ಶಿವಮೊಗ್ಗ: ವಸತಿ ಶಾಲೆಯಲ್ಲಿ 7ನೇ ತರಗತಿಗೆ ವಿದ್ಯಾರ್ಥಿನಿಯೊಬ್ಬಳ ದಾಖಲಾತಿಗಾಗಿ ಪೋಷಕರಿಂದ ಲಂಚ (Bribery Case) ಪಡೆಯುತ್ತಿದ್ದ ಪ್ರಾಂಶುಪಾಲ ಲೋಕಾಯುಕ್ತ ಬಲೆಗೆ ಬಿದ್ದಿರುವ ಘಟನೆ ಸೋಮವಾರ ನಡೆದಿದೆ. ಜಿಲ್ಲೆಯ (Shivamogga) ಭದ್ರಾವತಿ ತಾಲೂಕಿನ ಹುಣಸೆಕಟ್ಟೆಯಲ್ಲಿರುವ ಕಿತ್ತೂರು ರಾಣಿ ಚೆನ್ನಮ್ಮ ವಸತಿ ಶಾಲೆಯ ಪ್ರಾಂಶುಪಾಲ ನಾಮದೇವ ಎಂಬುವವರು ಭ್ರಷ್ಟಾಚಾರ ನಿಗ್ರಹ ದಳದ ಜಾಲಕ್ಕೆ ಸಿಕ್ಕಿಬಿದ್ದಿದ್ದಾರೆ.
ಬಾಲಕಿಯೊಬ್ಬಳನ್ನು ಶಾಲೆಯ 7ನೇ ತರಗತಿಗೆ ಸೇರಿಸಿಕೊಳ್ಳಲು ಪ್ರಾಂಶುಪಾಲ ನಾಮದೇವ ಅವರು ಪೋಷಕರಿಂದ 20 ಸಾವಿರ ರೂಪಾಯಿ ಲಂಚಕ್ಕೆ ಬೇಡಿಕೆ ಇಟ್ಟಿದ್ದರು. ಶಾಲೆಗೆ ಡ್ರಮ್ ಸೆಟ್ ಖರೀದಿಸಬೇಕಿದೆ ಎಂಬ ನೆಪವನ್ನೊಡ್ಡಿ ಈ ಹಣವನ್ನು ಕೇಳಲಾಗಿತ್ತು ಎನ್ನಲಾಗಿದೆ. ಪ್ರಾಂಶುಪಾಲರ ಈ ನಡವಳಿಕೆಯಿಂದ ಬೇಸತ್ತ ವಿದ್ಯಾರ್ಥಿನಿಯ ಪೋಷಕರು ಈ ಕುರಿತು ಲೋಕಾಯುಕ್ತ ಕಚೇರಿಗೆ ದೂರು ನೀಡಿದ್ದರು.
ದೂರಿನ ಹಿನ್ನೆಲೆಯಲ್ಲಿ ಕಾರ್ಯಪ್ರವೃತ್ತರಾದ ಲೋಕಾಯುಕ್ತ ಅಧಿಕಾರಿಗಳು, 10 ಸಾವಿರ ರೂಪಾಯಿ ಲಂಚದ ಹಣ ಸ್ವೀಕರಿಸುತ್ತಿದ್ದ ಸಂದರ್ಭದಲ್ಲೇ ದಾಳಿ ನಡೆಸಿ ಆರೋಪಿ ನಾಮದೇವ ಅವರನ್ನು ವಶಕ್ಕೆ ಪಡೆದಿದ್ದಾರೆ.
ಲೋಕಾಯುಕ್ತ ಡಿವೈಎಸ್ಪಿ ಬಿ.ಪಿ. ಚಂದ್ರಶೇಖರ್ ಹಾಗೂ ಇನ್ಸ್‌ಪೆಕ್ಟರ್ ರುದ್ರೇಶ್ ಅವರ ನೇತೃತ್ವದ ವಿಶೇಷ ತಂಡ ಈ ಯಶಸ್ವಿ ಕಾರ್ಯಾಚರಣೆಯನ್ನು ನಡೆಸಿದೆ. ಸದ್ಯ ಶಿವಮೊಗ್ಗ ಲೋಕಾಯುಕ್ತ ಪೊಲೀಸ್ ಠಾಣೆಯಲ್ಲಿ ಆರೋಪಿಯ ವಿರುದ್ಧ ಭ್ರಷ್ಟಾಚಾರ ನಿಯಂತ್ರಣ ಕಾಯ್ದೆಯಡಿ ಪ್ರಕರಣ ದಾಖಲಾಗಿದ್ದು, ಹೆಚ್ಚಿನ ತನಿಖೆ ನಡೆಯುತ್ತಿದೆ.
ಆಟವಾಡುತ್ತಿದ್ದಾಗ ಕಾರು ಡಿಕ್ಕಿಯಾಗಿ ಬಾಲಕ ದುರ್ಮರಣ
ಶಿವಮೊಗ್ಗ: ಮನೆಯ ಮುಂದೆ ಆಟವಾಡುತ್ತಿದ್ದ ಬಾಲಕ ಒಮ್ಮೆಲೆ ರಸ್ತೆಗೆ ಬಂದ ವೇಳೆ ಕಾರು ಡಿಕ್ಕಿಯಾಗಿ ಮೃತಪಟ್ಟ ಘಟನೆ ತೀರ್ಥಹಳ್ಳಿ ತಾಲೂಕಿನ ಗುಂಡುಗದ್ದೆಯಲ್ಲಿ ನಡೆದಿದೆ. ಗುಂಡುಗದ್ದೆ ಗ್ರಾಮದ ನಿವಾಸಿ ಪ್ರಗತ್.ಕೆ.ಆರ್ ಮತ್ತು ರಂಜನಾ ದಂಪತಿ ಪುತ್ರ ಋಷ್ಯ.ಪಿ (7) ಮೃತಪಟ್ಟ ಬಾಲಕ.
ಮನೆಯ ಬಳಿ ಮಧ್ಯಾಹ್ನದ ವೇಳೆ ಆಟವಾಡುತ್ತಿದ್ದ ಬಾಲಕ, ಒಮ್ಮೆಲೆ ರಸ್ತೆಗೆ ಬಂದಿದ್ದಾನೆ. ಈ ವೇಳೆ ಕಾರು ಡಿಕ್ಕಿಯಾಗಿದೆ. ಅಪಘಾತದಲ್ಲಿ ಗಂಭೀರವಾಗಿ ಗಾಯಗೊಂಡಿದ್ದ ಬಾಲಕನನ್ನು ತಕ್ಷಣವೇ ತೀರ್ಥಹಳ್ಳಿಯ ಜೆಸಿ ಆಸ್ಪತ್ರೆಗೆ ಕರೆದೊಯ್ಯಲಾಗಿತ್ತು. ತಲೆಗೆ ಗಂಭೀರ ಗಾಯವಾಗಿದ್ದರಿಂದ ಬಾಲಕ ಮೃತಪಟ್ಟಿದ್ದಾನೆ ಎಂದು ವೈದ್ಯರು ತಿಳಿಸಿದ್ದಾರೆ. ಪೋಷಕರ ಆಕ್ರಂದನ ಮುಗಿಲು ಮುಟ್ಟಿದೆ.
ಮನೆಯ ಬಳಿ ರಸ್ತೆಯಲ್ಲಿ ಲಾರಿ ನಿಂತಿದ್ದರಿಂದ ಬಾಲಕ ರಸ್ತೆಗೆ ಬಂದಿದ್ದು, ಕಾಣಿಸದೇ ಕಾರು ಡಿಕ್ಕಿಯಾಗಿದೆ ಎನ್ನಲಾಗಿದೆ. ಈ ಸಂಬಂಧ ತೀರ್ಥಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.