ಶಿವಮೊಗ್ಗ: ಹೊಸನಗರ ತಾಲೂಕಿನ ಗವಟೂರಿನ ಪ್ರಯಾಣಿಕರ ತಂಗುದಾಣದಲ್ಲಿ ಜುಲೈ 5ರ ರಾತ್ರಿ ಅನಾಥವಾಗಿ ದೊರೆತಿದ್ದ ನವಜಾತ ಹೆಣ್ಣು ಶಿಶುವಿನ (newborn baby) ತಾಯಿಯನ್ನು ಪತ್ತೆ ಹಚ್ಚುವಲ್ಲಿ ರಿಪ್ಪನ್ ಪೇಟೆ ಠಾಣೆ ಪೊಲೀಸರು ಯಶಸ್ವಿಯಾಗಿದ್ದಾರೆ. ಸಾಗರದ 21 ವರ್ಷದ ಯುವತಿಯು ಮಗುವಿನ ತಾಯಿ ಎಂದು ತಿಳಿದುಬಂದಿದೆ.
ಬಡ ಕುಟುಂಬದ ಹಿನ್ನೆಲೆಯ ಯುವಕ-ಯುವತಿ ಇಬ್ಬರೂ ಕಳೆದೊಂದು ವರ್ಷದಿಂದ ಪ್ರೀತಿಸುತ್ತಿದ್ದರು. ಈ ಬಗ್ಗೆ ಮನೆಯವರಿಗೆ ತಿಳಿಯದಂತೆ ಗೌಪ್ಯತೆ ಕಾಪಾಡಿದ್ದರು. ಆದರೆ, ಇಬ್ಬರ ನಡುವೆ ದೈಹಿಕ ಸಂಬಂಧ ಬೆಳೆದಿದ್ದರಿಂದ ಯುವತಿ ಗರ್ಭಿಣಿಯಾಗಿದ್ದಳು. ಈ ವಿಷಯ ತಿಳಿದು ಅಬಾರ್ಷನ್ ಮಾಡಿಕೊಳ್ಳಲು ಯುವತಿ ಕೆಲವು ಮನೆಮದ್ದುಗಳನ್ನು ಬಳಸಿದ್ದಳು. ಆದರೆ, ಪ್ರಯೋಜನವಾಗಿರಲಿಲ್ಲ. ತಿಂಗಳು ತುಂಬಿ ಪ್ರಸವವೇದನೆ ಅನುಭವಿಸಿದಾಗ ಮನೆಯಲ್ಲಿ ಪೋಷಕರು ವಿಚಾರಿಸಿದ್ದಾರೆ. ಆಗ ಮೈಕೈ ನೋವೆಂದು ಹೇಳಿ ಕಷಾಯ ಕುಡಿದು ಮರೆ ಮಾಚಿದ್ದಳು.
ಇದಾದ ಕೆಲ ದಿನಗಳ ಬಳಿಕ ಮಗಳು ಮನೆಯಲ್ಲೇ ಹೆಣ್ಣು ಮಗುವಿಗೆ ಜನ್ಮ ನೀಡಿದಾಗ ತಾಯಿ ದಿಗ್ಭ್ರಾಂತರಾಗಿದ್ದಾರೆ. ಇದಾದ ಬಳಿಕ ಮಗಳು ಗರ್ಭಿಣಿಯಾಗಲು ಕಾರಣವಾದ ಯುವಕನನ್ನು ಸಂಪರ್ಕಿಸಿ ವಿಷಯ ತಿಳಿಸಿದ್ದಾರೆ. ಅವಿವಾಹಿತರಾಗಿ ಮಗು ಹೊಂದಿದ್ದರಿಂದ ಮರ್ಯಾದೆಗೆ ಅಂಜಿ ಯುವತಿ ಮಗುವನ್ನು ತ್ಯಜಿಸುವ ನಿರ್ಧಾರ ತಳೆದಿದ್ದಳು. ಸಹೋದರನ ಬೈಕ್‌ನಲ್ಲಿ ರಿಪ್ಪನ್‌ಪೇಟೆ ಮಾರ್ಗವಾಗಿ ಸಾಗಿ, ಕೈಚೀಲವೊಂದರಲ್ಲಿ ನವಜಾತ ಶಿಶು ಮತ್ತು ಹಾಲಿನ ಬಾಟಲಿ ಇಟ್ಟು, ಗವಟೂರಿನ ಪ್ರಯಾಣಿಕರ ತಂಗುದಾಣದಲ್ಲಿರಿಸಿ ತೆರಳಿದ್ದಳು.
ರಸ್ತೆ ಮಧ್ಯೆ ಬಸ್ ನಿಲ್ಲಿಸಿ 'ಸೇವ್ ಪುರಿ' ಖರೀದಿಸಿದ ಚಾಲಕ; ಟ್ರಾಫಿಕ್ ಜಾಮ್‌ನಿಂದ ಪರದಾಡಿದ ಪ್ರಯಾಣಿಕರು!
ವಿಷಯ ತಿಳಿದು ಭಾನುವಾರ ರಾತ್ರಿ ಮಗುವನ್ನು ರಕ್ಷಿಸಿದ್ದ ಪೊಲೀಸರು ಶಿವಮೊಗ್ಗದ ಆರೈಕೆ ಕೇಂದ್ರಕ್ಕೆ ದಾಖಲಿಸಿದ್ದರು. ಪಿಎಸ್‌ಐ ರಾಜು ರೆಡ್ಡಿ ಹಲವು ಆಯಾಮಗಳಲ್ಲಿ ತನಿಖೆ ಕೈಗೊಂಡಿದ್ದರು. ಯಾವ ಸುಳಿವೂ ದೊರೆಯದಿದ್ದಾಗ ಮೊಬೈಲ್ ಟವರ್ ಡಂಪ್‌ನಂತಹ ತಾಂತ್ರಿಕ ವ್ಯವಸ್ಥೆಯ ನೆರವಿನಿಂದ ಮಗುವಿನ ತಾಯಿಯನ್ನು ಪತ್ತೆಹಚ್ಚುವಲ್ಲಿ ಪೊಲೀಸರು ಯಶಸ್ವಿಯಾಗಿದ್ದಾರೆ. ಇದೀಗ ಮಗು ತಾಯಿಯ ಮಡಿಲು ಸೇರಿದೆ.