Street Dog attack: ಬೆಂಗಳೂರು ವಿವಿ ಆವರಣದಲ್ಲಿ ಬೀದಿ ನಾಯಿ ದಾಳಿ, ಇಬ್ಬರು ವಿದ್ಯಾರ್ಥಿನಿಯರ ಸ್ಥಿತಿ ಗಂಭೀರ
Bengaluru University: ಹಾವೇರಿಯ ಸೌಜನ್ಯ ಜಿಜೆ ಮತ್ತು ತೆಲಂಗಾಣದ ರೇಗಾ ನಿಕ್ಷಿತಾ ಇಬ್ಬರೂ ಡಾ. ಬಿ.ಆರ್. ಅಂಬೇಡ್ಕರ್ ಸ್ಕೂಲ್ ಆಫ್ ಎಕನಾಮಿಕ್ಸ್ ವಿಶ್ವವಿದ್ಯಾಲಯದ ಇಂಟಿಗ್ರೇಟೆಡ್ ಎಂಎಸ್ಸಿ ಇನ್ ಎಕನಾಮಿಕ್ಸ್ ಕೋರ್ಸ್‌ನ ಮೂರನೇ ವರ್ಷದ ವಿದ್ಯಾರ್ಥಿಗಳು. ಇಬ್ಬರನ್ನೂ ನಾಯಿಗಳು ದಾಳಿ ಮಾಡಿ ಕಚ್ಚಿ ಗಾಯಗೊಳಿಸಿವೆ.


ಬೆಂಗಳೂರು: ಬೆಂಗಳೂರು ವಿಶ್ವವಿದ್ಯಾಲಯ (Bengaluru university) ಆವರಣದಲ್ಲಿ ಮಂಗಳವಾರ ಬೀದಿ ನಾಯಿ ದಾಳಿಯಿಂದ (Street dog attack) ಇಬ್ಬರು ಗಾಯಗೊಂಡಿದ್ದು, ಅವರಲ್ಲಿ ಒಬ್ಬ ವಿದ್ಯಾರ್ಥಿನಿಯ ಸ್ಥಿತಿ ಗಂಭೀರವಾಗಿದೆ ಎಂದು ತಿಳಿದುಬಂದಿದೆ. ಈ ಘಟನೆ ಬೆಳಿಗ್ಗೆ 11 ಗಂಟೆ ಸುಮಾರಿಗೆ ಬೆಂಗಳೂರು ವಿಶ್ವವಿದ್ಯಾಲಯದ ಆವರಣದಲ್ಲಿ ನಡೆದಿದೆ.
ಹಾವೇರಿಯ ಸೌಜನ್ಯ ಜಿಜೆ ಮತ್ತು ತೆಲಂಗಾಣದ ರೇಗಾ ನಿಕ್ಷಿತಾ ಇಬ್ಬರೂ ಡಾ. ಬಿ.ಆರ್. ಅಂಬೇಡ್ಕರ್ ಸ್ಕೂಲ್ ಆಫ್ ಎಕನಾಮಿಕ್ಸ್ ವಿಶ್ವವಿದ್ಯಾಲಯದ ಇಂಟಿಗ್ರೇಟೆಡ್ ಎಂಎಸ್ಸಿ ಇನ್ ಎಕನಾಮಿಕ್ಸ್ ಕೋರ್ಸ್‌ನ ಮೂರನೇ ವರ್ಷದ ವಿದ್ಯಾರ್ಥಿಗಳು. ಇಬ್ಬರನ್ನೂ ನಾಯಿಗಳು ದಾಳಿ ಮಾಡಿ ಕಚ್ಚಿ ಗಾಯಗೊಳಿಸಿವೆ. ದಾರಿಹೋಕರು ಕಂಡು ಬಿಡಿಸಿದ್ದು, ಆಸ್ಪತ್ರೆಗೆ ಸೇರಿಸಿದ್ದಾರೆ. ತೀವ್ರ ಗಾಯಗಳಿಂದ ಬಳಲುತ್ತಿರುವ ಸೌಜನ್ಯ ಅವರನ್ನು ಖಾಸಗಿ ಆಸ್ಪತ್ರೆಯ ಐಸಿಯುನಲ್ಲಿ ದಾಖಲಿಸಲಾಗಿದ್ದು, ರೇಗಾ ಅವರು ಗಾಯಗಳಿಗೆ ಚಿಕಿತ್ಸೆ ಪಡೆಯುತ್ತಿದ್ದಾರೆ.
ಸುಪ್ರೀಂ ಕೋರ್ಟ್ ನಿರ್ದೇಶನ
ಸುಪ್ರೀಂ ಕೋರ್ಟ್ ದೆಹಲಿ ಮತ್ತು ರಾಷ್ಟ್ರೀಯ ರಾಜಧಾನಿ ಪ್ರದೇಶದ ನಾಗರಿಕ ಅಧಿಕಾರಿಗಳಿಗೆ ಬೀದಿ ನಾಯಿಗಳನ್ನು ಹಿಡಿಯಲು, ಸಂತಾನಹರಣ ಮಾಡಲು ಮತ್ತು ಶಾಶ್ವತವಾಗಿ ಆಶ್ರಯ ನೀಡುವಂತೆ ಕಟ್ಟುನಿಟ್ಟಿನ ನಿರ್ದೇಶನಗಳನ್ನು ನೀಡಿದ ಒಂದು ದಿನದ ನಂತರ ಈ ದಾಳಿ ನಡೆದಿದೆ. ಈ ಪ್ರಕ್ರಿಯೆಗೆ ಯಾವುದೇ ಪ್ರತಿರೋಧವು ಕಾನೂನು ಪರಿಣಾಮಗಳನ್ನು ಉಂಟುಮಾಡುತ್ತದೆ ಎಂದು ನ್ಯಾಯಾಲಯ ಎಚ್ಚರಿಸಿದೆ. ನಾಯಿ ಕಡಿತ ಮತ್ತು ರೇಬೀಸ್‌ನ ಬೆದರಿಕೆಯನ್ನು ನಿಭಾಯಿಸಲು ತಕ್ಷಣದ ಕ್ರಮ ಕೈಗೊಳ್ಳುವಂತೆ ಒತ್ತಾಯಿಸಿದೆ.
ನ್ಯಾಯಮೂರ್ತಿಗಳಾದ ಜೆ.ಬಿ. ಪಾರ್ದಿವಾಲಾ ಮತ್ತು ಆರ್. ಮಹಾದೇವನ್ ಅವರ ಪೀಠವು ಬೀದಿ ನಾಯಿಗಳನ್ನು ಜನನಿಬಿದ ಪ್ರದೇಶಗಳಿಂದ ಆದ್ಯತೆಯ ಮೇಲೆ ತೆರವುಗೊಳಿಸಬೇಕು ಎಂದು ಒತ್ತಿ ಹೇಳಿದೆ. “ಅದಕ್ಕಾಗಿ ಪಡೆಯನ್ನು ರಚಿಸಬೇಕಾದರೆ ಮೊದಲೇ ಮಾಡಿ. ಎಲ್ಲಾ ಪ್ರದೇಶಗಳನ್ನು ಬೀದಿ ನಾಯಿಗಳಿಂದ ಮುಕ್ತಗೊಳಿಸಲು ಇದು ಮೊದಲ ಮತ್ತು ಪ್ರಮುಖ ಕಾರ್ಯಾಚರಣೆಯಾಗಬೇಕು” ಎಂದು ನ್ಯಾಯಾಲಯ ಹೇಳಿದೆ.