Arvind Bellad: ಮಸೀದಿಗಳಲ್ಲಿ ಅಪರಿಚಿತರ ಓಡಾಟ; ಪಾಕಿಸ್ತಾನಿಗಳಿರಬಹುದು ಎಂದು ಸಂಸದರ ದೂರು
ಮೇ 17ರಂದು ಪೊಲೀಸ್ ಆಯುಕ್ತರಿಗೆ ಅರವಿಂದ್ ಬೆಲ್ಲದ (Arvind Bellad) ಪತ್ರ ಬರೆದಿದ್ದಾರೆ. ಹುಬ್ಬಳ್ಳಿ-ಧಾರವಾಡ ಅವಳಿ ನಗರದ ಕೆಲ ಮಸೀದಿಗಳಲ್ಲಿ ಅಪರಿಚಿತರ ಓಡಾಟ ಹೆಚ್ಚಾಗುತ್ತಿರುವುದು ಕಂಡು ಬಂದಿದೆ. ಅವರು ಸ್ಥಳೀಯರು ಅಲ್ಲ ಎಂಬ ಸಂಶಯವಿದೆ. ಅವರು ಹೊರ ದೇಶದ ಪ್ರಜೆಗಳಂತೆ ಭಾಸವಾಗುತ್ತಾರೆ ಅಂತ ವಿವರಿಸಿದ್ದಾರೆ.

ಅರವಿಂದ ಬೆಲ್ಲದ

ಧಾರವಾಡ : ಹುಬ್ಬಳ್ಳಿ ಧಾರವಾಡದ ಕೆಲವು ಮಸೀದಿಗಳಲ್ಲಿ (mosques) ಅನುಮಾನಾಸ್ಪದ ವ್ಯಕ್ತಿಗಳು ಓಡಾಡುತ್ತಿದ್ದಾರೆ. ಅವರು ಪಾಕಿಸ್ತಾನಿಗಳಾಗಿರಬಹುದು ಎಂಬ ಅನುಮಾನವಿದೆ ಎಂದು ಹುಬ್ಬಳ್ಳಿ-ಧಾರವಾಡ ಪಶ್ಚಿಮ ಕ್ಷೇತ್ರದ ಶಾಸಕ (Hubballi- Dharwad West constituency MLA) ಅರವಿಂದ್ ಬೆಲ್ಲದ (Arvind Bellad) ಹೇಳಿದ್ದು, ಈ ಕುರಿತಂತೆ ಕ್ರಮ ಕೈಗೊಳ್ಳುವಂತೆ ಅವರು ಹುಬ್ಬಳ್ಳಿ-ಧಾರವಾಡ ಪೊಲೀಸ್ ಆಯುಕ್ತ (Police Commissioner) ಎನ್. ಶಶಿಕುಮಾರ್ ಅವರಿಗೆ ಪತ್ರ ಬರೆದಿದ್ದಾರೆ.
ಮೇ 17ರಂದು ಪೊಲೀಸ್ ಆಯುಕ್ತರಿಗೆ ಅರವಿಂದ್ ಬೆಲ್ಲದ ಪತ್ರ ಬರೆದಿದ್ದಾರೆ. ಹುಬ್ಬಳ್ಳಿ-ಧಾರವಾಡ ಅವಳಿ ನಗರದ ಕೆಲ ಮಸೀದಿಗಳಲ್ಲಿ ಅಪರಿಚಿತರ ಓಡಾಟ ಹೆಚ್ಚಾಗುತ್ತಿರುವುದು ಕಂಡು ಬಂದಿದೆ. ಅವರು ಸ್ಥಳೀಯರು ಅಲ್ಲ ಎಂಬ ಸಂಶಯವಿದೆ. ಹೀಗೆ ಓಡಾಡುತ್ತಿರುವವರಲ್ಲಿ ಹೊಸ ಮುಖ, ಅಪರಿಚಿತ, ಅನುಮಾನಾಸ್ಪದ ವ್ಯಕ್ತಿಗಳೇ ಹೆಚ್ಚಾಗಿದ್ದಾರೆ. ಅವರು ಹೊರ ದೇಶದ ಪ್ರಜೆಗಳಂತೆ ಭಾಸವಾಗುತ್ತಾರೆ ಅಂತ ವಿವರಿಸಿದ್ದಾರೆ.
ಅವಳಿನಗರದ ವಿವಿಧ ಕೊಳಚೆ ಪ್ರದೇಶದಲ್ಲಿ, ಧಾರವಾಡದ ಜನ್ನತ್ ನಗರ ಸೇರಿದಂತೆ ಕೆಲವೆಡೆ ವಾಸವಾಗಿದ್ದಾರೆಂಬ ಮಾಹಿತಿಯೂ ಇದೆ. ಅದಕ್ಕಾಗಿ ಈ ಕುರಿತು ಪೊಲೀಸ್ ಇಲಾಖೆ ಕೂಡಲೇ ಕಾರ್ಯಪ್ರವೃತ್ತರಾಗಬೇಕು. ಅವಳಿ ನಗರದಲ್ಲಿರುವ ಅಪರಿಚಿತ, ಹೊಸಮುಖದ ವ್ಯಕ್ತಿಗಳನ್ನು ವಿಚಾರಿಸಿ ಸೂಕ್ತ ಕ್ರಮ ಜರುಗಿಸಬೇಕು. ಇದರಿಂದ ಮಹಾನಗರದಲ್ಲಿ ಅಹಿತಕರ ಘಟನೆ ಆಗದಂತೆ ತಡೆಯುವ ಕೆಲಸ ಮಾಡಬೇಕೆಂದು ಶಾಸಕರು ಆಗ್ರಹಿಸಿದ್ದಾರೆ.
ಈ ಕುರಿತಂತೆ ಪ್ರತಿಕ್ರಿಯೆ ನೀಡಿರುವ ಅರವಿಂದ್ ಬೆಲ್ಲದ್, ಕೆಲವು ಜಾಗೃತ ನಾಗರಿಕರು ನನಗೆ ಕರೆ ಮಾಡಿ, ಹೊರಗಿನ ಜನ ಓಡಾಡುತ್ತಿದ್ದಾರೆ ಅಂತ ಹೇಳಿದ್ದರು. ಯಾವ ರೀತಿ ಇದ್ದಾರೆ ಎಂದು ಕೇಳಿದಾಗ ಅವರು ಬೇರೆ ರೀತಿಯ ಜನ ಇದ್ದಾರೆ ಎಂದು ಹೇಳಿದರು. ಬಾಂಗ್ಲಾದೇಶದ ಜನರ ರೀತಿ ಕಾಣಿಸ್ತಾರಾ ಎಂದು ಕೇಳಿದಾಗ, ಇಲ್ಲಾ ಪಾಕಿಸ್ತಾನ ಜನರ ತರ ಕಾಣಿಸ್ತಾರೆ ಅಂತ. ನಾನು ಪೊಲೀಸ್ ಆಯುಕ್ತರಿಗೆ ಕಾಲ್ ಮಾಡಿ ಹೇಳಿದೆ. ಅಷ್ಟೇ ಅಲ್ಲದೇ ಆಯುಕ್ತರು ಹಾಗೂ ಗೃಹಸಚಿವರಿಗೆ ಪತ್ರ ಬರೆದೆ. ಇದು ಸೂಕ್ಷ್ಮ ವಿಚಾರವಾಗಿದ್ದಕ್ಕೆ ಯಾವ ಪತ್ರಿಕೆ ಹಾಗೂ ಮೀಡಿಯಾಗೆ ಹೇಳಿಕೆ ನೀಡಿರಲಿಲ್ಲ. ಅವರಿಗೆ ತನಿಖೆಗೆ ಅನುಕೂಲವಾಗಲೆಂದು ಸುಮ್ಮನಿದ್ದೆ. ಆದರೆ ಪತ್ರ ಬರೆದು ಎಂಟು ದಿನ ಆದರೂ ಯಾವುದೇ ವಿಚಾರಣೆ ಆಗಿಲ್ಲ ಅಂತ ಬೇಸರಿಸಿದ್ದಾರೆ.
ಆದರೆ ಪತ್ರದ ಬಗ್ಗೆ ಮಾಹಿತಿ ಇಲ್ಲ ಎಂದು ಆಯುಕ್ತರು ಹೇಳುತ್ತಿದ್ದಾರೆ. ಇದೊಂದು ಬೇಜವಾಬ್ದಾರಿ ಹೇಳಿಕೆ. ಇಷ್ಟೊಂದು ಸಿರಿಯಸ್ ಅಲಿಗೇಷನ್ ಮಾಡಿದರೂ ಏನಾಯ್ತು ಎಂದು ಹೇಳಿಲ್ಲ. ಅದನ್ನು ವಿಚಾರಣೆ ಮಾಡಬೇಕೆನ್ನುವ ಮನಸ್ಥಿತಿ ಕೂಡ ಇಲ್ಲ. ಇದು ಕಾಂಗ್ರೆಸ್ ಸರಕಾರದ ಆಡಳಿತ ವೈಖರಿ ಅಂತ ಬೆಲ್ಲದ ಕಿಡಿಕಾರಿದ್ದಾರೆ.
ಆಯುಕ್ತರಿಗೆ ಅಷ್ಟೇ ಅಲ್ಲ, ನಾನು ಗೃಹ ಮಂತ್ರಿಗಳಿಗೂ ಪತ್ರ ಬರೆದಿದ್ದೇನೆ. ದೇಶಘಾತುಕ ಶಕ್ತಿಗಳಿಗೆ ನಮ್ಮ ಬ್ರದರ್ಸ್ ಅಂತ ಹೇಳುತ್ತಿದ್ದಾರೆ ಮೇಲಿನವರು. ಕೆಳಗಿನವರು ಕೂಡ ಅವರ ಅನುಕರಣೆ ಮಾಡುತ್ತಿದ್ದಾರೆ. ಏಳರಿಂದ ಎಂಟು ಜನ ಗುಂಪಾಗಿ ಓಡಾಡುತ್ತಿದ್ದಾರೆ. ಅವರ ಆ್ಯಕ್ಟಿವಿಟಿ ಏನು ಗೊತ್ತಿಲ್ಲ. ದಿನಾ ಬೆಳಗ್ಗೆ ಅಲ್ಲಿ ನಮಾಜ್ ಟೈಮ್‌ಗೆ ಬರ್ತಾರೆ ಎಂದು ಹೇಳಿದ್ದಾರೆ. ಪೊಲೀಸರಿಗೆ ಕೆಲಸದ ಮೇಲೆ ಆಸಕ್ತಿ ಇಲ್ಲ. ಎಂಟು ದಿನ ಆದರೂ ಯಾರನ್ನೂ ಕರೆದು ತನಿಖೆ ಮಾಡಿಲ್ಲ, ನನಗೆ ಏನೂ ಉತ್ತರ ಬಂದಿಲ್ಲ. ಗೃಹ ಮಂತ್ರಿಗಳ ಕಚೇರಿಗೆ ಪತ್ರ ಮುಟ್ಟಿಸುವ ಕೆಲಸ ಮಾಡಿದ್ದೇನೆ. ಏನಾದರೂ ಆದರೆ ಅದಕ್ಕೆ ಕಾಂಗ್ರೆಸ್ ಸರ್ಕಾರ ಕಾರಣ ಅಂತ ಬೆಲ್ಲದ್ ಆರೋಪಿಸಿದ್ದಾರೆ.