SSLC Result 2025: ಎಸ್‌ಎಸ್‌ಎಲ್‌ಸಿ ಫಲಿತಾಂಶ ಪ್ರಕಟ: 66.14 ಶೇಕಡ ರಿಸಲ್ಟ್, ದಕ್ಷಿಣ ಕನ್ನಡ ಪ್ರಥಮ, ಉಡುಪಿ ದ್ವಿತೀಯ, ಹುಡುಗಿಯರೇ ಮೇಲುಗೈ
ಶಿಕ್ಷಣ ಸಚಿವ ಮಧು ಬಂಗಾರಪ್ಪ (Education minister Madhu Bangarappa) ಪತ್ರಿಕಾಗೋಷ್ಠಿ ನಡೆಸಿ ಎಸ್‌ಎಸ್‌ಎಲ್‌ಸಿ (SSLC result 2025) ಫಲಿತಾಂಶದ ವಿವರಗಳನ್ನು ನೀಡಿದ್ದಾರೆ. ಎಂದಿನಂತೆ ಕರಾವಳಿ ಜಿಲ್ಲೆಗಳಾದ ದಕ್ಷಿಣ ಕನ್ನಡ ಹಾಗೂ ಉಡುಪಿ ಜಿಲ್ಲೆಗಳು ಮೊದಲ ಎರಡು ಸ್ಥಾನ ಕಾಪಾಡಿಕೊಂಡಿವೆ. ಪ್ರತಿ ವರ್ಷದಂತೆ ಈ ವರ್ಷವೂ ಹುಡುಗಿಯರೇ ಮೇಲುಗೈ ಸಾಧಿಸಿದ್ದಾರೆ.


ಬೆಂಗಳೂರು: ಎಸ್‌ಎಸ್‌ಎಲ್‌ಸಿ ಪರೀಕ್ಷೆಯ ಫಲಿತಾಂಶ (SSLC result 2025) ಪ್ರಕಟವಾಗಿದ್ದು, ರಾಜ್ಯದಲ್ಲಿ ಈ ಬಾರಿ 66.14 ಶೇಕಡ ಫಲಿತಾಂಶ ಬಂದಿದೆ. ಕಳೆದ ವರ್ಷಕ್ಕಿಂತ ಶೇ.8ರಷ್ಟು ಹೆಚ್ಚಿನ ಫಲಿತಾಂಶ ಲಭ್ಯವಾಗಿದೆ. 22 ವಿದ್ಯಾರ್ಥಿಗಳು ರಾಜ್ಯಕ್ಕೆ ಪ್ರಥಮ ಸ್ಥಾನ ಬಂದಿದ್ದು, 625 ಅಂಕಗಳಲ್ಲಿ 625 ಅಂಕ ಪಡೆದಿದ್ದಾರೆ. ಎಂದಿನಂತೆ ಕರಾವಳಿ ಜಿಲ್ಲೆಗಳಾದ ದಕ್ಷಿಣ ಕನ್ನಡ (ಶೇ.91.12) ಹಾಗೂ ಉಡುಪಿ (ಶೇ. 89.96) ಜಿಲ್ಲೆಗಳು ಮೊದಲ ಎರಡು ಸ್ಥಾನ ಕಾಪಾಡಿಕೊಂಡಿವೆ. ಉತ್ತರ ಕನ್ನಡ (83.19) ತೃತೀಯ ಸ್ಥಾನ ಪಡೆದುಕೊಂಡಿದೆ. ಪ್ರತಿ ವರ್ಷದಂತೆ ಈ ವರ್ಷವೂ ಹುಡುಗಿಯರೇ ಮೇಲುಗೈ ಸಾಧಿಸಿದ್ದಾರೆ. ಶಿಕ್ಷಣ ಸಚಿವ ಮಧು ಬಂಗಾರಪ್ಪ ಪತ್ರಿಕಾಗೋಷ್ಠಿ ನಡೆಸಿ ಇದರ ಫಲಿತಾಂಶದ ವಿವರಗಳನ್ನು ನೀಡಿದ್ದಾರೆ.
ಮಾರ್ಚ್ 21ರಿಂದ ಏಪ್ರಿಲ್ 04 ರವರೆಗೆ ಎಸ್‌ಎಸ್‌ಎಲ್‌ಸಿ ಪರೀಕ್ಷೆ ಸುಸೂತ್ರವಾಗಿ ನಡೆದಿತ್ತು. ರಾಜ್ಯದ 2818 ಪರೀಕ್ಷಾ ಕೇಂದ್ರಗಳಲ್ಲಿ ಪರೀಕ್ಷೆ ನಡೆದಿತ್ತು. ಪರೀಕ್ಷೆಗೆ 8 ಲಕ್ಷದ 96 ಸಾವಿರ ವಿದ್ಯಾರ್ಥಿಗಳು ನೋಂದಾಯಿಸಿಕೊಂಡಿದ್ದು, ಹೆಚ್ಚಿನ ಪ್ರಮಾಣದ ವಿದ್ಯಾರ್ಥಿಗಳು ಹಾಜರಾಗಿದ್ದರು. ಪರೀಕ್ಷೆ ಮೌಲ್ಯಮಾಪನ ಕಾರ್ಯ ಪೂರ್ಣಗೊಳಿಸಿರುವ ಕರ್ನಾಟಕ ರಾಜ್ಯ ಪರೀಕ್ಷೆ ಮತ್ತು ಮೌಲ್ಯ ನಿರ್ಣಯ ಮಂಡಳಿ ಇಂದು ಫಲಿತಾಂಶ ಪ್ರಕಟಿಸಿದೆ. ಮಧ್ಯಾಹ್ನ 12.30ಕ್ಕೆ ಕೆಎಸ್‌ಇಎಬಿ ವೆಬ್‌ಸೈಟ್‌ನಲ್ಲಿ ರಿಸಲ್ಟ್ ಲಭ್ಯವಾಗಲಿದೆ.
ಫಲಿತಾಂಶ ವೀಕ್ಷಿಸುವುದು ಹೇಗೆ?
ಫಲಿತಾಂಶಕ್ಕಾಗಿ ಸರ್ಕಾರದ ಅಧಿಕೃತ ವೆಬ್‌ಸೈಟ್ https://karresults.nic.in/ ನಲ್ಲಿ ಭೇಟಿ ನೀಡಿ.
ಎಸ್‌ಎಸ್‌ಎಲ್‌ಸಿ ಪರೀಕ್ಷೆ ಫಲಿತಾಂಶ 2025 ಲಿಂಕ್ ಆಯ್ಕೆ ಮಾಡಿಕೊಳ್ಳಬೇಕು.
ನಂತರ ನಿಮ್ಮ ಪರೀಕ್ಷಾ ನೋಂದಣಿ ಸಂಖ್ಯೆ, ಜನ್ಮ ದಿನಾಂಕ ಸೇರಿ ಅಗತ್ಯ ಮಾಹಿತಿ ದಾಖಲಿಸಬೇಕು.
ನಂತರ ಅಂಕಪಟ್ಟಿ ತೆರೆದುಕೊಳ್ಳಲಿದ್ದು, ಡೌನ್‌ಲೋಡ್ ಮಾಡಿಕೊಳ್ಳಬಹುದು.
ಮಧ್ಯಾಹ್ನ 12.30ರ ನಂತರ ಇಲಾಖೆಯ ಅಧಿಕೃತ ವೆಬ್‌ಸೈಟ್‌ನಲ್ಲಿ ವಿದ್ಯಾರ್ಥಿಗಳು ಫಲಿತಾಂಶ ವೀಕ್ಷಿಸಬಹುದಾಗಿದೆ. ದ್ವಿತೀಯ ಪಿಯುಸಿ ವಿದ್ಯಾರ್ಥಿಗಳಿಗೆ ಮಾಡಿದಂತೆಯೇ ಎಸ್‌ಎಸ್‌ಎಲ್‌ಸಿ ವಿದ್ಯಾರ್ಥಿಗಳಿಗೂ ಈ ವರ್ಷ ಇನ್ನೆರಡು ಪರೀಕ್ಷೆಯ ಅವಕಾಶ ನೀಡಲಾಗುತ್ತಿದೆ. ಉತ್ತೀರ್ಣರಾಗದಿದ್ದರೆ ಅಥವಾ ಉತ್ತಮ ಅಂಕ ಲಭಿಸದಿದ್ದರೆ ವಿದ್ಯಾರ್ಥಿಗಳು ಇನ್ನು ಎರಡು ಬಾರಿ ಪರೀಕ್ಷೆ ಬರೆಯಬಹುದಾಗಿದೆ.
ಇದನ್ನೂ ಓದಿ: Viral News: ಪ್ಲೀಸ್ ಪಾಸ್ ಮಾಡಿಸಿ , ನನ್ನ ಲವ್ ಉಳಿಸಿ ; ಮೌಲ್ಯಮಾಪಕರಿಗೆ ರಿಕ್ವೆಸ್ಟ್ ಮಾಡಿದ SSLC ವಿದ್ಯಾರ್ಥಿ!