ಹಾಸನ, ಆ. 17: ನೈಸ್ ಯೋಜನೆಯನ್ನು ನೈಸ್ ಕಂಪನಿಯಿಂದ ಯಾರೋ ಒಬ್ಬರು ಟೇಕ್ ಓವರ್ ಮಾಡಲು ಹೊರಟಿದ್ದಾರೆ. ಟೇಕ್ ಓವರ್ ಮಾಡಲು ಹೊರಟವರು ಯಾರು? ಎಂಬ ಬಗ್ಗೆ ಈ ರಾಜ್ಯದ ಮುಖ್ಯಮಂತ್ರಿಯೇ ಹೇಳಬೇಕು ಎಂದು ಕೇಂದ್ರ ಸಚಿವ ಎಚ್.ಡಿ. ಕುಮಾರಸ್ವಾಮಿ (HD Kumaraswamy) ಒತ್ತಾಯಿಸಿದ್ದಾರೆ. ಹಾಸನದ ಹೊಳೆನರಸೀಪುರದಲ್ಲಿ ಮಾಧ್ಯಮಗಳ ಜತೆ ಮಾತನಾಡಿದ ಅವರು, ನೈಸ್ ಯೋಜನೆ ಬಗ್ಗೆ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರ ಹೇಳಿಕೆ ಬಗ್ಗೆ ಪ್ರತಿಕ್ರಿಯೆ ನೀಡಿದರು.
ನನಗೆ ಒಂದು ಮಾಹಿತಿ ಇದೆ, ಆ ಯೋಜನೆಯನ್ನು ಆ ಕಂಪನಿಯಿಂದ ಯಾರೋ ಈಗ ಟೇಕ್ ಓವರ್ ಮಾಡಲು ಹೊರಟಿದ್ದಾರೆ. ಈ ಮುಖ್ಯಮಂತ್ರಿಯನ್ನು ಕೇಳುತ್ತೇನೆ, ಇದರಲ್ಲಿ ಯಾರ ಪಾಲಿದೆ? ಯಾರು ಅದನ್ನು ಟೇಕ್ ಓವರ್ ಮಾಡಲು ಹೊರಟಿದ್ದಾರೆ? ಇವೆಲ್ಲವನ್ನೂ ಅವರೇ ಹೇಳಬೇಕು ಎಂದು ಆಗ್ರಹಿಸಿದರು.
ಇವರು ಮಾಧ್ಯಮಗಳ ಮುಂದೆ, ವೇದಿಕೆ ಮೇಲೆ ಭಾರಿ ವಿನಮ್ರವಾಗಿ ಭಾಷಣ ಮಾಡುವುದು ಬೇರೆ. ಆದರೆ ಒಳಗೆ ನಡೆಯುತ್ತಿರುವುದೇ ಬೇರೆ. ಈ ಮುಖ್ಯಮಂತ್ರಿಯ ಹುಟ್ಟುಗುಣ ಇದೆಯಲ್ಲ ಅದನ್ನು ಎಲ್ಲರೂ ಬಲ್ಲರು. ನನ್ನ ಮುಂದಿನ ತಲೆಮಾರುಗಳು ಖರ್ಚು ಮಾಡಿದರೂ ಹಣ ಕರಗದೆ ಇರುವಷ್ಟು ಆಸ್ತಿ ಮಾಡಿದ್ದೇನೆ ಎಂದು ಮೊನ್ನೆ ಹೇಳಿದ್ದಾರೆ. ಬಹಳ ಸಂತೋಷ. ಅಷ್ಟು ಆಸ್ತಿ ಸಂಪಾದನೆ ಮಾಡಿದ್ದರೂ ಈಗಲೂ ಸಹ ಅಧಿಕಾರ ದುರುಪಯೋಗಪಡಿಸಿಕೊಂಡು ನಾನು ಹರಿಶ್ಚಂದ್ರನಾಗುತ್ತೇನೆ, ಸತ್ಯ ಹೇಳ್ತಿನಿ ಎಂದರೆ ಹೇಗೆ? ಪಾಪ. ನಾನು ಇನ್ನೂ ಪಾರದರ್ಶಕವಾಗಿ, ಪ್ರಾಮಾಣಿಕವಾಗಿ ರಾಜ್ಯ ಅಳುತ್ತಿದ್ದೇನೆ ಅಂಥ ಹೇಳ್ತಾರೆ. ಆದರೆ ಅವರ ಹುಟ್ಟುಗುಣ ಹೋಗಲ್ಲ ಎಂದು ವ್ಯಂಗ್ಯವಾಡಿದರು.
ನನಗೆ ಇರುವ ಮಾಹಿತಿ ಪ್ರಕಾರ ಯಾರೋ ಒಬ್ಬರು ನೈಸ್ ಯೋಜನೆಯನ್ನು ಟೇಕ್ ಓವರ್ ಮಾಡಲು ಹೋಗಿದ್ದಾರೆ! ಪಾಪ ಇವರು (ಮುಖ್ಯಮಂತ್ರಿ) ಬಹಳ ದೇವರ ಭಕ್ತರಲ್ವಾ? ನಾನು ದೇವಸ್ಥಾನದ ಸನ್ನಿಧಿಯಲ್ಲಿ ನಿಂತುಕೊಂಡು ಹೇಳುತ್ತಿದ್ದೇನೆ. ನೈಸ್ ಕಂಪನಿ ಮಾಲಕನಿಂದ ಟೇಕ್ ಓವರ್ ಮಾಡಲು ನೀವು ಹೊರಟ್ಟಿದ್ದೀರಾ, ಎಚ್ಚರಿಕೆ. ನಾವು ಇರುವುದು ವಿರೋಧ ಪಕ್ಷದಲ್ಲಿ. ಈ ರೀತಿಯಲ್ಲಿ ಅಧಿಕಾರ ದುರ್ಬಳಕೆ ಮಾಡಿಕೊಳ್ಳುವ ವಿಷಯಗಳಲ್ಲಿ ನಮ್ಮ ಕುಟುಂಬದಲ್ಲಿ ನೋ ಕಾಂಪ್ರಮೈಸ್ ಎಂಬುದನ್ನು ಸ್ಪಷ್ಟವಾಗಿ ಹೇಳುತ್ತಿದ್ದೇನೆ ಎಂದು ಸಚಿವ ಕುಮಾರಸ್ವಾಮಿ ಗುಡುಗಿದರು.
ನಾನು ಈ ನಾಡಿನ ಜನಕ್ಕೆ ಹೇಳಲು ಬಯಸುತ್ತೇನೆ. ಯಾರು ತಪ್ಪು ತಿಳಿದುಕೊಳ್ಳುವ ಅವಶ್ಯಕತೆ ಇಲ್ಲ. ರಾಜ್ಯದಲ್ಲಿ ಅಧಿಕಾರಕ್ಕೆ ನೂರಾರು ಜನ ನಾಯಕರು ಬಂದು ಹೋಗಿದ್ದಾರೆ. ನಮ್ಮ ರಾಜ್ಯದ ಮುಖ್ಯಮಂತ್ರಿ ಹಿಂದಿನ ಎಲ್ಲಾ ಮುಖ್ಯಮಂತ್ರಿಗಳನ್ನು ನೆನಪಿಸಿಕೊಂಡು ಭಾಷಣ ಮಾಡಿದ್ದಾರೆ. ಅವರಿಗೆ ಗೌರವ ತರಬೇಕಾದರೆ ಮುಂದೆಯಾದರೂ ಲೂಟಿ ಹೊಡೆಯುವುದನ್ನು ನಿಲ್ಲಿಸಿ. ರಾಜ್ಯದ ಸಂಪತ್ತನ್ನು ಉಳಿಸಿ. ನಿಮಗೆ ಅಧಿಕಾರ ಕೊಟ್ಟಿದ್ದಾರೆ. ಅದನ್ನು ದುರುಪಯೋಗ ಮಾಡಿಕೊಳ್ಳದೆ ಈಗಲಾದರೂ ಪ್ರಯತ್ನ ಮಾಡಿ. ಈಗಾಗಲೇ ಹೈಕೋರ್ಟ್ ಈ ಬಗ್ಗೆ ಸ್ಪಷ್ಟವಾಗಿ ಹೇಳಿದೆ. ನೈಸ್ ಯೋಜನೆಯಲ್ಲಿ ಅಕ್ರಮಗಳು ನಡೆದಿವೆ, ಅಕ್ರಮವಾಗಿ ಟೋಲ್ ಸಂಗ್ರಹ ಮಾಡುತ್ತಿದ್ದಾರೆ, ಇಂದೊಂದು ದೊಡ್ಡ ಹಗರಣ ಎಂದು ಅಭಿಪ್ರಾಯಪಟ್ಟಿದೆ. ನ್ಯಾಯಾಲಯ ಹೀಗೆ ಹೇಳಿ ಎಷ್ಟು ದಿನವಾಗಿದೆ ಮುಖ್ಯಮಂತ್ರಿ ಅವರೇ? ಅದನ್ನು ಮುಖ್ಯಮಂತ್ರಿಗೆ ನೆನಪು ಮಾಡಿಕೊಡಲು ಪತ್ರ ಬರೆದಿದ್ದೇನೆ. ನೈಸ್ ಯೋಜನೆಯನ್ನು ಟೇಕ್ ಓವರ್ ಮಾಡುವ ಚರ್ಚೆಗಳನ್ನು ಸ್ವಲ್ಪ ದಿನ ನಿಲ್ಲಿಸಿಕೊಳ್ಳಿ ಎಂದು ಕೇಂದ್ರ ಸಚಿವರು ಸಲಹೆ ಮಾಡಿದರು.
ಇಡೀ ಯೋಜನೆಯನ್ನು ಯಾರಿಗೆ ಟೇಕ್ ಓವರ್ ಮಾಡಲು ಹೊರಟಿದ್ದೀರಿ? ಟೇಕ್ ಓವರ್ ಮಾಡುತ್ತಿರುವುದು ಸರ್ಕಾರಕ್ಕೋ ಅಥವಾ ಸರ್ಕಾರದ ಮುಖ್ಯಸ್ಥರಾಗಿ ಮುಖ್ಯಮಂತ್ರಿಗಳಾಗಿ ನೀವೇ ಟೇಕ್ ಓವರ್ ಮಾಡಿಕೊಳ್ತಿರೋ? ನಿಮ್ಮ ಕಂಪನಿಗೆ ಟೇಕ್ ಓವರ್ ಮಾಡಿಕೊಳ್ತಿರೋ? ಎಂದು ಸಿಎಂ ಡಿಕೆ ಶಿವಕುಮಾರ್ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.
ನೈಸ್ ಕಂಪನಿಗೆ ಇವರೆಲ್ಲಾ ಶರಣಾಗಿದ್ದಾರೆ
ನೈಸ್ ಯೋಜನೆ ಬಗ್ಗೆ ಇದುವರೆಗೂ ನ್ಯಾಯಾಲಯಗಳು ಏನೆಲ್ಲಾ ಆದೇಶಗಳನ್ನು ನೀಡಿದೆ ಎಂಬುದರ ಬಗ್ಗೆ ಉಲ್ಲೇಖ ಮಾಡಿ ಬರೆದಿದ್ದೇನೆ. ದೇವೇಗೌಡರು ರಾಜ್ಯದ ಮುಖ್ಯಮಂತ್ರಿ ಆಗಿರುವ ತನಕ ಎಲ್ಲವೂ ಕಾನೂನುಬದ್ಧವಾಗಿಯೇ ನಡೆಯುತ್ತಿದ್ದವು. ಆ ನಂತರ ಹಲವಾರು ರೀತಿಯ ಮಾರ್ಪಾಡುಗಳನ್ನು ಈ ಕಂಪನಿ ಮಾಡಿಕೊಂಡು ಬಂದಿದೆ. ನಂತರದ ದಿನಗಳಲ್ಲಿ ಸರ್ಕಾರ ನಡೆಸುವವರು, ಅಧಿಕಾರಿಗಳು ಆ ಕಂಪನಿಗೆ ಶರಣಾಗಿದ್ದಾರೆ. ಆ ಕಂಪನಿ ಏನೇನು ಬೇಕು ಎಲ್ಲಾ ರೀತಿಯಲ್ಲಿ ದೋಚುವ ಕೆಲಸಕ್ಕೆ ಪ್ರಾರಂಭಿಕ ಹಂತದಲ್ಲೇ ಆರಂಭ ಮಾಡಿದೆ ಎಂದು ಕೇಂದ್ರ ಸಚಿವ ಎಚ್.ಡಿ. ಕುಮಾರಸ್ವಾಮಿ ಆರೋಪಿಸಿದರು.
ಕಾವೇರಿ ಪ್ರಾಧಿಕಾರದ ನಿರ್ದೇಶನದಂತೆ ತಮಿಳುನಾಡಿಗೆ ನಿತ್ಯ 12 ಸಾವಿರ ಕ್ಯೂಸೆಕ್ ನೀರು ಹರಿಸಲು ಸುಪ್ರೀಂ ಕೋರ್ಟ್ ಸೂಚನೆ
ದೇಶದ ಇತಿಹಾಸದಲ್ಲಿ ಬಿಎಂಐಸಿಯ ರಸ್ತೆಗೆ ಸಂಬಂಧಪಟ್ಟಂತೆ ಸರ್ಕಾರದ ದಾರಿ ತಪ್ಪಿಸಿ, ಸರ್ಕಾರದಲ್ಲಿರುವ ಕೆಲ ಪ್ರಮುಖ ವ್ಯಕ್ತಿಗಳು, ಅಧಿಕಾರಿಗಳನ್ನು ದುರ್ಬಳಕೆ ಮಾಡಿಕೊಂಡು ದಾರಿ ತಪ್ಪಿಸಿದ್ದಾರೆ. ಕೋರ್ಟ್‌ಗಳಿಗೆ ತಪ್ಪು ದಾಖಲೆಗಳನ್ನು ನೀಡಿ ಅವರ ಪರವಾದ ತೀರ್ಪುಗಳನ್ನು ಪಡೆದುಕೊಂಡಿದ್ದಾರೆ. ದೇಶದ ಇತಿಹಾಸದಲ್ಲೇ ಆ ಯೋಜನೆ ವಿಚಾರವಾಗಿ ಇಷ್ಟೊಂದು ಸಲ ಕೋರ್ಟ್ ಮೆಟ್ಟಿಲೇರಿರುವುದು ಎಲ್ಲಿಯೂ ನಡೆದಿಲ್ಲ. ಆ ಕಂಪನಿ ಮೂವತ್ತು ವರ್ಷಗಳನ್ನು ಪೂರೈಸಿದೆ. 111 ಕಿಲೋಮೀಟರ್ ರಸ್ತೆ ಕಾಮಗಾರಿ ಆಗಬೇಕಿತ್ತು, ಆ ಕೆಲಸ ಪೂರ್ಣಗೊಳಿಸಿಲ್ಲ. ಬೆಂಗಳೂರಿನ ಸುತ್ತಮುತ್ತ ಅವರು ಆಸಕ್ತಿ ಹೊಂದಿದ್ದರೆಯೇ ವಿನಾ ಇಡೀ ರಸ್ತೆ ಮಾಡುವುದಕ್ಕಲ್ಲ. ಅಲ್ಲಿರುವ ಬೆಲೆ ಬಾಳುವ ಭೂಮಿಯನ್ನು ಲಪಟಾಯಿಸಲು ಇವರೆಲ್ಲಾ ಒಂದಾಗಿದ್ದಾರೆ ಎಂದು ಕೇಂದ್ರ ಸಚಿವ ಎಚ್.ಡಿ. ಕುಮಾರಸ್ವಾಮಿ ದೂರಿದರು.