ತುಮಕೂರು, ಅ.17: ರಾಜ್ಯದಲ್ಲಿ ತೀವ್ರ ಬರ ಇದ್ದರೂ ತುಮಕೂರು ನಗರದಲ್ಲಿ (Tumkur News) ಕುಡಿಯುವ ನೀರಿಗೆ ಸಮಸ್ಯೆ ಆಗದಂತೆ ಎಚ್ಚರಿಕೆ ವಹಿಸಲಾಗಿದೆ. ಈಗ ಬುಗುಡನಹಳ್ಳಿ ಕೆರೆಯಲ್ಲಿ ಲಭ್ಯವಿರುವ ನೀರು ಜನವರಿವರೆಗೆ ಸಾಕಾಗಬಹುದು, ನಾಗರೀಕರಿಗೆ ತೊಂದರೆ ಆಗದಂತೆ ನೀರು ಪೂರೈಕೆ ಮಾಡಬೇಕು. ನೀರು ಶುದ್ಧೀಕರಣ ಘಟಕಗಳು ಹಾಗೂ ನೀರು ಪೂರೈಕೆ ಸಂಬಂಧಿಸಿದ ಯಂತ್ರಗಳು ಕೆಟ್ಟು ಹೋಗಿ ತೊಂದರೆ ಆಗದಂತೆ ಮುನ್ನೆಚ್ಚರವಹಿಸಬೇಕು, ಪರ್ಯಾಯ ವ್ಯವಸ್ಥೆ ಮಾಡಿಕೊಳ್ಳಬೇಕು ಎಂದು ನಗರಪಾಲಿಕೆ ಆಯುಕ್ತರು ಹಾಗೂ ಅಧಿಕಾರಿಗಳಿಗೆ ಗಂಭೀರ ಸೂಚನೆ ನೀಡಿರುವುದಾಗಿ ಶಾಸಕ ಜಿ.ಬಿ. ಜ್ಯೋತಿಗಣೇಶ್ ಹೇಳಿದರು.
ನಗರದಲ್ಲಿ ಶನಿವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಪ್ರಸ್ತುತ ಬುಗುಡನಹಳ್ಳಿಕೆರೆಯಲ್ಲಿ 272 ಎಂಸಿಎಫ್ಟಿ ನೀರು ಲಭ್ಯವಿದೆ, ಇದರಲ್ಲಿ 240 ಎಂಸಿಎಫ್ಟಿ ನೀರನ್ನು ಬಳಕೆ ಮಾಡಿಕೊಳ್ಳಬಹುದು. ಆದರೆ ಜನವರಿ ಆರಂಭದ ವೇಳೆಗೆ ತುಮಕೂರಿಗೆ ಹೇಮಾವತಿ ಜಲಾಶಯದಿಂದ ನೀರು ಹರಿಸಬೇಕು. ಇಲ್ಲವಾದರೆ ನಗರದಲ್ಲಿ ಕುಡಿಯುವ ನೀರಿಗೆ ತೊಂದರೆ ಅಗುತ್ತದೆ ಎಂದು ಜಿಲ್ಲಾ ಉಸ್ತುವಾರಿ ಸಚಿವರು ಹಾಗೂ ಸಂಬಂಧಿಸಿದ ಅಧಿಕಾರಿಗಳ ಗಮನಕ್ಕೆ ತಂದಿದ್ದೇನೆ ಎಂದರು.
ನಗರದ ನೀರು ಸರಬರಾಜಿಗೆಂದು ಬುಗುಡನಹಳ್ಳಿಕೆರೆ, ಹೆಬ್ಬಾಕಕೆರೆ, ಅಮಾನಿಕೆರೆ, ಮರಳೂರು ಹಾಗೂ ಗಂಗಸಂದ್ರ ಕೆರೆಗಳನ್ನು ನಗರದ ನೀರು ಸಂಗ್ರಹಗಾರಗಳಾಗಿ ಬಳಸಲು ಉದ್ದೇಶಿಸಿದೆ, ಬುಗುಡನಹಳ್ಳಿ ಹಾಗೂ ಪಿಎನ್ಆರ್ ಪಾಳ್ಯದ ನೀರು ಶುದ್ಧೀಕರಣ ಘಟಕಗಳ ಬಗ್ಗೆ ಅಧಿಕಾರಿಗಳು ಗಮನಹರಿಸಬೇಕು. ಯಂತ್ರಗಳು ಕೆಟ್ಟು ನೀರು ವಿತರಣೆಯಲ್ಲಿ ವ್ಯತ್ಯಯವಾಗದಂತೆ ನೋಡಿಕೊಳ್ಳಬೇಕು. ಅಮಾನಿಕೆರೆ ನೀರನ್ನು ಶುದ್ಧೀಕರಿಸದೆ ಕುಡಿಯಲು ಕೊಡುತ್ತಿಲ್ಲ. ಆದರೆ ಅಮಾನಿಕೆರೆಯಲ್ಲಿ ನೀರು ಸಂಗ್ರಹವಾಗಿರುವ ಕಾರಣ ಸುತ್ತಮುತ್ತಲ ಪ್ರದೇಶಗಳ ಕೊಳವೆಬಾವಿಗಳು ಜಲಾವೃತವಾಗಿ ನಗರದ ಶೇಕಡ 30ರಷ್ಟು ನೀರಿನ ಬೇಡಿಕೆಯ ಒತ್ತಡ ಕಡಿಮೆಯಾಗಿದೆ ಎಂದು ಹೇಳಿದರು.
ನಗರಪಾಲಿಕೆಯ ಟಾಸ್ಕ್ ಫೋರ್ಸ್ ಸಭೆಯಲ್ಲಿ ನೀರು ಸರಬರಾಜು ಬಗ್ಗೆ ಆಯುಕ್ತರು, ಅಧಿಕಾರಿಗಳೊಂದಿಗೆ ಚರ್ಚೆ ನಡೆಸಿದ್ದು, ನೀರಿನ ಸಮಸ್ಯೆಯಾಗದಂತೆ ಕಟ್ಟೆಚ್ಚರವಹಿಸಲು ಸೂಚನೆ ನೀಡಿದ್ದೇನೆ ಎಂದು ಹೇಳಿದ ಶಾಸಕ ಜ್ಯೋತಿಗಣೇಶ್, ನಗರದಲ್ಲಿ ಸುಮಾರು 837 ಕೊಳವೆ ಬಾವಿಗಳಿದ್ದು, ಅವುಗಳಲ್ಲಿ ಈಗ 719 ಕೊಳವೆ ಬಾವಿಗಳ ನೀರಿನ ಬಳಕೆ ಮಾಡಲಾಗುತ್ತದೆ. ಪಂಪ್ಸೆಟ್ಗಳು ಕೆಡದಂತೆ, ಕೆಟ್ಟರೆ ತಕ್ಷಣ ದುರಸ್ಥಿ ಮಾಡಲು ವ್ಯವಸ್ಥೆ ಮಾಡಿಕೊಳ್ಳಬೇಕು. ಜನಸಂಖ್ಯೆ ಏರುತ್ತಿದ್ದು ನಗರದಲ್ಲಿ ಇನ್ನೂ 15 ಓವರ್ ಹೆಡ್ ಟ್ಯಾಂಕ್ಗಳ ಅಗತ್ಯವಿದೆ ಎಂದರು.
ಕೆ.ಎಂ. ಸುರೇಶ್ ಗೆಲುವು ಖಚಿತ
ಆಗ್ನೇಯ ಪದವಿಧರರ ಕ್ಷೇತ್ರದ ಎನ್ಡಿಎ ಅಭ್ಯರ್ಥಿ ಕೆ.ಎಂ. ಸುರೇಶ್ ಅವರ ಪರವಾಗಿ ಬಿಜೆಪಿ ಹಾಗೂ ಜೆಡಿಎಸ್ ಮುಖಂಡರು, ಕಾರ್ಯಕರ್ತರು ಸ್ವಯಂಪ್ರೇರಿತವಾಗಿ ಪ್ರಚಾರ ಮಾಡುತ್ತಿದ್ದರೆ. ಈ ಕ್ಷೇತ್ರದಲ್ಲಿ ಇದೂವರೆಗೆ ಬಿಜೆಪಿ ಹಾಗೂ ಜೆಡಿಎಸ್ ಅಭ್ಯರ್ಥಿಗಳು ಮಾತ್ರ ಗೆದ್ದಿದ್ದು, ಈ ಬಾರಿ ಎರಡೂ ಪಕ್ಷಗಳ ಮೈತ್ರಿ ಅಭ್ಯರ್ಥಿ ಕಣದಲ್ಲಿದ್ದು ಎರಡೂ ಪಕ್ಷಗಳ ಕಾರ್ಯಕರ್ತರು ಕೆಲಸ ಮಾಡುತ್ತಿರುವುದರಿಂದ ನಮ್ಮ ಅಭ್ಯರ್ಥಿ ಹೆಚ್ಚಿನ ಮತಗಳ ಅಂತರದಿಂದ ಚುನಾಯಿತರಾಗುತ್ತಾರೆ ಎಂದು ವಿಶ್ವಾಸ ವ್ಯಕ್ತಪಡಿಸಿದ ಶಾಸಕ ಜಿ.ಬಿ. ಜ್ಯೋತಿಗಣೇಶ್, ಕೆ.ಎಂ. ಸುರೇಶ್ ಅವರು ಸಂಭಾವಿತರು, ಶಿಕ್ಷಣ ಸಂಸ್ಥೆ ಹೊಂದಿದ್ದಾರೆ. ಅವರಿಗೆ ಶಿಕ್ಷಕರು ಹಾಗೂ ಪದವಿಧರರ ಸಮಸ್ಯೆಗಳ ಅರಿವಿದೆ ಎಂದು ಹೇಳಿದರು.
ವೃತ್ತದ ಸ್ವಾಮೀಜಿ ಹೆಸರು ಬದಲಾಗುವುದಿಲ್ಲ
ನಗರದ ಡಾ. ಶ್ರೀ ಶಿವಕುಮಾರ ಸ್ವಾಮೀಜಿಗಳ ವೃತ್ತದ ಹೆಸರನ್ನು ಬದಲಾವಣೆ ಮಾಡುವುದಿಲ್ಲ. ಬದಲಾವಣೆ ಮಾಡಬಾರದು ಎಂದು ತಾವು ಜಿಲ್ಲಾಧಿಕಾರಿಗಳು ಹಾಗೂ ನಗರಪಾಲಿಕೆ ಆಯುಕ್ತರೊಂದಿಗೆ ಮಾತನಾಡಿದ್ದು, ಬದಲಾವಣೆ ಮಾಡುವುದಿಲ್ಲ ಎಂದು ಅಧಿಕಾರಿಗಳು ಸ್ಪಷ್ಟನೆ ನೀಡಿದ್ದಾರೆ ಎಂದು ತಿಳಿಸಿದರು.
Gruha Jyothi Scheme: ಗೃಹ ಜ್ಯೋತಿ ಸಮೀಕ್ಷೆ: ಬೆಸ್ಕಾಂ ಉಪ ವಿಭಾಗ ಕಚೇರಿಯಲ್ಲಿ ದಾಖಲೆ ಸಲ್ಲಿಕೆಗೆ ಅವಕಾಶ
ಪತ್ರಿಕಾಗೋಷ್ಠಿಯಲ್ಲಿ ನಗರಪಾಲಿಕೆ ಮಾಜಿ ಮೇಯರ್ ಬಿ.ಜಿ. ಕೃಷ್ಣಪ್ಪ, ನಗರಸಭೆ ಮಾಜಿ ಉಪಾಧ್ಯಕ್ಷ ಹನುಂತರಾಯಪ್ಪ, ಮಾಜಿ ವಿಪಕ್ಷ ನಾಯಕ ಸಿ.ಎನ್. ರಮೇಶ್, ಮಾಜಿ ಸದಸ್ಯ ಎಚ್. ಮಲ್ಲಿಕಾರ್ಜುನ್, ಬಿಜೆಪಿ ಮುಖಂಡರಾದ ಟಿ.ಆರ್. ಸದಾಶಿವಯ್ಯ, ಕೆ. ವೇದಮೂರ್ತಿ, ಜೆ. ಜಗದೀಶ್ ಹಾಜರಿದ್ದರು.