ಶಿವಮೊಗ್ಗ, ಫೆ. 8: ಅಪರೂಪದ ಘಟನೆಯೊಂದಕ್ಕೆ ಶಿವಮೊಗ್ಗ ಸಾಕ್ಷಿಯಾಗಿದೆ. ನಗರದ ನಂಜಪ್ಪ ಆಸ್ಪತ್ರೆಯಲ್ಲಿ ಫೆಬ್ರವರಿ 6ರ ತಡರಾತ್ರಿ ವಿಶೇಷ ಅತಿಥಿಯೊಬ್ಬರ ಎಂಆರ್‌ಐ ಸ್ಕ್ಯಾನಿಂಗ್ ನಡೆಸಲಾಯಿತು. ಅವರು ಬೇರೆಯಾರೂ ಅಲ್ಲ, ಚಿರತೆ. ಹೌದು, ಶಿವಮೊಗ್ಗದ ನಂಜಪ್ಪ ಆಸ್ಪತ್ರೆಯಲ್ಲಿ ವೈದ್ಯರ ತಂಡ ಚಿರತೆಯೊಂದರ ಎಂಆರ್‌ಐ ಸ್ಕ್ಯಾನಿಂಗ್ ನಡೆಸಿದೆ. ಸದ್ಯ ಈ ಘಟನೆ ಕುತೂಹಲಕ್ಕ ಕಾರಣವಾಗಿದೆ (Shimoga News). ಜತೆಗೆ ವೈದ್ಯರ ಈ ಮಾನವೀಯ ನಡೆಗೆ ಸಾರ್ವತ್ರಿಕ ಮೆಚ್ಚುಗೆಯೂ ವ್ಯಕ್ತವಾಗುತ್ತಿದೆ.
ಈ ಅಪರೂಪದ ಘಟನೆ ಬಗ್ಗೆ ವನ್ಯಜೀವಿ ವಿಭಾಗದ ಡಿಎಫ್‌ಒ ಡಾ. ಅಮರಾಕ್ಷರ್ ಮಾಹಿತಿ ನೀಡಿದ್ದಾರೆ. ಲಯನ್ ಸಫಾರಿಯಲ್ಲಿರುವ ಭದ್ರ ಎನ್ನುವ ಚಿರತೆ ಕೆಲವು ದಿನಗಳಿಂದ ಕುಂಟುತ್ತಾ ನಡೆಯುತ್ತಿದ್ದರಿಂದ ಸಮಸ್ಯೆ ತಿಳಿದುಕೊಳ್ಳಲು ಸ್ಕ್ಯಾನಿಂಗ್ ನಡೆಸಲಾಗಿದೆ ಎಂದು ಅವರು ತಿಳಿಸಿದ್ದಾರೆ.
ಭದ್ರನಿಗೆ ಈಗ ಸುಮಾರು 14 ವರ್ಷ. ವಯೋಸಹಕ ಕಾಯಿಲೆಯಿಂದ ಬಳಲುತ್ತಿರುವ ಅದು ಕೆಲವು ದಿನಗಳಿಂದ ಕುಂಟುತ್ತಾ ನಡೆಯುತ್ತಿತ್ತು. ಇತ್ತೀಚೆಗೆ ಅದರ ಸ್ಥಿತಿ ತೀರಾ ಹದಗೆಟ್ಟಿತ್ತು. ಎದ್ದು ನಿಲ್ಲಲೂ ಆಗದ ಸ್ಥಿತಿಯಲ್ಲಿತ್ತು. ಅದರ ಜೀವ ಉಳಿಸಲು, ಸಮಸ್ಯೆ ಏನೆಂದು ಕಂಡುಕೊಳ್ಳಲು ಪಶು ವೈದ್ಯರು ಎಂಆರ್‌ಐ ಸ್ಕ್ಯಾನಿಂಗ್ ನಡೆಸಿದ್ದಾರೆ.
ʼʼಸಾಮಾನ್ಯವಾಗಿ ಚಿರತೆಗಳ ಆಯುಷ್ಯ 8ರಿಂದ 12 ವರ್ಷ. ಸೂಕ್ತ ಚಿಕಿತ್ಸೆ, ಆರೈಕೆ ಲಭಿಸಿದರೆ ಇವು 15 ವರ್ಷಗಳವರೆಗೂ ಬದುಕಬಲ್ಲವು. ಆದರೆ ಇತ್ತೀಚೆಗೆ ಭದ್ರನ ಆರೋಗ್ಯ ಹದಗೆಡಲು ಆರಂಭವಾಗಿತ್ತುʼʼ ಎಂದು ಡಾ. ಅಮರಾಕ್ಷರ್ ತಿಳಿಸಿದ್ದಾರೆ.
ಶಿವಮೊಗ್ಗದಲ್ಲಿ ಮೊಬೈಲ್ ಅಂಗಡಿಗೆ ನುಗ್ಗಿ ಯುವಕನಿಗೆ ಚಾಕು ಇರಿದ ಕಿಡಿಗೇಡಿಗಳು!
ʼʼಶಿವಮೊಗ್ಗ ಪಶಯ ವೈದ್ಯಕೀಯ ಆಸ್ಪತ್ರೆಯಲ್ಲಿ ಎಂಆರ್‌ಐ ಸೌಲಭ್ಯ ಇಲ್ಲದ ಕಾರಣ ಚಿರತೆಯನ್ನು ನಂಜಪ್ಪ ಆಸ್ಪತ್ರೆಗೆ ಕರೆತರಲಾಯಿತು. ಸಾಮಾನ್ಯವಾಗಿ ಮನುಷ್ಯರ ಮತ್ತು ಪ್ರಾಣಿಗಳ ದೇಹ ರಚನೆ ಒಂದೇ ರೀತಿ ಆಗಿರುವುದರಿಂದ ಈ ಸ್ಕ್ಯಾನಿಂಗ್ ಯಂತ್ರದಲ್ಲೇ ಪರೀಕ್ಷೆ ಮಾಡಲು ನಿರ್ಧರಿಸಿದೆವು. ಪಶು ವೈದ್ಯರ ಸಮ್ಮುಖದಲ್ಲಿ ಸ್ಕ್ಯಾನಿಂಗ್ ಮಾಡಲಾಗಿದೆ. ವರದಿ ಆಧರಿಸಿ ಚಿರತೆಗೆ ಚಿಕಿತ್ಸೆ ನೀಡಲಾಗುವುದುʼʼ ಎಂದು ವಿವರಿಸಿದ್ದಾರೆ.
ಶಿವಮೊಗ್ಗ ಪಶು ವೈದ್ಯಕೀಯ ಕಾಲೇಜು ಆಸ್ಪತ್ರೆಯಲ್ಲಿ ಪ್ರಾಣಿಗಳಿಗೆ ಅಗತ್ಯ ಎಲ್ಲ ಸೌಲಭ್ಯ ಒದಗಿಸುವಂತೆ ಸಾರ್ವಜನಿಕರು ಆಗ್ರಹಿಸಿದ್ದಾರೆ.