ಫೋಟೋ ಗ್ಯಾಲರಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Sigandur bridge: ಸಿಗಂದೂರು ಸೇತುವೆ ಉದ್ಘಾಟನೆ ಆಹ್ವಾನ ಸಿಎಂಗೆ ಮೊದಲೇ ನೀಡಲಾಗಿತ್ತು: ದಾಖಲೆ ಸಮೇತ ಜೋಶಿ ಸ್ಪಷ್ಟನೆ

Pralhad Joshi: ಸಿಗಂದೂರು ಸೇತುವೆ ಉದ್ಘಾಟನೆ ಸಮಾರಂಭಕ್ಕೆ ʼಆಹ್ವಾನ ನೀಡಿದ್ದರೆ ಬರುತ್ತಿದ್ದೆʼ ಎಂದಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಹೇಳಿಕೆಗೆ ಕೇಂದ್ರ ಸಚಿವ ಪ್ರಲ್ಹಾದ್‌ ಜೋಶಿ ಪ್ರತಿಕ್ರಿಯಿಸಿದ್ದಾರೆ. ಸಂಸದ ಬಿ.ವೈ.ರಾಘವೇಂದ್ರ ಹಾಗೂ ಕೇಂದ್ರ ಸಚಿವ ನಿತಿನ್‌ ಗಡ್ಕರಿ ಅವರು ಪತ್ರದ ಮೂಲದ ಕಾರ್ಯಕ್ರಮಕ್ಕೆ ಆಹ್ವಾನಿಸಿದ್ದರೂ ಸಿಎಂ ಆಹ್ವಾನ ನೀಡಿಲ್ಲ ಎಂದಿರುವುದು ಸರಿಯಲ್ಲ ಎಂದು ಸಚಿವ ಪ್ರಲ್ಹಾದ್‌ ಜೋಶಿ ಹೇಳಿದ್ದಾರೆ.

ಸಿಗಂದೂರು ಸೇತುವೆ ಉದ್ಘಾಟನೆ ಆಹ್ವಾನ ಸಿಎಂಗೆ ಮೊದಲೇ ನೀಡಲಾಗಿತ್ತು: ಜೋಶಿ

Profile Prabhakara R Jul 14, 2025 8:31 PM

ಸಿಗಂದೂರು: ಸಿಗಂದೂರು ಸೇತುವೆ ಉದ್ಘಾಟನೆ ಸಮಾರಂಭಕ್ಕೆ (Sigandur bridge) ಆಗಮಿಸುವಂತೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಸಂಸದ ಬಿ.ವೈ.ರಾಘವೇಂದ್ರ ಹಾಗೂ ಕೇಂದ್ರ ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವ ನಿತಿನ್ ಗಡ್ಕರಿ ಅವರು ಪತ್ರ ಬರೆದು ಆಹ್ವಾನಿಸಿದ್ದಾರೆ. ಹಾಗಿದ್ದರೂ ಸಿಎಂ ಆಹ್ವಾನ ನೀಡಿಲ್ಲ ಎಂದಿರುವುದು ಸರಿಯಲ್ಲ ಎಂದು ಸಚಿವ ಪ್ರಲ್ಹಾದ್‌ ಜೋಶಿ (Pralhad Joshi) ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಸಿಗಂದೂರು ಸೇತುವೆ ಉದ್ಘಾಟನೆ ಸಮಾರಂಭಕ್ಕೆ ʼಆಹ್ವಾನ ನೀಡಿದ್ದರೆ ಬರುತ್ತಿದ್ದೆʼ ಎಂದಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಹೇಳಿಕೆಗೆ ಪ್ರತಿಕ್ರಿಯೆ ನೀಡಿರುವ ಸಚಿವ ಜೋಶಿ, ಸದ್ಯಕ್ಕೆ ರಾಜಕೀಯ ಸಭೆ-ಸಮಾವೇಶಗಳ ಹೊರತಾಗಿ ಇರುವಂಥ ಅಭಿವೃದ್ಧಿಪರ ಸಮಾರಂಭಗಳಿಗೆ ಬರಲು ಸಿಎಂಗೆ ಸಮಯವೇ ಇರುವುದಿಲ್ಲ ಬಿಡಿ ಎಂದು ಹೇಳಿದ್ದಾರೆ.

ಸಿಎಂ ಕುರ್ಚಿ ಜಗಳದಲ್ಲಿ ಮುಳುಗಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಅಭಿವೃದ್ಧಿ ಕಾರ್ಯಗಳೆಲ್ಲಿ ನೆನಪಿರುತ್ತವೆ? ಸದಾ ದೆಹಲಿ ನಾಯಕರ ಭೇಟಿ, ರಾಜಕೀಯ ಸಭೆ-ಸಮಾವೇಶಗಳಿಗೆ ತೆರಳಲು ಮಾತ್ರ ಸಮಯವಿರುತ್ತದೆ! ಎಂದು ಕೇಂದ್ರ ಸಚಿವ ಪ್ರಲ್ಹಾದ್‌ ಜೋಶಿ ಟೀಕಿಸಿದ್ದಾರೆ.

ಶರಾವತಿ ನದಿ ಹಿನ್ನೀರಿನಲ್ಲಿ ನೂತನವಾಗಿ ನಿರ್ಮಿಸಿರುವ ಅಂಬಾರಗೋಡ್ಲು-ಕಳಸವಳ್ಳಿ-ಸಿಗಂದೂರು‌ ಸೇತುವೆ ಲೋಕಾರ್ಪಣೆಯನ್ನು ಶಿವಮೊಗ್ಗದ ಜನ ನಿಜಕ್ಕೂ ಹಬ್ಬದಂತೆ ಭಾವಿಸಿ ಸಂಭ್ರಮಿಸುತ್ತಿದ್ದಾರೆ. ಆದರೆ, ಸಿಎಂ ಸಿದ್ದರಾಮಯ್ಯ ಅವರು ಇದರಲ್ಲೂ ಕೆಟ್ಟ ರಾಜಕಾರಣ ಪ್ರದರ್ಶಿಸಲು ಹೊರಟಿದ್ದಾರೆ ಎಂದು ಆಕ್ಷೇಪಿಸಿದ್ದಾರೆ.

ಸಿಎಂಗೆ ಮೊದಲೇ ಆಹ್ವಾನ ನೀಡಲಾಗಿದೆ

ಸಿಗಂದೂರು ಸೇತುವೆ ಉದ್ಘಾಟನೆ ಸಮಾರಂಭಕ್ಕೆ ಆಗಮಿಸುವಂತೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಸಂಸದ ಬಿ.ವೈ.ರಾಘವೇಂದ್ರ ಅವರು ಜು.9ರಂದೇ ಆಹ್ವಾನಿಸಿದ್ದಾರೆ. ಪತ್ರ ಸಹ ಬರೆದಿದ್ದಾರೆ. ಅಲ್ಲದೇ, ಕೇಂದ್ರ ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವ ನಿತಿನ್ ಗಡ್ಕರಿ ಅವರು ಸಹ ಸಿಎಂಗೆ ಜು.11ರಂದೇ ಪತ್ರ ಬರೆದು ಆಹ್ವಾನಿಸಿದ್ದಾರೆ. ಹಾಗಿದ್ದರೂ ʼಸಿಎಂ ಆಹ್ವಾನ ನೀಡಿಲ್ಲʼ ಎಂದಿರುವುದು ಸರಿಯಲ್ಲ ಎಂದು ಸಚಿವ ಜೋಶಿ ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ರಾಜ್ಯ ಲೋಕೋಪಯೋಗಿ ಸಚಿವ ಸತೀಶ್ ಜಾರಕಿಹೊಳಿ ಅವರೊಂದಿಗೂ ಸಂಸದ ಬಿ.ವೈ.ರಾಘವೇಂದ್ರ ಹಾಗೂ ಅಧಿಕಾರಿಗಳು ಈ ಹಿಂದೆಯೇ ಚರ್ಚಿಸಿ, ಸೇತುವೆ ಉದ್ಘಾಟನೆ ಕುರಿತು ಮಾಹಿತಿ ನೀಡಿದ್ದಾರೆ. ಈ ಬಗ್ಗೆ ಮುಖ್ಯಮಂತ್ರಿಗೂ ಮಾಹಿತಿ ರವಾನೆಯಾಗಿದೆ ಎಂದು ಸಚಿವ ಜೋಶಿ ಅವರು ಆಮಂತ್ರಣ ಪತ್ರ ಸಹಿತ ಸ್ಪಷ್ಟಪಡಿಸಿದ್ದಾರೆ.



ಸಿಎಂ ಕುರ್ಚಿ ಗದ್ದಲ ಮರೆಮಾಚಲು ತಂತ್ರ

ಸಿಎಂ ಕುರ್ಚಿ ಗಲಾಟೆಯನ್ನು ಮರೆಮಾಚಲು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಈ ರೀತಿಯ ರಾಜಕಾರಣದ‌ ದಾಳ‌ ಉರುಳಿಸುತ್ತಿದ್ದು, ಇದು ರಾಜ್ಯದ ದುರಂತವಾಗಿದೆ ಎಂದು ವಿಷಾದಿಸಿದ ಜೋಶಿ, ಈ ಕಾಂಗ್ರೆಸ್‌ ಸರ್ಕಾರ ರಾಜ್ಯದ ಅಭಿವೃದ್ಧಿಯನ್ನು ಸಂಪೂರ್ಣ ಮರೆತುಬಿಟ್ಟಿದೆ ಎಂದು ಆರೋಪಿಸಿದ್ದಾರೆ.

ಈ ಸುದ್ದಿಯನ್ನೂ ಓದಿ | ಸಿಗಂದೂರು ಸೇತುವೆಗೆ ಮಾತಾ ಶ್ರೀ ಚೌಡೇಶ್ವರಿ ದೇವಿ ಹೆಸರಿಡಿ: ನಿತಿನ್‌ ಗಡ್ಕರಿಗೆ ಜೋಶಿ ಮನವಿ

ಕೇಂದ್ರ ಸರ್ಕಾರದ ₹423 ಕೋಟಿ ಬೃಹತ್‌ ಅನುದಾನದಲ್ಲಿ‌ ಅದ್ಭುತ ಸೇತುವೆ ನಿರ್ಮಾಣವನ್ನು ಸಂಭ್ರಮಿಸುವ ಬದಲು ಸಿಎಂ ತಮ್ಮ ಕುರ್ಚಿ ಉಳಿಸಿಕೊಳ್ಳುವ ಭರದಲ್ಲಿ ಶಿಷ್ಟಾಚಾರ-ನಿಯಮ ಉಲ್ಲಂಘನೆ ಮಾಡಿದ್ದಾರೆ. ಅಲ್ಲದೇ, ʼನನ್ನನ್ನು ಆಹ್ವಾನಿಸಿಯೇ ಇಲ್ಲʼ ಎಂಬ ಸುಳ್ಳು ಹೇಳಿಕೆ ಬೇರೆ ನೀಡುತ್ತ ಕೆಟ್ಟ ರಾಜಕಾರಣದಲ್ಲಿ ತೊಡಗಿದ್ದಾರೆ. ಇದು ಸರಿಯಲ್ಲ ಎಂದು ಸಚಿವ ಪ್ರಲ್ಹಾದ್‌ ಜೋಶಿ ಬೇಸರ ವ್ಯಕ್ತಪಡಿಸಿದ್ದಾರೆ .