ಮಧುಗಿರಿ, ನ.12: ತಾಲೂಕು ಆಡಳಿತದ ವತಿಯಿಂದ ವೀರವನಿತೆ ಒನಕೆ ಓಬವ್ವ ಜಯಂತಿ ಆಚರಣೆಯಲ್ಲಿ ನಿರ್ಲಕ್ಷ್ಯ ತೋರಲಾಗಿದೆ ಎಂದು ಆರೋಪಿಸಿ ಛಲವಾದಿ ಮಹಾಸಭಾ ಸದಸ್ಯರು ಸಭೆಯಲ್ಲೇ ಅಧಿಕಾರಿಗಳ ವಿರುದ್ಧ ಧಿಕ್ಕಾರ ಕೂಗಿ ತಾಲೂಕು ಕಚೇರಿ ಮುಂಭಾಗ (Madhugiri News) ಗುರುವಾರ ಪ್ರತಿಭಟನೆ ನಡೆಸಿದರು.
ತುಮಕೂರು ಜಿಲ್ಲೆಯ ಜಿಲ್ಲಾ ಉಸ್ತುವಾರಿ ಸಚಿವರು ಹಾಗೂ ರಾಜ್ಯದ ಉಪಮುಖ್ಯಮಂತ್ರಿ ಡಾ. ಜಿ. ಪರಮೇಶ್ವರ್ ಅವರು ಛಲವಾದಿ ಸಮುದಾಯಕ್ಕೆ ಸೇರಿದವರಾಗಿದ್ದರೂ, ತಾಲೂಕು ಮಟ್ಟದಲ್ಲಿ ಒನಕೆ ಓಬವ್ವ ಜಯಂತಿ ಆಚರಣೆಗೆ ಅಧಿಕಾರಿಗಳು ತೋರಿದ ಅಸಡ್ಡೆ ಖಂಡನೀಯ ಎಂದು ಪ್ರತಿಭಟನಾಕಾರರು ಆಕ್ರೋಶ ವ್ಯಕ್ತಪಡಿಸಿದರು.
ಸರ್ಕಾರದ ವತಿಯಿಂದ ಜಯಂತಿ ಆಚರಿಸುವ ಸಂಬಂಧ ಈಗಾಗಲೇ ಎರಡು ಬಾರಿ ಸಭೆ ನಡೆಸಿ ಅಗತ್ಯ ನಿರ್ಧಾರಗಳನ್ನು ಕೈಗೊಳ್ಳಲಾಗಿತ್ತು. ಆದರೂ ಕಾರ್ಯಕ್ರಮದ ಸಿದ್ಧತೆ ಹಾಗೂ ಆಯೋಜನೆಯಲ್ಲಿ ತಾಲೂಕು ಆಡಳಿತ ಸಂಪೂರ್ಣ ನಿರ್ಲಕ್ಷ್ಯ ವಹಿಸಿದೆ ಎಂದು ಮುಖಂಡರು ಆರೋಪಿಸಿದರು.
ಈ ಕಾರ್ಯಕ್ರಮಕ್ಕೆ ಬಹುತೇಕ ಅಧಿಕಾರಿಗಳು ಗೈರು ಹಾಜರಾಗಿದ್ದರು. ತಾಲೂಕು ಕಚೇರಿಯ ಸಭಾಂಗಣದಲ್ಲಿ ಮಹನೀಯರ ಜಯಂತಿಯನ್ನು ಚಿಕ್ಕ ಸ್ಥಳದಲ್ಲಿಯೇ ಮಾಡುತ್ತಿದ್ದಾರೆ. ಇದರಿಂದ ಸಮುದಾಯ ಮುಖಂಡರು ಕುಳಿತುಕೊಳ್ಳಲು ಆಗುತ್ತಿಲ್ಲ. ಇಂತಹ ಸ್ಥಿತಿ ತಾಲೂಕಿನ ಸಮುದಾಯದ ಮುಖಂಡರಿಗೆ ಬಂದೊದಗಿದೆ. ಈ ಬಗ್ಗೆ ಹಲವು ಬಾರಿ ತಹಸೀಲ್ದಾರ್ ಅವರ ಗಮನಕ್ಕೆ ತಂದರೂ ಯಾವುದೇ ಪ್ರಯೋಜನವಿಲ್ಲ ಎಂದು ಮುಖಂಡರು ಅಸಮಾಧಾನ ವ್ಯಕ್ತಪಡಿಸಿದರು.
ಇತರೆ ಸಮಾಜದ ಮಹನೀಯರ ಜಯಂತಿಗಳನ್ನು ಇದೇ ರೀತಿ ನಿರ್ಲಕ್ಷ್ಯ ಮಾಡುತ್ತೀರಾ? ಒನಕೆ ಓಬವ್ವನ ಜಯಂತಿ ಆಚರಣೆಯಲ್ಲಿ ಮಾತ್ರ ಏಕೆ ತಾರತಮ್ಯ? ಆಹ್ವಾನ ಪತ್ರಿಕೆಗಳನ್ನು ಏಕೆ ಮುದ್ರಿಸಿಲ್ಲ? ಸರ್ಕಾರದ ವತಿಯಿಂದ ಆಚರಿಸುವ ಜಯಂತಿಯನ್ನು ಈ ರೀತಿ ಅಸಡ್ಡೆಯಿಂದ ನಡೆಸುವುದಾದರೆ ಅದರ ಉದ್ದೇಶವೇನು ಎಂದು ಪ್ರಶ್ನಿಸಿ ಅಧಿಕಾರಿಗಳ ವಿರುದ್ಧ ಧಿಕ್ಕಾರ ಕೂಗಿದರು.
ಕ್ಷೇತ್ರದ ಶಾಸಕರು ಹಾಗೂ ವಿಧಾನಪರಿಷತ್ ಸದಸ್ಯರು ಹಲವು ಬಾರಿ ಸಭೆ ನಡೆಸಿ ಸೂಚನೆ ನೀಡಿದರೂ ತಾಲೂಕು ಆಡಳಿತದ ಕಾರ್ಯವೈಖರಿಯಲ್ಲಿ ಯಾವುದೇ ಬದಲಾವಣೆ ಕಂಡುಬರುತ್ತಿಲ್ಲ. ಅಧಿಕಾರಿಗಳ ನಿರ್ಲಕ್ಷ್ಯ ಕಡಿವಾಣ ಹಾಕಿ ಆಡಳಿತಕ್ಕೆ ಚುರುಕು ಮುಟ್ಟಿಸುವ ಅಗತ್ಯವಿದೆ ಎಂದು ಸಾರ್ವಜನಿಕ ವಲಯದಲ್ಲಿಯೂ ಅಸಮಾಧಾನ ವ್ಯಕ್ತವಾಗುತ್ತಿದೆ ಎಂದು ಮುಖಂಡರು ತಿಳಿಸಿದರು.
ಪ್ರತಿಭಟನೆಯಲ್ಲಿ ತಾಲೂಕು ಛಲವಾದಿ ಮಹಾಸಭಾ ಅಧ್ಯಕ್ಷ ಕೆ.ವಿ. ವೆಂಕಟೇಶ್, ಆರ್.ಕೆ. ಧ್ರುವಕುಮಾರ್, ಶಿವಲಿಂಗಪ್ಪ, ನಿವೃತ್ತ ಶಿಕ್ಷಕ ರಂಗನಾಥ್, ಕೆಡಿಪಿ ಸದಸ್ಯ ದೇವರಾಜು, ಸ್ಪೂರ್ತಿ ಡ್ರೈವಿಂಗ್ ಶಾಲೆಯ ಪ್ರಾಂಶುಪಾಲ ರಂಗನಾಥ್, ಮಾರುತಿ ಬಿಜವರ, ಸಿದ್ದಾಪುರ ಶ್ರೀನಿವಾಸ್, ಬೆನಕನಹಳ್ಳಿ ಎನ್.ಆರ್. ಅಂಬೇಡ್ಕರ್, ರಂಗನಾಥ್ ಬಿ. ವೈ.ಸೋಮಶೇಖರ್ , ಲಕ್ಷ್ಮೀಪತಿ, ಸುರೇಶ್ ಹಾಜರಿದ್ದರು.