ಮೆಸ್ಸಿ ಭಾರತ ಪ್ರವಾಸದ ಸಂಘಟಕ ಸತಾದ್ರು ದತ್ತ 14 ದಿನಗಳ ಪೊಲೀಸ್ ಕಸ್ಟಡಿಗೆ
Satadru Dutta: ಕೋಲ್ಕತಾ ಕ್ರೀಡಾಂಗಣದಲ್ಲಿ ಮೆಸ್ಸಿ ಜತೆ ಬಂಗಾಳ ಸಿಎಂ ಮಮತಾ ಬ್ಯಾನರ್ಜಿ, ಬಾಲಿವುಡ್ ನಟ ಶಾರುಖ್ ಖಾನ್, ಟೀಮ್ ಇಂಡಿಯಾ ಮಾಜಿ ಕ್ರಿಕೆಟಿಗ ಸೌರವ್ ಗಂಗೂಲಿ ಅವರೂ ಕಾಣಿಸಿಕೊಳ್ಳಬೇಕಿತ್ತು. ಜನದಟ್ಟಣೆಯಿಂದ ಅವರು ಕ್ರೀಡಾಂಗಣಕ್ಕೇ ಬರಲು ಆಗಲಿಲ್ಲ.
Satadru Dutta -
ನವದೆಹಲಿ, ಡಿ.14: ಅರ್ಜೆಂಟೀನಾದ ಖ್ಯಾತ ಫುಟ್ಬಾಲ್ ಆಟಗಾರ ಲಿಯೋನೆಲ್ ಮೆಸ್ಸಿ(Lionel Messi)ಯನ್ನು ಕಣ್ತುಂಬಿಕೊಳ್ಳಲು ಸಹಸ್ರಾರು ಜನರು ನೆರೆದಿದ್ದರಿಂದ ಕೋಲ್ಕತಾದ ಸಾಲ್ಟ್‌ಲೇಕ್ ಕ್ರೀಡಾಂಗಣದಲ್ಲಿ ನಡೆದಿದ್ದ ರಾದ್ಧಾಂತ ಪ್ರಕರಣಕ್ಕೆ ಸಂಬಂಧಿಸಿ ಬಂಧಿತರಾಗಿರುವ ‘ಗೋಟ್’ (GOAT) ಟೂರ್ ಆಯೋಜಕ ಸತದ್ರು ದತ್ತ(Satadru Dutta) ಅವರಿಗೆ ಜಾಮೀನು ನಿರಾಕರಿಸಲಾಗಿದೆ. ಜಾಮೀನು ನಿರಾಕರಿಸಿದ ನಂತರ, ಅವರನ್ನು 14 ದಿನಗಳ ಕಾಲ ಪೊಲೀಸ್ ಕಸ್ಟಡಿಗೆ ಒಪ್ಪಿಸಲಾಗಿದೆ.
ಲಿಯೋನೆಲ್ ಮೆಸ್ಸಿ ಕೋಲ್ಕತ್ತಾದಿಂದ ಹೈದರಾಬಾದ್‌ಗೆ ತೆರಳುತ್ತಿದ್ದಾಗ ದತ್ತಾ ಅವರನ್ನು ಪೊಲೀಸರು ಬಂಧಿಸಿದ್ದರು. ಕ್ರೀಡಾಂಗಣದಲ್ಲಿ ರಾಜಕಾರಣಿಗಳು ಮತ್ತು ವಿಐಪಿಗಳು ಅರ್ಜೆಂಟೀನಾದ ಫಾರ್ವರ್ಡ್ ಅನ್ನು ಬೆನ್ನಟ್ಟಿದ ಕಾರಣ, ಅಭಿಮಾನಿಗಳು ಮೆಸ್ಸಿಯನ್ನು ನೋಡಲು ಸಾಧ್ಯವಾಗಲಿಲ್ಲ.
ಕೋಲ್ಕತಾದ ಕ್ರೀಡಾಂಗಣದಲ್ಲಿ 50 ಸಾವಿರ ಜನರು 5ರಿಂದ 20 ಸಾವಿರ ರು.ವರೆಗೆ ಟಿಕೆಟ್ ಖರೀದಿಸಿ ಗಂಟೆಗಟ್ಟಲೆಯಿಂದ ಮೆಸ್ಸಿ ಬರುವಿಕೆಗೆ ಕಾಯುತ್ತಿದ್ದರು. ಮೆಸ್ಸಿ ಆಗಮನವಾಗುತ್ತಿದ್ದಂತೆ ಅವರ ಸುತ್ತ ಸಾಕಷ್ಟು ಜನ ನಿಂತರು. ಗೊಂದಲವಾಯಿತು. ಅವರು ಕ್ರೀಡಾಂಗಣಕ್ಕೆ ಒಂದು ಸುತ್ತು ಹಾಕಲಿಲ್ಲ. ದೊಡ್ಡ ಪರದೆಗಳಲ್ಲೂ ಚಿತ್ರ ಸ್ಪಷ್ಟವಾಗಿ ಕಾಣಲಿಲ್ಲ. ಗೊಂದಲ ಹೆಚ್ಚಾಗಿ ಮೆಸ್ಸಿ 22 ನಿಮಿಷದಲ್ಲೇ ನಿರ್ಗಮಿಸಿದರು. ಕೆರಳಿದ ಜನ ಸ್ಟೇಡಿಯಂ ಕುರ್ಚಿ, ಬಾಟಲಿಗಳನ್ನು ಮೈದಾನಕ್ಕೆಸೆದು ಕೆಂಡಕಾರಿದರು. ಒಂದು ಕ್ಷಣ ಬೆಂಗಳೂರಿನಲ್ಲಿ ಕಳೆದ ಜೂನ್‌ನಲ್ಲಿ ಸಂಭವಿಸಿದ ಆರ್‌ಸಿಬಿ ಕಾಲ್ತುಳಿತವನ್ನು ನೆನಪಿಸಿತು.
ಇದನ್ನೂ ಓದಿ ಲಿಯೊನೆಲ್ ಮೆಸ್ಸಿ ಜತೆ ಫೋಟೋ ತೆಗೆಸಲು 10 ಲಕ್ಷ ರು ಪಾವತಿಸಿದ 60 ಮಂದಿ! ವರದಿ
ಸಾಲ್ಟ್ ಲೇಕ್‌ನಲ್ಲಿನ ಅವ್ಯವಸ್ಥೆ, ದಾಂಧಲೆಗೆ ಬಗ್ಗೆ ಸಾಮಾಜಿಕ ತಾಣ ‘ಎಕ್ಸ್’ನಲ್ಲಿ ಸಿಎಂ ಮಮತಾ ಬ್ಯಾನರ್ಜಿ, ಅಭಿಮಾನಿಗಳು ಹಾಗೂ ಮೆಸ್ಸಿಯ ಕ್ಷಮೆಯಾಚಿಸಿದ್ದಾರೆ. ಈ ದುರ್ಘಟನೆಯಿಂದಾಗಿ ಬಹಳ ನೋವಾಗಿರುವುದಾಗಿ ತಿಳಿಸಿದ್ದಾರೆ. ಕೋಲ್ಕತಾ ಕ್ರೀಡಾಂಗಣದಲ್ಲಿ ಮೆಸ್ಸಿ ಜತೆ ಬಂಗಾಳ ಸಿಎಂ ಮಮತಾ ಬ್ಯಾನರ್ಜಿ, ಬಾಲಿವುಡ್ ನಟ ಶಾರುಖ್ ಖಾನ್, ಕ್ರಿಕೆಟಿಗ ಸೌರವ್ ಗಂಗೂಲಿ ಅವರೂ ಕಾಣಿಸಿಕೊಳ್ಳಬೇಕಿತ್ತು. ಜನದಟ್ಟಣೆಯಿಂದ ಅವರು ಕ್ರೀಡಾಂಗಣಕ್ಕೇ ಬರಲು ಆಗಲಿಲ್ಲ.
ಮೆಸ್ಸಿ ಮುಂಬೈನಲ್ಲಿ ಭಾನುವಾರ ವಿವಿಧ ಕಾರ್ಯಕ್ರಮಗಳಲ್ಲಿ ಪಾಲ್ಗೊಳ್ಳಲಿದ್ದಾರೆ. ಸೋಮವಾರ ಮೆಸ್ಸಿ ದೆಹಲಿಗೆ ಭೇಟಿ ನೀಡಲಿದ್ದಾರೆ. ಪ್ರಧಾನಿ ಮೋದಿ, ಕ್ರಿಕೆಟಿಗರನ್ನು ಭೇಟಿಯಾಗುವ ನಿರೀಕ್ಷೆ ಇದೆ.