ಫೋಟೋ ಗ್ಯಾಲರಿ ಐಪಿಎಲ್​ ಸುನಿತಾ ವಿಲಿಯಮ್ಸ್​ ಫ್ಯಾಷನ್​ ವಿದೇಶ ಧಾರ್ಮಿಕ ಕ್ರೈಂ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Karnataka Budget 2025: ವಿಪತ್ತು ನಿರ್ವಹಣೆಗೆ ರಾಜ್ಯ ಸರ್ಕಾರದಿಂದ ಕ್ರಮ; ಬಜೆಟ್‌ನಲ್ಲಿ ಸಿದ್ದರಾಮಯ್ಯ ಘೋಷಣೆ

ಮುಖ್ಯಮಂತ್ರಿ ಸಿದ್ದರಾಮಯ್ಯ ಶುಕ್ರವಾರ ಮಂಡಿಸಿದ ಬಜೆಟ್‌ನಲ್ಲಿ ರಾಜ್ಯ ವಿಪತ್ತು ಉಪಶಮನ ನಿಧಿ ಹಾಗೂ ರಾಷ್ಟ್ರೀಯ ವಿಪತ್ತು ಉಪಶಮನ ನಿಧಿ ಅನುದಾನದಡಿ ಅವರು ಭೂ ಕುಸಿತ ತಡೆ, ಕಡಲ್ಕೊರೆತ ಸಮಸ್ಯೆ ನಿವಾರಣೆ, ಪ್ರವಾಹ ನಿಯಂತ್ರಣ, ಬರ ಉಪಶಮನಕ್ಕಾಗಿ ಕೃಷಿ ಹೊಂಡಗಳ ನಿರ್ಮಾಣಕ್ಕೆ ಅನುದಾನ ಪ್ರಕಟಿಸಿದ್ದಾರೆ.

ವಿಪತ್ತು ನಿರ್ವಹಣೆಗೆ ರಾಜ್ಯ ಸರ್ಕಾರದಿಂದ ಕ್ರಮ: ಸಿದ್ದರಾಮಯ್ಯ

ಸಾಂದರ್ಭಿಕ ಚಿತ್ರ.

Profile Ramesh B Mar 7, 2025 2:21 PM

ಬೆಂಗಳೂರು: ಮುಖ್ಯಮಂತ್ರಿ ಸಿದ್ದರಾಮಯ್ಯ (CM Siddaramaiah) ಶುಕ್ರವಾರ (ಮಾ. 7) 3 ಗಂಟೆಗಿಂತಲೂ ಹೆಚ್ಚು ಕಾಲಾವಧಿಯ ಸುದೀರ್ಘ ಬಜೆಟ್‌ ಮಂಡಿಸಿ ದಾಖಲೆ ಬರೆದಿದ್ದಾರೆ (Karnataka Budget 2025). ಇದರಲ್ಲಿ ವಿವಿಧ ವರ್ಗ, ವಿಭಾಗಗಳಿಗೆ ಹಲವು ಕೊಡುಗೆ ಘೋಷಿಸಿದ್ದಾರೆ. ರಾಜ್ಯ ವಿಪತ್ತು ಉಪಶಮನ ನಿಧಿ ಹಾಗೂ ರಾಷ್ಟ್ರೀಯ ವಿಪತ್ತು ಉಪಶಮನ ನಿಧಿ ಅನುದಾನದಡಿ ಅವರು ಭೂ ಕುಸಿತ ತಡೆ, ಕಡಲ್ಕೊರೆತ ಸಮಸ್ಯೆ ನಿವಾರಣೆ, ಪ್ರವಾಹ ನಿಯಂತ್ರಣ, ಬರ ಉಪಶಮನಕ್ಕಾಗಿ ಕೃಷಿ ಹೊಂಡಗಳ ನಿರ್ಮಾಣಕ್ಕೆ ಅನುದಾನ ಪ್ರಕಟಿಸಿದ್ದಾರೆ. ಈ ಕುರಿತಾದ ವಿವರ ಇಲ್ಲಿದೆ.

ರಾಜ್ಯ ವಿಪತ್ತು ಉಪಶಮನ ನಿಧಿ ಹಾಗೂ ರಾಷ್ಟ್ರೀಯ ವಿಪತ್ತು ಉಪಶಮನ ನಿಧಿ ಅನುದಾನದಡಿ ಕೆಳಕಂಡ ಕ್ರಮಗಳನ್ನು ಕೈಗೊಳ್ಳಲಾಗುವುದು ಎಂದು ಸಿಎಂ ತಿಳಿಸಿದ್ದಾರೆ.



  • ಕರಾವಳಿ ಹಾಗೂ ಮಲೆನಾಡು ಜಿಲ್ಲೆಗಳಾದ ದಕ್ಷಿಣ ಕನ್ನಡ, ಉಡುಪಿ, ಉತ್ತರ ಕನ್ನಡ, ಶಿವಮೊಗ್ಗ, ಹಾಸನ, ಕೊಡಗು ಮತ್ತು ಚಿಕ್ಕಮಗಳೂರು ಜಿಲ್ಲೆಗಳಲ್ಲಿ 200 ಕೋಟಿ ರೂ. ವೆಚ್ಚದಲ್ಲಿ ಭೂ ಕುಸಿತ ತಡೆಯಲು ಕ್ರಮ.
  • ಬೆಂಗಳೂರು ನಗರದಲ್ಲಿ 239 ಕೋಟಿ ರೂ. ವೆಚ್ಚದಲ್ಲಿ ಮಳೆ ನೀರು ಚರಂಡಿಗಳ ಪುನರ್ ನಿರ್ಮಾಣ ಮತ್ತು ಕೆರೆಗಳ ಪುನಃಶ್ಚೇತನ.
  • ಬರ ಉಪಶಮನಕ್ಕಾಗಿ 100 ಕೋಟಿ ರೂ. ವೆಚ್ಚದಲ್ಲಿ ಕೃಷಿ ಹೊಂಡಗಳ ನಿರ್ಮಾಣ.
  • ಕರಾವಳಿ ಜಿಲ್ಲೆಗಳಲ್ಲಿ 200 ಕೋಟಿ ರೂ. ವೆಚ್ಚದಲ್ಲಿ ಸಮುದ್ರ ಕೊರೆತ ತಗ್ಗಿಸಲು ಕ್ರಮ.
  • ನವಲಗುಂದ ತಾಲೂಕಿನ ಬೆಣ್ಣೆಹಳ್ಳದಲ್ಲಿ ಪ್ರವಾಹ ನಿಯಂತ್ರಿಸಲು ಉಪಶಮನ ಕ್ರಮಗಳನ್ನು 200 ಕೋಟಿ ರೂ. ವೆಚ್ಚದಲ್ಲಿ ಕೈಗೊಳ್ಳಲು ಅನುಮೋದನೆ ನೀಡಿರುವ ಕಾಮಗಾರಿಗಳ ಅನುಷ್ಠಾನ.
  • ರೋಣ ತಾಲೂಕಿನ ಕೋಟುಮಚಗಿ ಗ್ರಾಮದಿಂದ ಕೊಪ್ಪಳ ಜಿಲ್ಲೆಯ ವೀರಾಪುರ ಗ್ರಾಮದವರೆಗೆ ಹಿರೇಹಳ್ಳದಲ್ಲಿ ಹೂಳೆತ್ತುವ ಮೂಲಕ 60 ಕೋಟಿ ರೂ. ವೆಚ್ಚದಲ್ಲಿ ಪ್ರವಾಹ ನಿಯಂತ್ರಣ ಕಾರ್ಯಕ್ರಮಗಳ ಅನುಷ್ಠಾನ.

ಈ ಸುದ್ದಿಯನ್ನೂ ಓದಿ: Karnataka Budget 2025: ಒಲಿಂಪಿಕ್ಸ್‌ ಪದಕ ಯೋಜನೆಯಡಿ ಕ್ರೀಡಾಪಟುಗಳಿಗೆ ಪ್ರೋತ್ಸಾಹಧನ ಘೋಷಿಸಿದ ಸಿಎಂ

ಕರ್ನಾಟಕ ಜಲ ಭದ್ರತೆ ಮತ್ತು ವಿಪತ್ತು ತಡೆಯುವಿಕೆ ಕಾರ್ಯಕ್ರಮದಡಿ, 3,500 ಕೋಟಿ ರೂ. ವಿಶ್ವಬ್ಯಾಂಕ್ ಸಾಲ ಹಾಗೂ ರಾಜ್ಯ ಸರ್ಕಾರದ 1,500 ಕೋಟಿ ರೂ. ಸೇರಿ ಒಟ್ಟು 5,000 ಕೋಟಿ ರೂ. ವೆಚ್ಚದಲ್ಲಿ 2025-2031ರ ಅವಧಿಯಲ್ಲಿ ಈ ಕೆಳಕಂಡ ಕ್ರಮಗಳನ್ನು ಕೈಗೊಳ್ಳಲಾಗುವುದು:

  • ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಯ ವ್ಯಾಪ್ತಿಯಲ್ಲಿ 2,000 ಕೋಟಿ ರೂ. ವೆಚ್ಚದಲ್ಲಿ ಪ್ರವಾಹ ನಿರ್ವಹಣಾ ವ್ಯವಸ್ಥೆಯನ್ನು ಕೈಗೊಳ್ಳಲಾಗುವುದು.
  • ಬೆಂಗಳೂರು ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿಯ ವತಿಯಿಂದ 1,070 ಕೋಟಿ ರೂ. ವೆಚ್ಚದಲ್ಲಿ ತ್ಯಾಜ್ಯ ನೀರು ಸಂಸ್ಕರಣೆ ಹಾಗೂ ಒಳಚರಂಡಿ ಪಂಪಿಂಗ್ ವ್ಯವಸ್ಥೆಯನ್ನು ಕೈಗೊಳ್ಳಲಾಗುವುದು.
  • ವಿಪತ್ತು ನಿರ್ವಹಣೆಯ ಸಾಂಸ್ಥಿಕ ಸುಧಾರಣೆ ಕ್ರಮಗಳಿಗೆ 1,680 ಕೋಟಿ ರೂ. ಒದಗಿಸಲಾಗುವುದು. ಇದರಡಿಯಲ್ಲಿ ಶಾಸನ ರಚನೆ, ಅಂತಾರಾಷ್ಟ್ರೀಯ ಉತ್ಕಷ್ಟೃತಾ ಕೇಂದ್ರ, ವಿಪತ್ತು ಅನುಭವ ಕಲಿಕಾ ಕೇಂದ್ರ ಸ್ಥಾಪನೆ, ವಿಪತ್ತು ಮುನ್ನೆಚ್ಚರಿಕೆ ನೀಡಲು Karnataka Multi Risk Hazard Information System, 1950 ಟೆಲಿಮೆಟ್ರಿಕ್ ಮಳೆ ಮಾಪನ ಕೇಂದ್ರಗಳ ಸ್ಥಾಪನೆ ಹಾಗೂ ಭೂ ಕುಸಿತ ಉಪಶಮನ ಕ್ರಮಗಳನ್ನು ಅನುಷ್ಠಾನಗೊಳಿಸಲಾಗುವುದು.
  • ವಿಪತ್ತು ಉಪಶಮನ ಕಾರ್ಯಕ್ರಮದಡಿ ಸಣ್ಣ ನೀರಾವರಿ ಇಲಾಖೆಯು 250 ಕೋಟಿ ರೂ. ವೆಚ್ಚದಲ್ಲಿ ಬೆಂಗಳೂರು ಗ್ರಾಮಾಂತರ ಜಿಲ್ಲೆಯ 41 ಕೆರೆ ತುಂಬಿಸುವ ಕಾಮಗಾರಿಯನ್ನು ಅನುಷ್ಠಾನಗೊಳಿಸಲಿದೆ.