಕರು ಮತ್ತು ಖರೀದಿದಾರರನ್ನು ಬೆಸೆಯುವುದು ಈ ಸಂತೆಯ ಉದ್ದೇಶವಾಗಿದೆ. ಮೊದಲ ದಿನ ಬೆಂಗಳೂರು, ಮಂಗಳೂರು, ಚೆನ್ನೈ, ಗರಗ ಹಾಗೂ ಹಾವೇರಿಯಿಂದ ಬಂದಿರುವ ಉತ್ಪಾದಕರು ಮತ್ತು ಖರೀದಿದಾರರು ಸಮಾವೇಶದಲ್ಲಿ ಪಾಲ್ಗೊಂಡಿದ್ದರು.
ಸಂಸದ ಬಿ.ವೈ.ರಾಘವೇಂದ್ರ ಅವರು ʼಗಾಂಧಿ ಸಂತೆʼಗೆ ಚಾಲನೆ ನೀಡಿದರು. ಕೊಡು- ಕೊಳ್ಳುವವರ ಮೇಳವನ್ನು ಶಾಸಕ ಗೋಪಾಲಕೃಷ್ಣ ಬೇಳೂರು ಉದ್ಘಾಟಿಸಿ, ಕಾಗೋಡು ತಿಮ್ಮಪ್ಪ ಮಾರ್ಗವನ್ನು ಜನಾರ್ಪಣೆಗೊಳಿಸಿದರು. ನಂತರ ವಿರೂಪಾಕ್ಷನ ಜಡ್ಡು ಕೆರೆ ಆವರಣದಲ್ಲಿನ 'ಗಂಗಾ ತಟ' ನಿರ್ಮಾಣದ ಶಂಕುಸ್ಥಾಪನೆ ನೆರವೇರಿಸಿದರು.

ಕರ್ನಾಟಕದ ವಿವಿಧ ಭಾಗಗಳ ಉತ್ಪಾದಕರು, ಮಹಿಳಾ ಸಂಘಟನೆಗಳು ಹಾಗೂ ನೈಸರ್ಗಿಕ ಉತ್ಪನ್ನ ತಯಾರಕರು ತಂದಿರುವ ವೈವಿಧ್ಯಮಯ ಉತ್ಪನ್ನಗಳು ಗಮನ ಸೆಳೆದವು. ಧಾರವಾಡದ ಜಾಗೃತಿ ಸಂಸ್ಥೆಯ ಉತ್ತರ ಕರ್ನಾಟಕದ ತಿಂಡಿ–ತಿನಿಸುಗಳು, ವಿಜಯಪುರದ ಭುವನೇಶ್ವರಿ ಒಕ್ಕೂಟದ ಶೇಂಗಾ, ಶೇಂಗಾ ಹೋಳಿಗೆ, ಚಟ್ನಿಪುಡಿ ಹಾಗೂ ಮೌಲ್ಯವರ್ಧಿತ ಉತ್ಪನ್ನಗಳು, ಟೆರಾಕೋಟಾ ಆಭರಣ, ಗಾಣದ ಎಣ್ಣೆ, ಉಪ್ಪಿನಕಾಯಿ, ಮಣ್ಣಿನ ಮಡಿಕೆ ಸೇರಿದಂತೆ ಹಲವು ಉತ್ಪನ್ನಗಳು ಮನಸೆಳೆದವು. ಜಿಯೋಸ್ಮಿನ್ ಸಂಸ್ಥೆಯ ಮೌಲ್ಯವರ್ಧಿತ ಬಿದಿರು ಉತ್ಪನ್ನಗಳು ಹಾಗೂ ಚರಕದ ಕೈಮಗ್ಗ ಬಟ್ಟೆಗಳು ಇದ್ದವು.

ಸ್ಥಳೀಯ ಆರ್ಥಿಕತೆಗೆ ಬಲ:
ಸ್ವದೇಶಿ ಮತ್ತು ಸ್ವಾವಲಂಬನೆಯ ತತ್ವಗಳನ್ನು ಅಳವಡಿಸಿಕೊಂಡು ಸ್ಥಳೀಯ ಉತ್ಪಾದನೆಗೆ ಉತ್ತೇಜನ ನೀಡುವುದರಿಂದ ದೇಶದ ಆರ್ಥಿಕತೆಯನ್ನು ಮತ್ತಷ್ಟು ಬಲಪಡಿಸಬಹುದು ಎಂದು ಸಂಸದ ಬಿ.ವೈ.ರಾಘವೇಂದ್ರ ಹೇಳಿದರು.

ತಾಲೂಕಿನ ಹೊನ್ನೇಸರದ ಚರಕ ಶ್ರಮಜೀವಿ ಆಶ್ರಮದಲ್ಲಿ ಎರಡು ದಿನಗಳ ಕಾಲ ರಾಜ್ಯ ಸರಕಾರದ ಪ್ರವಾಸೋದ್ಯಮ ಇಲಾಖೆ ಸಹಯೋಗದಲ್ಲಿ ಕವಿ- ಕಾವ್ಯ ಟ್ರಸ್ಟ್, ದೇಸಿ ಟ್ರಸ್ಟ್, ಜೀವನ್ಮುಖಿ ಸಾಗರ ಆಯೋಜಿಸಿದ್ದ ಕೊಡು-ಕೊಳ್ಳುವವರ ಸಮಾವೇಶ ಹಾಗೂ ಗಾಂಧಿ ಸಂತೆ-2026ಕ್ಕೆ ಶನಿವಾರ ಚಾಲನೆ ನೀಡಿ ಅವರು ಮಾತನಾಡಿದರು.
ಆಧುನಿಕತೆ ಮತ್ತು ನಗರೀಕರಣದ ಪರಿಣಾಮ ಗ್ರಾಮಗಳಿಂದ ನಗರಗಳತ್ತ ವಲಸೆ ಹೆಚ್ಚುತ್ತಿರುವ ಸಂದರ್ಭದಲ್ಲಿ ನಮ್ಮ ಮಣ್ಣು, ಸ್ಥಳೀಯ ಉತ್ಪಾದನೆ ಹಾಗೂ ಗ್ರಾಮೀಣ ಜೀವನ ಪದ್ಧತಿಯ ಮಹತ್ವವನ್ನು ಮರೆಯಬಾರದು. ಸ್ವದೇಶಿ ಎನ್ನುವುದು ಕೇವಲ ವಸ್ತುಗಳ ಉತ್ಪಾದನೆ ಮತ್ತು ಖರೀದಿಗೆ ಸೀಮಿತವಲ್ಲ. ಅದು ಸ್ಥಳೀಯ ಆರ್ಥಿಕತೆ, ಉದ್ಯೋಗ, ಸ್ವಾಭಿಮಾನ ಹಾಗೂ ಸ್ವಾವಲಂಬನೆಯೊಂದಿಗೆ ಬೆಸೆದುಕೊಂಡಿರುವ ಪರಿಕಲ್ಪನೆ ಎಂದರು.

ಸ್ಥಳೀಯವಾಗಿ ತಯಾರಾಗುವ ಕೈಮಗ್ಗ, ನೈಸರ್ಗಿಕ ಉತ್ಪನ್ನಗಳು, ಆಹಾರ ಪದಾರ್ಥಗಳು, ಕರಕುಶಲ ವಸ್ತುಗಳು ಸೇರಿದಂತೆ ದೇಸಿ ಉತ್ಪನ್ನಗಳಿಗೆ ದೇಶ-ವಿದೇಶಗಳಲ್ಲಿ ಬೇಡಿಕೆ ಹೆಚ್ಚುತ್ತಿದೆ. ಈ ಬೇಡಿಕೆಯನ್ನು ಅವಕಾಶವಾಗಿ ಬಳಸಿಕೊಂಡು ಉತ್ಪಾದನೆ, ಮೌಲ್ಯವರ್ಧನೆ ಹಾಗೂ ಮಾರುಕಟ್ಟೆ ವ್ಯವಸ್ಥೆಯನ್ನು ಬಲಪಡಿಸಬೇಕು. ಆತ್ಮನಿರ್ಭರ ಭಾರತದ ಆಶಯವೂ ಇದೇ ಆಗಿದ್ದು, ಸ್ವದೇಶಿ ಉತ್ಪಾದನೆಗೆ ಉತ್ತೇಜನ ನೀಡುವ ಕೆಲಸ ನಿರಂತರವಾಗಿ ನಡೆಯಬೇಕಿದೆ ಎಂದು ರಾಘವೇಂದ್ರ ಹೇಳಿದರು.

ಚರಕ ಸಂಘದ ಅಧ್ಯಕ್ಷೆ ಮಹಾಲಕ್ಷ್ಮಿ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಚರಕದ ಪ್ರಮುಖರಾದ ಎನ್. ರಮೇಶ್, ಪದ್ಮಶ್ರೀ, ನಾಗರತ್ನ, ಕೃಷ್ಣ, ರುದ್ರಪ್ಪ, ಸಿಇಒ ಟೆರೆನ್ಸ್ ಪೀಟರ್, ದೇಸಿ ಟ್ರಸ್ಟ್‌ನ ವ್ಯವಸ್ಥಾಪಕ ಟ್ರಸ್ಟಿ ಶಾರದಾ, ತಾಂತ್ರಿಕ ಸಲಹೆಗಾರ ರಾಮಚಂದ್ರಪ್ಪ ಮತ್ತಿತರರು ಉಪಸ್ಥಿತರಿದ್ದರು.
ಉದ್ಘಾಟನೆ ಕಾರ್ಯಕ್ರಮದ ನಂತರ ವಿದುಷಿ ವಸುಧಾ ಶರ್ಮಾ ಮತ್ತು ತಂಡದಿಂದ ಲಘು ಸಂಗೀತ ಹಾಗೂ ಶ್ರಮಜೀವಿಗಳ ಫ್ಯಾಷನ್ ಶೋ ನಡೆಯಿತು.