ಕರ್ನಾಟಕಕ್ಕೆ ಮತ್ತೆ ಮುಖಭಂಗ; ಕಾವೇರಿ ಪ್ರಾಧಿಕಾರದ ನಿರ್ದೇಶನದಂತೆ ತಮಿಳುನಾಡಿಗೆ ನಿತ್ಯ 12 ಸಾವಿರ ಕ್ಯೂಸೆಕ್ ನೀರು ಹರಿಸಲು ಸುಪ್ರೀಂ ಕೋರ್ಟ್ ಸೂಚನೆ
Cauvery Water Dispute: ಮಳೆ ಕೊರತೆ ಎದುರಿಸುತ್ತಿರುವ ಕರ್ನಾಟಕ್ಕೆ ಮತ್ತೊಂದು ಶಾಕ್ ಎದುರಾಗಿದೆ. ತಮಿಳುನಾಡಿಗೆ ನೀರು ಹರಿಸುವಂತೆ ಕಾವೇರಿ ನೀರು ನಿರ್ವಹಣಾ ಪ್ರಾಧಿಕಾರನೀಡಿದ್ದ ಆದೇಶವನ್ನು ಪಾಲಿಸುವಂತೆ ಸುಪ್ರೀಂ ಕೋರ್ಟ್ ಸೂಚಿಸಿದೆ. ಆ ಮೂಲಕ ನಿತ್ಯ 12 ಸಾವಿರ ಕ್ಯೂಸೆಕ್ ನೀರು ಹರಿಸುವಂತೆ ನೀಡಲಾಗಿದ್ದ ನಿರ್ದೇಶನವನ್ನು ಎತ್ತಿಹಿಡಿಯಲಾಗಿದೆ.
ಸಾಂದರ್ಭಿಕ ಚಿತ್ರ -
ದೆಹಲಿ, ಆ. 17: ಕಾವೇರಿ ನೀರು ಹಂಚಿಕೆ (Cauvery Water Dispute) ವಿಚಾರದಲ್ಲಿ ಕರ್ನಾಟಕಕ್ಕೆ ಬಿಗ್ ಶಾಕ್ ಎದುರಾಗಿದೆ. ತಮಿಳುನಾಡಿಗೆ ನೀರು ಹರಿಸುವಂತೆ ಕಾವೇರಿ ನೀರು ನಿರ್ವಹಣಾ ಪ್ರಾಧಿಕಾರ (CWMA) ನೀಡಿದ್ದ ಆದೇಶವನ್ನು ಪಾಲಿಸುವಂತೆ ಸುಪ್ರೀಂ ಕೋರ್ಟ್ (Supreme Court) ಕರ್ನಾಟಕಕ್ಕೆ ಸೂಚಿಸಿದೆ. ನಿತ್ಯ 12 ಸಾವಿರ ಕ್ಯೂಸೆಕ್ ನೀರು ಹರಿಸುವಂತೆ ನೀಡಲಾಗಿದ್ದ ನಿರ್ದೇಶನವನ್ನು ನ್ಯಾಯಾಲಯ ಎತ್ತಿಹಿಡಿದಿದೆ. ಮೊದಲೇ ಮಳೆ ಕೊರತೆ ಎದುರಿಸುತ್ತಿರುವ ಕರ್ನಾಟಕಕ್ಕೆ ಈ ಆದೇಶ ಮತ್ತೊಂದು ಆಘಾತ ತಂದಿತ್ತಿದೆ.
ತಮಿಳುನಾಡು ಸಲ್ಲಿಸಿದ್ದ ಅರ್ಜಿಯ ವಿಚಾರಣೆ ವೇಳೆ, ಸಿಡಬ್ಲ್ಯುಎಂಎ ಆದೇಶ ಪಾಲಿಸುವಂತೆ ಕರ್ನಾಟಕಕ್ಕೆ ಸುಪ್ರೀಂ ಕೋರ್ಟ್ ಸೂಚನೆ ನೀಡಿದೆ. ಜತೆಗೆ ಮುಂದಿನ ವಿಚಾರಣೆಯನ್ನು ಆಗಸ್ಟ್ 24ಕ್ಕೆ ಮುಂದೂಡಿದೆ. ಸ್ಥಿತಿಗತಿ ವರದಿಯನ್ನು ಸಲ್ಲಿಸುವಂತೆಯೂ ನ್ಯಾಯಾಲಯ ಪ್ರಾಧಿಕಾರಕ್ಕೆ ಸೂಚಿಸಿದೆ.
ಸುಪ್ರೀಂ ಕೋರ್ಟ್‌ನಲ್ಲಿ ಕರ್ನಾಟಕಕ್ಕೆ ಹಿನ್ನಡೆ:
Supreme Court has deferred the Cauvery water-sharing dispute between Karnataka and Tamil Nadu for a week and sought an updated status report. Tamil Nadu accused Karnataka of not releasing its allocated share despite CWRC directions, while Karnataka cited severe water scarcity in… pic.twitter.com/NmpUYQ6L2A
— IANS (@ians_india) August 17, 2026
ಕರ್ನಾಟಕ ನೀರು ಬಿಡುಗಡೆ ಮಾಡುವಂತೆ ಸೂಚಿಸಿದ್ದ ಸಿಡಬ್ಲ್ಯುಎಂಎ ನಿರ್ದೇಶನವನ್ನು ಸಮರ್ಪಕವಾಗಿ ಜಾರಿಗೆ ತರುವಂತೆ ಕೋರಿ ತಮಿಳುನಾಡು ಸಲ್ಲಿಸಿದ್ದ ಅರ್ಜಿಯನ್ನು ನ್ಯಾಯಮೂರ್ತಿ ವಿಕ್ರಮ್ ನಾಥ್ ಮತ್ತು ನ್ಯಾಯಮೂರ್ತಿ ಸಂದೀಪ್ ಮೆಹ್ರಾ ಅವರನ್ನೊಳಗೊಂಡ ಪೀಠವು ವಿಚಾರಣೆ ನಡೆಸಿತು.
ತಮಿಳುನಾಡಿನ ವಾದವೇನು?
ತಮಿಳುನಾಡು ಪರ ಹಾಜರಾದ ವಕೀಲ ಸಿ.ಎಸ್. ವೈದ್ಯನಾಥನ್, ʼʼಕರ್ನಾಟಕವು ಸಿಡಬ್ಲ್ಯುಎಂಎ ನಿರ್ದೇಶನಗಳನ್ನು ಪಾಲಿಸುತ್ತಿಲ್ಲʼʼ ಎಂದು ನ್ಯಾಯಾಲಯಕ್ಕೆ ತಿಳಿಸಿದರು. ಕರ್ನಾಟಕ ನಿತ್ಯ 12 ಸಾವಿರ ಕ್ಯೂಸೆಕ್ ನೀರು ಹರಿಸುವಂತೆ ಸಿಡಬ್ಲ್ಯುಎಂಎ ಸೂಚಿಸಿತ್ತು. ಆದರೆ ನಿರೀಕ್ಷಿತ ಪ್ರಮಾಣದಲ್ಲಿ ನೀರು ಹರಿದುಬರುತ್ತಿಲ್ಲ ಎಂದು ಸುಪ್ರೀಂ ಕೋರ್ಟ್‌ನಲ್ಲಿ ಅವರು ವಾದಿಸಿದರು. ನಿತ್ಯ ಕೇವಲ 5ರಿಂದ 6 ಸಾವಿರ ಕ್ಯೂಸೆಕ್‌ನಷ್ಟು ನೀರು ಬರುತ್ತಿದೆ ಎಂದು ಕೋರ್ಟ್‌ನ ಗಮನಕ್ಕೆ ತಂದರು.
ಕರ್ನಾಟಕದ ಪರವಾಗಿ ವಕೀಲ ಶ್ಯಾಮ್ ದಿವಾನ್ ವಾದ ಮಂಡಿಸಿ, ರಾಜ್ಯವು ಮಳೆ ಕೊರತೆಯಿಂದ ಕಾವೇರಿ ಜಲಾನಯನ ಪ್ರದೇಶದಲ್ಲಿ ಅತ್ಯಂತ ತೀವ್ರ ಸಂಕಷ್ಟವನ್ನು ಎದುರಿಸುತ್ತಿದೆ ಎಂದು ಹೇಳಿದರು. ವಾದ-ಪ್ರತಿವಾದ ಆಲಿಸಿದ ಸುಪ್ರೀಂ ಕೋರ್ಟ್ ಕೊನೆಗೆ ಸಿಡಬ್ಲ್ಯುಎಂಎ ಆದೇಶ ಪಾಲಿಸುವಂತೆ ಕರ್ನಾಟಕಕ್ಕೆ ಸೂಚಿಸಿತು.
ಉನ್ನತ ಮಟ್ಟದ ಸಭೆಯಲ್ಲಿ ತೀರ್ಮಾನವೇನು?
ಇತ್ತೀಚೆಗಷ್ಟೇ ತಮಿಳುನಾಡಿಗೆ ನಿತ್ಯ 12 ಸಾವಿರ ಕ್ಯೂಸೆಕ್ ನೀರು ಹರಿಸಬೇಕು ಎನ್ನುವ ಕಾವೇರಿ ನೀರು ನಿಯಂತ್ರಣ ಸಮಿತಿಯ ಆದೇಶವನ್ನು ಕಾವೇರಿ ನೀರು ನಿರ್ವಹಣಾ ಪ್ರಾಧಿಕಾರ ಎತ್ತಿಹಿಡಿದಿತ್ತು. ಆಗಸ್ಟ್ 12ರಿಂದಲೇ ಪ್ರತಿದಿನ 12 ಸಾವಿರ ಕ್ಯೂಸೆಕ್ ಕಾವೇರಿ ನೀರನ್ನು ತಮಿಳುನಾಡಿಗೆ ಹರಿಸಬೇಕು, 15 ದಿನಗಳಲ್ಲಿ 15.50 ಟಿಎಂಸಿ ನೀರು ಹರಿಸಬೇಕು ಎಂದು ಪ್ರಾಧಿಕಾರ ಕರ್ನಾಟಕಕ್ಕೆ ನಿರ್ದೇಶಿಸಿತ್ತು.
ಕಾವೇರಿ ಕಿಚ್ಚು; CWRC ಆದೇಶದ ವಿರುದ್ಧ ಭುಗಿಲೆದ್ದ ರೈತರು, ಕನ್ನಡಪರ ಸಂಘಟನೆಗಳ ಆಕ್ರೋಶ
ರಾಜ್ಯದಲ್ಲಿ ಈ ಬಾರಿ ಮುಂಗಾರು ಮಳೆ ತೀವ್ರ ಕ್ಷೀಣಿಸಿದ್ದು, ಪ್ರಮುಖ ಜಲಾಶಯಗಳಲ್ಲಿನ ನೀರು ರಾಜ್ಯದ ಜನರ ಕುಡಿಯುವ ಅಗತ್ಯಕ್ಕೆ ಸಾಕಾಗುತ್ತಿಲ್ಲ ಎಂಬ ನೈಜ ಪರಿಸ್ಥಿತಿಯನ್ನು ಸಭೆಯಲ್ಲಿ ರಾಜ್ಯದ ಅಧಿಕಾರಿಗಳು ಸುದೀರ್ಘವಾಗಿ ವಿವರಿಸಿದ್ದರು. ಆದರೆ, ಕೃಷಿ ಚಟುವಟಿಕೆಗಳ ನೆಪವೊಡ್ಡಿ ನೀರಿಗಾಗಿ ಪಟ್ಟು ಹಿಡಿದಿದ್ದ ತಮಿಳುನಾಡಿನ ಪರವಾಗಿಯೇ ಪ್ರಾಧಿಕಾರ ತೀರ್ಮಾನ ಕೈಗೊಂಡಿತ್ತು.
ರಾಜ್ಯದ ಸುದ್ದಿ ಓದಲು ಇಲ್ಲಿ ಕ್ಲಿಕ್ ಮಾಡಿ.
ʼಪ್ರವಾಸಿ ಪ್ರಪಂಚʼ ವೆಬ್‌ಸೈಟ್‌ಗೆ ಭೇಟಿ ನೀಡಲು ಇಲ್ಲಿ ಕ್ಲಿಕ್ ಮಾಡಿ.