ಬೆಂಗಳೂರು: ಮಲೆ ಮಹದೇಶ್ವರ ವನ್ಯಜೀವಿ ಅಭಯಾರಣ್ಯದಲ್ಲಿ (Male Mahadeshwara hill) ಐದು ಹುಲಿಗಳು ಸಾವನ್ನಪ್ಪಿದ್ದು, ಇದರ ಗಂಭೀರತೆ ಕೇಂದ್ರ ಸರಕಾರಕ್ಕೂ ತಟ್ಟಿದೆ. ಈ ಪ್ರಕರಣದ ತನಿಖೆಗಾಗಿ ಕೇಂದ್ರ ಸರಕಾರ ವಿಶೇಷ ತನಿಖಾ ತಂಡವನ್ನು (Special Investigation Team, SIT) ರಚಿಸಿದೆ. ಬೆಟ್ಟದಲ್ಲಿ ಮೃತಪಟ್ಟ ಐದು ಹುಲಿಗಳಲ್ಲಿ ಒಂದು ತಾಯಿ ಹಾಗೂ ನಾಲ್ಕು ಮರಿಗಳು ಸೇರಿವೆ. ಹುಲಿಗಳ ಶವಗಳ ಸಮೀಪವೇ ಒಂದು ಹಸುವಿನ ಕಳೇಬರ ಕೂಡ ಕಂಡುಬಂದಿದ್ದು, ವಿಷಪ್ರಾಶನದ ಶಂಕೆ ವ್ಯಕ್ತವಾಗಿದೆ.
ಈಗಾಗಲೇ ಈ ಘಟನೆಯ ಕುರಿತು ಅರಣ್ಯ ಇಲಾಖೆ ಉನ್ನತ ಮಟ್ಟದ ತನಿಖೆಗೆ ಆದೇಶಿಸಿದೆ. ಜೂನ್ 26ರಂದು, ಗುರುವಾರ ಲಭ್ಯವಾದ ಕಚೇರಿ ಜ್ಞಾಪಕ ಪತ್ರದಲ್ಲಿ, ಪರಿಸರ, ಅರಣ್ಯ ಮತ್ತು ಹವಾಮಾನ ಬದಲಾವಣೆ ಸಚಿವಾಲಯವು ಇಬ್ಬರು ಸದಸ್ಯರ SIT ಅನ್ನು ರಚಿಸಿದೆ ಮತ್ತು ರಾಜ್ಯ ಸರ್ಕಾರ ಉನ್ನತ ಮಟ್ಟದ ಸಮಿತಿಗೆ ನೀಡಿದ ಗಡುವಿನಂತೆಯೇ ಗಡುವನ್ನು ನೀಡಿದೆ ಎಂದು ಹೇಳಿದೆ.
ಬೆಂಗಳೂರಿನಲ್ಲಿರುವ ರಾಷ್ಟ್ರೀಯ ಹುಲಿ ಸಂರಕ್ಷಣಾ ಪ್ರಾಧಿಕಾರದ ಪ್ರಾದೇಶಿಕ ಬ್ಯೂರೋದ ಸಹಾಯಕ ಇನ್ಸ್‌ಪೆಕ್ಟರ್ ಜನರಲ್ ಹರಿಣಿ ವಿ. ಮತ್ತು ವನ್ಯಜೀವಿ ಅಪರಾಧ ನಿಯಂತ್ರಣ ಬ್ಯೂರೋದ ದಕ್ಷಿಣ ಪ್ರದೇಶದ ಅರಣ್ಯಗಳ ಸಹಾಯಕ ಇನ್ಸ್‌ಪೆಕ್ಟರ್ ಜನರಲ್ ತೆನ್ಮೋಳಿ ವಿ. ಇವರನ್ನು ಎಸ್‌ಐಟಿ ಸದಸ್ಯರಾಗಿ ನೇಮಿಸಲಾಗಿದೆ. ತಂಡ (ಎಸ್‌ಐಟಿ) ಈ ವಿಷಯದ ಬಗ್ಗೆ ವಿವರವಾದ ತನಿಖೆ ನಡೆಸಿ ಎರಡು ವಾರಗಳ ಅವಧಿಯಲ್ಲಿ ವರದಿಯನ್ನು ಸಲ್ಲಿಸಬೇಕು. ತನಿಖಾ ತಂಡಕ್ಕೆ ಲಾಜಿಸ್ಟಿಕ್ ಬೆಂಬಲ ಮತ್ತು ಸಹಾಯವನ್ನು ನೀಡಲು ರಾಜ್ಯ ಸರ್ಕಾರವನ್ನು ಕೋರಲಾಗಿದೆ ಎಂದು ತಿಳಿಸಲಾಗಿದೆ.
ರಾಜ್ಯ ಅರಣ್ಯ ಸಚಿವ ಈಶ್ವರ್ ಖಂಡ್ರೆ ಅವರು ಗುರುವಾರ ಪ್ರಧಾನ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ (ಇಡಬ್ಲ್ಯೂಪಿಆರ್‌ಟಿ ಮತ್ತು ಸಿಸಿ) ಬಿ. ಪಿ ರವಿ ನೇತೃತ್ವದಲ್ಲಿ ಮತ್ತು ವನ್ಯಜೀವಿ ತಜ್ಞ ಸಂಜಯ್ ಗುಬ್ಬಿ ಸೇರಿದಂತೆ ಇತರ ಐದು ಜನರನ್ನು ಒಳಗೊಂಡ ಆರು ಸದಸ್ಯರ ತನಿಖಾ ತಂಡವನ್ನು ಸ್ಥಾಪಿಸಿ ಆದೇಶ ಹೊರಡಿಸಿದ್ದರು. ನಿನ್ನೆ ಘಟನೆ ನಡೆದ ಸ್ಥಳಕ್ಕೆ ಸಚಿವರು ಭೇಟಿ ನೀಡಿದ್ದರು.
ಈಗಾಗಲೇ ಹುಲಿಗಳ ಸಾವಿನ ಹಿನ್ನೆಲೆಯಲ್ಲಿ ಸ್ಥಳೀಯರ ಕೈವಾಡ ಶಂಕಿಸಲಾಗಿದೆ. ಹಸುವಿನ ಕಳೇಬರ ಹಾಗೂ ಹುಲಿಗಳ ಕಳೇಬರಗಳ ಮಾದರಿಗಳನ್ನು ಪರೀಕ್ಷೆಗಾಗಿ ಕಳಿಸಲಾಗಿದ್ದು, ವಿಷಪ್ರಾಶನದ ಶಂಕೆ ವ್ಯಕ್ತವಾಗಿದೆ.
ಇದನ್ನೂ ಓದಿ: Tiger Death: ಮಲೆ ಮಹದೇಶ್ವರ ಬೆಟ್ಟದಲ್ಲಿ ಒಂದೇ ದಿನ 5 ಹುಲಿ ಸಾವು, ವಿಷಪ್ರಾಶನ ಶಂಕೆ