ಕರ್ನಾಟಕ ಬಜೆಟ್​ ಐಪಿಎಲ್​ ಸುನಿತಾ ವಿಲಿಯಮ್ಸ್​ ಫ್ಯಾಷನ್​ ವಿದೇಶ ಧಾರ್ಮಿಕ ಕ್ರೈಂ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

SSLC Exam 2025: ಮಾರ್ಚ್‌ 21ರಿಂದ ಎಸ್‌ಎಸ್‌ಎಲ್‌ಸಿ ಪರೀಕ್ಷೆ, ಈ ನಿಯಮಗಳ ಪಾಲನೆ ಕಡ್ಡಾಯ

ಮಾರ್ಚ್‌ 21ರಿಂದ ಏಪ್ರಿಲ್ 4ನೇ ತಾರೀಕಿನ ತನಕ ಎಸ್‌ಎಸ್‌ಎಲ್‌ಸಿ ಪರೀಕ್ಷೆಗಳು ನಡೆಯಲಿದೆ. SSLC ಪರೀಕ್ಷೆ ನಡೆಯುವ ಕೇಂದ್ರದ 200 ಮೀಟರ್ ಆವರಣದಲ್ಲಿ ಸುರಕ್ಷತಾ ಕ್ರಮ ಕೈಗೊಳ್ಳಲಾಗುತ್ತಿದೆ. ಪರೀಕ್ಷಾ ಕೇಂದ್ರಗಳ ಸುತ್ತಲಿನ 200 ಮೀಟರ್ ವ್ಯಾಪ್ತಿಯಲ್ಲಿ ಯಾವುದೇ ರೀತಿಯ ಎಸ್.ಟಿ.ಡಿ., ಮೊಬೈಲ್ ಪೇಜರ್, ಝರಾಕ್ಸ್, ಟೈಪಿಂಗ್ ಮುಂತಾದವುಗಳನ್ನು ನಿಷೇಧಿಸಲಾಗಿದೆ.

ಮಾರ್ಚ್‌ 21ರಿಂದ ಎಸ್‌ಎಸ್‌ಎಲ್‌ಸಿ ಪರೀಕ್ಷೆ, ಈ ನಿಯಮಗಳ ಪಾಲನೆ ಕಡ್ಡಾಯ

ಹರೀಶ್‌ ಕೇರ ಹರೀಶ್‌ ಕೇರ Mar 18, 2025 9:16 AM

ಬೆಂಗಳೂರು: ರಾಜ್ಯಾದ್ಯಂತ ಮಾರ್ಚ್‌ 21ನೇ ತಾರೀಕಿನಿಂದ ಎಸ್‌ಎಸ್‌ಎಲ್‌ಸಿ ಪರೀಕ್ಷೆ (SSLC Exam 2025) ಆರಂಭವಾಗಲಿದೆ. ಎಸ್‌ಎಸ್‌ಎಲ್‌ಸಿ ಪರೀಕ್ಷೆಗೆ ಈಗಾಗಲೇ ಕರ್ನಾಟಕ ಪರೀಕ್ಷಾ ಮಂಡಳಿ (Karnataka Examination Board) ಸಕಲ ಸಿದ್ದತೆಗಳನ್ನು ಮಾಡಿಕೊಂಡಿದೆ. ಕಳೆದ ವರ್ಷಕ್ಕೆ ಹೋಲಿಸಿದರೆ ಪ್ರಸ್ತುತ ವರ್ಷದಲ್ಲಿ ಹೆಚ್ಚಿನ ಮಕ್ಕಳು ಪರೀಕ್ಷೆ ಬರೆಯುತ್ತಿದ್ದಾರೆ. ಈ ನಡುವೆ ರಾಜ್ಯ ಶಿಕ್ಷಣ ಇಲಾಖೆ (education department) ಎಸ್‌ಎಸ್‌ಎಲ್‌ಸಿ ಪರೀಕ್ಷೆ ಬರೆಯುವ ಎಲ್ಲಾ ಮಕ್ಕಳಿಗೆ ಮಹತ್ವದ ನಿಯಮಗಳನ್ನು ಹೊಂದಿರುವ ಸೂಚನೆಯನ್ನು ಹೊರಡಿಸಿದೆ. ಈ ನಿಯಮಗಳ ಪಾಲನೆ ಕಡ್ಡಾಯವಾಗಿದೆ.

ರಾಜ್ಯದಲ್ಲಿ 2818 ಕೇಂದ್ರಗಳಲ್ಲಿ ಎಸ್ಸೆಸ್ಸೆಲ್ಸಿ ಪರೀಕ್ಷೆ ನಡೆಯಲಿದೆ. ಈ ಬಾರಿ ಪರೀಕ್ಷೆಗೆ ಒಟ್ಟು 896,447 ವಿದ್ಯಾರ್ಥಿಗಳು ಹೆಸರು ನೋಂದಾಯಿಸಿಕೊಂಡಿದ್ದಾರೆ. 8,42,817 ಹೊಸಬರು, 38,091 ಪುನರಾವರ್ತಿತರು ಹಾಗೂ 15,539 ಖಾಸಗಿ ವಿದ್ಯಾರ್ಥಿಗಳು ಪರೀಕ್ಷೆ ಬರೆಯಲಿದ್ದಾರೆ. ರಾಜ್ಯವ್ಯಾಪಿ ಪರೀಕ್ಷೆಗೆ 15881 ಶಿಕ್ಷಣ ಸಂಸ್ಥೆಗಳು ನೋಂದಾಯಿಸಿಕೊಂಡಿವೆ. ಪರೀಕ್ಷಾ ಕೇಂದ್ರಗಳಲ್ಲಿ ಅಕ್ರಮ ಹಾಗೂ ನಕಲು ತಡೆಯಲು ಎಲ್ಲ 2818 ಕೇಂದ್ರಗಳಲ್ಲಿ ವೆಬ್ ಕ್ಯಾಸ್ಟಿಂಗ್‌ ಅಳವಡಿಸಲಾಗಿದೆ. ಇಡೀ ಕೇಂದ್ರದಲ್ಲಿ ಸಿಸಿಟಿವಿ ಅಳವಡಿಸಲಾಗಿದೆ. ಇದನ್ನು ಜಿಲ್ಲಾ ಪಂಚಾಯಿತಿ ಸಿಇಒ ಕಚೇರಿಯಲ್ಲಿ ನಿಯಂತ್ರಣ ಕೊಠಡಿಯಿಂದ ನಿಯಂತ್ರಿಸಲಾಗುತ್ತದೆ.

ಮಾರ್ಚ್‌ 21ರಿಂದ ಏಪ್ರಿಲ್ 4ನೇ ತಾರೀಕಿನ ತನಕ ಎಸ್‌ಎಸ್‌ಎಲ್‌ಸಿ ಪರೀಕ್ಷೆಗಳು ನಡೆಯಲಿದೆ. SSLC ಪರೀಕ್ಷೆ ನಡೆಯುವ ಕೇಂದ್ರದ 200 ಮೀಟರ್ ಆವರಣದಲ್ಲಿ ಸುರಕ್ಷತಾ ಕ್ರಮ ಕೈಗೊಳ್ಳಲಾಗುತ್ತಿದೆ. ಪೊಲೀಸರ ಭದ್ರತೆಯಲ್ಲಿ ಪರೀಕ್ಷೆ ನಡೆಸಲು ರಾಜ್ಯ ಶಿಕ್ಷಣ ಇಲಾಖೆ ಮುಂದಾಗಿದೆ. ಎಸ್‌ಎಸ್‌ಎಲ್‌ಸಿ ಪರೀಕ್ಷೆ ಆರಂಭವಾದ ದಿನದಿಂದ ಮುಗಿಯುವವರೆಗೆ ಪರೀಕ್ಷಾ ಕೇಂದ್ರಗಳ ಸುತ್ತಲಿನ 200 ಮೀಟರ್ ವ್ಯಾಪ್ತಿಯಲ್ಲಿ ಯಾವುದೇ ರೀತಿಯ ಎಸ್.ಟಿ.ಡಿ., ಮೊಬೈಲ್ ಪೇಜರ್, ಝರಾಕ್ಸ್, ಟೈಪಿಂಗ್ ಮುಂತಾದವುಗಳನ್ನು ನಿಷೇಧಿಸಲಾಗಿದೆ. ಪರೀಕ್ಷೆ ನಡೆಯುವ ಪ್ರದೇಶದಲ್ಲಿ ಅನಧಿಕೃತ ವ್ಯಕ್ತಿಗಳು ಅಥವಾ ಗುಂಪು ಬರದಂತೆ ಪೊಲೀಸರು ಎಚ್ಚರಿಕೆ ವಹಿಸಬೇಕು.

ಇತರ ನಿಯಮಗಳು

* ಮೊಬೈಲ್ ಫೋನ್ , ಎಲೆಕ್ಟ್ರಿಕಲ್ ಉಪಕರಣಗಳ ಬಳಕೆ ನಿಷೇಧ

* ವಿದ್ಯಾರ್ಥಿಗಳು, ಸರಳ ಕ್ಯಾಲ್ಕುಲೇಟರ್‌ಗಳನ್ನು ಮಾತ್ರ ಬಳಸಲು ಅವಕಾಶ

* ಪರೀಕ್ಷೆಯ ಅಂತಿಮ ಬೆಲ್ ಹೊಡೆಯುವ ಮುನ್ನ ಪರೀಕ್ಷಾ ಕೊಠಡಿಯಿಂದ ಹೊರಡುವ ವಿದ್ಯಾರ್ಥಿಗಳಿಂದ ಉತ್ತರ ಪತ್ರಿಕೆ ಮತ್ತು ಪ್ರಶ್ನೆ ಪತ್ರಿಕೆಗಳನ್ನು ಕಡ್ಡಾಯವಾಗಿ ಪಡೆಯಲಾಗುತ್ತದೆ.

* ಗುರುತಿನ ಚೀಟಿ ಹಾಗೂ ಹಾಲ್ ಟಿಕೆಟ್ ಕಡ್ಡಾಯ

* ಪರೀಕ್ಷಾ ಅವಧಿಗಿಂತ ಮುಂಚೆ ಹೊರಕ್ಕೆ ಹೋಗುವ ವಿದ್ಯಾರ್ಥಿಗಳಿಗೆ ಪ್ರಶ್ನೆ ಪತ್ರಿಕೆ ನೀಡಲಾಗುವುದಿಲ್ಲ.

* ವಿದ್ಯಾರ್ಥಿಗಳಿಗೆ ಪ್ರಾಯೋಗಿಕ ಹಾಗೂ ಮೌಖಿಕ ಪರೀಕ್ಷೆಗಳನ್ನು ಆಯಾ ಶಾಲೆಗಳಲ್ಲಿ ನಡೆಸಲಾಗುವುದು.

* ಹಿಂದೂಸ್ಥಾನಿ ಸಂಗೀತ ಮತ್ತು ಕರ್ನಾಟಕ ಸಂಗೀತ ವಿಷಯದ ಪರೀಕ್ಷೆಯನ್ನು ಮಧ್ಯಾಹ್ನ 2.00 ಗಂಟೆಯಿಂದ ಸಾಯಂಕಾಲ 5.15 ರವರೆಗೆ ನಿಗದಿಪಡಿಸಿದೆ. ಸದರಿ ವಿಷಯಗಳ ತಾತ್ವಿಕ ಪರೀಕ್ಷೆಯನ್ನು ಮಧ್ಯಾಹ್ನ 2.00 ಗಂಟೆಯಿಂದ ಮಧ್ಯಾಹ್ನ 3.45 ಗಂಟೆಯವರೆಗೆ ಮತ್ತು ಪ್ರಾಯೋಗಿಕ ಪರೀಕ್ಷೆಯನ್ನು ಮಧ್ಯಾಹ್ನ 3.45 ರಿಂದ ಸಾಯಂಕಾಲ 5.15 ಗಂಟೆಯವರೆಗೆ ನಡೆಸಲಾಗುವುದು.

* ವಿಭಿನ್ನ ಸಾಮರ್ಥ್ಯವುಳ್ಳ ವಿದ್ಯಾರ್ಥಿಗಳು ಮೂರು ಗಂಟೆಯ ಪ್ರಶ್ನೆಪತ್ರಿಕೆಗೆ ಉತ್ತರಿಸಲು ಹೆಚ್ಚುವರಿಯಾಗಿ 60 ನಿಮಿಷಗಳು, ಎರಡೂವರೆ ಗಂಟೆಯ ಪ್ರಶ್ನೆಪತ್ರಿಕೆಗೆ 50 ನಿಮಿಷಗಳು, ಎರಡು ಗಂಟೆಯ ಪ್ರಶ್ನೆಪತ್ರಿಕೆಗೆ 40 ನಿಮಿಷಗಳು, ಒಂದೂವರೆ ಗಂಟೆಯ ಪ್ರಶ್ನೆಪತ್ರಿಕೆಗೆ 30 ನಿಮಿಷಗಳನ್ನು ನೀಡಲಾಗುವುದು.

* ಪ್ರಥಮ ಭಾಷಾ ವಿಷಯಗಳು, ಕೋರ್ ವಿಷಯಗಳು ಮತ್ತು ಜೆ.ಟಿ.ಎಸ್. ವಿಷಯಗಳಿಗೆ ಬೆಳಗ್ಗೆ 10.00 ರಿಂದ ಮಧ್ಯಾಹ್ನ 1.15 ರವರೆಗೆ ಮತ್ತು ದ್ವಿತೀಯ ಭಾಷಾ ವಿಷಯಗಳು ಹಾಗೂ ತೃತೀಯ ಭಾಷಾ ವಿಷಯಗಳಿಗೆ ಬೆಳಗ್ಗೆ 10.00 ರಿಂದ ಮಧ್ಯಾಹ್ನ 1.00ರವರೆಗೆ ಅವಧಿ ನಿಗದಿಪಡಿಸಿದೆ.

* ಪ್ರಥಮ ಭಾಷಾ ವಿಷಯಗಳು, ಕೋರ್ ವಿಷಯಗಳು ಮತ್ತು ಜೆ.ಟಿ.ಎಸ್. ವಿಷಯಗಳ ಪರೀಕ್ಷೆ ಬರೆಯಲು 3.00 ಗಂಟೆ ಮತ್ತು ಪ್ರಶ್ನೆಪತ್ರಿಕೆ ಓದಲು 15 ನಿಮಿಷ ಹಾಗೂ ದ್ವಿತೀಯ ಮತ್ತು ತೃತೀಯ ಭಾಷಾ ವಿಷಯಗಳಿಗೆ ಪರೀಕ್ಷೆ ಬರೆಯಲು 2 ಗಂಟೆ 45 ನಿಮಿಷ ಹಾಗೂ ಪ್ರಶ್ನೆಪತ್ರಿಕೆ ಓದಲು 15 ನಿಮಿಷ ನಿಗದಿಪಡಿಸಲಾಗಿದೆ.

* ಎನ್.ಎಸ್.ಕ್ಯೂ.ಎಫ್. ವಿಷಯಗಳ ಪರೀಕ್ಷೆ ಬೆಳಗ್ಗೆ 10.00 ರಿಂದ 12.15ರವರೆಗೆ ನಡೆಯಲಿದೆ. 8. ಎನ್.ಎಸ್.ಕ್ಯೂ.ಎಫ್. ಪರೀಕ್ಷಾ ವಿಷಯಗಳ ಪರೀಕ್ಷೆ ಬರೆಯಲು 2.00 ಗಂಟೆ ಹಾಗೂ ಪ್ರಶ್ನೆಪತ್ರಿಕೆ ಓದಲು 15 ನಿಮಿಷ ನಿಗದಿಪಡಿಸಲಾಗಿದೆ.

ಇದನ್ನೂ ಓದಿ: SSLC Exam Preparation Tips: ಎಸ್‌ಎಸ್‌ಎಲ್‌ಸಿ ಪರೀಕ್ಷೆಯಲ್ಲಿ ಉತ್ತಮ ಅಂಕ ಗಳಿಸಲು ಈ ಟಿಪ್ಸ್‌ ಫಾಲೋ ಮಾಡಿ