ಯುಗಾದಿ ಹಬ್ಬ ಐಪಿಎಲ್​ ಸುನಿತಾ ವಿಲಿಯಮ್ಸ್​ ಫ್ಯಾಷನ್​ ವಿದೇಶ ಧಾರ್ಮಿಕ ಕ್ರೈಂ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Karnataka Police: ಬ್ರಿಟಿಷರ​ ಕಾಲದ ಟೋಪಿಗೆ ಗುಡ್‌ಬೈ; ರಾಜ್ಯ ಪೊಲೀಸರಿಗೆ ಶೀಘ್ರದಲ್ಲೇ ʼಸ್ಮಾರ್ಟ್​​ ಪೀಕ್​ ಹ್ಯಾಟ್​ʼ

Karnataka Police: ಡಿಜಿ-ಐಜಿಪಿ ಸೂಚನೆ ಬೆನ್ನಲ್ಲೇ ಪೀಕ್ ಟೋಪಿ ವಿತರಣೆ ಬಗ್ಗೆ ಚರ್ಚಿಸಲು ರಾಜ್ಯ ಸಶಸ್ತ್ರ ಮೀಸಲು ಪಡೆ (ಕೆಎಸ್​ಆರ್​ಪಿ) ಹೆಚ್ಚುವರಿ ಪೊಲೀಸ್ ಮಹಾನಿರ್ದೇಶಕರ ಅಧ್ಯಕ್ಷತೆಯಲ್ಲಿ ಏಪ್ರಿಲ್​ 4ರಂದು ಕಿಟ್ ನಿರ್ದಿಷ್ಟತಾ ಸಮಿತಿ ಸಭೆ ಕರೆಯಲಾಗಿದೆ. ಸಭೆಯಲ್ಲಿ ಪೊಲೀಸ್‌ ಸಿಬ್ಬಂದಿ ಹೊಸ ಮಾದರಿಯ ಸ್ಮಾರ್ಟ್‌ ಪೀಕ್‌ ಹ್ಯಾಟ್‌ ನೀಡಲು ಬಗ್ಗೆ ತೀರ್ಮಾನ ಕೈಗೊಳ್ಳುವ ಸಾಧ್ಯತೆ ಇದೆ.

ರಾಜ್ಯ ಪೊಲೀಸರಿಗೆ ಶೀಘ್ರದಲ್ಲೇ ʼಸ್ಮಾರ್ಟ್​​ ಪೀಕ್​ ಹ್ಯಾಟ್​ʼ

Profile Prabhakara R Mar 30, 2025 11:53 AM

ಬೆಂಗಳೂರು: ಕರ್ನಾಟಕ ಪೊಲೀಸರ ತಲೆ ಮೇಲೆ ಕಾಣುವ ಬ್ರಿಟಿಷರ ಕಾಲದ ಟೋಪಿ ಮಾಯವಾಗಿ‌ ʼಸ್ಮಾರ್ಟ್​​ ಪೀಕ್​ ಹ್ಯಾಟ್ʼ​ (Smart peak hat) ಅಲಂಕರಿಸುವ ಕಾಲ ಸನ್ನಿಹಿತವಾಗಿದೆ. ಈಗಿರುವ ಸ್ಲೋಚ್‌ ಹ್ಯಾಟ್ (Slouch hat) ಬದಲಿಸುವ ಕೂಗು ಮೊದಲಿನಿಂದಲೂ ಕೇಳಿಬರುತ್ತಿತ್ತು. ಇದೀಗ ಪೊಲೀಸರ‌ (Karnataka Police) ಬಹುವರ್ಷಗಳ ಬೇಡಿಕೆ ಈಡೇರುವ ಸಮಯ ಸಮೀಪಿಸಿದ್ದು, ಪೊಲೀಸ್‌ ಸಿಬ್ಬಂದಿಯ ಟೋಪಿ ಬದಲಾವಣೆ ಸಂಬಂಧ ಪರಿಶೀಲಿಸಿ ವರದಿ ನೀಡುವಂತೆ ಡಿಜಿ-ಐಜಿಪಿ ಡಾ. ಅಲೋಕ್​ ಮೋಹನ್ ಸೂಚಿಸಿದ್ದಾರೆ.​ ಅಲ್ಲದೇ ಈ ಕುರಿತು ರಾಜ್ಯ ಸಶಸ್ತ್ರ ಮೀಸಲು ಪಡೆ (ಕೆಎಸ್​ಆರ್​ಪಿ) ಹೆಚ್ಚುವರಿ ಪೊಲೀಸ್ ಮಹಾನಿರ್ದೇಶಕರ ಅಧ್ಯಕ್ಷತೆಯಲ್ಲಿ ಏಪ್ರಿಲ್​ 4ರಂದು ಕಿಟ್ ನಿರ್ದಿಷ್ಟತಾ ಸಮಿತಿ ಸಭೆ ಕರೆಯಲಾಗಿದೆ.​

ಪ್ರಸ್ತುತ ಬಳಸುತ್ತಿರುವ ಸ್ಲೋಚ್‌ ಕ್ಯಾಪ್‌ನಿಂದ ಪೊಲೀಸ್‌ ಸಿಬ್ಬಂದಿಗೆ ಉಪಯೋಗಕ್ಕಿಂತ ಸಮಸ್ಯೆ ಜಾಸ್ತಿ ಆಗಿದೆ. ಪ್ರತಿಭಟನೆ ಅಥವಾ ಲಾಠಿ ಚಾರ್ಜ್​ ಸಂದರ್ಭಗಳಲ್ಲಿ ಸ್ವಲ್ಪ ಜೋರಾಗಿ ಓಡಿದರೂ ಈ ಟೋಪಿಗಳು ತಲೆಯ ಮೇಲೆ ನಿಲ್ಲಲ್ಲ. ಇನ್ನು ಅಪರಾಧಿಗಳನ್ನು ಬೆನ್ನಟ್ಟುವ ಸಮಯದಲ್ಲಿ ಈ ಟೋಪಿಗಳನ್ನು ಹಾಕಿಕೊಂಡು ಸಾಗುವುದು ಕಷ್ಟ. ಹೀಗಾಗಿ ಸ್ಲೋಚ್‌ ಕ್ಯಾಪ್‌ಗಳನ್ನು ಬದಲಿಸಬೇಕೆಂಬ ಬೇಡಿಕೆ ಹಲವು ವರ್ಷಗಳ ಹಿಂದೆಯೇ ಕೇಳಿಬಂದಿತ್ತು.

ಇನ್ನು ಪ್ರಸ್ತುತ ಪೊಲೀಸ್ ಕಾನ್‌ಸ್ಟೆಬಲ್‌ಗಳು ಧರಿಸುತ್ತಿರುವ ಸ್ಲೋಚ್ ಟೋಪಿಯಿಂದಾಗಿ ಅವರ ಆರೋಗ್ಯದ ಮೇಲೆ ದುಷ್ಪರಿಣಾಮ ಉಂಟಾಗುವ ಸಾಧ್ಯತೆಗಳ ಬಗ್ಗೆ ಇತ್ತೀಚೆಗೆ ಕೇಂದ್ರ ಆರೋಗ್ಯ ಇಲಾಖೆ ಎಚ್ಚರಿಕೆ ನೀಡಿತ್ತು. ಇನ್ನು ಕೇರಳ, ಆಂಧ್ರ ಪ್ರದೇಶ ಮತ್ತು ತಮಿಳುನಾಡು ರಾಜ್ಯಗಳಲ್ಲಿ ಅಲ್ಲಿನ ಪೊಲೀಸ್ ಹೆಡ್ ಕಾನ್‌ಸ್ಟೇಬಲ್ ಹಾಗೂ ಕಾನ್‌ಸ್ಟೇಬಲ್‌ಗಳಿಗೆ ಸ್ಮಾರ್ಟ್ ಪೀಕ್ ಕ್ಯಾಪ್‌ಗಳನ್ನು ನೀಡಲಾಗಿದೆ. ಸದ್ಯ ಅದೇ ಮಾದರಿಯಲ್ಲಿ ಕರ್ನಾಟಕದಲ್ಲಿ ನೀಡುವ ಕುರಿತಾಗಿ ಪರಿಶೀಲನೆ ನಡೆಸಿ ವರದಿ ನೀಡುವಂತೆ ಡಿಜಿ-ಐಜಿಪಿ ಡಾ. ಅಲೋಕ್​ ಮೋಹನ್ ಸೂಚಿಸಿದ್ದಾರೆ.​

ಈ ಹಿಂದೆಯೂ ಒಮ್ಮೆ ಟೋಪಿ ಬದಲಾವಣೆ ಸಂಬಂಧ ಸಭೆ ನಡೆದಿತ್ತು. ಆದರೆ, ಅದಾಗಲೇ ಲಕ್ಷಾಂತರ ಸ್ಲೋಚ್ ಹ್ಯಾಟ್‌ಗಳು ಸಿದ್ಧವಾಗಿದ್ದರಿಂದ ಅಧಿಕಾರಿಗಳ ಮಟ್ಟದಲ್ಲಿ ಪೀಕ್ ಟೋಪಿ ವಿತರಣೆಗೆ ಒಮ್ಮತದ ಅಭಿಪ್ರಾಯ ಮೂಡದೆಯೇ ಸಭೆ ಅಂತ್ಯವಾಗಿತ್ತು. ಇದೀಗ ಡಿಜಿ-ಐಜಿಪಿ ಸೂಚನೆ ಬೆನ್ನಲ್ಲೇ ಪೀಕ್ ಟೋಪಿ ವಿತರಣೆ ಬಗ್ಗೆ ಚರ್ಚಿಸಲು ರಾಜ್ಯ ಸಶಸ್ತ್ರ ಮೀಸಲು ಪಡೆ (ಕೆಎಸ್​ಆರ್​ಪಿ) ಹೆಚ್ಚುವರಿ ಪೊಲೀಸ್ ಮಹಾನಿರ್ದೇಶಕರ ಅಧ್ಯಕ್ಷತೆಯಲ್ಲಿ ಏಪ್ರಿಲ್​ 4ರಂದು ಕಿಟ್ ನಿರ್ದಿಷ್ಟತಾ ಸಮಿತಿ ಸಭೆ ಕರೆಯಲಾಗಿದೆ.

ಈ ಸುದ್ದಿಯನ್ನೂ ಓದಿ | BBMP Budget 2025: ಬಿಬಿಎಂಪಿ ಬಜೆಟ್‌; ರಾಜಧಾನಿಯಲ್ಲಿನ್ನು ಕಸಕ್ಕೂ ಕರಭಾರ!

ಪ್ರಧಾನ ಕಚೇರಿ ಐಜಿಪಿ, ಬೆಂಗಳೂರು ಉತ್ತರ ವಿಭಾಗ, ಆತ್ಮೀಯ ವಿಭಾಗ ಹಾಗೂ ಸಿಎಆರ್ ಡಿಸಿಪಿಗಳು, ಜೊತೆಗೆ ಬೆಂಗಳೂರು ನಗರ ಜಿಲ್ಲೆ ಎಸ್​​ಪಿ, ಕೆಎಸ್​ಆರ್​ಪಿ ಕಮಾಂಡೆಂಟ್​ ಸೇರಿ ಇನ್ನಿತರ ಹಿರಿಯ ಅಧಿಕಾರಿಗಳು ಸಭೆಯಲ್ಲಿ ಭಾಗಿಯಾಗಲಿದ್ದಾರೆ. ಈ ವೇಳೆ ಸಾಧಕ-ವಾಧಕಗಳ ಬಗ್ಗೆ ಚರ್ಚೆ ನಡೆಯಲಿದ್ದು, ಪೀಕ್ ಕ್ಯಾಪ್ ಕೊಡಲು ಶಿಫಾರಸು ಮಾಡುವ ಭರವಸೆ ಎಂದು ಮೂಲಗಳು ತಿಳಿಸಿವೆ.