ತುಮಕೂರು: ತುಮಕೂರು ದಸರಾ ಮಹೋತ್ಸವದ ವೇದಿಕೆಯಲ್ಲಿ ಸ್ಯಾಂಡಲ್‌ವುಡ್ ಜನಪ್ರಿಯ ನಟಿ 'ಡಿಂಪಲ್ ಕ್ವೀನ್' ರಚಿತಾ ರಾಮ್ (Rachita Ram) ಅವರೊಂದಿಗೆ ಅಭಿಮಾನಿಯೊಬ್ಬ ಅನುಚಿತವಾಗಿ ವರ್ತಿಸಿರುವ ಘಟನೆ ವರದಿಯಾಗಿದೆ. ನಟಿಯ ಯಾವುದೇ ಪೂರ್ವಾನುಮತಿಯಿಲ್ಲದೆ ಅವರ ಹೆಗಲ ಮೇಲೆ ಕೈಹಾಕಿ ಬಲವಂತವಾಗಿ ಸೆಲ್ಫಿ ತೆಗೆದುಕೊಳ್ಳಲು ಮುಂದಾಗಿದ್ದಾನೆ.
ಸೋಮವಾರ ರಾತ್ರಿ ನಡೆದ ಕಾರ್ಯಕ್ರಮದಲ್ಲಿ ವೇದಿಕೆಗೆ ಆಗಮಿಸಿದ್ದ ನಟಿಯೊಂದಿಗೆ ಸೆಲ್ಫಿ ತೆಗೆದುಕೊಳ್ಳಲು ಯತ್ನಿಸಿದ ಅಭಿಮಾನಿಯೊಬ್ಬ, ಭದ್ರತಾ ಸಿಬ್ಬಂದಿಯ ಕಣ್ಣುತಪ್ಪಿಸಿ ನೇರವಾಗಿ ವೇದಿಕೆ ಹತ್ತಿದ್ದಾನೆ. ನಟಿಯ ಯಾವುದೇ ಪೂರ್ವಾನುಮತಿಯಿಲ್ಲದೆ ಅವರ ಹೆಗಲ ಮೇಲೆ ಕೈಹಾಕಿ ಬಲವಂತವಾಗಿ ಸೆಲ್ಫಿ ತೆಗೆದುಕೊಳ್ಳಲು ಮುಂದಾಗಿದ್ದಾನೆ. ಈ ಅನಿರೀಕ್ಷಿತ ಹಾಗೂ ಅತಿರೇಕದ ವರ್ತನೆಯಿಂದ ವಿಚಲಿತರಾದ ನಟಿ ರಚಿತಾ ರಾಮ್, ಕೂಡಲೇ ಆ ಅಭಿಮಾನಿಯ ನಡೆಗೆ ತೀವ್ರ ಅಸಮಾಧಾನಗೊಂಡು ಗರಂ ಆಗಿದ್ದಾರೆ.
ತಕ್ಷಣವೇ ಎಚ್ಚೆತ್ತ ಬೌನ್ಸರ್‌ಗಳು ಹಾಗೂ ಸ್ಥಳದಲ್ಲಿದ್ದ ಪೊಲೀಸರು ಕೂಡಲೇ ಮಧ್ಯಪ್ರವೇಶಿಸಿ, ಆತನನ್ನು ವೇದಿಕೆಯಿಂದ ಕೆಳಗೆ ಕಳುಹಿಸಿ ಪರಿಸ್ಥಿತಿಯನ್ನು ನಿಯಂತ್ರಣಕ್ಕೆ ತಂದಿದ್ದಾರೆ.
ಸೆಲ್ಫಿ ಕ್ರೇಜ್ ಹೆಚ್ಚಾಗಿರುವ ಇಂತಹ ಸಾರ್ವಜನಿಕ ಸಂದರ್ಭಗಳಲ್ಲಿ ಸೆಲೆಬ್ರಿಟಿಗಳ ವೈಯಕ್ತಿಕ ಭದ್ರತೆ ಮತ್ತು ಗೌರವಕ್ಕೆ ಧಕ್ಕೆಯಾಗುತ್ತಿರುವುದು ಈ ಘಟನೆಯಿಂದ ಮತ್ತೊಮ್ಮೆ ಮುನ್ನೆಲೆಗೆ ಬಂದಿದೆ.