ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ

ಪದವೀಧರರ ನಿರುದ್ಯೋಗ ಸಮಸ್ಯೆಗೆ ದನಿಯಾಗುವೆ: ಚಿಕ್ಕರಾಜು ಎಸ್. ಯಾದವ್ ಭರವಸೆ

ಎಲ್ಲಾ ಪದವೀಧರ ನಿರುದ್ಯೋಗಿಗಳಿಗೆ ಸರ್ಕಾರ ಕೂಡಲೇ ಉದ್ಯೋಗ ಕಲ್ಪಿಸಬೇಕು. ಒಂದು ವೇಳೆ ಅದು ಸಾಧ್ಯವಾಗದಿದ್ದರೆ, ಸರ್ಕಾರಿ ಗೋಮಾಳಗಳಲ್ಲಿ ತಲಾ ಎರಡು ಎಕರೆ ಜಮೀನು ನೀಡಿ ಅವರು ಬದುಕು ಕಟ್ಟಿಕೊಳ್ಳಲು ವಿಶೇಷ ಕಾರ್ಯಕ್ರಮ ರೂಪಿಸಬೇಕು ಎಂದು ಆಗ್ನೇಯ ಪದವೀಧರರ ಕ್ಷೇತ್ರದ ಪಕ್ಷೇತರ ಅಭ್ಯರ್ಥಿ ಚಿಕ್ಕರಾಜು ಎಸ್. ಯಾದವ್ ಒತ್ತಾಯಿಸಿದ್ದಾರೆ.

ತುಮಕೂರು, ಅ.21: ಕಾಲೇಜು ಉಪನ್ಯಾಸಕರಾಗಿ ಸೇವೆ ಸಲ್ಲಿಸುತ್ತಿರುವ ನಗರದ ಚಿಕ್ಕರಾಜು ಎಸ್. ಯಾದವ್ ಆಗ್ನೇಯ ಪದವೀಧರರ ಕ್ಷೇತ್ರದ ಪಕ್ಷೇತರ ಅಭ್ಯರ್ಥಿಯಾಗಿ ಕಣಕ್ಕಿಳಿದಿದ್ದಾರೆ. ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, "ಎಲ್ಲಾ ಪದವೀಧರ ನಿರುದ್ಯೋಗಿಗಳಿಗೆ ಸರ್ಕಾರ ಕೂಡಲೇ ಉದ್ಯೋಗ ಕಲ್ಪಿಸಬೇಕು. ಒಂದು ವೇಳೆ ಅದು ಸಾಧ್ಯವಾಗದಿದ್ದರೆ, ಸರ್ಕಾರಿ ಗೋಮಾಳಗಳಲ್ಲಿ ತಲಾ ಎರಡು ಎಕರೆ ಜಮೀನು ನೀಡಿ ಅವರು ಬದುಕು ಕಟ್ಟಿಕೊಳ್ಳಲು ವಿಶೇಷ ಕಾರ್ಯಕ್ರಮ ರೂಪಿಸಬೇಕು" ಎಂದು ಒತ್ತಾಯಿಸಿದರು.

ಪದವೀಧರರು ಹಾಗೂ ಪದವೀಧರ ನಿರುದ್ಯೋಗಿಗಳ ಸಮಸ್ಯೆಗಳು ಮತ್ತು ಸಂಕಷ್ಟಗಳನ್ನು ಹತ್ತಿರದಿಂದ ಬಲ್ಲ ಅವರು, ಈ ಚುನಾವಣೆಯಲ್ಲಿ ಅವರ ಪ್ರಮುಖ ದನಿಯಾಗಿ ಕೆಲಸ ಮಾಡುವುದಾಗಿ ಅವರು ಘೋಷಿಸಿದ್ದಾರೆ.

ಅಹಿಂದ ಸಮುದಾಯದ ಬಲ ಹಾಗೂ ಪ್ರವಾಸ

ಅಹಿಂದ ವರ್ಗದ ಜನಸಂಖ್ಯೆಗೆ ತಕ್ಕಂತೆ ರಾಜಕೀಯ ಸ್ಥಾನಮಾನ ದೊರೆಯುತ್ತಿಲ್ಲ. ಕಳೆದ ಹಲವಾರು ವರ್ಷಗಳಿಂದ ಅಹಿಂದ ವರ್ಗಗಳ ಸಂಘಟನೆಯಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡಿರುವ ಅವರು, ದಕ್ಷಿಣ ವಲಯದ ಅಹಿಂದ ಪದವೀಧರರ ಮತಗಳನ್ನು ಕ್ರೋಢೀಕರಿಸಿ ಈ ವರ್ಗಕ್ಕೆ ರಾಜಕೀಯ ಶಕ್ತಿ ತುಂಬುವ ಪ್ರಯತ್ನ ಮಾಡುತ್ತಿರುವುದಾಗಿ ತಿಳಿಸಿದರು. ಕಳೆದ ಒಂದು ವರ್ಷದಿಂದ ಕ್ಷೇತ್ರದ ಎಲ್ಲಾ ಜಿಲ್ಲೆಗಳಿಗೂ ನಿರಂತರ ಪ್ರವಾಸ ಕೈಗೊಂಡು ಪ್ರಮುಖರನ್ನು ಭೇಟಿಯಾಗಿದ್ದು, ಎಲ್ಲೆಡೆಯಿಂದ ಉತ್ತಮ ಬೆಂಬಲ ವ್ಯಕ್ತವಾಗಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಹಿರಿಯ ತಜ್ಞ ವೈದ್ಯರು ಹಾಗೂ ಅಹಿಂದ ವರ್ಗಗಳ ಜಾಗೃತಿ ವೇದಿಕೆ ಅಧ್ಯಕ್ಷ ಡಾ.ಬಿ. ಯಲ್ಲಪ್ಪ, ಚಿಕ್ಕರಾಜು ಎಸ್. ಯಾದವ್ ಅವರ ಗೆಲುವಿಗೆ ಅಹಿಂದ ವರ್ಗ ಸಂಪೂರ್ಣ ಬೆಂಬಲ ನೀಡಲಿದೆ ಎಂದರು.

ಅಲ್ಲದೆ, ಚಿಕ್ಕರಾಜು ಅವರು ಬೆಂಗಳೂರು ವಿಶ್ವವಿದ್ಯಾಲಯದಿಂದ ಮನೋವಿಜ್ಞಾನದಲ್ಲಿ ಸ್ನಾತಕೋತ್ತರ ಪದವಿ ಮತ್ತು ಕಾನೂನು ಪದವಿ ಪಡೆದಿದ್ದು, ಕಾಲೇಜು ಉಪನ್ಯಾಸಕರಾಗಿ, ಆಪ್ತ ಸಮಾಲೋಚಕರಾಗಿ ಹಾಗೂ ವಕೀಲರಾಗಿ ಸಲ್ಲಿಸಿದ ಸೇವೆ ಅವರ ಅನುಭವಕ್ಕೆ ಸಾಕ್ಷಿಯಾಗಿದೆ ಎಂದು ತಿಳಿಸಿದರು. ಕೋಲಾರ, ಚಿಕ್ಕಬಳ್ಳಾಪುರ, ಚಿತ್ರದುರ್ಗ, ದಾವಣಗೆರೆ ಹಾಗೂ ತುಮಕೂರು ಜಿಲ್ಲೆಗಳ ಅಹಿಂದ ನಾಯಕರು ಮತ್ತು ಮತದಾರರೊಂದಿಗೆ ಅವರು ಈಗಾಗಲೇ ನಿಕಟ ಸಂಪರ್ಕದಲ್ಲಿದ್ದಾರೆ ಎಂದರು.

ಸುದ್ದಿಗೋಷ್ಠಿಯಲ್ಲಿ ಹಿರಿಯ ವಕೀಲ ವೆಂಕಟೇಶ್, ಜೆಡಿಯು ರಾಜ್ಯ ಪ್ರಧಾನ ಕಾರ್ಯದರ್ಶಿ ಕೆ.ಆರ್. ರಂಗನಾಥ್, ಮಧುಗಿರಿ ಪುರಸಭೆ ಮಾಜಿ ಸದಸ್ಯ ಮೂಡಲಗಿರೀಶ್, ಅಲೆಮಾರಿಗಳ ಸಂಘದ ಅಧ್ಯಕ್ಷ ಕೃಷ್ಣಪ್ಪ, ಮುಖಂಡರಾದ ಸೈಯದ್ ಪೀರ್, ಮಂಜುನಾಥ್, ಮಧುಸೂದನ್, ಕೃಷ್ಣಪ್ಪ, ವೆಂಕಟೇಶ್, ಪ್ರವೀಣ್, ಸೌಭಾಗ್ಯ, ಪುಷ್ಪಲತಾ ಮೊದಲಾದವರು ಭಾಗವಹಿಸಿದ್ದರು.