ಶಿವಮೊಗ್ಗ, ಡಿ.5: ನಗರದ ಖ್ಯಾತ ಸ್ತ್ರೀರೋಗ ತಜ್ಞೆ ಡಾ. ಜಯಶ್ರೀ ಹೊಮ್ಮರಡಿ ಹಾಗೂ ಅವರ ಪುತ್ರ ಆಕಾಶ್ ಹೊಮ್ಮರಡಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ನಗರದ ಅಶ್ವತ್ಥ್ ಬಡಾವಣೆಯ ಮನೆಯಲ್ಲಿ ಘಟನೆ (Shivamogga News) ನಡೆದಿದ್ದು, ತಾಯಿ ಮತ್ತು ಮಗ ಇಬ್ಬರೂ ಪ್ರತ್ಯೇಕ ರೂಮ್‌ಗಳಲ್ಲಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಡಾ. ಜಯಶ್ರೀ (57) ಮತ್ತು ಮಗ ಆಕಾಶ್(32) ಇಬ್ಬರ ಆತ್ಮಹತ್ಯೆಗೆ ನಿಖರ ಕಾರಣ ತಿಳಿದುಬಂದಿಲ್ಲ. ಸ್ಥಳಕ್ಕೆ ವಿನೋಬನಗರ ಠಾಣಾ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಈ ವೇಳೆ ಡೆತ್ ನೋಟ್ ಪತ್ತೆಯಾಗಿದೆ.
ಮೂಲತಃ ದಾವಣೆಗೆರೆ ಜಿಲ್ಲೆಯ ನ್ಯಾಮತಿಯ ಡಾ. ನಾಗರಾಜ ಹೊಮ್ಮರಡಿ ಕುಟುಂಬ, ಶಿವಮೊಗ್ಗದ ಗಾಂಧಿನಗರದಲ್ಲಿ ಹೊಮ್ಮರಡಿ ಆಸ್ಪತ್ರೆಯ ಮೂಲಕ ಹಲವು ವರ್ಷಗಳಿಂದ ವೈದ್ಯಕೀಯ ಸೇವೆಯಲ್ಲಿ ತೊಡಗಿತ್ತು. ಮಕ್ಕಳ ತಜ್ಞರಾಗಿದ್ದ ಡಾ.ನಾಗರಾಜ ಹೊಮ್ಮರಡಿ ಸಹ 10 ವರ್ಷಗಳ ಹಿಂದೆ ಆತ್ಮಹತ್ಯೆ ಮಾಡಿಕೊಂಡಿದ್ದರು. ಅವರ ಪುತ್ರ ಆಕಾಶ್ ಪತ್ನಿಯಾದ ನವ್ಯಶ್ರೀ ಕೂಡ ಮೂರು ವರ್ಷಗಳ ಹಿಂದೆ ಅದೇ ಮನೆಯಲ್ಲಿ ನೇಣಿಗೆ ಶರಣಾಗಿದ್ದರು.
ಇದರಿಂದ ಆಘಾತಕ್ಕೆ ಒಳಗಾಗಿದ್ದ ಡಾ. ನಾಗರಾಜ ಅವರ ಪತ್ನಿ ಜಯಶ್ರೀ ಅವರು ಡೆತ್ನೋಟ್ ಬರೆದಿಟ್ಟು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಬಳಿಕ ಮಗ ಕೂಡ ಆತ್ಮಹತ್ಯೆಗೆ ಶರಣಾಗಿದ್ದಾರೆ.
ಪತ್ನಿಯನ್ನು ಕೊಂದು ನಿವೃತ್ತ ಬಿಎಂಟಿಸಿ ಬಸ್ ಚಾಲಕ ಆತ್ಮಹತ್ಯೆಗೆ ಶರಣು
ತಂದೆ ಮತ್ತು ಪತ್ನಿಯ ಸಾವಿನ ಆಘಾತದಿಂದ ಹೊರಬರಲು ಕಳೆದ ಮೇ ತಿಂಗಳಲ್ಲಿ ಆಕಾಶ್ ಮತ್ತೊಂದು ಮದುವೆಯಾಗಿದ್ದರು. ಆದರೆ, ಇದೀಗ ತಾಯಿ-ಮಗ ಇಬ್ಬರೂ ಆತ್ಮಹತ್ಯೆಗೆ ಶರಣಾಗಿದ್ದಾರೆ. ಎರಡನೇ ಪತ್ನಿ ಮನೆಯಲ್ಲಿರುವಾಗಲೇ ಆಕಾಶ್ ಆತ್ಮಹತ್ಯೆಗೆ ಶರಣಾಗಿದ್ದಾರೆ.
ಪ್ರಕರಣ ಬೆಳಕಿಗೆ ಬಂದಿದ್ದು ಹೇಗೆ?
ಅಶ್ವಥನಗರ 5ನೇ ಅಡ್ಡರಸ್ತೆಯ ‘ಸಾನಿಧ್ಯʼ ಮನೆಯಲ್ಲಿ ಡಾ. ಜಯಶ್ರೀ, ಪುತ್ರ ಆಕಾಶ್ ಮತ್ತು ಸೊಸೆ ಇದ್ದರು. ಇವತ್ತು ಬೆಳಗ್ಗೆ ಸೊಸೆಗೆ ತಡವಾಗಿ ಎಚ್ಚರವಾಗಿದ್ದು, ಪತಿಯ ಕೊಠಡಿಯ ಬಾಗಿಲು ಬಡಿದರು ತೆರೆದಿರಲಿಲ್ಲ. ಅನುಮಾನಗೊಂಡು ಸಂಬಂಧಿಕರಿಗೆ ವಿಷಯ ತಿಳಿಸಿದ್ದರು. ಅವರು ಬಂದು ಕೊಠಡಿಯ ಬಾಗಿಲು ಒಡೆದು ತೆಗೆದಾಗ ಆಕಾಶ್ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದ್ದಾರೆ. ನಂತರ ‘ಡಾ. ಜಯಶ್ರೀ ಅವರ ಕೊಠಡಿಯ ಬಾಗಿಲನ್ನು ತೆರೆದಾಗ ಅವರು ನೈಲಾನ್ ಹಗ್ಗಕ್ಕೆ ಕೊರಳೊಡ್ಡಿರುವುದು ಗೊತ್ತಾಗಿದೆ. ಕೂಡಲೆ ಪೊಲೀಸರಿಗೆ ಕರೆ ಮಾಡಲಾಗಿದೆ.
‘ಸಾನಿಧ್ಯʼದಲ್ಲಿ ಸರಣಿ ಆತ್ಮಹತ್ಯೆ
ಅಶ್ವಥನಗರದ ‘ಸಾನಿಧ್ಯ’ ಮನೆಯಲ್ಲಿ ಆತ್ಮಹತ್ಯೆಗಳ ಸರಣಿ ಮುಂದುವರಿದಿದೆ. ಡಾ. ಜಯಶ್ರೀ, ಆಕಾಶ್ ಆತ್ಮಹತ್ಯೆಯಿಂದ ಒಟ್ಟು ಐದು ಮಂದಿ ಸಾನ್ನಿಧ್ಯದಲ್ಲಿ ಅಸಹಜವಾಗಿ ಸಾವನ್ನಪ್ಪಿದಂತಾಗಿದೆ ಎಂದು ಸ್ಥಳೀಯರು ಹೇಳಿದ್ದಾರೆ.
ಡಾ.ಜಯಶ್ರೀ ಅವರು ಮೂಲತಃ ದಾವಣಗೆರೆ ಜಿಲ್ಲೆಯ ನ್ಯಾಮತಿಯವರು. ಶಿವಮೊಗ್ಗದ ಅಶ್ವಥನಗರದಲ್ಲಿ ‘ಸಾನಿಧ್ಯʼ ಮನೆಯನ್ನು ಖರೀದಿಸಿದ್ದರು. ‘ಇದೇ ಮನೆಯಲ್ಲಿ ಡಾ. ಜಯಶ್ರೀ ಪತಿ ಡಾ. ನಾಗರಾಜ್ ಆತ್ಮಹತ್ಯೆ ಮಾಡಿಕೊಂಡಿದ್ದರು. 3 ವರ್ಷದ ಹಿಂದೆ ಇದೇ ಮನೆಯ ಕೆಳಭಾಗದಲ್ಲಿ ಡಾ. ಜಯಶ್ರೀ ಪುತ್ರ ಆಕಾಶ್ ಅವರ ಪತ್ನಿ ನವ್ಯಶ್ರೀ ಕೂಡ ನೇಣಿಗೆ ಕೊರಳೊಡ್ಡಿದ್ದರು. ಈಗ ಇದೇ ಮನೆಯ ಕೆಳಮಹಡಿಯಲ್ಲಿ ಡಾ. ಜಯಶ್ರೀ, ಮೇಲ್ಮಹಡಿಯ ಕೊಠಡಿಯಲ್ಲಿ ಆಕಾಶ್ ನೇಣು ಬಿಗಿದುಕೊಂಡು ಸಾವನ್ನಪ್ಪಿದ್ದಾರೆ. ಇನ್ನು ‘ಈ ಮನೆ ಕಟ್ಟಿದವರು ಇದೇ ಮನೆಯಲ್ಲಿ ಅಸಹಜವಾಗಿ ಸಾವನ್ನಪ್ಪಿದ್ದರು ಎಂದು ಸ್ಥಳೀಯರು ತಿಳಿಸಿದ್ದಾರೆ.